Wednesday, June 19, 2024

ಸತ್ಯ | ನ್ಯಾಯ |ಧರ್ಮ

ಉನ್ನತ ನ್ಯಾಯಾಂಗದಲ್ಲಿ ಮೋದಿ ಸರಕಾರದ ಹಸ್ತಕ್ಷೇಪ | ಕುಸಿದ ನ್ಯಾಯ ಪೀಠದ ಘನತೆ

ರಾಜಕೀಯ ಕಾರಣಕ್ಕೆ ಉನ್ನತ ನ್ಯಾಯಾಲಯಗಳು ನಲುಗಿದ್ದರೂ, ನರೇಂದ್ರ ಮೋದಿ ದೇಶದ ಅಧಿಕಾರ ಗದ್ದುಗೆಯೇರಿದ ಮೇಲೆ ರಾಜಕೀಯ ಹಸ್ತಕ್ಷೇಪ ಒತ್ತಡ, ಆಮಿಷದ ಬಗೆಗಿನ ಆರೋಪಗಳ ಸಂಖ್ಯೆ ತೀವ್ರಗತಿಯಲ್ಲಿ ಅಧಿಕವಾಗಿದೆ. ನಮ್ಮ ದೇಶದ ನ್ಯಾಯ ವ್ಯವಸ್ಥೆಯನ್ನು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ಪಳಗಿಸುವ ಸರ್ವಾಧಿಕಾರಿ ಮನೋಭಾವವು ಗಾಢವಾಗಿ ಗೋಚರವಾಗುತ್ತಿದೆ. ಇಂದಿನ ಕೇಂದ್ರ ಸರಕಾರ ಮತ್ತು ಅದರ ಹಿಂದಿರುವ ದುಷ್ಟ ಸೈದ್ಧಾಂತಿಕತೆಯನ್ನು ರಾಜಕೀಯವಾಗಿ ಸೋಲಿಸದಿದ್ದರೆ ಭಾರತದ ಮುಂದಿನ ದಿನಗಳು ಬರ್ಬರವಾಗಲಿವೆ. ಮೊದಲ ಹೆಜ್ಜೆ ಕರ್ನಾಟಕದಿಂದಲೇ ಆರಂಭವಾಗಲಿ – ವಿದ್ಯಾಧರ ಕುಡೆಕಲ್ಲು, ವಕೀಲರು

ಐದು ವರ್ಷಗಳ ಹಿಂದೆ ದಿನಾಂಕ 12-01-2018ರಂದು ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಮೂರ್ತಿಗಳಾದ ಚಲಮೇಶ್ವರ್, ರಂಜನ್ ಗೊಗೋಯಿ, ಎಂ.ಬಿ. ಲೋಕುರ್ ಮತ್ತು ಕುರಿಯನ್ ಜೋಸೆಫ್ ಪತ್ರಿಕಾಗೋಷ್ಠಿಯನ್ನು ಕರೆಯುತ್ತಾರೆ. ಅವರು ನೇರವಾಗಿ ದೇಶದ ಮುಖ್ಯ ನ್ಯಾಯಾಧೀಶ ಜಸ್ಟೀಸ್ ದೀಪಕ್ ಮಿಶ್ರಾರವರ ಆಡಳಿತ ವೈಖರಿಯ ಲೋಪದೋಷಗಳನ್ನು ಇಡೀ ದೇಶದ ಮುಂದೆ ತೆರೆದಿಡುತ್ತಾರೆ. ದೀಪಕ್ ಮಿಶ್ರಾ ಭಾರತದ ಈ ಅತ್ಯುನ್ನತ ಸಂಸ್ಥೆಯನ್ನು ದುರ್ಬಲಗೊಳಿಸುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದ್ದಾರೆಂದು ಆರೋಪಿಸುತ್ತಾರೆ. ಸುಪ್ರೀಮ್ ಕೋರ್ಟಿನ ಇತಿಹಾಸದಲ್ಲಿ ಇಂತಹದೊಂದು ಅನೂಹ್ಯ ಘಟನೆ ಹಿಂದೆಂದೂ ನಡೆದಿರಲಿಲ್ಲ. ಹಾಗೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಒಳಸಂಘರ್ಷಗಳು ಮೊದಲು ನಡೆದಿರಲಿಲ್ಲ ಎಂದಲ್ಲ.

ಸರ್ವೋಚ್ಚ ನ್ಯಾಯಾಲಯದಲ್ಲಿ ಒಳಸಂಘರ್ಷಗಳು

1973ರಲ್ಲಿ ಮೂರು ನ್ಯಾಯಮೂರ್ತಿಗಳ ಹಿರಿತನವನ್ನು ಕಡೆಗಣಿಸಿ ಅಜಿತ್ ನಾಥ್ ರೇ (ಎ.ಎನ್. ರೇ) ಯವರನ್ನು ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕಾತಿ ಮಾಡಲಾಗಿತ್ತು. ಅದರ ಹಿಂದೆ ಅಂದಿನ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರ ನೇರ ಹಸ್ತಕ್ಷೇಪ ಇತ್ತೆಂದು ಆರೋಪಿಸಲಾಗಿತ್ತು. ಸಂತ್ರಸ್ತ ನ್ಯಾಯಮೂರ್ತಿಗಳಾದ ಜೆ.ಎಂ. ಶೆಲಾತ್, ಎ.ಎನ್. ಗ್ರೋವರ್ ಮತ್ತು ಕೆ.ಎಸ್. ಹೆಗ್ಡೆ ಕೂಡಲೇ ರಜೆಯಲ್ಲಿ ತೆರಳಿ, ನಂತರ ಕೆಲವು ವಾರಗಳಲ್ಲಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ಹೊರಬಂದಿದ್ದರು. ಕರ್ನಾಟಕದವರಾದ ಕೆ.ಎಸ್. ಹೆಗ್ಡೆಯವರು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ತಂದೆ. ಮುಂದೆ 1977ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಅದಾಗ ರಚನೆಯಾಗಿದ್ದ ಜನತಾ ಪಾರ್ಟಿಯಿಂದ ಸ್ಪರ್ಧಿಸಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಗೆದ್ದಿರುವುದು ಈಗ ಇತಿಹಾಸ. 

