Tuesday, June 18, 2024

ಸತ್ಯ | ನ್ಯಾಯ |ಧರ್ಮ

ಮೋಹನನ ರಂಗಿನಾಟವೂ ಚಂದ್ರಹಾಸನ ಮೋಜಿನಾಟವೂ…

ಈ ವರೆಗೆ…

ಬಡ ಕುಟುಂಬದ ಗಂಗೆಯನ್ನು ನೋಡಲು ಮೋಹನ ಬರುತ್ತಾನೆ. ಹುಡುಗಿ ಒಪ್ಪಿಗೆಯಾಗಿ ಮದುವೆಗೆ ಅವಸರಿಸುತ್ತಾನೆ. ಅವನ ಮನೆ, ಕುಟುಂಬ ನೋಡದೆ ಮದುವೆ ಸಾಧ್ಯವಿಲ್ಲವೆಂದು ಗಂಗೆಯ ಅಪ್ಪ ಖಡಾ ಖಂಡಿತವಾಗಿ ಹೇಳಿದಾಗ ಮೋಹನ ಆಕೆಯ ಕುಡುಕ ಅಣ್ಣ ಚಂದ್ರಹಾಸನನ್ನು ಬುಟ್ಟಿಗೆ ಹಾಕಿ ಕೊಳ್ಳುತ್ತಾನೆ. ಮುಂದೇನಾಯ್ತು? ಓದಿ… ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆ -೨

ವಾರ ಕಳೆದು ಇಂದು ಗಂಗೆಯ ಮನೆ ಹೊಕ್ಕಿದ್ದ ಮೋಹನ ಮುಖತಃ ಅವಳನ್ನು ಕಂಡು ಮುದಗೊಂಡ. ಅವಳ ಅಪ್ಪನ  ಸಂದರ್ಶನವನ್ನು ಆತಂಕದಿಂದಲೇ  ಎದುರಿಸಿ, “ಬನ್ನಿ ಬಾವ ಹೊರಗೆ ಸುತ್ತಾಡಿಕೊಂಡು ಬರೋಣ” ಎಂದು ಚಂದ್ರಹಾಸನನ್ನು ಕರೆದುಕೊಂಡು  ಹೊರಬಂದ. ಈ ಚಂದ್ರಹಾಸನನ್ನು ಆಡಿಸುವ, ಬೀಳಿಸುವ ಮಟ್ಟು ಕಂಡುಕೊಂಡಿದ್ದ ಮೋಹನ ಅವನನ್ನು ಸೀದಾ ನಾರಿಪುರದ ಸರ್ಕಲ್ ನಲ್ಲಿದ್ದ ಮಿಲ್ಟ್ರಿ ಹೋಟೆಲಿಗೆ ಕರೆದು ಕೊಂಡು ಹೋದ. ಹೆಂಡ ಬಾಡಿನ ಸಮಾರಾಧನೆ ಮಾಡಿಸಿ ತನ್ನ ಅಳಲು ತೋಡಿಕೊಂಡ. “ನಮ್ಮ ಚಿಕ್ಕಮ್ಮ ಬಹಳ ಘಾಟಿ ಬಾವ. ನಾನು ಅವಳ ಅಣ್ಣನ ಮಗಳನ್ನು ಮದುವೆ ಆಗಬೇಕು ಅಂತ ಹಠ ಹಿಡಿದು ಕೂತಿದ್ದಾಳೆ. ಮೂರ್ಛೆರೋಗ ಬರುವ ಆ ಹುಡುಗೀನ ಹೇಗೆ ಮದುವೆ ಮಾಡ್ಕೊಳ್ಳಿ ಹೇಳಿ. ಮನೆಲಿ ನನಗೆ ನೆಮ್ಮದಿ ಅನ್ನೋದೇ ಇಲ್ಲ. ಹಾಗಾಗಿ ಹೆಚ್ಚಾಗಿ ಪೇಟೆಯಲ್ಲಿ ಗೆಳೆಯರ ರೂಮಿನಲ್ಲಿ ಇರ್ತಿನಿ. ಅಂತದ್ರಲ್ಲಿ ಬೇರೆ ಹುಡುಗಿನ ಮದುವೆ ಮಾಡ್ಕೊಂಡು ಈಗ ಮನೆಗೆ ಕರೆದುಕೊಂಡು ಬರ್ತಿನಿ ಅಂದ್ರೆ ಖಂಡಿತಾ ಅವಳು ಒಪ್ಪೋದಿಲ್ಲ. ನೀವೆಲ್ಲಾ ಹೀಗೆ ಮದುವೆ ವಿಷಯ ಮಾತಾಡೋಕೆ ಮನೆಗೆ ಬರ್ತಿದ್ದೀರಿ ಅಂದ್ರೆ ದೊಡ್ಡ ರಾದ್ಧಾಂತ ಮಾಡಿ ಬೀದಿಯಲ್ಲಿ ನಿಂತು ನಮ್ಮೆಲ್ಲರ ಮರ್ಯಾದಿನೇ ಹರಾಜಾಕಿ ಬಿಡ್ತಾಳೆ. ಪರಿಸ್ಥಿತಿ ಹೀಗಿರುವಾಗ, ನನಗೆ ಏನ್ಮಾಡೋದು ಅಂತ್ಲೆ ತೋಚುತ್ತಿಲ್ಲ ಅಂದ. ಮೋಹನನ ಬಗ್ಗೆ ಕನಿಕರಗೊಂಡ ಚಂದ್ರಹಾಸ, “ನೀವು ಏನೂ ಯೋಚನೆ ಮಾಡಬೇಡಿ ಬಾವ. ನಮ್ಮ ಅವ್ವ ಅಪ್ಪ ಬರ್ದಂಗೆ ನೋಡ್ಕೊಳ್ಳೋದು ನನ್ನ ಜವಾಬ್ದಾರಿ. ಒಬ್ಬ ತಮ್ಮನ್ನ ಮಾತ್ರ ನನ್ನ ಜೊತೆ ಕರ್ಕೊಂಡು ಬರೋಕೆ ವ್ಯವಸ್ಥೆ ಮಾಡ್ಕೋತಿನಿ. ನಿಮ್ಮ ಚಿಕ್ಕಮ್ಮನ್ನ ಹೆಂಗ್ ಸಂಭಾಳುಸ್ಬೇಕು ಅಂತ ಒಂಚೂರು ತಲೆ ಓಡ್ಸಿ” ಎಂದು ಧೈರ್ಯ ತುಂಬಿ ಕಳುಹಿಸಿದ.

ಗಂಡು ಮಕ್ಕಳು ಅನ್ನುವ ಅತಿಯಾದ ಮೋಹದಲ್ಲಿ ಕುರಾಡಾಗಿದ್ದ ಅವ್ವ, ದೇವರಂತ ಅಪ್ಪನಿಗೆ ಆ ಮನೆಯಲ್ಲಿ ಕವಡೆ ಕಿಮ್ಮತ್ತು ಸಿಗದಂತೆ ಮಾಡಿದ್ದಳು. ಇನ್ನು ಗಂಗೆಯೋ ಎಲ್ಲರ ಕಾಲಿನ ಚೆಂಡಾಗಿದ್ದಳು. ಅವಳು ಹಾಗಲ್ಲ ಹೀಗೆ ಎಂದಳೋ ಮುಗಿದೇ ಹೋಯಿತು. ಆರು ಜನ ಅಣ್ಣ ತಮ್ಮಂದಿರ ಕಾಲುಗಳು ಜಾಡಿಸಲು ಸದಾ ಸಿದ್ಧವಾಗಿಯೇ ಇರುತ್ತಿದ್ದವು. ಹಾಗಂತ ಗಂಗೆ ಏನು ಹೆದರಿ ಮುಲುಕುವ ಸ್ವಭಾವದವಳೇನಾಗಿರಲಿಲ್ಲ. ತನಗೆ ಸರಿ ಅನ್ನಿಸಿದ್ದನ್ನು ಅಣ್ಣಂದಿರೊಂದಿಗೆ ಗುದುಮುರಿ ಬಿದ್ದೋ, ಇಲ್ಲ ಕದ್ದು ಮುಚ್ಚಿಯೋ ಜಾಣತನದಿಂದ ಮಾಡಿಯೇ ತೀರುತ್ತಿದ್ದಳು. ಅವಳು ಕೂಡ ಅಣ್ಣಂದಿರ ಬೈಗುಳಕ್ಕೆ ಅವರ ಒರಟುತನಕ್ಕೆ ಜಡ್ಡು ಗಟ್ಟಿದವಳಂತಾಗಿದ್ದಳು. ಒಟ್ಟಿನಲ್ಲಿ ಆ ಮನೆಯಲ್ಲಿ ಗಂಡು ಮಕ್ಕಳ ಇರುವಿಕೆ ಅಂದರೆ ಆನೆ ನಡೆದದ್ದೇ ದಾರಿ ಎಂಬಂತಿತ್ತು. ಹೀಗಿರಲಾಗಿ ಚಂದ್ರಹಾಸನಿಗೆ, ಅಪ್ಪನನ್ನು, ಮೋಹನನ ಮನೆಗೆ ಹೋಗದಂತೆ ತಡೆಯುವುದೇನು ಕಷ್ಟದ ಕೆಲಸವಾಗಿರಲಿಲ್ಲ.

