Thursday, July 17, 2025

ಸತ್ಯ | ನ್ಯಾಯ |ಧರ್ಮ

ಮೋದಿಗೆ ಪ್ರಶಸ್ತಿ ಸಂಭ್ರಮ: ಸೋನಿಯಾ ಬೆಲ್ಜಿಯಂ ಗೌರವ ವಿವಾದ, ಕಾನೂನು ಹೋರಾಟ

ನರೇಂದ್ರ ಮೋದಿಯವರು 27 ದೇಶಗಳಿಂದ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಕ್ಕೆ ದೇಶದಾದ್ಯಂತ ಮಾಧ್ಯಮಗಳು ಪ್ರಚಾರವನ್ನೂ ನೀಡಿವೆ, ಇದು ಜಾಗತಿಕ ಮಟ್ಟದಲ್ಲಿ ಅವರಿಗೆ ಇರುವ ಗೌರವ ಎಂದು ಬಣ್ಣಿಸಿವೆ.

ಆದರೂ ಸುಮಾರು ಎರಡು ದಶಕಗಳ ಹಿಂದೆ, ವಿದೇಶಿ ಸರ್ಕಾರದಿಂದ ಇದೇ ರೀತಿಯ ಸನ್ಮಾನಗಳನ್ನು ಆಗಿನ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್‌ನ ಅಧ್ಯಕ್ಷೆ ಮತ್ತು ರಾಷ್ಟ್ರೀಯ ಸಲಹಾ ಮಂಡಳಿಯ ಮುಖ್ಯಸ್ಥೆಯಾಗಿದ್ದ ಸೋನಿಯಾ ಗಾಂಧಿಯವರು ಪಡೆದಾಗ ಭಾರತದಲ್ಲಿ ದೀರ್ಘ ಕಾನೂನು ಮತ್ತು ಸಾಂವಿಧಾನಿಕ ಚರ್ಚೆಯಾಗಿತ್ತು.

ನವೆಂಬರ್ 11, 2006 ರಂದು, ಬೆಲ್ಜಿಯಂ ಪ್ರಧಾನಿ ಗೈ ವೆರ್ಹೋಫ್‌ಸ್ಟಾಡ್ಟ್ ಅವರು ಗಾಂಧಿಯವರಿಗೆ ಗ್ರ್ಯಾಂಡ್ ಆಫೀಸರ್ ಆಫ್ ದಿ ಆರ್ಡರ್ ಆಫ್ ಲಿಯೋಪೋಲ್ಡ್ ಎಂಬ ಬಿರುದನ್ನು ಪ್ರದಾನ ಮಾಡಿದರು. ಪ್ರಶಸ್ತಿ ನೀಡುವಾಗ ಅವರು “ರಚನಾತ್ಮಕ ರಾಷ್ಟ್ರೀಯತೆ” ಮತ್ತು ಬಹುಸಂಸ್ಕೃತಿ ಮತ್ತು ಸಹಿಷ್ಣು ಭಾರತೀಯ ಸಮಾಜವನ್ನು ಉತ್ತೇಜಿಸಲು ಸೋನಿಯಾ ಗಾಂದಿಯವರ ಪಾತ್ರವನ್ನು ಶ್ಲಾಘಿಸಿದರು. ಬೆಲ್ಜಿಯಂನ ಮೊದಲ ದೊರೆಯ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿ, ಆರ್ಡರ್ ಆಫ್ ಲಿಯೋಪೋಲ್ಡ್, ಬೆಲ್ಜಿಯಂ ದೇಶ ನೀಡುವ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ.

ಹಾಗಿದ್ದೂ, ಈ ಸನ್ಮಾನವು ಭಾರತದಲ್ಲಿ ರಾಜಕೀಯ ವಿವಾದವನ್ನು ಹುಟ್ಟುಹಾಕಿತು. ಜೂನ್ 2007 ರಲ್ಲಿ, ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಸಂವಿಧಾನದ 103(2) ನೇ ವಿಧಿಯನ್ನು ಉಲ್ಲೇಖಿಸಿ, ಗಾಂಧಿಯವರು ವಿದೇಶಿ ಗೌರವವನ್ನು ಸ್ವೀಕರಿಸುವುದು ಸಂಸತ್ತಿನಿಂದ ಅನರ್ಹತೆಗೆ ಕಾರಣವಾಗಿದೆಯೇ ಎಂದು ನಿರ್ಣಯಿಸಲು ಈ ವಿಚಾರವನ್ನು ಚುನಾವಣಾ ಆಯೋಗಕ್ಕೆ ಕೇಳಿದರು.

ಕೇರಳ ಮೂಲದ ಪತ್ರಕರ್ತ ಪಿ. ರಾಜನ್ ಸಲ್ಲಿಸಿದ ಅರ್ಜಿಯು ಇದಕ್ಕೆ ಕಾರಣವಾಗಿತ್ತು, ಅವರು ಈ ಗೌರವವು ಸಂವಿಧಾನದ 102(1)(d) ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು. “ವಿದೇಶಿ ರಾಜ್ಯಕ್ಕೆ ನಿಷ್ಠೆ ಅಥವಾ ಬದ್ಧತೆಯ ಯಾವುದೇ ಅಂಗೀಕಾರದ ಅಡಿಯಲ್ಲಿ” ಸಂಸತ್ತಿನಿಂದ ಅನರ್ಹಗೊಳಿಸಲು ಇರುವ ಸಾಧ್ಯತೆಯನ್ನು ಅವರು ಉಲ್ಲೇಖಿಸಿದ್ದರು.

ಫೆಬ್ರವರಿ 2008 ರಲ್ಲಿ ಚುನಾವಣಾ ಆಯೋಗವು 2:1 ಬಹುಮತದಿಂದ ಸೋನಿಯಾ ಗಾಂಧಿಯವರ ಪ್ರತಿಕ್ರಿಯೆ ಕೋರಿ ನೋಟಿಸ್ ನೀಡಿದಾಗ ಈ ವಿಚಾರವು ಮತ್ತೆ ಗಮನ ಸೆಳೆಯಿತು. ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ಮತ್ತು ಚುನಾವಣಾ ಆಯುಕ್ತ ನವೀನ್ ಚಾವ್ಲಾ ಈ ಕ್ರಮವನ್ನು ಬೆಂಬಲಿಸಿದರು, ಆದರೆ ಮೂರನೇ ಸದಸ್ಯ ಎಸ್.ವೈ. ಖುರೈಶಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು.

ಆ ಕಾಲದ ಪತ್ರಿಕಾ ವರದಿಗಳ ಪ್ರಕಾರ, ಗಾಂಧಿಯವರು ಪ್ರಶಸ್ತಿಯನ್ನು ಸ್ವೀಕರಿಸುವ ಮೂಲಕ ಸ್ವಯಂಚಾಲಿತವಾಗಿ ಅಸೋಸಿಯೇಷನ್ ಆಫ್ ದಿ ಆರ್ಡರ್ ಆಫ್ ಲಿಯೋಪೋಲ್ಡ್‌ನ ಸದಸ್ಯರಾಗಿದ್ದಾರೆ ಎಂದು ರಾಜನ್ ಆರೋಪಿಸಿದರು. ಅವರು “ಬೆಲ್ಜಿಯಂ ಮತ್ತು ರಾಜಪ್ರಭುತ್ವಕ್ಕೆ ಶಾಶ್ವತ ಭಕ್ತಿ”ಯನ್ನು ಕಡ್ಡಾಯಗೊಳಿಸಿದೆ ಎಂದು ಹೇಳಿಕೊಂಡ ಸಂಘದ ಚಾರ್ಟರ್‌ನ ಆರ್ಟಿಕಲ್ 1 ಅನ್ನು ಸಹ ತೋರಿಸಿದರು.

ಆದಾಗ್ಯೂ, ಸಂಘದ ವೆಬ್‌ಸೈಟ್ ಸದಸ್ಯತ್ವವು ಸ್ವಯಂಕೃತವಾಗಿ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಸಂಘವನ್ನು ಸೇರಲು ಪ್ರಶಸ್ತಿಯನ್ನು ಪಡೆಯುವುದು ಮಾತ್ರವಲ್ಲದೆ ಅರ್ಜಿ ನಮೂನೆಯನ್ನು ಸಹ ಸಲ್ಲಿಸಬೇಕಾಗಿತ್ತು .

ರಾಜನ್ ಅವರ ಈ ಅರ್ಜಿಯು “ಪ್ರೇರೇಪಿತ ಅಭಿಯಾನ – motivated campaign” ಎಂದು ಪ್ರತಿಪಾದಿಸಿದ ಆಗಿನ ಕಾಂಗ್ರೆಸ್ ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ, ಇದು ಬಿರುದಲ್ಲ (ಟೈಟಲ್‌ ಅಲ್ಲ), “decoration” ಮತ್ತು ಸಂವಿಧಾನದ 18 ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದರು. ಸಂವಿಧಾನದ 18 ನೇ ವಿಧಿ ಬಿರುದುಗಳನ್ನು ರದ್ದುಗೊಳಿಸುತ್ತದೆ ಮತ್ತು ಭಾರತೀಯ ನಾಗರಿಕರು ಅವುಗಳನ್ನು ಪಡೆದುಕೊಳ್ಳುವುದನ್ನು ನಿಷೇಧಿಸುತ್ತದೆ.

ಏಪ್ರಿಲ್ 2008 ರಲ್ಲಿ, ಚುನಾವಣಾ ಆಯೋಗವು ವಿದೇಶಾಂಗ ಸಚಿವಾಲಯದ ಅಭಿಪ್ರಾಯಗಳನ್ನು ಪಡೆದುಕೊಂಡಿತ್ತು ಮತ್ತು ತರುವಾಯ ರಾಜನ್ ಅವರಿಂದ ಮತ್ತೊಂದು ಪ್ರತಿಕ್ರಿಯೆಯನ್ನು ಕೋರಿತ್ತು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಬೆಲ್ಜಿಯಂ ಸಂವಿಧಾನದ 113 ನೇ ವಿಧಿಯು ಈ ಗೌರವವನ್ನು “ಟೈಟಲ್” ಎಂದು ವಿವರಿಸಿದೆ ಎಂದು ರಾಜನ್ ತಮ್ಮ ವಾದವನ್ನು ಪುನರುಚ್ಚರಿಸಿದರು.

ಹಾಗಿದ್ದೂ, ಬೆಲ್ಜಿಯಂ ಸಂವಿಧಾನದ 113 ನೇ ವಿಧಿಯು “ರಾಜನು ಅವರಿಗೆ ಸವಲತ್ತುಗಳನ್ನು ಲಗತ್ತಿಸುವ ಅಧಿಕಾರವಿಲ್ಲದೆಯೇ ಉದಾತ್ತತೆಯ ಬಿರುದುಗಳನ್ನು ನೀಡಬಹುದು” ಎಂದು ಮಾತ್ರ ಹೇಳಿದೆ. ಬ್ರಸೆಲ್ಸ್ ಟೈಮ್ಸ್‌ನ ಈ 2024 ರ ಲೇಖನವು ತೋರಿಸಿದಂತೆ, ರಾಜನು ಬ್ಯಾರನ್ ಮತ್ತು ಬ್ಯಾರನೆಸ್‌ನಂತಹ ಉದಾತ್ತತೆಯ ಬಿರುದುಗಳನ್ನು ನೀಡುತ್ತಾನೆ, ಇದು ಗ್ರ್ಯಾಂಡ್ ಆಫೀಸರ್ ಆಫ್ ದಿ ಆರ್ಡರ್ ಆಫ್ ಲಿಯೋಪೋಲ್ಡ್‌ನಂತಹ “distinctions (ವ್ಯತ್ಯಾಸ)” ಗಳಿಂದ ಭಿನ್ನವಾಗಿದೆ.

2009 ರಲ್ಲಿ, ಚುನಾವಣಾ ಆಯೋಗವು ತನ್ನ ವಿಚಾರಣೆಯನ್ನು ಮುಕ್ತಾಯಗೊಳಿಸಿ ತನ್ನ ಸಂಶೋಧನೆಗಳನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಸಲ್ಲಿಸಿತು. ಮತ್ತೊಮ್ಮೆ, ನಿರ್ಧಾರವು ಬಹುಮತದಿಂದ ಕೂಡಿತ್ತು, ಆದರೆ ಈ ಬಾರಿ ಮುಖ್ಯ ಚುನಾವಣಾ ಆಯುಕ್ತ ಗೋಪಾಲಸ್ವಾಮಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು. ಅನರ್ಹತೆಗೆ ಯಾವುದೇ ಆಧಾರಗಳಿಲ್ಲ ಎಂಬುದು ಬಹುಮತದ ಅಭಿಪ್ರಾಯವಾಗಿತ್ತು.

ಮೇ 16, 2009 ರಂದು, ಪ್ರತಿಭಾ ಪಾಟೀಲ್ ಅವರು ಸೋನಿಯಾ ಗಾಂಧಿಯವರು 102(1)(d) ವಿಧಿಯ ಅಡಿಯಲ್ಲಿ ಯಾವುದೇ ಅನರ್ಹತೆಗೆ ಒಳಗಾಗಿಲ್ಲ ಎಂದು ತೀರ್ಪು ನೀಡಿದರು, ಇದರಿಂದಾಗಿ ಕಾರ್ಯಕಾರಿ ಮಟ್ಟದಲ್ಲಿ ಪ್ರಕರಣವನ್ನು ಪರಿಣಾಮಕಾರಿಯಾಗಿ ಮುಕ್ತಾಯಗೊಳಿಸಲಾಯಿತು.

ಆದರೆ, ಕಾನೂನು ಹೋರಾಟ ಅಲ್ಲಿಗೆ ಮುಗಿಯಲಿಲ್ಲ.

ಡಿಸೆಂಬರ್ 2009 ರಲ್ಲಿ, ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಚುನಾವಣಾ ಆಯೋಗವು ಔಪಚಾರಿಕ ತನಿಖೆ ನಡೆಸುವಂತೆ ನಿರ್ದೇಶಿಸಬೇಕೆಂದು ಒತ್ತಾಯಿಸಿದರು. ಆದರೆ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತು.

ವಿಭಾಗೀಯ ಪೀಠವು ತನ್ನ ಆದೇಶದಲ್ಲಿ, ಮಾರ್ಚ್ 12, 2008 ರಂದು ಬೆಲ್ಜಿಯಂ ವಿದೇಶಾಂಗ ಸಚಿವಾಲಯವು ವಿದೇಶಾಂಗ ಸಚಿವಾಲಯಕ್ಕೆ ಬರೆದ ಟಿಪ್ಪಣಿಯನ್ನು ಉಲ್ಲೇಖಿಸಿದೆ. ಗ್ರ್ಯಾಂಡ್ ಆಫೀಸರ್ ಡಿ ಎಲ್’ಆರ್ಡ್ರೆ ಡಿ ಲಿಯೋಪೋಲ್ಡ್ “ಒಂದು ಗೌರವ, ಮತ್ತು ಉದಾತ್ತತೆಯ ಬಿರುದಲ್ಲ” ಎಂದು ಟಿಪ್ಪಣಿ ಸ್ಪಷ್ಟಪಡಿಸಿದೆ.

ಪ್ರಶಸ್ತಿ ಪಡೆಯುವವರು ಬಯಸಿದರೆ ಖಾಸಗಿ ದತ್ತಿ ಸಂಸ್ಥೆ ಸೊಸೈಟೆ ಡಿ ಎಲ್’ಆರ್ಡ್ರೆ ಡಿ ಲಿಯೋಪೋಲ್ಡ್‌ನ ಸದಸ್ಯರಾಗಬಹುದು, ಆದರೆ “ಶ್ರೀಮತಿ ಗಾಂಧಿ ಈ ಸಂಘದ ಸದಸ್ಯರಾಗುವ ಇಚ್ಛೆಯನ್ನು ವ್ಯಕ್ತಪಡಿಸಿಲ್ಲ ಮತ್ತು ಅವರು ಅದರ ಸದಸ್ಯರೂ ಅಲ್ಲ” ಎಂದು ನ್ಯಾಯಾಲಯ ಹೇಳಿತು.

ಜನವರಿ 22, 2010 ರಂದು, ದೆಹಲಿ ಹೈಕೋರ್ಟ್‌ನ ಮತ್ತೊಂದು ಪೀಠವು ರಾಜನ್ ಸಲ್ಲಿಸಿದ ಪ್ರತ್ಯೇಕ ಅರ್ಜಿಯಲ್ಲಿ ತನ್ನ ತೀರ್ಪನ್ನು ಪುನರುಚ್ಚರಿಸಿತು. ತನ್ನ ಹಿಂದಿನ ತಾರ್ಕಿಕತೆಯನ್ನು ಮತ್ತೆ ಉಚ್ಚರಿಸುತ್ತಾ, ನ್ಯಾಯಾಲಯವು, “ಬೆಲ್ಜಿಯಂ ಸರ್ಕಾರವು ನೀಡಿದ ಸ್ಪಷ್ಟೀಕರಣದ ವಿರುದ್ಧ ಮೇಲ್ಮನವಿಯನ್ನು ಪರಿಶೀಲಿಸಲು ಚುನಾವಣಾ ಆಯೋಗಕ್ಕೆ ಸಾಧ್ಯವಿಲ್ಲ” ಎಂದು ಹೇಳಿತು. ಅದು ಅರ್ಜಿಯನ್ನು ವಜಾಗೊಳಿಸಿ ರಾಜನ್ ಮೇಲೆ 10,000 ರುಪಾಯಿ ದಂಡ ವಿಧಿಸಿತು.

ನಂತರ ರಾಜನ್ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಆದರೆ ಮೇ 14, 2010 ರಂದು ಪ್ರಕರಣ ವಿಚಾರಣೆಗೆ ಬಂದಾಗ, ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ಅದನ್ನು ಸಂಪೂರ್ಣವಾಗಿ ವಜಾಗೊಳಿಸಿದರು.

ಈ ಅರ್ಜಿಯು ನ್ಯಾಯಾಂಗ ವ್ಯವಸ್ಥೆಯನ್ನು ಅಡ್ಡಿಪಡಿಸುವ “ಕ್ಷುಲ್ಲಕ” ಪಿಐಎಲ್‌ಗಳ ಗುಂಪಿಗೆ ಸೇರಿದೆ ಎಂದು ನ್ಯಾಯಾಲಯ ಹೇಳಿ, ಅಂತಹ ಪ್ರಕರಣಗಳು ಬಲವಾದ ಶಿಕ್ಷೆಗೆ ಕಾರಣವಾಗಬಹುದು ಎಂದು ಎಚ್ಚರಿಸಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page