ಹೀಗೆ ರಾಜಕೀಯ ಕಾರಣಕ್ಕೆ ಉನ್ನತ ನ್ಯಾಯಾಲಯಗಳು ನಲುಗಿದ್ದರೂ, ನರೇಂದ್ರ ಮೋದಿ ದೇಶದ ಅಧಿಕಾರ ಗದ್ದುಗೆಯೇರಿದ ಮೇಲೆ ರಾಜಕೀಯ ಹಸ್ತಕ್ಷೇಪ ಒತ್ತಡ, ಆಮಿಷದ ಬಗೆಗಿನ ಆರೋಪಗಳ ಸಂಖ್ಯೆ ತೀವ್ರಗತಿಯಲ್ಲಿ ಅಧಿಕವಾಗಿದೆ. ಇದರ ಕುರಿತಾಗಿ ಮುದ್ರಣ ಮಾಧ್ಯಮಕ್ಕಿಂತ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಆಳದ ಚರ್ಚೆಗಳು, ವಿಶ್ಲೇಷಣೆಗಳು ನಡೆದಿವೆ, ನಡೆಯುತ್ತಿವೆ.   

ಎಹ್ಸಾನ್ ಜಾಫ್ರಿಯವರ ಕೊಲೆ ಪ್ರಕರಣ

ದಿನಾಂಕ 27-02-2002ರಂದು ಗೋಧ್ರಾದಲ್ಲಿ ಸಬರಮತಿ ಎಕ್ಸ್‌ಪ್ರೆಸ್ ರೈಲು ಬೋಗಿಗೆ ಬೆಂಕಿ ಹಚ್ಚಿ 59 ಮಂದಿ ಮೃತಪಟ್ಟರು. ಅದು ಗುಜರಾತ್ ರಾಜ್ಯದಲ್ಲಿ ಅತ್ಯಂತ ಭೀಕರ ಕೋಮುಗಲಭೆಗೆ ಕಾರಣವಾಯಿತು. ಸಾವಿರಾರು ಜನ ಹತ್ಯೆಗೀಡಾದ ಈ ಗೋಧ್ರೋತ್ತರ ಹಿಂಸಾಚಾರವು ರಾಜ್ಯಪ್ರೇರೇಪಿತ ಎಂದು ಇಂದಿಗೂ ನಂಬಲಾಗಿದೆ. ಗೋಧ್ರಾ ಘಟನೆಯ ಮರುದಿನ ಲೋಕಸಭಾ ಸದಸ್ಯ ಎಹ್ಸಾನ್ ಜಾಫ್ರಿ ಗಲಭೆಕೋರರ ಹಲ್ಲೆಗೆ ಒಳಗಾಗಿ ಕೊಲೆಗೀಡಾಗುತ್ತಾರೆ. ಕಾಂಗ್ರೆಸ್ ಎಂ.ಪಿ. ಎಹ್ಸಾನ್ ಜಾಫ್ರಿ ಮನೆಗೆ ಧಾಳಿಕೋರರು ನುಗ್ಗಿದಾಗ ಅವರು ಮಾಡಿದ ಟೆಲಿಫೋನ್ ಕರೆಗಳನ್ನು ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ನಿರ್ಲಕ್ಷಿಸಿದರು ಎನ್ನುವುದು ನೇರವಾದ ಆಪಾದನೆ. ಎಹ್ಸಾನ್ ಜಾಫ್ರಿಯವರ ಪತ್ನಿ ಜಕಿಯಾ ಜಾಫ್ರಿ ಈ ಬಗ್ಗೆ 08-06-2002ರಂದು ಪೊಲೀಸರಿಗೆ ದೂರು ಸಲ್ಲಿಸುತ್ತಾರೆ. ನಂತರದ ದಿನಗಳಲ್ಲಿ ಗುಜರಾತಿನ ಕೋಮು ಹಿಂಸಾಚಾರದ ಘಟನೆಗಳನ್ನು ತನಿಖೆಗೆ ಒಳಪಡಿಸಲು ಎಸ್.ಐ.ಟಿ.ಯನ್ನು (ವಿಶೇಷ ತನಿಖಾ ದಳವನ್ನು) ನಿಯೋಜಿಸಲಾಯಿತು. ತನಿಖೆಯ ವರದಿಯು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ನಿರ್ದೋಷಿ ಎಂದು ಹೇಳಿತು. ಆದರೆ ಎಸ್.ಐ.ಟಿ.ಯು ಮೋದಿಯನ್ನು ಖುದ್ದಾಗಿ ವಿಚಾರಣೆ ನಡೆಸದೆ ಕ್ಲೀನ್ ಚಿಟ್ ನೀಡಿತು. ಅವರು ಹೇಗೆ ಈ ಕೊಲೆಯ ಹಿಂದಿದ್ದರು ಎಂಬುದಕ್ಕೆ ಜಕಿಯಾ ಜಾಫ್ರಿ ನೀಡಿದ ಸಾಕ್ಷ್ಯ ಪುರಾವೆಗಳನ್ನು ತಳ್ಳಿಹಾಕಲಾಯಿತು. ಆಕೆಯ ಪ್ರಯತ್ನಕ್ಕೆ ಕಿಂಚಿತ್ತೂ ಮನ್ನಣೆ ಸಿಕ್ಕಲಿಲ್ಲ. ಎಸ್.ಐ.ಟಿ. ವರದಿಯ ಆಧಾರದಲ್ಲಿ, ಸರಕಾರದ ವೈಫಲ್ಯಕ್ಕೆ ಮುಖ್ಯಮಂತ್ರಿ ಹೊಣೆಗಾರ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪರಿಗಣಿಸಿ, ಮೋದಿಯ ಭಾಗೀದಾರಿಕೆಯ ಆರೋಪವನ್ನು ಕಡೆಗಣಿಸಿತು. ಜಕಿಯಾ ಜಾಫ್ರಿ ಆ ತೀರ್ಪಿನ ವಿರುದ್ಧ ಮೇಲ್ಮನವಿಗಳನ್ನು ಹಾಕಿದರು. ಎಲ್ಲೂ ತಮ್ಮ ಪರವಾಗಿ ನ್ಯಾಯ ದೊರಕದ ಕಾರಣ ಆಕೆಯು ಖ್ಯಾತ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‍ವಾಡ್‍ರವರನ್ನು ಸಹ-ಅರ್ಜಿದಾರರನ್ನಾಗಿ ಸೇರಿಸಿ ಸುಪ್ರೀಮ್ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ದೇಶದ ಸರ್ವೋಚ್ಚ ನ್ಯಾಯಾಲಯವು ಆ ಪ್ರಕರಣವನ್ನು ವಜಾಗೊಳಿಸಿದುದಲ್ಲದೆ ತೀಸ್ತಾ ನಡವಳಿಕೆಯ ವಿರುದ್ಧ ಗಂಭೀರ ಆರೋಪವನ್ನು ಕೂಡ ಮಾಡಿತು; ಆಕೆ ಜಕಿಯಾ ಜಾಫ್ರಿಯ ಭಾವನೆಗಳನ್ನು ದುರ್ಬಳಕೆ ಮಾಡಿರುತ್ತಾರೆಂದು ಹೇಳಿತು. ಇಂತಹ ಸಂದರ್ಭಗಳಲ್ಲಿ ನ್ಯಾಯದಾನದ ಪ್ರಕ್ರಿಯೆಗೆ ಅಡ್ಡಿಪಡಿಸಿದವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಕೂಡ ಹೇಳಿತು.

ಜಕಿಯಾ ಜಾಫ್ರಿ

ಜಕಿಯಾ ಜಾಫ್ರಿ ತೀರ್ಪು ಹೊರಬಿದ್ದುದೇ ತಡ, ಗೃಹಮಂತ್ರಿ ಅಮಿತ್ ಶಾ ಸಿಡಿದೆದ್ದು ತೀಸ್ತಾ ವಿರುದ್ಧ ತೀವ್ರ ಗಂಭೀರವಾದ ಹೇಳಿಕೆಗಳನ್ನು ನೀಡಿದರು. ಅದರ ಬೆನ್ನಲ್ಲೇ ಗುಜರಾತ್ ಪೊಲಿಸರು ಆಕೆಯನ್ನು ಬಂಧಿಸಿ ಜೈಲಿಗೆ ತಳ್ಳಿದರು. ಈ ಘಟನೆಗಳೆಲ್ಲ ಕ್ಷಿಪ್ರಗತಿಯಲ್ಲಿ ನಡೆದವು. ‘ದಿ ವೈರ್’ ಮೂರು ಮಂದಿ ನ್ಯಾಯಮೂರ್ತಿಗಳು ನೀಡಿದ ತೀರ್ಪನ್ನು ಬಿಜೆಪಿಗೆ ಅನುಕೂಲಕರವಾಗುವಂತೆ ನೀಡಲಾಗಿದೆ ಎಂದು ತನ್ನ ಲೇಖನದಲ್ಲಿ ಹೇಳಿತು. ಈ ತೀರ್ಪು ನ್ಯಾಯಾಂಗ ವಲಯದಲ್ಲಿ ಅಪಾರವಾದ ಅಲ್ಲೋಲಕಲ್ಲೋಲವನ್ನು ಸೃಷ್ಟಿಸಿತು. ಯಾಕೆಂದರೆ ನ್ಯಾಯವನ್ನು ಕೇಳಿ ಬಂದವರು ತಮ್ಮ ವಾದವನ್ನು ಸಾಬೀತುಪಡಿಸಲು ಅಸಾಧ್ಯವಾದರೆ ಅವರನ್ನೇ ನ್ಯಾಯವ್ಯವಸ್ಥೆಗೆ ಧಕ್ಕೆ ಉಂಟುಮಾಡಿದ ಆರೋಪಿಗಳೆಂದು ಪರಿಗಣಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಇದು ದೇಶದಲ್ಲಿ ಅಸ್ತಿತ್ವದಲ್ಲಿರುವ ಕ್ರಿಮಿನಲ್ ಜೂರಿಸ್‍ಪ್ರುಡೆನ್ಸ್‍ಗೆ, ನೆಲದ ನ್ಯಾಯತತ್ತ್ವಕ್ಕೆ ವಿರುದ್ಧವಾದ ಸಂದರ್ಭ. ಜಕಿಯಾ ಜಾಫ್ರಿಯ ಕೇಸಿನ ತೀರ್ಪಿನ ಬಗ್ಗೆ ಸ್ಪಷ್ಟೀಕರಿಸಲು ಮತ್ತು ಅದನ್ನು ಪುನರ್‌ ಪರಿಶೀಲಿಸಲು ಕೇಳಿ 300 ಮಂದಿ ನ್ಯಾಯವಾದಿಗಳು ಅಂದಿನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರಿಗೆ ಪತ್ರವನ್ನು ಬರೆಯುತ್ತಾರೆ. ಈ ಎಲ್ಲ ಒತ್ತಡಕ್ಕೆ ಮೂಲ ಕಾರಣವನ್ನು ವಿವರಿಸುವ ಅಗತ್ಯವಿಲ್ಲವೆಂದು ಕಾಣುತ್ತದೆ. 

ನ್ಯಾಯಾಧೀಶ ದೀಪಕ್ ಮಿಶ್ರಾರವರ ಮೇಲಿನ ಆಪಾದನೆಗಳು

ಲೇಖನದ ಆರಂಭದಲ್ಲಿ ಹೇಳಿದಂತೆ ಚಲಮೇಶ್ವರ್ ಮತ್ತಿತರರು 12-01-2018ರಂದು ದಿಢೀರ್ ಪತ್ರಿಕಾಗೋಷ್ಠಿಯನ್ನು ಕರೆಯುತ್ತಾರೆ. ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾರವರು ಕೇಸು ಹಂಚಿಕೆಯ ವಿಷಯಲ್ಲಿ ತಾರತಮ್ಯ ಮಾಡುತ್ತಿದ್ದಾರೆಂಬುದು ಅಂದು ಬಿಡುಗಡೆ ಮಾಡಿದ 7 ಪುಟಗಳ ಪತ್ರದ ಮುಖ್ಯ ಅಂಶವಾಗಿತ್ತು. ಕೆಲವು ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲು ಮತ್ತು ಸರಕಾರದ ನಿಲುವುಗಳನ್ನು ಸಮರ್ಥಿಸಲು ಅವರು ತಮ್ಮ ಕೋರ್ಟಿಗೆ ಕೆಲವು ಪ್ರಮುಖ ಕೇಸುಗಳನ್ನು ಹಾಕಿಸಿಕೊಳ್ಳುತ್ತಾರೆ ಎಂಬುದು ಪತ್ರದ ಸಾರವಾಗಿತ್ತು. ಯಾವ ಕೋರ್ಟಿಗೆ ಯಾವ ಬಗೆಯ ಕೇಸುಗಳನ್ನು ವಿಚಾರಣೆಗೆಂದು ಕಳುಹಿಸಬೇಕೆಂಬ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದ ಕೇಸು ಹಂಚಿಕೆಯ ಪದ್ಧತಿಯನ್ನು ಗಾಳಿಗೆ ತೂರಿ ಈ ಪವಿತ್ರ ಸಂಸ್ಥೆಯನ್ನು ಹಾಳುಗೆಡಹಲಾಗುತ್ತಿದೆ ಎನ್ನುವುದು ಅವರ ಗಂಭೀರ ಆರೋಪವಾಗಿತ್ತು. ಅದರಲ್ಲೂ ಸಿ.ಬಿ.ಐ. ನ್ಯಾಯಾಧೀಶ ಬಿ.ಹೆಚ್. ಲೋಯಾ ನಿಧನಕ್ಕೆ ಸಂಬಂಧಿಸಿದ ಪ್ರಕರಣ ಅತ್ಯಂತ ಮುಖ್ಯವಾದುದು.

