Friday, June 14, 2024

ಸತ್ಯ | ನ್ಯಾಯ |ಧರ್ಮ

ಮೋದಿ ಪತ್ರಿಕಾಗೋಷ್ಠಿ; ಕರಾರಿನ ಮೇಲೆ ಪತ್ರಕರ್ತರ ಪ್ರಶ್ನೆ ಎದುರಿಸಲಿರುವ ಭಾರತದ ಪ್ರಧಾನಿ

2014 ರಲ್ಲಿ ಪ್ರಧಾನಿಯಾದ ಬಳಿಕ ಭಾರತದಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡದವರು ಈಗ ಅಮೇರಿಕಾದಲ್ಲಿ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವ ಅಪರೂಪದ ಪ್ರಸಂಗ ನರೇಂದ್ರ ಮೋದಿಗೆ ಎದುರಾಗಿದೆ. ಮೂರು ದಿನಗಳ ಅಮೇರಿಕಾ ಭೇಟಿಯ ಕೊನೆಯ ದಿನ ಜೋ ಬಿಡೆನ್ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರ ಮೋದಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂತರರಾಷ್ಟ್ರೀಯ ಮಾಧ್ಯಮ CNN ಮಾಡಿರುವ ವರದಿಯಲ್ಲಿ ನರೇಂದ್ರ ಮೋದಿಯವರ ಪತ್ರಿಕಾಗೋಷ್ಠಿ ಕುರಿತು ಪ್ರಸ್ತಾಪವಾಗಿದೆ. ಮೋದಿ ಮತ್ತು ಜೋ ಬಿಡೆನ್ ಜಂಟಿ ಪತ್ರಿಕಾಗೋಷ್ಠಿ ನಡೆಸುವ ಶ್ವೇತಭವನದ ಪ್ರಸ್ತಾಪಕ್ಕೆ ಭಾರತೀಯ ಅಧಿಕಾರಿಗಳು ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಅಪರಿಚಿತ ಯುಎಸ್ ಅಧಿಕಾರಿಗಳು ಸಿಎನ್‌ಎನ್‌ಗೆ ತಿಳಿಸಿದ್ದಾರೆ. ಆದರೆ “ಸುದೀರ್ಘ ಮತ್ತು ಸೂಕ್ಷ್ಮ” ವಿಚಾರಗಳ ಹೊರತಾಗಿ ಕೇಳುವ ಪ್ರಶ್ನೆಗಳಿಗಷ್ಟೆ ಅವಕಾಶ ಎಂಬ ಭಾರತೀಯ ಅಧಿಕಾರಿಗಳ ಕರಾರಿಗೆ ಪತ್ರಿಕಾ ಕಾರ್ಯಕ್ರಮಕ್ಕೆ ಒಪ್ಪಿಕೊಂಡರು ಎಂದು CNN ವರದಿ ಮಾಡಿದೆ.

ಇಂದಿನ ಪತ್ರಿಕಾಗೋಷ್ಠಿಯ ಸ್ವರೂಪವು ಯುಎಸ್ ಪ್ರೆಸ್‌ನಿಂದ ಒಂದು ಮತ್ತು ಭಾರತೀಯ ಪತ್ರಕರ್ತರಿಂದ ಒಂದು ಪ್ರಶ್ನೆಗೆ ಮಾತ್ರ ಅವಕಾಶ ನೀಡುತ್ತದೆ. ಸಮಾವೇಶದ ಮೂಲಕ, ನಾಯಕರು ಪ್ರತಿ ಬದಿಯಲ್ಲಿ ಇಬ್ಬರು ವರದಿಗಾರರಿಂದ ಪ್ರಶ್ನೆಗಳನ್ನು ತೆಗೆದುಕೊಳ್ಳುತ್ತಾರೆ. ಆ ನಂತರ ಮೋದಿಯವರು ಪ್ರಶ್ನೆಗೆ ಉತ್ತರಿಸಲಾಗುತ್ತದೆ.

ಈ ಬೆಳವಣಿಗೆಯ ಬಗ್ಗೆ ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಪ್ರಧಾನಿ ಮೋದಿ ಅವರು ಭೇಟಿಯ ಕೊನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಒಪ್ಪಿದ್ದಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಡುವುದು ಅತ್ಯವಶ್ಯಕ ಎಂದು ನಾವು ಭಾವಿಸುತ್ತೇವೆ ಮತ್ತು ಅದು ಮುಖ್ಯವೆಂದು ಅವರು ಭಾವಿಸಿದರೆ ನಮಗೆ ಸಂತೋಷವಾಗುತ್ತದೆ.” ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿಯಾದ ನಂತರ ನರೇಂದ್ರ ಮೋದಿ ಐದು ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದರೂ, ಆ ಭೇಟಿಯ ಸಂಪೂರ್ಣ ರಾಜತಾಂತ್ರಿಕ ಸ್ಥಾನಮಾನದೊಂದಿಗೆ ನಡೆದದ್ದು ಇದೇ ಮೊದಲನೆಯದು. ಹಾಗಾಗಿ ಈ ಭೇಟಿಯಲ್ಲಿ 75 ಸೆನೆಟರ್ ಗಳು ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯರು ಮೋದಿ ಅವರೊಂದಿಗೆ ಮಾನವ ಹಕ್ಕುಗಳ ಸಮಸ್ಯೆಗಳನ್ನು ಎತ್ತುವಂತೆ ಒತ್ತಾಯಿಸಿದ್ದರಿಂದ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಒತ್ತಡಕ್ಕೆ ಒಳಗಾಗಿದ್ದಾರೆ.

“ಸ್ವತಂತ್ರ, ವಿಶ್ವಾಸಾರ್ಹ ವರದಿಗಳ ಸರಣಿಯು ಭಾರತದಲ್ಲಿ ರಾಜಕೀಯ ಅವಕಾಶಗಳ ಕುಗ್ಗುವಿಕೆ, ಧಾರ್ಮಿಕ ಅಸಹಿಷ್ಣುತೆಯ ಏರಿಕೆ, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಪತ್ರಕರ್ತರನ್ನು ಗುರಿಯಾಗಿಸುವುದು ಮತ್ತು ಪತ್ರಿಕಾ ಸ್ವಾತಂತ್ರ್ಯ ಮತ್ತು ಇಂಟರ್ನೆಟ್ ಪ್ರವೇಶದ ಮೇಲೆ ಹೆಚ್ಚುತ್ತಿರುವ ನಿರ್ಬಂಧಗಳ ಕಡೆಗೆ ಹೆಚ್ಚಿನ ಪರಿಣಾಮಗಳನ್ನು ಪ್ರತಿಬಿಂಬಿಸುತ್ತದೆ” ಎಂದು ಶ್ವೇತಭವನಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದರು. ಇದರ ನಡುವೆ ಭಾರತ ಮತ್ತು ಅಮೇರಿಕಾ ಹಲವಷ್ಟು ವರ್ಷಗಳಿಂದ ಉತ್ತಮ ಬಾಂಧವ್ಯ ಹೊಂದಿದ್ದು, ಮುಜುಗರಕ್ಕೆ ಸಿಕ್ಕುವ ಪ್ರಶ್ನೆಗಳಿಂದ ಬಾಂಧವ್ಯದಲ್ಲಿ ಒಡಕು ಉಂಟಾಗಬಾರದು ಎಂಬ ಉದ್ದೇಶದಿಂದ ಕರಾರಿನ ಪತ್ರಿಕಾಗೋಷ್ಠಿಗೆ ಉತ್ತರಿಸಲಾಗುವುದು ಎಂದು ಶ್ವೇತ ಭವನದ ಮೂಲಗಳಿಂದ ತಿಳಿದು ಬಂದಿದೆ.

ಬುಧವಾರದ ದಿನ ಆರು ಜಾಗತಿಕ ಪತ್ರಕರ್ತ ಸಂಸ್ಥೆಗಳ ಗುಂಪು ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ ನಡೆಯುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್‌ನಲ್ಲಿನ ವರದಿ ಹೇಳಿತ್ತು. ಪತ್ರಿಕಾ ಸಂಸ್ಥೆಗಳು ಭಾರತದಲ್ಲಿ ಪತ್ರಕರ್ತರು ದೈಹಿಕ ಹಿಂಸೆ, ಕಿರುಕುಳ, ನಕಲಿ ಮೊಕದ್ದಮೆಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ದ್ವೇಷದ ಪ್ರಚಾರಗಳನ್ನು ಎದುರಿಸುತ್ತಿದ್ದಾರೆ ಎಂಬ ಕಾರಣಕ್ಕೆ ಪ್ರತ್ಯೇಕ ಸಂವಾದ ಸಭೆಗಳನ್ನು ಆಯೋಜಿಸಿದ್ದೂ ಸಹ ಅಮೇರಿಕಾದಲ್ಲಿ ಈ ಭಾರಿಯ ಮೋದಿ ಭೇಟಿ ಸಂದರ್ಭದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

Related Articles

ಇತ್ತೀಚಿನ ಸುದ್ದಿಗಳು