ತಮ್ಮ ಗಿರಿಧರನನ್ನು  ಬೆನ್ನಿಗೆ ಹಾಕಿಕೊಂಡು, ಅರವತ್ತು ಮೈಲು ದೂರ ಇರುವ ಭೋಗನೂರಿಗೆ ಬಂದು ತಲುಪಿದ್ದ ಚಂದ್ರಹಾಸ. ಭೋಗನೂರಿನ ಬಸ್ ಸ್ಟಾಂಡಿನಲ್ಲಿ ಕಾಯುತ್ತಾ ಕುಳಿತಿದ್ದ ಮೋಹನ ಈ ಇಬ್ಬರು ಅಣ್ಣ-ತಮ್ಮಂದಿರನ್ನು ಕರೆದುಕೊಂಡು ಮನೆಗೆ ಹೊರಟ. ದಾರಿಯುದ್ದಕ್ಕೂ ತನ್ನ ಮನೆತನದ ಗುಣಗಾನ ನಡೆಸಿದ. ತನ್ನ ಬೆನ್ನಿಗೆ ಹುಟ್ಟಿದ ತಂಗಿ ಇಬ್ಬರು ತಮ್ಮಂದಿರ ಬಗ್ಗೆ ಬಹಳ ಪ್ರೀತಿಯ ಮಾತುಗಳನ್ನಾಡಿದ. ಮನೆ ಸಮೀಪಿಸುತ್ತಿದ್ದಂತೆ ಅನತಿ ದೂರದಲ್ಲೇ ಮನೆಯತ್ತ ಕೈ ತೋರಿಸಿ “ಅದೇ ನಮ್ಮ ಮನೆ” ಎಂದು ಹೇಳಿದ. ಹರಕಲು ಮುರುಕಲಾಗಿದ್ದ ಆ ದೊಡ್ಡ ತೊಟ್ಟಿ ಮನೆಯನ್ನು ಕಂಡು ಅಣ್ಣತಮ್ಮಂದಿರ ಮುಖ ಕಳೆಗುಂದಿತು. ಇದನ್ನು ಊಹಿಸಿದ್ದ ಮೋಹನ ಕೂಡಲೇ “ಗಾಬ್ರಿಯಾಗಬೇಡಿ ಇನ್ನೇನು ಜಮೀನಿನಲ್ಲಿ ಹೊಸ ಮನೆಗೆ ಕೈ ಹಾಕ್ಬೇಕು ಅಂತಿದಿವಿ. ಇದು ಟೆಂಪ್ರವರಿ ಅಷ್ಟೇ” ಬನ್ನಿ ಕಾಫಿ ಕುಡಿರಿ, ನಮ್ಮ ಜಮೀನು ತೋರಿಸಿಕೊಂಡು ಬರ್ತಿನಿ” ಎಂದು ಮನೆಯ ಒಳ ನಡೆದ. ತನ್ನ ಚಿಕ್ಕಮ್ಮನನ್ನು ಕರೆದು “ಇವರು ನನ್ನ ಕಾಲೇಜ್ ಫ್ರೆಂಡ್ಸ್” ಎಂದು ಪರಿಚಯಿಸಿ ಟೀ ಇಡಲು ಹೇಳಿದ. ಚಿಕ್ಕಮ್ಮನಿಗೆ ಮೊದಲೇ ಇವನು ತಾಕೀತು ಮಾಡಿದ್ದರಿಂದಾಗಿ ಏನೊಂದು ಮಾತಾಡದೆ ಗಂಟು ಮೂತಿಯಲ್ಲೊಮ್ಮೆ ಅವರನ್ನೆಲ್ಲ ಕೆಕ್ಕರಿಸಿ ನೋಡಿ “ಹೂಂ” ಎಂದು ಒಳ ನಡೆದಳು.

ಟೀ ಸಮಾರಾಧನೆಯ ನಂತರ ತೋಟದ ದಾರಿ ಹಿಡಿದ ಬಾವ, ಬಾಮೈದುನರಿಗೆ ಮೋಹನ ದಾರಿ ಉದ್ದಕ್ಕೂ ತನ್ನ ತೋಟ, ಹೊಲ, ರಾಶಿ ರಾಶಿ ಒಟ್ಟಾಗುವ ಫಸಲುಗಳ ಬಗ್ಗೆ ಸವಿಸ್ತಾರವಾಗಿ ಹೇಳಿದ. ಸುತ್ತಿ ಬಳಸಿ ಒಂದು ವಿಶಾಲವಾದ ತೋಟದ ಬಳಿ ಬಂದು ನಿಂತ. ದೃಷ್ಟಿತಾಗಿತೋ ಎನ್ನುವಂತೆ ಮೈತುಂಬ ಎಳನೀರನ್ನು ಹೊತ್ತು ನಲಿಯುತ್ತಿದ್ದ ದೊಡ್ಡ ದೊಡ್ಡ ತೆಂಗಿನ ಮರಗಳ ನಡುವೆ ಅವರನ್ನು ಕೂರಿಸಿದ. ಮಾರು ದೂರದಲ್ಲಿ ನೆಲಕ್ಕೆ ಬಿದ್ದ ಕಾಯಿಗಳನ್ನು ಮಂಕರಿಗೆ ತುಂಬಿಸುತ್ತಿದ್ದ ಚಿನ್ನಪ್ಪನನ್ನು ಕರೆದು “ಇವತ್ತು ಎಷ್ಟು ಮಂಕ್ರಿ ತಳ್ಳು ಸಿಕ್ಕಿದ್ವೋ? ಎಲ್ಲನೂ ಎಲ್ಲಿ  ಒಟ್ಟ್ತಿದ್ದೀವಿ ಎಂದು ಕೇಳಿದ. ಚಿನ್ನಪ್ಪ ತಲೆ ಕೆರೆದುಕೊಂಡು ಹುಳ್ಳಗೆ ನಗುತ್ತಾ “ಈಗೊಂದು ಹತ್ತು ಮಂಕ್ರಿ  ಸಿಕ್ಕವೆ ಮೋನಣ್ಣ. ಎಲ್ಲಾನು ಶಿವಣ್ಣನ ಮನೆ ಫಸ್ಲು ಕೋಣೆಗೆ ಒಟ್ಟ್ತಿದ್ದೀವಿ” ಎಂದು ಹೇಳಿ ಕುಡ್ಲು ಹಿಡಿದು ಸರ ಸರನೆ ಮರ ಏರಿ ನಾಲ್ಕು ಎಳನೀರು ಕಿತ್ತು ಕೆಳ ಹಾಕಿದ. ಎಳನೀರು ಕುಡಿದು, ಚಿನ್ನಪ್ಪನ ಕಿಸೆಗೆ ಇಪ್ಪತ್ತು ರುಪಾಯಿ ತುರುಕಿ “ಇಲ್ಲೆ ಕೂತು ನಿಂತು ಕತೆ ಹಾಕ್ಬೇಡಿ.. ಬೇಗ ಕೆಲ್ಸ ಮುಗ್ಸಿ ನೀನು ಕೆಂಚನೂ ಮನೆ ಕಡೆಗ್ ಬನ್ನಿ” ಎಂದು ಹೇಳಿ ಚಂದ್ರಹಾಸ ಗಿರಿಧರರನ್ನು ಕರೆದುಕೊಂಡು ಅಲ್ಲೇ ಸುತ್ತಮುತ್ತ ಇದ್ದ ಗದ್ದೆಗಳೆಡೆಗೆ ನಡೆದ. ಬತ್ತದ ತೆನೆ ಹೊತ್ತು ನಳನಳಿಸುತ್ತಿದ್ದ ಗದ್ದೆಯನ್ನು ತೋರಿಸಿ “ಇದಿಷ್ಟು ನಮ್ಮ ಗದ್ದೆ. ಈಗ ಸದ್ಯಕ್ಕೆ ನಮ್ಮ ಚಿಕ್ಕಮ್ಮನೇ ಆಳು ಕಾಳು ಇಟ್ಕೊಂಡು ಇದನ್ನೆಲ್ಲ ನಿಭಾಯಿಸ್ತಿದ್ದಾಳೆ ಎಂದ.