ನ್ಯಾಯಾಧೀಶ ಬಿ.ಹೆಚ್. ಲೋಯಾ ಮರಣ ಪ್ರಕರಣ

2014ರ ಡಿಸೆಂಬರ್ 1ರಂದು ಲೊಯಾ ಮೃತಪಟ್ಟಿದ್ದು ಅದಕ್ಕೆ ಹೃದಯಾಘಾತವೇ ಕಾರಣ ಎಂದು ಹೇಳಲಾಗಿತ್ತು. ಆದರೆ ಅವರ ಮರಣ ನಿಗೂಢ ಸನ್ನಿವೇಶದಲ್ಲಿ ಆಗಿದೆ, ಅದರ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ದಳವನ್ನು ನೇಮಕ ಮಾಡಬೇಕೆಂದು ಕೋರಿದ್ದ ಅರ್ಜಿಯು ಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು. ಅದನ್ನು ಸ್ವತಃ ದೀಪಕ್ ಮಿಶ್ರಾ ತಮ್ಮ ನ್ಯಾಯಾಲಯಕ್ಕೆ ಬರುವಂತೆ ಹಾಕಿಸಿಕೊಂಡಿದ್ದರು. ಮುಂದೆ 2018ರ ಎಪ್ರಿಲ್ ತಿಂಗಳಲ್ಲಿ ಅವರು ಇಂದಿನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್ ಜೊತೆ ಕುಳಿತು ಆ ಪ್ರಕರಣವನ್ನು ವಜಾಗೊಳಿಸಿದರು. ಅದನ್ನು ಪುನರ್ ಪರಿಶೀಲಿಸಲು ಅರ್ಜಿ ಸಲ್ಲಿಸಿದ ಬಾಂಬೆ ಬಾರ್ ಅಸೋಸಿಯೇಶನ್ ಮನವಿಗೆ ಇದೇ ಬೆಂಚು 2018ರ ಜುಲೈ ತಿಂಗಳಲ್ಲಿ ಇತಿಶ್ರೀ ಹಾಡಿತು.

ಅಷ್ಟಕ್ಕೂ ಲೋಯಾ ನಿಗೂಢ ನಿಧನಕ್ಕೆ ಸಂಬಂಧಿಸಿದ ಪ್ರಕರಣದ ಮಹತ್ವ ಏನೆಂಬುದನ್ನು ಪರಿಶೀಲಿಸಬೇಕಿದೆ. 2014 ರ ಜೂನ್ ತಿಂಗಳಲ್ಲಿ ಬ್ರಿಜ್‍ಗೋಪಾಲ್ ಹರ್ಕಿಶನ್ ಲೋಯಾ ಸೆಂಟ್ರಲ್ ಬ್ಯೂರೋ ಆಫ್ ಇನ್‍ವೆಸ್ಟಿಗೇಶನ್ (ಸಿ.ಬಿ.ಐ.) ವಿಶೇಷ ನ್ಯಾಯಾಲಯಕ್ಕೆ ಸೋಹ್ರಾಬುದ್ದೀನ್ ಶೇಕ್ ಎನ್ನುವಾತನ ನಕಲಿ ಎನ್‍ಕೌಂಟರ್ ಕೇಸಿನ ವಿಚಾರಣೆಗೆಂದು ನ್ಯಾಯಾಧೀಶರಾಗಿ ನಿಯೋಜನೆಗೊಂಡರು. ಆ ಕೇಸಿನಲ್ಲಿ ಇಂದಿನ ಗೃಹಮಂತ್ರಿ ಅಮಿತ್ ಶಾ ಆರೋಪಿತರಾಗಿದ್ದರು. ಸೋಹ್ರಾಬುದ್ದೀನ್ ಶೇಕ್‍ನನ್ನು ಕೊಲ್ಲಿಸಿದ ಆರೋಪ ಅವರ ಮೇಲಿತ್ತು. ಪ್ರಕರಣವನ್ನು ಗುಜರಾತ್‍ನಿಂದ ಮುಂಬೈಗೆ ವರ್ಗಾಯಿಸಲಾಗಿತ್ತು.

ಸಿ.ಬಿ.ಐ. ಕೋರ್ಟಿನ ಮುಂದೆ ಅಮಿತ್ ಶಾ ಹಾಜರಿರದಿದ್ದರೂ ಬಿ.ಜೆ. ಲೋಯಾ ವಿಚಾರಣೆಯ ಮೊದಲ ಹಂತಗಳಲ್ಲಿ ಅವರಿಗೆ ಸಾಮಾನ್ಯವಾಗಿ ವಿನಾಯತಿಯನ್ನು ನೀಡುತ್ತಿದ್ದರು. ಆದರೆ ಚಾರ್ಜ್ ಫ್ರೇಮ್ ಮಾಡುವ ಹಂತದಲ್ಲಿ ಆರೋಪಿಗಳ ಹಾಜರಾತಿ ಅನಿವಾರ್ಯವಾಗಿತ್ತು. ಆದರೆ ಅಮಿತ್ ಶಾ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದ್ದುದು ನ್ಯಾಯಾಲಯದ ಗಮನಕ್ಕೆ ಬಂತು. 2014ರ ಅಕ್ಟೋಬರ್ 31ರಂದು ಅವರು ಮುಂಬೈ ನಗರದಲ್ಲಿದ್ದರೂ ಕೋರ್ಟಿಗೆ ಬರಲಿಲ್ಲ. ಮುಂದಿನ ದಿನಾಂಕವನ್ನು ಡಿಸೆಂಬರ್ 15ಕ್ಕೆ ನಿಗದಿಗೊಳಿಸಿದ ನ್ಯಾಯಾಧೀಶರು ಆರೋಪಿಯ ಹಾಜರಾತಿಯನ್ನು ಖಾತರಿಪಡಿಸಲು ಅವರ ವಕೀಲರಿಗೆ ತಿಳಿಸಿದರು.

ಲೋಯಾ 30ನೇ ನವಂಬರ್ 2014ರಂದು ನಾಗಪುರಕ್ಕೆ ಮದುವೆಯೊಂದಕ್ಕೆ ತೆರಳಿದರು. ಆ ರಾತ್ರಿ ಸರಕಾರಿ ಅತಿಥಿಗೃಹದಲ್ಲಿ ಉಳಿದುಕೊಂಡರು. ರಾತ್ರಿ 4 ಗಂಟೆಗೆ ಲೋಯಾ ಎದೆನೋವಿಗೆ ತುತ್ತಾದರು. ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಬೆಳಿಗ್ಗೆ 6-15ಕ್ಕೆ ಮೃತರಾದರು, ಹೃದಯಾಘಾತ ಮರಣಕ್ಕೆ ಕಾರಣ ಎಂದು ಘೋಷಿಸಲಾಯಿತು. ಅವರ ಸಾವಿನ ಹಿಂದೆ ಯಾರದೋ ಕೈವಾಡವಿದೆಯೆಂದು ಕುಟುಂಬಸ್ಥರು ಆರೋಪಿಸಿದರು. ಅವರ ಹೇಳಿಕೆಯ ಪ್ರಕಾರ ಲೋಯಾ ಶರಟಿನ ಕಾಲರ್ ರಕ್ತಲೇಪಿತವಾಗಿತ್ತು. ವೈದ್ಯಕೀಯ ತಜ್ಞರು ಹೇಳುವಂತೆ ಮರಣೋತ್ತರ ಪರೀಕ್ಷೆಯ ಕಾರಣಕ್ಕೆ ಅಂತಹ ನೆತ್ತರಿನ ಗುರುತು ಅಂಟಿಕೊಳ್ಳಲು ಸಾಧ್ಯವಿಲ್ಲ. ಈ ಕುರಿತು ಕಾರವಾನ್ ಮ್ಯಾಗಜಿನ್‍ನಲ್ಲಿ ಪ್ರಕಟಗೊಂಡ ಲೇಖನ ಇನ್ನಷ್ಟು ಗಂಭೀರ ವಿಷಯಗಳನ್ನು ತೆರೆದಿಟ್ಟಿತು. ಅದರಲ್ಲಿ ಬರೆದಂತೆ, ಬಾಂಬೆ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಮೋಹಿತ್ ಶಾ ಅವರು ಅಮಿತ್ ಶಾರವರನ್ನು ಆರೋಪದಿಂದ ಮುಕ್ತಗೊಳಿಸಲು ಲೋಯಾ ಮೇಲೆ ತೀವ್ರ ಒತ್ತಡವನ್ನು ಹಾಕಿದ್ದರು. ಅಲ್ಲದೆ 100 ಕೋಟಿ ಹಣದ ಆಮಿಷವನ್ನು ಕೂಡ ಒಡ್ಡಲಾಗಿತ್ತು. ದಕ್ಷ ಮತ್ತು ಪ್ರಾಮಾಣಿಕ ನ್ಯಾಯಾಧೀಶ ಲೋಯಾ ಇದಕ್ಕೆ ಮಣಿದಿರಲಿಲ್ಲ. 

ಲೋಯಾ ಪ್ರಕರಣದ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ 2014ರ ಡಿಸೆಂಬರ್ 30ರಂದು ಆದೇಶ ಹೊರಡಿಸಿದ ಸಿ.ಬಿ.ಐ. ಕೋರ್ಟಿನ ನಂತರದ ನ್ಯಾಯಾಧೀಶರಾದ ಎಂ.ಬಿ. ಗೋಸಾವಿ ಯವರು ಆಪಾದಿತ ಅಮಿತ್ ಶಾ ಅವರನ್ನು ಆರೋಪಮುಕ್ತಗೊಳಿಸಿ ಅವರ ವಿರುದ್ಧದ ಕೇಸನ್ನು ವಜಾಗೊಳಿಸಿದರು. 

ರಂಜನ್ ಗೊಗೋಯಿ ಸುಪ್ರೀಮ್ ಕೋರ್ಟಿನ ಸಿ.ಜೆ.ಐ. ಆದರು.

2018ರಲ್ಲಿ ಅಂದಿನ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾರವರ ವಿರುದ್ಧ ಸೆಟೆದುನಿಂತಿದ್ದ ರಂಜನ್ ಗೊಗೋಯಿ ಮುಂದೆ ನರೇಂದ್ರ ಮೋದಿಯವರ ಆಜ್ಞಾನುವರ್ತಿ ಎಂಬ ಹಣೆಪಟ್ಟಿಯನ್ನು ಹೊಂದಿದುದು ಕುತೂಹಲಕಾರಿ ಬೆಳವಣಿಗೆ. ಜೊತೆಗೆ ತಮ್ಮ ಮೇಲೆ ನ್ಯಾಯಾಲಯದ ಮಹಿಳಾ ಉದ್ಯೋಗಿಯೊಬ್ಬರು ಹೊರಿಸಿದ್ದ ಲೈಂಗಿಕ ಕಿರುಕುಳದ ಆರೋಪದಿಂದ ಅವರು ಬಚಾವಾದುದು ಸಹ ಒಂದು ಪವಾಡ. ಈ ಬಗ್ಗೆ ವ್ಯವಸ್ಥೆಯನ್ನು ಅವರು ಸಮರ್ಥವಾಗಿ ಬಳಸಿಕೊಂಡರೋ ಅಥವಾ ವ್ಯವಸ್ಥೆಯ ಕಬಂಧಬಾಹುವಿನೊಳಗೆ ಅವರೇ ನಲುಗಿದರೋ ಎಂಬುದು ಬಿಡಿಸಲಾಗದ ಒಗಟು. ಚಲಮೇಶ್ವರ್ ಜೊತೆಯಲ್ಲಿ ಕುಳಿತು ಪತ್ರಿಕಾಗೋಷ್ಠಿ ನಡೆಸಿದ ಕಾರಣ ಸರಕಾರದ ಕೆಂಗಣ್ಣು ರಂಜನ್ ಗೊಗೋಯಿ ಮೇಲಿದೆ, ಅವರಿಗೆ ಸೀನಿಯಾರಿಟಿ ಇದ್ದರೂ ನಿರ್ಲಕ್ಷಿಸಲಾಗುತ್ತದೆ ಎಂಬ ಊಹಾಪೋಹಗಳಿಗೆ ತೆರೆಬಿದ್ದು ಮಿಶ್ರಾ ನಿವೃತ್ತಿಯ ನಂತರ ಅವರೇ ಸುಪ್ರೀಮ್ ಕೋರ್ಟಿನ ಸಿ.ಜೆ.ಐ. ಆದರು.

ಇವರೆಲ್ಲ ಆಡಳಿತಾರೂಢ ಬಿಜೆಪಿ ಪಕ್ಷದ ಬೆಂಬಲಿಗರು!

ದೀಪಕ್ ಮಿಶ್ರಾ, ಅವರ ನಂತರದ ಸುಪ್ರೀಮ್ ಕೋರ್ಟಿನ ಸಿ.ಜೆ.ಐ. ರಂಜನ್ ಗೊಗೋಯಿ, ಮುಂದೆ ಬಂದ  ಶರದ್ ಅರ್ವಿಂದ್ ಬೊಬ್ಡೆ, ಉದಯ್ ಉಮೇಶ್ ಲಲಿತ್ ಇವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಬೆಂಬಲಿಗರಾಗಿ, ಅದರ ಸೈದ್ಧಾಂತಿಕ ನಿಲುವಿಗೆ ಬದ್ಧರಾಗಿ, ಸಂಘಪರಿವಾರದ ಭಾಗವಾಗಿ ಮತ್ತು ರಾಜಕೀಯ ನಾಯಕರ ಖಾಸಗಿ ಅಥವಾ ಅವರ ಪ್ರಭಾವಲಯದೊಳಗೆ ತೊಡಗಿಕೊಂಡವರೇ ಆಗಿದ್ದಾರೆಂಬ ವದಂತಿ ಜನಜನಿತವಾಗಿದೆ. ನಿವೃತ್ತಿಯ ಹಂತದಲ್ಲಿ ರಂಜನ್ ಗೊಗೋಯಿ ನೀಡಿದ ಐದು ತೀರ್ಪುಗಳು ಸಾರ್ವಜನಿಕ ಚರ್ಚೆ ಮತ್ತು ಟೀಕೆಗೆ ಒಳಗಾಗಿವೆ.

ರಂಜನ್ ಗೊಗೋಯಿ ನೀಡಿದ ಐದು ತೀರ್ಪುಗಳು

ರಂಜನ್ ಗೊಗೋಯಿ ನೀಡಿದ ಐದು ತೀರ್ಪುಗಳು ಮೋದಿ ಸರಕಾರಕ್ಕೆ ಪೂರಕವಾಗಿ ಉದ್ದೇಶಪೂರ್ವಕವಾಗಿ ನೀಡಲಾಗಿದೆ ಎಂಬುದು ಪ್ರಮುಖ ಆರೋಪವಾಗಿದೆ. ಅವುಗಳೆಂದರೆ ಅಯೋಧ್ಯೆಯ ರಾಮ ಮಂದಿರ-ಬಾಬ್ರಿ ಮಸೀದಿ ಕೇಸು, ರಾಫೆಲ್ ಹಗರಣ ಹಾಗೂ ರಾಹುಲ್ ಗಾಂಧಿ ನೀಡಿದ ‘ಚೌಕಿದಾರ್ ಚೋರ್ ಹೈ’ ಘೋಷಣೆ ವಿವಾದ, ಕಾಶ್ಮೀರದ ಆರ್ಟಿಕಲ್ 370ಕ್ಕೆ ಸಂಬಂಧಿಸಿದ ಹೇಬಿಯಸ್ ಕಾರ್ಪಸ್ ಕೇಸುಗಳು, ಖಾಸಗಿ ಬ್ಯಾಂಕ್ ಉದ್ಯೋಗಿಗಳ ಮೇಲೆ ಸಿ.ಬಿ.ಐ. ತೆಗೆದುಕೊಂಡ ಕ್ರಮ ಮತ್ತು ಬಹಳಷ್ಟು ವಿವಾದಕ್ಕೆ ಒಳಗಾದ ನಾಗರಿಕರ ನೋಂದಣಿ ಪ್ರಕ್ರಿಯೆಯಾದ ಎನ್.ಆರ್.ಸಿ. ಬಗೆಗಿನ ತೀರ್ಪು.

17ನೇ ನವಂಬರ್ 2019ರಂದು ನಿವೃತ್ತರಾದ ರಂಜನ್ ಗೊಗೋಯಿ ನಾಲ್ಕು ತಿಂಗಳಲ್ಲಿ, 19ನೇ ಮಾರ್ಚ್ 2020ರಂದು, ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿ ನಾಮಕರಣಗೊಂಡುದು ಯಾರಿಗೂ ಅಚ್ಚರಿ ಅನ್ನಿಸಲಿಲ್ಲ. ಮೋದಿ ಸರಕಾರಕ್ಕೆ ಮಾಡಿದ ಉಪಕಾರಕ್ಕೆ ಈ ಉಡುಗೊರೆಯನ್ನು ನೀಡಲಾಗಿದೆ ಎಂಬ ಕುಹಕಕ್ಕೆ ಸಹಜವಾಗಿ ಗೊಗೋಯಿ ಒಳಗಾಗಿದ್ದಾರೆ.

ಈ ನಡುವೆ ಇತರ ಹಲವು ಸೆನ್ಸೇಶನಲ್ ಕೇಸುಗಳು ಪರಿಹಾರ ಕಂಡುಕೊಂಡಿವೆ. ದೀಪಕ್ ಮಿಶ್ರಾ ಕಾಲದ ಶಬರಿಮಲೆಗೆ ಮಹಿಳೆಯರ ಪ್ರವೇಶದ ಪ್ರಕರಣ ಪ್ರಮುಖವಾದುದಾಗಿದೆ. ಅದರ ಮೂಲಕ ಬಿಜೆಪಿ ಕೇರಳದಲ್ಲಿ ತನ್ನ ನೆಲೆ ಕಂಡುಕೊಳ್ಳಲು ರಹದಾರಿ ಮಾಡಿಕೊಡಲಾಗಿದೆ ಎಂದು ಹೇಳಲಾಗಿದೆ.

