Wednesday, June 19, 2024

ಸತ್ಯ | ನ್ಯಾಯ |ಧರ್ಮ

ಇಂಡಿಯಾ ಒಕ್ಕೂಟ ವೋಟಿಗಾಗಿ ಮುಜ್ರಾ ಮಾಡುತ್ತಿದೆ: ವಿಪಕ್ಷಗಳ ವಿರುದ್ಧ ಕೀಳು ಮಟ್ಟದ ಟೀಕೆ ಮಾಡಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಂದು ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಕೀಳು ಮಟ್ಟದ ಪದಗಳನ್ನು ಬಳಕೆ ಮಾಡಿದ್ದಾರೆ. ಮುಸ್ಲಿಂ ವೋಟಿಗಾಗಿ ಅವರು ‘ಗುಲಾಮಗಿರಿ’ ಮತ್ತು ‘ಮುಜ್ರಾ’ ಮಾಡುತ್ತಿದ್ದಾರೆ ಆರೋಪಿಸಿದ್ದಾರೆ.

ಪಾಟ್ಲಿಪುತ್ರ ಮತ್ತು ಕಾರಕಟ್ ಸಂಸದೀಯ ಕ್ಷೇತ್ರಗಳಲ್ಲಿ ಪ್ರತ್ಯೇಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪ್ರತಿಪಕ್ಷಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದರು ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ “ಮೀಸಲಾತಿ ನಿರಾಕರಿಸುತ್ತಿವೆ” ಎಂದು ಆರ್‌ಜೆಡಿ ಮತ್ತು ಕಾಂಗ್ರೆಸ್‌ನಂತಹ ಪಕ್ಷಗಳನ್ನು ಟೀಕಿಸಿದರು.

ಸಾಮಾಜಿಕ ನ್ಯಾಯದ ಹೋರಾಟಕ್ಕೆ ಹೊಸ ದಿಕ್ಕು ನೀಡಿದ ನಾಡು ಬಿಹಾರ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಹಕ್ಕುಗಳನ್ನು ಕಸಿದು ಮುಸ್ಲಿಮರಿಗೆ ನೀಡುವ ‘ಇಂಡಿಯಾ’ ಒಕ್ಕೂಟದ ಯೋಜನೆಗಳನ್ನು ವಿಫಲಗೊಳಿಸುತ್ತೇನೆ ಎಂದು ನಾನು ಈ ರಾಜ್ಯದ ನೆಲದಲ್ಲಿ ಘೋಷಿಸಲು ಬಯಸುತ್ತೇನೆ. ಅವರು ಬೇಕಿದ್ದರೆ ಗುಲಾಮರಾಗಿ ಉಳಿಯಬಹುದು ಮತ್ತು ತಮ್ಮ ವೋಟ್ ಬ್ಯಾಂಕನ್ನು ಮೆಚ್ಚಿಸಲು ‘ಮುಜ್ರಾ‘ ನೃತ್ಯ ಮಾಡಬಹುದು. ಆದರೆ ಮೀಸಲಾತಿ ಕಸಿಯಲು ಬಿಡುವುದಿಲ್ಲ ಎಂದರು.

‘ವೋಟ್ ಜಿಹಾದ್’ನಲ್ಲಿ ತೊಡಗಿರುವವರ ಬೆಂಬಲವನ್ನು ಪ್ರತಿಪಕ್ಷಗಳ ಮೈತ್ರಿಕೂಟ ಎಣಿಸುತ್ತಿದೆ ಎಂದೂ ಮೋದಿ ಆರೋಪಿಸಿದ್ದಾರೆ. ಅನೇಕ ಮುಸ್ಲಿಂ ಗುಂಪುಗಳನ್ನು ಒಬಿಸಿ ಪಟ್ಟಿಗೆ ಸೇರಿಸುವ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್‌ನ ಆದೇಶವನ್ನೂ ಅವರು ಉಲ್ಲೇಖಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಮಕೃಪಾಲ್ ಯಾದವ್ ಪರ ಮೋದಿ ಪ್ರಚಾರ ನಡೆಸುತ್ತಿದ್ದರು.

Related Articles

ಇತ್ತೀಚಿನ ಸುದ್ದಿಗಳು