Saturday, April 19, 2025

ಸತ್ಯ | ನ್ಯಾಯ |ಧರ್ಮ

ಮೊಲೆ ಮತ್ತು ಹೇಲು ; ಛೇ..! ವ್ಯಾ..!! ಇಸ್ಸೀ..!!!

“..ಈ ಹೆಡ್‌ಲೈನು ಓದುತ್ತಿದ್ದಂತೆಯೇ ನಿಮ್ಮ ಮುಖ ಕಿವುಚಿಕೊಂಡು, ವಾಕರಿಕೆ ಉಮ್ಮಳಿಸಿ ಬಂದರೆ ದಯವಿಟ್ಟು ಈ ಬರಹವನ್ನು ಮುಂದಕ್ಕೆ ಓದಬೇಡಿ. ಯಾಕೆಂದರೆ ಇದು ಸುಸಂಸ್ಕೃತರಿಗಾಗಿ ಅಲ್ಲ...” ಮಾಚಯ್ಯ ಹಿಪ್ಪರಗಿ ಅವರ ಬರಹದಲ್ಲಿ

ಇಲ್ಲಿ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದರ ಬಗ್ಗೆ ಚರ್ಚಿಸಲಾಗಿದೆ. ಕಳೆದುಕೊಳ್ಳುವುದು ಬಹಳಷ್ಟು ಜನರಿಗೆ ಸುಲಭದ ಸಂಗತಿಯಲ್ಲ; ಆದರೆ, ಬೇಡದ್ದನ್ನು ಕಳೆದುಕೊಳ್ಳದ ಹೊರತು ಬೇಕಾದ್ದನ್ನು ಪಡೆದುಕೊಳ್ಳಲು ನಾವು ಅಣಿಯಾಗುವುದಿಲ್ಲ.

ವಿಷಯ ಇಷ್ಟೆ. ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಕವಯತ್ರಿ ಮಮತಾ ಸಾಗರ್ ಅವರು ಓದಿದ ಪದ್ಯವೊಂದು ಸಾಕಷ್ಟು ಚರ್ಚೆಯಾಗುತ್ತಿದೆ. ಫೆಮಿನಿಸಿಂ ಎನ್ನುವುದು ಹೆಣ್ಣಿನ ಮೊಲೆ, ಯೋನಿಯ ಸುತ್ತಲೇ ಗಿರಕಿಹೊಡೆಯಬೇಕೆ? ಅದರಾಚೆಗೆ ವಿಸ್ತಾರಹೊಂದುವುದು ಯಾವಾಗ? ಯಾವ ವಾದವೂ, ಸಿದ್ದಾಂತವೂ ಕ್ಷೀಷೆಯಾಗಬಾರದಲ್ಲವೇ? ಇವು ಪುಟಿದೇಳುತ್ತಿರುವ ಪ್ರಶ್ನೆಗಳು…

ʼನಾನು ..
ನಾನು ಎಂದರೆ
ಒಂದು ಜೊತೆ ಮೆತ್ತಗಿನ ಮೊಲೆ,
ತೊಡೆ ಸಂದಲ್ಲಿ ಅಡಗಿದ ಕತ್ತಲ ಕೋಶ,
ನಾನು..
ನಾನು ಅಂದರೆ..
ನಾನು ಅಂದರೆ -ನಾನು

ಇದು ಮಮತಾ ಸಾಗರ್ ವಾಚಿಸಿ ವೈರಲ್‌ ಆಗುತ್ತಿರುವ, ಟ್ರೋಲ್‌ಗೆ ತುತ್ತಾಗುತ್ತಿರುವ ಪದ್ಯದ ತುಣುಕು. ಇಂತಹ ಕಾವ್ಯವನ್ನು ಮಾನಸಿಕ ಅಸ್ವಸ್ಥರಷ್ಟೇ ಬರೆಯಲು ಸಾಧ್ಯ ಎಂದು ಯಾರೋ ಒಬ್ಬರು ಕಮೆಂಟಸಿದ್ದನ್ನು ಕಂಡೆ. ಚಿಕ್ಕಮಕ್ಕಳಿಗೆ ಇಂತಹ ಪದ್ಯಗಳನ್ನು ಕೇಳಿಸಬೇಡಿ ಎಂಬ ಸಲಹೆಗಳೂ ಇದ್ದವು. ಹೌದು, ಭೂಮಿ ಚಪ್ಪಟೆಯಾಗಿದೆ ಎಂದು ನಂಬಿದ್ದ ಮತ್ತು ಅಂತದ್ದೇ ಮಾತುಗಳನ್ನು ಕೇಳಲು ಬಯಸಿದ್ದ ಜನರಿಗೆ ಭೂಮಿ ಗೋಳಾಕಾರದಲ್ಲಿದೆ ಎಂದಾಗ, ಹಾಗೆ ಹೇಳಿದ ಕೆಪ್ಲರ್, ಕೊಪರ್ನಿಕಸ್, ಅರಿಸ್ಟಾಟಲ್, ಎರಾಟೊಸ್ಥೆನಿಸ್ ತರಹದ ತತ್ವಕಾರರು ಹುಚ್ಚರಂತೆ ಗೋಚರಿಸಿದ್ದರು; ಭೂಮಿಯ ಸುತ್ತ ಸೂರ್ಯ ಸುತ್ತುತ್ತಾನೆ ಎಂಬ ಸ್ವಯಂಶ್ರೇಷ್ಠತೆಯ ಭ್ರಮೆಯಲ್ಲಿದ್ದ ಜನರಿಗೆ ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಎಂದು ಹೇಳಿದ ಗೆಲಿಲಿಯೋನೂ ಮತಿಭ್ರಮಣನಾಗಿ ಕಂಡ; ಸಾವಿನ ನಂತರದ ಸ್ವರ್ಗ, ನರಕಗಳೆಂಬ ಕಲ್ಪನೆಗಳೇ ಸುಳ್ಳು ಎಂದು ಹೇಳಿದ್ದಕ್ಕಾಗಿ ಹದಿನಾರನೇ ಶತಮಾನದ ಇಟಲಿಯ ಗಿಯಾರ್ಡಾನೊ ಬ್ರುನೋನನ್ನು ಕರ್ಮಠ ಜನ ಜೀವಂತ ಸುಟ್ಟುಹಾಕಿದರು. ಅಪ್ರಿಯ ಸತ್ಯ ನುಡಿದದ್ದಕ್ಕಾಗಿ ಬುದ್ಧಚಿಂತನೆಯನ್ನು ದೇಶಾಂತರ ಓಡಿಸಿದರು, ಬಸವಾದಿ ಶರಣರ ಜೀವನವನ್ನು `ಮರಣವೇ ಮಹಾನವಮಿ’ ಎಂದೆನಿಸಿದರು. ಅಂದರೆ, ಯಾರು-ಯಾವುದನ್ನು ಕೇಳಬೇಕು ಎಂದು ಬಯಸುತ್ತಾರೋ ಅದನ್ನು ಬಿಟ್ಟು (ಅದು ನೀವು ಹೇಳುವ ವಿಚಾರವಿರಬಹುದು, ಬಳಸುವ ಭಾಷೆಯಿರಬಹುದು!) ನೀವು ಬೇರೆ ಏನನ್ನೇ ಹೇಳಲು ಮುಂದಾದರೂ ನೀವು ಹುಚ್ಚರೆನಿಸಿಕೊಳ್ಳಬೇಕಾಗುತ್ತೆ, ಟೀಕೆ-ಶಿಕ್ಷೆಗಳಿಗೆ ಗುರಿಯಾಗಬೇಕಾಗುತ್ತೆ. ಈ ಉದಾಹರಣೆಗಳಿಂದ ನಮಗೆ ಸಿಗುವ ಪಾಠ ಇದಿಷ್ಟೇ ಅಲ್ಲ; ಯಾರು ಎಷ್ಟೇ ಅವಮಾನಿಸಿದರೂ, ಶಿಕ್ಷಿಸಿದರೂ ತಮಗೆ ಸರಿ ಅನ್ನಿಸಿದ್ದನ್ನು ಹೇಳುವ ಮತ್ತು ಹಾಗೆ ಹೇಳಿದ ಮಾತಿಗೆ ಬದ್ಧರಾಗಿ ಬದುಕಿದ ಜನ ಕಾಲಕಾಲಕ್ಕೆ ಉಸಿರಾಡುತ್ತಲೇ ಬಂದಿದ್ದಾರೆ ಮತ್ತು ಮುಂದೊಂದು ದಿನ ಅವರ ಮಾತುಗಳಿಗೆ ಮನ್ನಣೆಯೂ ಸಿಕ್ಕಿದೆ ಎಂಬ ಪಾಠಗಳೂ ಇಲ್ಲಿ ಅರ್ಥವಾಗುತ್ತವೆ.

