ಹೊಸದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಟೀಕೆ ಮಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿ ಸಂಸದ ಸಂಜಯ್ ಸಿಂಗ್ ವಿರುದ್ಧ ಗುಜರಾತ್ ವಿಶ್ವವಿದ್ಯಾಲಯ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಸುಪ್ರೀಂ ಪೀಠ, ಗುಜರಾತಿನ ವಿಚಾರಣಾ ನ್ಯಾಯಾಲಯದ ಮುಂದೆ ಬಾಕಿ ಇರುವ ಪ್ರಕರಣವನ್ನು ರಾಜ್ಯದ ಹೊರಗೆ, ಅಂದರೆ ಕೋಲ್ಕತ್ತಾಕ್ಕೆ ವರ್ಗಾಯಿಸುವಂತೆ ಕೋರಿ ಸಂಜಯ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಈ ಆದೇಶ ನೀಡಿದೆ.
ವಿಚಾರಣಾ ನ್ಯಾಯಾಲಯ, ತಮಗೆ ನೀಡಿರುವ ಸಮನಸುಗಳನ್ನು ರದ್ದುಗೊಳಿಸುವಂತೆ ಕೋರಿ ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕರು ಸಲ್ಲಿಸಿರುವ ಮನವಿಯ ಕುರಿತು ನಾಲ್ಕು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್, ಗುಜರಾತ್ ಹೈಕೋರ್ಟಿಗೆ ಸೂಚನೆ ನೀಡಿದೆ.
ಈ ನಡುವೆ, ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಲಾಗುವುದು ಎಂದೂ ಪೀಠ ಹೇಳಿದೆ. ಸಂಜಯ್ ಸಿಂಗ್ ಪರ ವಕೀಲ ಕರಣ್ ಶರ್ಮಾ ಅವರ ಮೂಲಕ ಸುಪ್ರೀಂ ಕೋರ್ಟಿ ಸಲ್ಲಿಸಲಾಗಿದ್ದ ಮನವಿಯಲ್ಲಿ, ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲಿ ಪಕ್ಷಪಾತ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ತಮ್ಮ ಅರ್ಜಿಯು ಹೈಕೋರ್ಟಿನಲ್ಲಿಯೇ ಬಾಕಿಯಾಗಿದ್ದು, ವಿಚಾರಣಾ ನ್ಯಾಯಾಧೀಶರು ಈ ವಿಷಯವನ್ನು ಬೇಕೆಂದೇ ಮುಂದೂಡುತ್ತಿದ್ದಾರೆ ಎಂದು ಹೇಳಿದ್ದಾರೆ.