Thursday, June 13, 2024

ಸತ್ಯ | ನ್ಯಾಯ |ಧರ್ಮ

ಮೋದಿ ಸಂಪುಟ 3.0: 12 ರಿಂದ 7ಕ್ಕೆ ಕುಸಿದ ಮಹಿಳಾ ಪ್ರಾತಿನಿಧ್ಯ

ನವದೆಹಲಿ: ನಿನ್ನೆಯಷ್ಟೆ ನಡೆದ ನೂತನ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮೋದಿ ಸಂಪುಟದಲ್ಲಿ 72 ಸಚಿವರು ಸ್ಥಾನ ಪಡೆದುಕೊಂಡಿದ್ದಾರೆ. ಅದರಲ್ಲಿ ಏಳು ಮಹಿಳೆಯರು ಮತ್ತು ಐವರು ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ದೊರೆತಿದೆ. ಆದರೆ, ನಿರೀಕ್ಷೆಯಂತೆ ಈ ಸಲವೂ ಮುಸ್ಲಿಂ ಸಮುದಾಯದವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ.

ಹಿಂದಿನ ಬಾರಿಗೆ ಹೋಲಿಸಿದರೆ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯ 12ರಿಂದ 7ಕ್ಕೆ ಇಳಿದಿದೆ. ಈ ಬಾರಿ ನಿರ್ಮಲಾ ಸೀತಾರಾಮನ್ ಮತ್ತು ಅನ್ನಪೂರ್ಣ ದೇವಿ ಅವರಿಗೆ ಕ್ಯಾಬಿನೆಟ್‌ ಸ್ಥಾನ ಸಿಕ್ಕಿದೆ. ಅನುಪ್ರಿಯಾ ಪಟೇಲ್, ಶೋಭಾ ಕರಂದ್ಲಾಜೆ, ರಕ್ಷಾ ಖಡ್ಸೆ, ಸಾವಿತ್ರಿ ಠಾಕೂರ್, ನಿಮುಬೆನ್‌ ಬಂಭನಿಯಾ ಅವರು ರಾಜ್ಯ ಖಾತೆ ಸಚಿವೆಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

2019 ಸಂಪುಟದಲ್ಲಿ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಮತ್ತು ಹರ್ಸಿಮ್ರತ್ ಕೌರ್ ಬಾದಲ್ ಕ್ಯಾಬಿನೆಟ್ ಸ್ಥಾನವನ್ನು ಅಲಂಕರಿಸಿದ್ದರು. ನಿರಂಜನ್ ಜ್ಯೋತಿ, ಶೋಭಾ ಕರಂದ್ಲಾಜೆ, ಪ್ರತಿಮಾ ಭೌಮಿಕ್, ಅನುಪ್ರಿಯಾ ಪಟೇಲ್, ಮೀನಾಕ್ಷಿ ಲೇಖಿ, ರೇಣುಕಾ ಸಾರುತಾ, ಭಾರತಿ ಪವಾರ್, ಅನ್ನಪೂರ್ಣ, ದರ್ಶನಾ ಜರ್ದೋಶ್ ಅವರು ರಾಜ್ಯ ಸಚಿವೆಯರಾಗಿದ್ದರು.

ಪ್ರಮಾಣ ವಚನ ಸ್ವೀಕರಿಸಿದ ಅಲ್ಪಸಂಖ್ಯಾತ ಸಮುದಾಯಗಳ ಐವರು ಸಚಿವರೆಂದರೆ ಕಿರಣ್ ರಿಜಿಜು ಮತ್ತು ಹರ್‌ದೀಪ್‌ ಸಿಂಗ್ ಪುರಿ, ರವನೀತ್ ಸಿಂಗ್ ಬಿಟ್ಟು, ಜಾರ್ಜ್ ಕುರಿಯನ್ ಮತ್ತು ರಾಮದಾಸ್ ಅಠಾವಳಿ. ರಿಜಿಜು ಮತ್ತು ಪುರಿ ಅವರು ಸಂಪುಟ ಸಚಿವರಾಗಿ ಸ್ಥಾನ ಪಡೆದರೆ, ಇನ್ನುಳಿದವರಿಗೆ ರಾಜ್ಯ ಖಾತೆ ದೊರೆತಿದೆ.

ಹಿಂದಿನ ಬಾರಿಗೆ ಹೋಲಿಸಿದರೆ ಅಲ್ಪಸಂಖ್ಯಾತರ ಪ್ರಾತಿನಿಧ್ಯದಲ್ಲಿ ಈ ಬಾರಿ ಸ್ವಲ್ಪಮಟ್ಟಿಗೆ ಸುಧಾರಣೆಯಾಗಿದೆ. 2019ರಲ್ಲಿ ರಿಜಿಜು, ಹರ್‌ದೀಪ್‌ ಸಿಂಗ್ ಪುರಿ, ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಹರ್ಸಿಮ್ರತ್ ಕೌರ್ ಬಾದಲ್ ಸಂಪುಟದಲ್ಲಿ ಸ್ಥಾನ ಪಡೆದಿದ್ದರು.ಈ ವರ್ಷ ಇಂಡಿಯಾ ಕೂಟದಿಂದ ಕೇವಲ 24 ಮುಸ್ಲಿಮರು ಲೋಕಸಭೆಗೆ ಚುನಾಯಿತರಾಗಿದ್ದು, ಅವರೆಲ್ಲ ಇಂಡಿಯನ್‌ ಕೂಟಕ್ಕೆ ಸೇರಿದವರಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು