Wednesday, February 4, 2026

ಸತ್ಯ | ನ್ಯಾಯ |ಧರ್ಮ

ಟ್ರಂಪ್‌ಗೆ ತಲೆಬಾಗಿದ ಮೋದಿ | ಅಮೆರಿಕದ ಒಪ್ಪಂದಕ್ಕೆ ದಿಢೀರ್ ಒಪ್ಪಿಗೆ ನೀಡಿದ್ದಕ್ಕೆ ಅದಾನಿ ಪ್ರಕರಣ, ಎಪ್‌ಸ್ಟೀನ್ ಫೈಲ್ಸ್‌ಗಳಲ್ಲಿನ ಹೆಸರಿನ ಹಿನ್ನೆಲೆಯೇ ಕಾರಣವೇ?

ಅಮೆರಿಕದೊಂದಿಗೆ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲು ಆ ದೇಶದ ಅಧ್ಯಕ್ಷ ಟ್ರಂಪ್ ಹೇರಿದ ಒತ್ತಡಕ್ಕೆ ಪ್ರಧಾನಿ ಮೋದಿ ತಲೆಬಾಗಿದ್ದಾರೆಯೇ? ಆಪ್ತಮಿತ್ರ ಅದಾನಿ ಮೇಲೆ ಅಮೆರಿಕದಲ್ಲಿ ಪ್ರಕರಣಗಳು ನಡೆಯುತ್ತಿರುವುದು, ವಿವಾದಾತ್ಮಕ ಎಪ್‌ಸ್ಟೀನ್ ಫೈಲ್ಸ್‌ಗಳಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವುದು, ಸುಂಕಗಳ ವಿಷಯದಲ್ಲಿ ತಮ್ಮ ರಾಯಭಾರ ವಿಫಲವಾಗಿರುವುದು.. ಹೀಗೆ ಎಲ್ಲೆಡೆ ಟೀಕೆಗಳು ಕೇಳಿಬರುತ್ತಿರುವ ಕಾರಣ, ಸುಮಾರು ನಾಲ್ಕು ತಿಂಗಳಿಂದ ನಿಂತುಹೋಗಿದ್ದ ವಾಣಿಜ್ಯ ಒಪ್ಪಂದವನ್ನು (Trade Deal) ಪ್ರಧಾನಿ ಮೋದಿ ಏಕಾಏಕಿ ಅಂತಿಮಗೊಳಿಸಿದರಾ? ಈ ವಾಣಿಜ್ಯ ಒಪ್ಪಂದದಿಂದ ಭಾರತಕ್ಕಿಂತ ಅಮೆರಿಕಗೇ ಹೆಚ್ಚು ಲಾಭ ಎಂದು ತಿಳಿದಿದ್ದರೂ, ಮೋದಿ ದೇಶದ ಹಿತಾಸಕ್ತಿಗಳನ್ನು ಅಡವಿಟ್ಟರಾ? ಪ್ರತಿಪಕ್ಷ ನಾಯಕರ ಟೀಕೆಗಳು ಮತ್ತು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ವಿಶ್ಲೇಷಿಸಿದರೆ ಇವೇ ಅನುಮಾನಗಳು ಮೂಡುತ್ತವೆ.

ಒಪ್ಪಂದದಿಂದ ನಮಗೇನೂ ಲಾಭವಿಲ್ಲ ಅಮೆರಿಕದೊಂದಿಗೆ ಕುದುರಿರುವ ವಾಣಿಜ್ಯ ಒಪ್ಪಂದ ಅದ್ಭುತವಾದುದು ಎಂದು ಆಡಳಿತ ಪಕ್ಷದ ನಾಯಕರು ಪ್ರಚಾರ ಮಾಡಿಕೊಳ್ಳುತ್ತಿದ್ದರೂ, ಈ ಒಪ್ಪಂದದಿಂದ ಅಮೆರಿಕಗೇ ಹೆಚ್ಚು ಲಾಭವಾಗುತ್ತಿದೆ ಎಂದು ಆರ್ಥಿಕ ತಜ್ಞರು ಮತ್ತು ವಿಪಕ್ಷಗಳು ಹೇಳುತ್ತಿವೆ.