ಇನ್ನೂ ನಾಲಿಗೆ ಮೇಲೆಯೇ ಕುಳಿತಿದ್ದ ಎಳನೀರಿನ ಸಿಹಿಯಾದ ರುಚಿ ಚಪ್ಪರಿಸುತ್ತಾ, ಕಿವಿಗೆ ಇಂಪಾಗಿ ಮೆತ್ತಿಕೊಂಡಿದ್ದ ಫಸಲು ರಾಶಿಗಳ ಲೆಕ್ಕಾಚಾರದಲ್ಲಿಯೇ ಕಳೆದು ಹೋಗಿದ್ದ ಚಂದ್ರಹಾಸ, ಎದೆಯುಬ್ಬಿಸಿ “ಸಾಕು ನಡಿರೀ ಬಾವ.. ಇದಕ್ಕಿಂತ ನನ್ನ ತಂಗಿಗೆ ಇನ್ನೇನ್ ಬೇಕು” ಎಂದು ಹೆಮ್ಮೆಯಿಂದ ಮೋಹನನ ಬೆನ್ನು ಚಪ್ಪರಿಸಿದ. ಆಗಲೇ ಮಧ್ಯಾಹ್ನವಾಗಿದ್ದರಿಂದ ಭೋಗನೂರಿನ ಹೋಟೆಲ್ನಲ್ಲಿ ಇಬ್ಬರಿಗೂ ಹೊಟ್ಟೆ ಬಿರಿಯುವಂತೆ ಊಟ ಹಾಕಿಸಿದ ಮೋಹನ, ನಿಧಾನವಾಗಿ ಮದುವೆಯ ಖರ್ಚು ವೆಚ್ಚದ ಮಾತು ಎತ್ತಿದ. “ನೋಡಿ ಬಾವ ನನಗೆ ಈ ಆಡಂಬರ ಗಿಡಂಬರ ಎಲ್ಲಾ ಇಷ್ಟ ಇಲ್ಲ. ಹಾಗಾಗಿ ಸಿಂಪಲ್ಲಾಗಿ ಯಾವುದಾದ್ರು ದೇವಸ್ಥಾನದಲ್ಲಿ  ಮದುವೆ ಮಾಡಿಕೊಟ್ರೆ ಸಾಕು. ಈಗ ನನ್ ಪರಿಸ್ಥಿತಿ ನಿಮಗೆ ಗೊತ್ತೇ ಇದೆ. ಎಲ್ಲಾ ವ್ಯವಹಾರನೂ ಚಿಕ್ಕಮ್ಮನೆ ಹಿಡ್ಕೊಂಡು ಕೂತಿರೋದ್ರಿಂದ, ಈಗ ಸದ್ಯಕ್ಕೆ ಮದುವೆಗೆ ಹಣ ಹೊಂದಿಸೋದು ನನಗೆ ಕಷ್ಟ ಆಗುತ್ತೆ. ಹಾಗಾಗಿ ನೀವೇ ಎಲ್ಲಾ ಖರ್ಚನ್ನು ಹಾಕಿ ಮಾಡಿದ್ರೆ ನಾನು ಪೂನದಲ್ಲಿ ಡ್ಯೂಟಿ ರಿಪೋರ್ಟ್ ಮಾಡ್ಕೊಂಡ್ ಕೂಡ್ಲೇ  ನಿಮಗೆ ಆ ದುಡ್ಡನ್ನೆಲ್ಲಾ ಕಳಿಸಿಬಿಡ್ತಿನಿ” ಎಂದು ಹೇಳಿ ಚಂದ್ರಹಾಸನ ಜೇಬಿಗೆ ಇನ್ನೂರು ರೂಪಾಯಿ ದುಡ್ಡನ್ನಿಟ್ಟ. ನೂರರ ಎರಡು ಭಾರೀ ಮೊತ್ತಕ್ಕೆ ಕಣ್ಣರಳಿಸಿದ ಚಂದ್ರಹಾಸ ಮನೆಯಲ್ಲಿ ಮಾತಾಡುವುದಾಗಿ ಹೇಳಿ ಮೋಹನನ ಕೈ ಕುಲುಕಿ ಅಲ್ಲಿಂದ ಬೀಳ್ಕೊಂಡ. (ಇಲ್ಲಿ ಬಳಸಿರುವ ಚಿತ್ರಗಳು ಸಾಂದರ್ಭಿಕ‌)

(ಮುಂದುವರೆಯುವುದು)

ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು