ಭಾರತದಲ್ಲಿ ಪವಿತ್ರ ರಂಜಾನ್ ಮಾಸ ಆರಂಭವಾಗಿದೆ. ದೇಶಾದ್ಯಂತ ಮುಸ್ಲಿಮರು ಭಾನುವಾರದಿಂದ ಉಪವಾಸ ಆರಂಭಿಸಿದರು. ಶನಿವಾರ ಸಂಜೆ ರಂಜಾನ್ ತಿಂಗಳ ಚಂದ್ರನನ್ನು ನೋಡಿದ ನಂತರ ಜನರು ಪರಸ್ಪರ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. “ಪವಿತ್ರ ರಂಜಾನ್ ಮಾಸದ ಆರಂಭದ ಸಂದರ್ಭದಲ್ಲಿ ನಮ್ಮ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಲಿ” ಎಂದು ಪ್ರಧಾನಿ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. “ಈ ಪವಿತ್ರ ಮಾಸವು ಆತ್ಮಾವಲೋಕನ, ಕೃತಜ್ಞತೆ ಮತ್ತು ಭಕ್ತಿಯ ಗುಣಗಳನ್ನು ಪ್ರತಿಬಿಂಬಿಸುತ್ತದೆ, ದಯೆ, ಕರುಣೆ ಮತ್ತು ಸೇವೆಯಂತಹ ಮೌಲ್ಯಗಳನ್ನು ನಮಗೆ ನೆನಪಿಸುತ್ತದೆ. ರಂಜಾನ್ ಮುಬಾರಕ್!’ ಎಂದು ಅವರು ಹೇಳಿದ್ದಾರೆ.
ಕಳೆದ ಶುಕ್ರವಾರ, ಪ್ರಧಾನ ಮಂತ್ರಿಯವರು ಜಹಾನ್-ಎ-ಖುಸ್ರೋದ 25 ನೇ ಆವೃತ್ತಿಯಲ್ಲಿ ಭಾಗವಹಿಸಿ, ಮುಂಚಿತವಾಗಿ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಅವರು ಭಾರತದ ಸೂಫಿ ಸಂಪ್ರದಾಯವು ಸಾರುವ ಸಂದೇಶವನ್ನು ಶ್ಲಾಘಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಜನತೆಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿದರು. “ಈ ಪವಿತ್ರ ದಿನಗಳಲ್ಲಿ ಉಪವಾಸ, ಸ್ವಯಂ ನಿಯಂತ್ರಣ, ತಾಳ್ಮೆ ಮತ್ತು ಪೂಜೆಯಂತಹ ಒಳ್ಳೆಯ ಕಾರ್ಯಗಳು ಸಹಿಷ್ಣುತೆ, ಸರಳತೆ ಮತ್ತು ಪರಸ್ಪರ ಸಹೋದರತ್ವದಂತಹ ಮೌಲ್ಯಗಳನ್ನು ಉತ್ತೇಜಿಸುತ್ತವೆ” ಎಂದು ಅವರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಂಜಾನ್ ತಿಂಗಳಲ್ಲಿ ಮುಸ್ಲಿಮರು ಮುಂಜಾನೆಯಿಂದ ಸಂಜೆಯವರೆಗೆ ಉಪವಾಸ ಮಾಡುತ್ತಾರೆ. ಇವುಗಳನ್ನು ರೋಜಾ ಎಂದು ಕರೆಯಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಅಮಾವಾಸ್ಯೆಯ ದರ್ಶನದೊಂದಿಗೆ ಹೊಸ ತಿಂಗಳು ಪ್ರಾರಂಭವಾಗುತ್ತದೆ. ಈ ಇಸ್ಲಾಮಿಕ್ ತಿಂಗಳುಗಳು 29 ಅಥವಾ 30 ದಿನಗಳ ಕಾಲ ಇರುತ್ತವೆ. ರಂಜಾನ್ ಮಾಸದ ನಂತರದ ದಿನ ಈದ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ರಂಜಾನ್ ಸಮಯದಲ್ಲಿ, ಮುಸ್ಲಿಮರು ತಿಂಗಳು ಪೂರ್ತಿ ನಿಯಮಗಳನ್ನು ಪಾಲಿಸುತ್ತಾರೆ ಮತ್ತು ಪ್ರಾರ್ಥನೆಗಳನ್ನು (ಇಬಾದತ್) ಮಾಡುತ್ತಾರೆ.