ನೋಟು ಅಮಾನ್ಯೀಕರಣದ ತೀರ್ಪು

ಇತ್ತೀಚೆಗೆ ಹೊರಬಂದ ನೋಟು ಅಮಾನ್ಯೀಕರಣದ ತೀರ್ಪು ಸಹ ಸರಕಾರದ ಹುಚ್ಚು ತೀರ್ಮಾನದ ಪರವೇ ಆಗಿದೆ. ಐದು ಜನ ನ್ಯಾಯಮೂರ್ತಿಗಳ ಪೈಕಿ ಕನ್ನಡಿಗರಾದ ಜಸ್ಟೀಸ್ ಬಿ.ವಿ. ನಾಗರತ್ನ ಒಬ್ಬರು ಮಾತ್ರ ಇತರ ನಾಲ್ಕು ಮಂದಿಯ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ “ಉದ್ದೇಶ ಒಳ್ಳೆಯದಿರಬಹುದೇನೋ, ಆದರೆ ಅದು ನ್ಯಾಯಸಮ್ಮತವಾಗಿಲ್ಲ” ಎಂದು ನೇರ ಮಾತುಗಳಿಂದ ಹೇಳಿದ್ದಾರೆ. ಅದೇ ರೀತಿ ರಾಜಕಾರಣಿಗಳ ನಿಂದಾತ್ಮಕ ಭಾಷಣಗಳ ಬಗ್ಗೆ ನಡೆದ ಪ್ರಕರಣದಲ್ಲಿ ನ್ಯಾಯಮೂರ್ತಿ ಬಿ.ವಿ. ನಾಗರತ್ನ, “ಸಚಿವರು ನೀಡುವ ಪ್ರಚೋದನಾತ್ಮಕ ಮಾತುಗಳಿಗೆ ಸರಕಾರ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ” ಎಂಬ ತೀರ್ಮಾನವನ್ನು ಕೊಟ್ಟರೆ, ಐದು ಜನ ನ್ಯಾಯಮೂರ್ತಿಗಳ ಬೆಂಚಿನ ಉಳಿದ ನಾಲ್ವರು ಸರಕಾರಕ್ಕೆ ತಕ್ಕಂತೆ ತೀರ್ಪು ನೀಡುವುದರಲ್ಲಿ ನೊಂದುಕೊಂಡಿರುವುದಿಲ್ಲ. 

ಯಥಾ ರಾಜ ತಥಾ ಪ್ರಜಾ

ಮನುಷ್ಯನಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿ ಆನೆ ತಲೆಯನ್ನು ಸೇರಿಸುವಷ್ಟು ವೈದ್ಯಕೀಯ ನಿಪುಣತೆ ನಮ್ಮಲ್ಲಿತ್ತು ಎಂದು ಹೇಳುವ ಪ್ರಧಾನಿಯನ್ನು ಹೊಂದಿರುವ ನಮ್ಮ ದೇಶದಲ್ಲಿ ಅವರನ್ನು ಮೀರಿಸುವ ಮೌಢ್ಯವನ್ನು ಹೊಂದುವುದೇ ಒಂದು ಪ್ಯಾಶನ್, ಇಂದಿನ ಅಗತ್ಯ ಮತ್ತು ಅನಿವಾರ್ಯತೆ. ಯಥಾ ರಾಜ ತಥಾ ಪ್ರಜಾ; ನಾವು ಅಜ್ಞಾನಿಗಳು ಎಂಬುದನ್ನು ಸಾರ್ವತ್ರಿಕವಾಗಿ ಹೇಳುವುದೇ ನಮ್ಮ ಹೆಮ್ಮೆಯ ಸಾಧನೆಯಾಗಿದೆ. ಆ ನಿಟ್ಟಿನಲ್ಲಿ ದೇಶವು ವಿಶ್ವಗುರುವಾಗಲು ಹೊರಟಿದೆ.

 2021ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ಒಂದು ತೀರ್ಪು ಇದಕ್ಕೆ ಮಾದರಿಯಾಗಿದೆ. “ಗೋವು ಆಮ್ಲಜನಕ ಹೀರಿ ಅದನ್ನೇ ಬಿಡುತ್ತದೆ ಎಂಬುದು ಕೆಲವು ವಿಜ್ಞಾನಿಗಳ ನಂಬಿಕೆ” ಎಂದು ಉಚ್ಚ ನ್ಯಾಯಾಲಯದ  ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ದನವನ್ನು ಕೊಂದ ಆರೋಪದ ಅರ್ಜಿದಾರನ ಜಾಮೀನು ಅರ್ಜಿಯ ಮೇಲಿನ ಆದೇಶದಲ್ಲಿ ಹೇಳಿದ್ದಾರೆ. ಹೆಮ್ಮೆ ಪಡಬೇಕು, ಇಂತಹದ್ದು ಆಗಾಗ ಅಲ್ಲಲ್ಲಿ ನಡೆಯುತ್ತಿರುತ್ತವೆ.

ನ್ಯಾಯಮೂರ್ತಿ ಚಲಮೇಶ್ವರ್ ಕಂಡ ದು:ಸ್ವಪ್ನ ಇಂದು ವಾಸ್ತವವಾಗುತ್ತಿದೆ. ಇಂದಿನ ಸಿ.ಜೆ.ಐ. ಧನಂಜಯ ಯಶ್ವಂತ್ ಚಂದ್ರಚೂಡ್ ನ್ಯಾಯಶಾಸ್ತ್ರದ ಪ್ರಕಾಂಡ ಪಂಡಿತ ಎನ್ನುವಾಗಲೇ ಅವರು ಅಯೋಧ್ಯೆ ಮತ್ತು ಲೋಯಾ ಕೇಸುಗಳಲ್ಲಿ ನೀಡಿದ ತೀರ್ಪುಗಳು ದಿಗ್ಭ್ರಮೆ ಹುಟ್ಟಿಸುತ್ತವೆ, ನಿರಾಶೆಗೊಳಿಸುತ್ತವೆ. ಅದೇ ವೇಳೆಗೆ ಜಸ್ಟೀಸ್ ಬಿ.ವಿ. ನಾಗರತ್ನ ತರಹದ ಬದ್ಧತೆ ಇರುವ ನ್ಯಾಯಮೂರ್ತಿಗಳು ಉನ್ನತ ನ್ಯಾಯಾಂಗಕ್ಕೆ ಒದಗಿ ಬರಲಿ ಎನ್ನುವುದಷ್ಟೇ ಮನದಾಳದ ಬಯಕೆ.

ಉನ್ನತ ನ್ಯಾಯಾಂಗವು ಇಂದು ರಾಜಕೀಯ ಹಸ್ತಕ್ಷೇಪದಿಂದ ಎದುರಿಸುತ್ತಿರುವ ಸಮಸ್ಯೆಗಳು ನಿವಾರಣೆಯಾಗಲು ರಾಜಕೀಯ ಬದಲಾವಣೆಯಿಂದಷ್ಟೆ ಸಾಧ್ಯ. ಕಾನೂನು ಮಂತ್ರಿ ಕಿರಣ್ ರಿಜುಜು ಒಂದಾದ ಮೇಲೊಂದರಂತೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಹಲ್ಲೆಯನ್ನು ನಡೆಸುವಂಥ ಹೇಳಿಕೆ ನೀಡುತ್ತಿದ್ದಾರೆ. ಸರಕಾರದ ಅಸಾಂವಿಧಾನಿಕ ಧೋರಣೆಗಳ ಬಗ್ಗೆ ಕಟು ನಿಲುವನ್ನು ಹೊಂದಿರುವ ಉನ್ನತ ನ್ಯಾಯಾಲಯಗಳ ನಿವೃತ್ತ ‘ಆಕ್ಟಿವಿಸ್ಟ್’  ನ್ಯಾಯಮೂರ್ತಿಗಳ ಬಗ್ಗೆ ಇತ್ತೀಚೆಗೆ ತೀವ್ರವಾಗಿ ಹರಿಹಾಯ್ದ “ಗೋಮಾತಾ ಭಕ್ಷಕ” ರಿಜುಜು, ಇವರುಗಳು ನ್ಯಾಯಾಂಗವನ್ನು ವಿರೋಧ ಪಕ್ಷವಾಗಿ ಮಾರ್ಪಡಿಸುತ್ತಿದ್ದಾರೆಂದು ದೂಷಿಸಿದುದಲ್ಲದೆ ಈ ನಿವೃತ್ತ ನ್ಯಾಯಮೂರ್ತಿಗಳನ್ನು   ದೇಶದ್ರೋಹಿಗಳೆಂದು ಕರೆಯುವ ಅತಿರೇಕಕ್ಕೂ ಹೋಗಿದ್ದಾರೆ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮುನ್ನೂರಕ್ಕೂ ಹೆಚ್ಚು ಮಂದಿ ವಕೀಲರು ಕಾನೂನು ಸಚಿವರಿಗೆ ಪತ್ರ ಬರೆದು ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಆದರೆ ಇದೆಲ್ಲವೂ ಭೋರ್ಗಲ್ಲ ಮೇಲೆ ನೀರೆರೆದಂತೆ. ನ್ಯಾಯಾಂಗವನ್ನು ಕೇಂದ್ರ ಸರಕಾರದ ಅಂಗವಾಗಿ ಪರಿವರ್ತಿಸುವ ಹುನ್ನಾರ ಅವರ ಮಾತುಗಳಿಂದ ಅರ್ಥವಾಗುತ್ತದೆ. ನ್ಯಾಯಮೂರ್ತಿಗಳ ನೇಮಕಾತಿಯನ್ನು ನಿರ್ವಹಿಸುವ ಕೊಲಾಜಿಯಂನಲ್ಲಿ ಕೇಂದ್ರ ಸರಕಾರದ ಪ್ರತಿನಿಧಿ ಇರಬೇಕೆಂಬ ಅವರ ಹೇಳಿಕೆಯು ಈಗಿರುವ ಸಾಂವಿಧಾನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ನ್ಯಾಯಾಂಗವನ್ನು ಸಂಪೂರ್ಣವಾಗಿ ಕೈವಶಪಡಿಸಿಕೊಳ್ಳಲು ಇಂದಿನ ಕೇಂದ್ರ ಸರಕಾರ ನಡೆಸುತ್ತಿರುವ ಯೋಜನೆಯ ಭಾಗವಾಗಿದೆ. ಒಟ್ಟಿನಲ್ಲಿ ನಮ್ಮ ದೇಶದ ನ್ಯಾಯ ವ್ಯವಸ್ಥೆಯನ್ನು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ಪಳಗಿಸುವ ಸರ್ವಾಧಿಕಾರಿ ಮನೋಭಾವವು ಗಾಢವಾಗಿ ಗೋಚರವಾಗುತ್ತಿದೆ. ಇಂದಿನ ಕೇಂದ್ರ ಸರಕಾರ ಮತ್ತು ಅದರ ಹಿಂದಿರುವ ದುಷ್ಟ ಸೈದ್ಧಾಂತಿಕತೆಯನ್ನು ರಾಜಕೀಯವಾಗಿ ಸೋಲಿಸದಿದ್ದರೆ ಭಾರತದ ಮುಂದಿನ ದಿನಗಳು ಬರ್ಬರವಾಗಲಿವೆ. ತಾಲಿಬಾನ್ ಆಳ್ವಿಕೆಯೇ ಇವರ ಮಾದರಿ. ನಾವು ಆ ಆಳದ ಪ್ರಪಾತಕ್ಕೆ ಬೀಳಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವ ಜವಾಬ್ದಾರಿ ನಮ್ಮದೇ ಆಗಿದೆ.  

ವಿದ್ಯಾಧರ ಕುಡೆಕಲ್ಲು

ವಕೀಲರು, ಲೇಖಕರು ಹಾಗೂ ಕಥೆಗಾರರು

ಇದನ್ನೂ ಓದಿhttps://peepalmedia.com/rahul-gandhis-trial-amit-shahs-lawyer-was-the-judge/ ರಾಹುಲ್ ಗಾಂಧಿ ವಿಚಾರಣೆ-ಅಮಿತ್‌ ಶಾ ವಕೀಲರಾಗಿದ್ದ ನ್ಯಾಯಾಧೀಶರು!

Related Articles

ಇತ್ತೀಚಿನ ಸುದ್ದಿಗಳು