Home ದೇಶ ಒಲಿಂಪಿಕ್ಸ್‌ ಟೈಮಲ್ಲಿ ಮೋದಿ ನನಗೆ ಫೋನ್‌ ಮಾಡಿದ್ರು, ಆದ್ರೆ ಅವರು ಹಾಕಿದ ಕಂಡೀಷನ್‌ ಕೇಳಿ ನಾನು...

ಒಲಿಂಪಿಕ್ಸ್‌ ಟೈಮಲ್ಲಿ ಮೋದಿ ನನಗೆ ಫೋನ್‌ ಮಾಡಿದ್ರು, ಆದ್ರೆ ಅವರು ಹಾಕಿದ ಕಂಡೀಷನ್‌ ಕೇಳಿ ನಾನು ಮಾತಾಡ್ಲಿಲ್ಲ: ವಿನೇಶ್‌ ಫೋಗಟ್

0

ಹೊಸದೆಹಲಿ: ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅಕ್ಟೋಬರ್ 5 ರಂದು ನಡೆಯಲಿರುವ ಹರಿಯಾಣ ಚುನಾವಣೆಯಲ್ಲಿ ಅವರು ಜುಲಾನಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘‘ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಿಂದ ನಾನು ಅನರ್ಹಗೊಂಡ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಂದ ನನಗೆ ದೂರವಾಣಿ ಕರೆ ಬಂದಿತ್ತು. ಆದರೆ ಅಂದು ಮೋದಿಯವರೇ ನೇರವಾಗಿ ಕರೆ ಮಾಡಿರಲಿಲ್ಲ. ಪ್ರಧಾನಿ ಮೋದಿಯವರು ನನ್ನೊಂದಿಗೆ ಮಾತನಾಡಲು ಬಯಸುತ್ತಿದ್ದಾರೆ ಎಂದು ಅಲ್ಲಿನ ಭಾರತೀಯ ಅಧಿಕಾರಿಗಳು ತಿಳಿಸಿದ್ದರು.

ನಾನೂ ಅವರೊಂದಿಗೆ ಮಾತನಾಡಲು ಸಿದ್ಧಳಾಗಿದ್ದೆ. ನನ್ನ ತಂಡದ ಯಾರೂ ಅವರೊಂದಿಗೆ ಮಾತನಾಡಬೇಡ ಎಂದು ತಡೆದೂ ಇರಲಿಲ್ಲ. ಆದರೆ ಕರೆ ಮಾಡಿದ ಅಧಿಕಾರಿಗಳು ಮಾತನಾಡುವ ಮೊದಲು ಒಂದು ಷರತ್ತನ್ನು ಒಡ್ಡಿದ್ದರು. ಅವರು ಪ್ರಧಾನಿ ಮತ್ತು ನನ್ನ ನಡುವಿನ ಮಾತುಕತೆಯನ್ನು ರೆಕಾರ್ಡ್‌ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ತಿಳಿಸಿದರು. ಇದು ನನಗೆ ಇಷ್ಟವಿರಲಿಲ್ಲ. ನನ್ನ ಭಾವೋದ್ವೇಗ, ನೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಇನ್ಯಾರೋ ಅಪಹಾಸ್ಯ ಮಾಡುವುದು ಇಷ್ಟವಿರಲಿಲ್ಲ. ಹೀಗಾಗಿ ನಾನು ಕರೆಯನ್ನು ತಿರಸ್ಕರಿಸಿದೆ” ಎಂದು ವಿನೇಶ್‌ ಹೇಳಿದ್ದಾರೆ.

ಅವರಿಗೆ ನಿಜಕ್ಕೂ ಕ್ರೀಡಾಪಟುಗಳ ಬಗ್ಗೆ ಕಾಳಜಿ ಇದ್ದಿದ್ದರೆ ನೇರವಾಗಿ ಮಾತನಾಡುತ್ತಿದ್ದರು. ರೆಕಾರ್ಡ್‌ ಮಾಡಿಕೊಳ್ಳುವ ಷರತ್ತನ್ನು ಒಡ್ಡುತ್ತಿರಲಿಲ್ಲ. ಆಗ ನಾನು ಅವರಿಗೆ ಆಭಾರಿಯಾಗಿರುತ್ತಿದ್ದೆ. ಆದರೆ ಪ್ರಧಾನಿ ಮೋದಿ ಕಚೇರಿ ಷರತ್ತುಗಳನ್ನು ವಿಧಿಸಿತು.

ನಾನು ಮಾತನಾಡಿದರೆ ಕಳೆದ ಎರಡು ವರ್ಷಗಳಲ್ಲಿ ನಡೆದ ವಿಚಾರಗಳ ಬಗ್ಗೆ ಮಾತನಾಡಬಹುದು ಎನ್ನುವ ಅರಿವು ಮೋದಿಯವರಿಗೆ ಇದ್ದಿರಬಹುದು, ಬಹುಶಃ ಅದಕ್ಕಾಗಿಯೇ ಅಧಿಕಾರಿಗಳು ನಾನು ಫೋನಿನಲ್ಲಿ ಏನನ್ನೂ ಮಾತನಾಡಬಾರದು ಎಂದು ಹೇಳಿದ್ದರು ಎಂದು ವಿನೇಶ್‌ ಹೇಳಿದರು.

“ನಾನು ಮಾಮೂಲಿಯಾಗಿ ಮಾತನಾಡಿದರೆ ವಿಡಿಯೋವನ್ನು ಅವರಿಗೆ ಬೇಕಾದಂತೆ ಎಡಿಟ್‌ ಮಾಡಿಕೊಳ್ಳಲು ಸಾಧ್ಯವಿಲ್ಲ, ಜೊತೆಗೆ ಅವರು ಹಾಗೆ ಮಾಡಿದರೂ ನಾನು ಮೂಲ ಕರೆಯ ರೆಕಾರ್ಡನ್ನು ಬಹಿರಂಗಪಡಿಸಬಹುದು ಎನ್ನುವ ಭಯವೂ ಅವರನ್ನು ಕಾಡಿರಬಹುದು” ಎಂದು ಅವರು ಹೇಳಿದರು.

You cannot copy content of this page

Exit mobile version