  • ಟ್ರಂಪ್ ಘೋಷಿಸಿದ ತಾಜಾ ಒಪ್ಪಂದದ ಪ್ರಕಾರ, ಭಾರತದ ಮೇಲೆ ವಿಧಿಸಲಾಗಿದ್ದ ಪ್ರತೀಕಾರದ ಸುಂಕಗಳನ್ನು ಶೇ. 50ರಿಂದ (ರಷ್ಯಾ ತೈಲ ಖರೀದಿಗೆ ವಿಧಿಸಿದ್ದ ಶೇ. 25ರಷ್ಟು ಹೆಚ್ಚುವರಿ ಸುಂಕವೂ ಸೇರಿ) ಶೇ. 18ಕ್ಕೆ ಇಳಿಸುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಅಮೆರಿಕದ ಮೇಲೆ ಭಾರತ ವಿಧಿಸುತ್ತಿರುವ ಸುಂಕಗಳನ್ನು ಶೂನ್ಯಕ್ಕೆ (Zero) ಇಳಿಸಿರುವುದು ಗಮನಾರ್ಹ. ಅಂದರೆ, ಅಮೆರಿಕದ ಉತ್ಪನ್ನಗಳ ಮೇಲೆ ನಾವು ಯಾವುದೇ ಸುಂಕ ವಿಧಿಸದಿದ್ದರೂ, ಅಮೆರಿಕ ಮಾತ್ರ ಭಾರತೀಯ ಉತ್ಪನ್ನಗಳ ಮೇಲೆ ಶೇ. 18ರಷ್ಟು ಹೆಚ್ಚುವರಿ ಸುಂಕವನ್ನು ಮುಂದುವರಿಸಲಿದೆ ಎಂದು ಅರ್ಥ.
  • 500 ಬಿಲಿಯನ್ ಡಾಲರ್‌ಗೂ ಹೆಚ್ಚು ಮೌಲ್ಯದ ಇಂಧನ, ತಂತ್ರಜ್ಞಾನ, ಕೃಷಿ ಉತ್ಪನ್ನಗಳು, ಕಲ್ಲಿದ್ದಲು ಹಾಗೂ ಇತರ ಉತ್ಪನ್ನಗಳ ಜೊತೆಗೆ, ಇವುಗಳಿಗೆ ಹೆಚ್ಚುವರಿಯಾಗಿ ಇನ್ನಷ್ಟು ಅಮೆರಿಕದ ಸರಕುಗಳನ್ನು ಆಮದು ಮಾಡಿಕೊಳ್ಳಲು ಭಾರತ ಸಿದ್ಧವಾಗಿದೆ ಎಂದು ಟ್ರಂಪ್ ಬಹಿರಂಗಪಡಿಸಿದ್ದಾರೆ. ಅಂದರೆ, ಒಪ್ಪಂದದ ಪ್ರಕಾರ ಭಾರತ ಖಂಡಿತವಾಗಿಯೂ ಅಮೆರಿಕದೊಂದಿಗೆ 500 ಬಿಲಿಯನ್ ಡಾಲರ್ ವಹಿವಾಟು ನಡೆಸಲೇಬೇಕಾಗುತ್ತದೆ.
  • ಒಪ್ಪಂದ ಘೋಷಣೆ ಮಾಡಿದ್ದಕ್ಕೆ 140 ಕೋಟಿ ಭಾರತೀಯರ ಪರವಾಗಿ ಟ್ರಂಪ್‌ಗೆ ಧನ್ಯವಾದಗಳು ಎಂದು ಮೋದಿ ಹಿಗ್ಗಿನಿಂದ ಬೀಗಿದ್ದಾರೆ. ಆದರೆ, ತಾಜಾ ಒಪ್ಪಂದದ ಪ್ರಕಾರ, ಅಮೆರಿಕದ ಕೃಷಿ ಉತ್ಪನ್ನಗಳನ್ನು ಭಾರತದೊಳಗೆ ಬಿಡಲು ಬಾಗಿಲುಗಳನ್ನು ಸಂಪೂರ್ಣವಾಗಿ ತೆರೆಯಲಾಗಿದೆ. ಟ್ರಂಪ್ ಅವರ ಘೋಷಣೆಯಿಂದಲೇ ಇದು ಸ್ಪಷ್ಟವಾಗಿದೆ. ಅಂದರೆ, ದೇಶದ ಶೇ. 70ರಷ್ಟು ಜನರು ಅವಲಂಬಿತರಾಗಿರುವ ಕೃಷಿ ಮತ್ತು ಅನುಬಂಧಿತ ವಲಯಗಳನ್ನು ನಿರ್ವೀರ್ಯಗೊಳಿಸಲು ಮೋದಿ ಸಿದ್ಧರಾಗಿದ್ದಾರೆಯೇ ಎಂದು ವಿಪಕ್ಷ ನಾಯಕರು ಪ್ರಶ್ನಿಸುತ್ತಿದ್ದಾರೆ.
  • ದೇಶೀಯ ರೈತರ ಹಿತಾಸಕ್ತಿಗಳ ವಿಚಾರದಲ್ಲಿ ರಾಜಿ ಇಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ (Leaks) ನೀಡುತ್ತಿರುವ ಸಮಯದಲ್ಲೇ, ಅಂತಾರಾಷ್ಟ್ರೀಯ ಮಾಧ್ಯಮ ‘ರಾಯಿಟರ್ಸ್’ ವರದಿಯೊಂದನ್ನು ಪ್ರಕಟಿಸಿದೆ. ವಾಣಿಜ್ಯ ಒಪ್ಪಂದದ ಭಾಗವಾಗಿ ಅಮೆರಿಕದಿಂದ ಪೆಟ್ರೋಲಿಯಂ, ವಿಮಾನ, ಫಾರ್ಮಾ, ಟೆಲಿಕಾಂ ಜೊತೆಗೆ ಕೆಲವು ಪ್ರಮಾಣದ ಕೃಷಿ ಉತ್ಪನ್ನಗಳು ಕೂಡ ಭಾರತಕ್ಕೆ ಆಮದಾಗಲಿವೆ ಎಂದು ಕೇಂದ್ರ ಸರ್ಕಾರಕ್ಕೆ ಸೇರಿದ ಉನ್ನತ ಅಧಿಕಾರಿಯೊಬ್ಬರು ಉಲ್ಲೇಖಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಅಂದರೆ, ಭಾರತೀಯ ರೈತರ ಹಿತಾಸಕ್ತಿಗಳನ್ನು ಮೋದಿ ಸರ್ಕಾರ ಅಮೆರಿಕಕ್ಕೆ ಅಡವಿಟ್ಟಿದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ವಿಪಕ್ಷ ನಾಯಕರು ಮತ್ತು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಅಮೆರಿಕದ ಉತ್ಪನ್ನಗಳು ದೇಶದೊಳಗೆ ಪ್ರವೇಶಿಸಿದರೆ, ಭಾರತೀಯ ರೈತರು ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಟೀಕಿಸುತ್ತಿದ್ದಾರೆ.
  • ಒಪ್ಪಂದದ ನೆರವಿನಿಂದ ಸುಂಕಗಳನ್ನು ಶೇ. 18ರಷ್ಟು ತಗ್ಗಿಸಿದ್ದೇವೆ ಎಂದು ಮೋದಿ ಸರ್ಕಾರ ಹೇಳುತ್ತಿದ್ದರೂ, ಸೆಕ್ಷನ್ 232ರ ಪ್ರಕಾರ ಉಕ್ಕು (ಸ್ಟೀಲ್), ಅಲ್ಯೂಮಿನಿಯಂ, ವಾಹನ ಬಿಡಿಭಾಗಗಳ ಮೇಲೆ ಅಮೆರಿಕ ವಿಧಿಸಿದ್ದ ಶೇ. 50ರಷ್ಟು ಸುಂಕ ತಗ್ಗಿಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಅಮೆರಿಕದಿಂದ ಅಗ್ಗದ ದರದ ಉಕ್ಕು ಮತ್ತು ವಾಹನಗಳು ಆಮದಾದರೆ ಕಷ್ಟದ ಪರಿಸ್ಥಿತಿ ತಪ್ಪಿದ್ದಲ್ಲ ಎಂದು ನಮ್ಮವರು ಭಯಪಡುತ್ತಿದ್ದಾರೆ.
  • ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದು ಮಾತ್ರವಲ್ಲದೆ, ಅಮೆರಿಕ ಮತ್ತು ವೆನೆಜುವೆಲಾದಿಂದ ಹೆಚ್ಚಿನ ತೈಲ ಖರೀದಿಸಲು ಭಾರತ ಮುಂದೆ ಬಂದಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ರಷ್ಯಾ ನಮಗೆ ದಶಕಗಳ ಮಿತ್ರ ರಾಷ್ಟ್ರ. ಅಲ್ಲಿಂದ ನಮಗೆ ಅಗ್ಗದ ದರದಲ್ಲಿ ತೈಲ ಆಮದಾಗುತ್ತದೆ. ಈಗ, ಒಪ್ಪಂದದ ನೆಪದಲ್ಲಿ ರಷ್ಯಾದೊಂದಿಗೆ ಸಂಬಂಧ ಕಡಿದುಕೊಂಡರೆ, ಅದು ಭಾರತಕ್ಕೆ ಆರ್ಥಿಕವಾಗಿ ಮಾತ್ರವಲ್ಲದೆ ರಾಜತಾಂತ್ರಿಕವಾಗಿಯೂ ಖಂಡಿತಾ ಒಳ್ಳೆಯದಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.

ಒಪ್ಪಂದ ಅದಕ್ಕಾಗಿಯೇನಾ?? ಟ್ರಂಪ್ ಸರ್ಕಾರದೊಂದಿಗೆ ಮೋದಿ ಸರ್ಕಾರ ಏಕಾಏಕಿ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲು ಹಲವು ಕಾರಣಗಳಿರಬಹುದು ಎಂದು ರಾಜಕೀಯ ವಿಶ್ಲೇಷಕರು ಮತ್ತು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ.

  • ಇದರಲ್ಲಿ ಮೊದಲನೆಯದು ಅದಾನಿ ಪ್ರಕರಣ. 2,238 ಕೋಟಿ ರೂ.ಗಳ ಸೆಕ್ಯುರಿಟೀಸ್ ವಂಚನೆ ಪ್ರಕರಣ ಇತ್ತೀಚೆಗೆ ಅಂತಿಮ ಹಂತಕ್ಕೆ ತಲುಪಿದೆ. ಅಮೆರಿಕದ ಫಾರಿನ್ ಕರಪ್ಟ್ ಪ್ರಾಕ್ಟೀಸಸ್ ಆಕ್ಟ್ (FCPA) ಪ್ರಕಾರ, ಅಪರಾಧ ಸಾಬೀತಾದರೆ ಗೌತಮ್ ಅದಾನಿಗೆ ಐದು ವರ್ಷಗಳ ಜೈಲು ಶಿಕ್ಷೆಯೊಂದಿಗೆ 2 ಮಿಲಿಯನ್ ಡಾಲರ್ ದಂಡ ವಿಧಿಸಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಇದರಿಂದ ಆಪ್ತಮಿತ್ರನನ್ನು ಕಾಪಾಡಲು ಮೋದಿ ಅಮೆರಿಕದ ಒತ್ತಡಕ್ಕೆ ಮಣಿದಿದ್ದಾರೆ ಎಂದು ವಿಪಕ್ಷ ನಾಯಕರು ಆರೋಪಿಸುತ್ತಿದ್ದಾರೆ.
  • ಇನ್ನು, ಅಮೆರಿಕದ ಆರ್ಥಿಕ ಮತ್ತು ಲೈಂಗಿಕ ಅಪರಾಧಿ ಎಪ್‌ಸ್ಟೀನ್ ಫೈಲ್ಸ್‌ಗಳಲ್ಲಿ ಪ್ರಧಾನಿ ಮೋದಿ ಹೆಸರು ಇತ್ತೀಚೆಗೆ ಹೊರಬಂದಿದೆ. ಇಸ್ರೇಲ್‌ನಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಲಾಭಕ್ಕಾಗಿ ಮೋದಿ ಕೆಲಸ ಮಾಡಿದ್ದಾರೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಸದರಿ ದಾಖಲೆಗಳಲ್ಲಿ ಬಹಿರಂಗಪಡಿಸಿದೆ. ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಮೋದಿ ಹೆಸರು ಬರುವುದು ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಹೀಗಾಗಿ ಆ ವಿವರಗಳು ಹೊರಬರಬಾರದು ಎಂಬ ಉದ್ದೇಶದಿಂದಲೇ ಮೋದಿ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ.

ದೇಶವನ್ನು ಮಾರಾಟ ಮಾಡಿದ್ದಾರೆ: ರಾಹುಲ್ ವಾಣಿಜ್ಯ ಒಪ್ಪಂದದ ವಿಷಯದಲ್ಲಿ ಅಮೆರಿಕದ ಒತ್ತಡಕ್ಕೆ ಮೋದಿ ಲಶಿರಣಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಒಪ್ಪಂದ ಮಾಡಿಕೊಂಡು ರೈತರ ಕಷ್ಟವನ್ನು, ಒಟ್ಟಾರೆಯಾಗಿ ದೇಶವನ್ನೇ ಮೋದಿ ಮಾರಾಟ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಅಮೆರಿಕದಲ್ಲಿ ಉದ್ಯಮಿ ಅದಾನಿ ಮೇಲೆ ಕೇಸ್ ಇರುವುದು ಮತ್ತು ಎಪ್‌ಸ್ಟೀನ್ ಫೈಲ್ಸ್‌ಗಳಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವುದರಿಂದ ಮೋದಿ ರಾಜಿ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page