ಈಗ ಮಮತಾ ಸಾಗರ್ ಅವರ ಪದ್ಯದ ವಿಚಾರಕ್ಕೆ ಮರಳೋಣ. ಇಲ್ಲಿ ಟೀಕೆ ಮಾಡುತ್ತಿರುವವರ ವಾದ, ಫೆಮಿನಿಸಂ ಎನ್ನುವುದು ಹೆಣ್ಣಿನ ದೇಹಕ್ಕೆ ಮಾತ್ರ ಸೀಮಿತವಾದುದೇ? ಹಸಿಹಸಿಯಾಗಿ ಹೆಣ್ಣಿನ ದೇಹದ ಅಂಗಗಳನ್ನು ಉಲ್ಲೇಖಿಸುವುದಷ್ಟೇ ಪ್ರತಿಭಟನೆಯ ರೂಪಕವೇ? ಅದರಾಚೆಗೆ ಹೆಣ್ಣು ಅನುಭವಿಸುತ್ತಿರುವ ಶೋಷಣೆಗಳನ್ನೂ ಕಾವ್ಯದಲ್ಲಿ ಕಟ್ಟಿಕೊಡಬಹುದಲ್ಲವೇ? ಈ ಪ್ರಶ್ನೆಗಳಿಗಿರುವ ತಾರ್ಕಿಕ ಆಯಾಮಗಳನ್ನು ಚರ್ಚಿಸುವುದಕ್ಕು ಮುನ್ನ, ಈ ಎಲ್ಲಾ ಪ್ರಶ್ನೆಗಳ ಒಂದು ಸಮಾನ ಸಂಗತಿಯನ್ನು ಗಮನಿಸೋಣ. ಸ್ತ್ರೀವಾದ ಅಥವಾ ಮಹಿಳಾ ಸಹಾನುಭೂತಿಯನ್ನು ಹೊಂದಿರುವಂತೆ ಈ ಪ್ರಶ್ನೆಗಳು ಗೋಚರಿಸಿದರೂ, ಯಾವುದೋ ಕಾರಣಕ್ಕೆ ತಮಗೆ ರುಚಿಸಲಿಲ್ಲ ಎಂಬ ಅಂಶವನ್ನು ಆಧರಿಸಿ, ಕವಿಯೋ ಕವಯತ್ರಿಯೋ ಹೇಗೆ ಬರೆಯಬೇಕಿತ್ತು? ಹೇಗೆ ಬರೆಯಬಾರದು? ಎಂದು ಚೌಕಟ್ಟು ಹೇರಲು ಮುಂದಾಗಿರುವುದು ಇಲ್ಲಿ ವ್ಯಕ್ತವಾಗುತ್ತಿದೆ. ಅಂದರೆ, ನಿಮಗಿಷ್ಟವಾಗಲಿಲ್ಲ ಎಂದ ಮಾತ್ರಕ್ಕೆ ಒಬ್ಬರ ಅಪದ್ಧವಲ್ಲದ ಅಭಿವ್ಯಕ್ತಿಯನ್ನು ಕೇವಲ ಭಾಷೆಯ ಕಾರಣಕ್ಕೆ, ಶೈಲಿಯ ಕಾರಣಕ್ಕೆ ಹೀಗಳೆಯುವುದು ಪ್ರಜ್ಞಾವಂತಿಕೆ ಎನಿಸಿಕೊಳ್ಳಲು ಸಾಧ್ಯವೇ? ಹತ್ತಿಕ್ಕುವಿಕೆಯನ್ನು ಯಾವ ಪ್ರಗತಿಪರವಾದವೂ ಸಮರ್ಥಿಸಿಕೊಳ್ಳುವುದಿಲ್ಲ, ಮಹಿಳಾವಾದವೂ ಕೂಡಾ…

ಶೋಷಣೆ ಎನ್ನುವುದು ಒಂದು ಕ್ರೈಮ್ ಅಷ್ಟೇ ಅಲ್ಲ; ಅದೊಂದು ವ್ಯವಸ್ಥಿತ ಸೋಷಿಯಲ್‌ ಇಂಜಿನಿಯರಿಂಗ್‌ ಹಿನ್ನೆಲೆ ಹೊಂದಿದ ಸುದೀರ್ಘ ದುರಾಲೋಚನೆಯ ಸಿಸ್ಟಮಿಕ್‌ ಕ್ರೈಮ್! ಇಲ್ಲದೇ ಹೋಗಿದ್ದಲ್ಲಿ ಚಾರ್ಲ್ಸ್ ಡಾರ್ವಿನ್ನನ `ಬಲಿಶಾಲಿಗಳು ಬದುಕುಳಿಯುತ್ತಾರೆ’ ಎಂಬ ನಿಸರ್ಗ ನಿಯಮಕ್ಕೆ ವಿರುದ್ಧವಾಗಿ ಬಹುಸಂಖ್ಯಾತ ಬಲಶಾಲಿ ಶೂದ್ರರ-ದಲಿತರ ಮೇಲೆ ಅಲ್ಪಸಂಖ್ಯೆಯ ಮೇಲ್ಜಾತಿಗಳು ಶೋಷಣೆ ಮಾಡುತ್ತಿರಲಿಲ್ಲ. ಮೂಲನಿವಾಸಿ ಬಲಿಷ್ಠ ಬ್ಲ್ಯಾಕ್ ಅಮೆರಿಕನ್ನರ ಮೇಲೆ ಬಿಳಿಯರು ದಬ್ಬಾಳಿಕೆ ನಡೆಸುತ್ತಿರಲಿಲ್ಲ. ಎಲ್ಲಿಂದಲೋ ಅಬ್ಬೇಪಾರಿಗಳಂತೆ ಬಂದ ಆಂಗ್ಲರು ಪ್ರಪಂಚದ ತುಂಬಾ ತಮ್ಮ ವಸಾಹತುಗಳನ್ನು ಸ್ಥಾಪಿಸುತ್ತಿರಲಿಲ್ಲ.

ದುರ್ಬಲರು ಬಲಶಾಲಿಗಳನ್ನೆ ದಮನಿಸುವ ವಿರೋಧಾಭಾಸದ ಶೋಷಣೆ ಸಾಧ್ಯವಾಗಬೇಕೆಂದರೆ, ಬಲಶಾಲಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸಬೇಕು. ಹಾಗೆ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಮಾಡುವ ಮೊದಲ ಕೆಲಸವೇ ಬಲಶಾಲಿಗಳ `ಬಲ’ವನ್ನೇ ಬಲಹೀನತೆಯಂತೆ ನಂಬಿಸಿ, ಅವರನ್ನು ಕುಬ್ಜಗೊಳಿಸುವುದು. ಮೂಲ ನಿವಾಸಿಗರ ಕಪ್ಪು ಬಣ್ಣವನ್ನ ಕೇವಲವಾಗಿಸಿ, ಅಲೆಮಾರಿಗಳ ಬಿಳಿ ಬಣ್ಣವೇ ಶ್ರೇಷ್ಠ ಎಂಬ ಹೀನ ಪರಂಪರೆಯನ್ನು ಹುಟ್ಟುಹಾಕಿ ವರ್ಣಭೇದದ ದಬ್ಬಾಳಿಕೆ ನಡೆಸಲಾಗುತ್ತದೆ. ಶ್ರಮವಹಿಸಿ ದುಡಿಯುವ ಶೂದ್ರರ ಕಸುಬುಗಳನ್ನು ಕೇವಲ, ಕನಿಷ್ಠವೆಂದು ಚಿತ್ರಿಸಿ ಬೆವರಿಳಿಯದ ಕಸುಬಿನವರು ತಮ್ಮನ್ನು ಶ್ರೇಷ್ಠವೆಂದು ಚಿತ್ರಿಸಿಕೊಳ್ಳುತ್ತಾರೆ. ಕಸುಬಿನ ಆಧಾರದ ಇಂತಹ ಕೀಳರಿಮೆಗೆ ತುತ್ತಾಗುವ ಬಲಶಾಲಿಗಳು ಬಲಹೀನ ಸೋಮಾರಿ ಜನಗಳ ಅಡಿಯಾಳಾಗುತ್ತಾರೆ. ಅದನ್ನೇ ನಾವು ಜಾತಿ ವ್ಯವಸ್ಥೆ ಎನ್ನುತ್ತೇವೆ.

ಕಪ್ಪು-ಬಿಳಿ ಎನ್ನುವುದು ಕೇವಲ ಎರಡು ಬಣ್ಣಗಳಷ್ಟೆ. ಆದರೆ ಬಲಹೀನರು ಬಲಶಾಲಿಗಳ ಮೇಲೆ ದಬ್ಬಾಳಿಕೆ ನಡೆಸಲು ಆ ಬಣ್ಣಗಳನ್ನೇ ತಮ್ಮ ಅಸ್ತ್ರಗಳಾಗಿ ಬಳಸಿಕೊಂಡಾಗ ಅವು ಕೇವಲ ಬಣ್ಣವಾಗಿ ಉಳಿಯುವುದಿಲ್ಲ, ಕುತಂತ್ರದ ಶೋಷಣೆಯ ಸಂಕೇತಗಳಾಗಿ ಬದಲಾಗುತ್ತವೆ. ಜ್ಞಾನ, ಶಿಕ್ಷಣವನ್ನು ಕೇವಲ ತಮ್ಮ ಸಮುದಾಯಕ್ಕೆ ಮಾತ್ರ ಸೀಮಿತವಾಗಿಸಿಕೊಳ್ಳಲು ತಮ್ಮ ಭಾಷೆಯನ್ನೇ ಗುಪ್ತವಾಗಿಸಿ, ಅದನ್ನೊಂದು ದೇವಭಾಷೆಯೆಂದು ಬಿಂಬಿಸಿ, ಅದರ ಆಸರೆಯಲ್ಲಿ ಮಿಕ್ಕವರ ಮೇಲೆ ಶೋಷಣೆ ಮಾಡಲು ಅಧಿಕಾರ ದಕ್ಕಿಸಿಕೊಂಡಾಗ ಆ ಭಾಷೆ ಭಾಷೆಯಾಗಿ ಅಷ್ಟೆ ಉಳಿಯುವುದಿಲ್ಲ, ಅದು ಶೋಷಣೆಯ ಸಂಕೇತವಾಗಿ ಬದಲಾಗುತ್ತದೆ. ಹೊಟ್ಟೆಪಾಡಿನ ಕಸುಬುಗಳನ್ನೂ ಹೀಗೆ ಮೇಲುಕೀಳಿನ ಸರಕುಗಳಾಗಿಸಿಕೊಂಡಾಗ ಅವು ಕೂಡಾ ಶೋಷಣೆಯ ಸಂಕೇತಗಳಾಗಿ ಬದಲಾಗುತ್ತವೆ. ನಾವು ಅಂತಹ ಶೋಷಣೆಯನ್ನು ಧಿಕ್ಕರಿಸುತ್ತೇವೆ ಎಂದಾಗ, ಸಹಜವಾಗಿಯೇ ಆ ಶೋಷಣೆಯ ಸಂಕೇತಗಳನ್ನೇ ಗುರಿಯಾಗಿಸಿಕೊಳ್ಳಬೇಕಲ್ಲವೇ?

`ದಲಿತರಿಂದ ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ’ ಎಂಬ ಸುದ್ದಿಗಳನ್ನು ನೀವು ಆಗಾಗ್ಗೆ ಪತ್ರಿಕೆಗಳಲ್ಲಿ ನೋಡುತ್ತಿರುತ್ತೀರಿ. ಮಲ ಎನ್ನುವುದು ಸುಸಂಸ್ಕೃತರ ಪಾಲಿಗೆ ಹೇಸಿಗೆಯ ವಿಚಾರ. ಎಷ್ಟರಮಟ್ಟಿಗೆಂದರೆ ಮಲವನ್ನು ಹೇಲು ಎನ್ನುವುದಕ್ಕೂ ವಾಕರಿಸಿಕೊಳ್ಳುತ್ತಾರೆ. ಯಾವುದಾದರು ಪತ್ರಿಕೆಯಲ್ಲಿ `ಮೈಮೇಲೆ ಹೇಲು ಸುರಿದುಕೊಂಡು ಪ್ರತಿಭಟನೆ’ ಎಂದು ಬರೆದಿದ್ದನ್ನು ನೀವು ಗಮನಿಸಿದ್ದೀರಾ. `ಮಲ ಸುರಿದುಕೊಂಡ’ ಪ್ರತಿಭಟನೆಯ ಸುದ್ದಿಯನ್ನು ಓದುವುದಕ್ಕೇ ಮುಖ ಕಿವುಚಿಕೊಳ್ಳುವವರಿಗೆ; ಅದಕ್ಕೆ ಪರ್ಯಾಯವಾಗಿ ಹೇಲು ಎಂದು ಹೇಳಲು, ಬರೆಯಲು, ಓದಲು ಹಿಂದೇಟು ಹಾಕುವ ಮನಸ್ಥಿತಿಯವರಿಗೆ, ಆ ಹೇಲು ಬಾಚುವುದನ್ನೇ ನಾವು ಕೆಲ ಸಮುದಾಯಗಳಿಗೆ ಕಡ್ಡಾಯವಾಗಿಸಿದ್ದೇವೆ ಎಂಬ ಪಾಪಪ್ರಜ್ಞೆಯೇ ಕಾಡುವುದಿಲ್ಲ. ಮತ್ತು ಈ ಕಡ್ಡಾಯದಿಂದಲೇ ಅವರಲ್ಲಿ ಕೀಳರಿಮೆ ಮೈದಳೆಯುವಂತೆ ಮಾಡಿ, ಮದ್ಯವಸ್ಯನಿಗಳಾಗುವಂತೆ ಮಾಡಿ, ಅನಾರೋಗ್ಯಪೀಡಿತರಾಗುವಂತೆ ಮಾಡಿ, ಅಲ್ಪಾಯುಷಿಗಳಾಗುವಂತೆ ಮಾಡಿದ್ದೇವೆ ಎಂಬ ವಾಸ್ತವವೂ ಅರ್ಥವಾಗುವುದಿಲ್ಲ. ಇಲ್ಲಿ ಮಲ ಅರ್ಥಾತ್‌ ಹೇಲು, ಕೇವಲ ಒಂದು ಜೈವಿಕ ತ್ಯಾಜ್ಯವಲ್ಲ; ಅದೊಂದು ಶೋಷಣೆಯ ಸಂಕೇತ. ಆ ಶೋಷಣೆಯನ್ನು ಆ ಸಮುದಾಯ ಪ್ರತಿಭಟಿಸಬೇಕೆಂದರೆ ಆ ಸಂಕೇತದಿಂದಲೇ ಶುರು ಮಾಡಬೇಕಲ್ಲವೇ? ಹಾಗಾಗಿಯೇ ಮೈಮೇಲೆ ಹೇಲು ಸುರಿದುಕೊಂಡು ಪ್ರತಿಭಟಿಸಿ ನಮ್ಮಂತವರ ಕಣ್ಣುತೆರೆಸಲು ಮುಂದಾದ ನಿದರ್ಶನಗಳು ಗೋಚರಿಸುತ್ತವೆ.

‘ಛೇ..! ವ್ಯಾ….!! ಇಸ್ಸೀ….!!! ಎಂಥಾ ಅನಾಗರಿಕರಪ್ಪಾ ಇವರು?’ ಎಂದು ಅವರ ಪ್ರತಿಭಟನೆಯ ಶೈಲಿಯನ್ನು ಟೀಕಿಸುವಾಗ ಆ ಹೇಲನ್ನೇ ಯಾಕೆ ಅವರು ತಮ್ಮ ಪ್ರತಿಭಟನೆಯ ರೂಪಕವಾಗಿ ಬಳಸಿಕೊಂಡರು? ಹೇಲು ಬಾಚುವ ಕಸುಬು ಕಾಯಮ್ಮುಗೊಳಿಸಿ ನಾವೆಲ್ಲ ಹೇಗೆ ಅವರನ್ನು ಶೋಷಿಸುತ್ತಿದ್ದೇವೆ? ಎಂದು ಚಿಂತಿಸಬೇಕಾಗುತ್ತದೆ. ಪ್ರಗತಿಪರತೆ ಅಥವಾ ನಾಗರಿಕತೆಯ ಲಕ್ಷಣಗಳೆ ಇಂತಹ ಚಿಂತನೆಗಳು. ನಮಗೆ ಕೇಳಿಸಿಕೊಳ್ಳಲು ಅಸಹ್ಯವಾಗುತ್ತದೆ ಎಂಬ ಕಾರಣಕ್ಕೆ ಟೀಕಿಸಿದರೆ, ಟ್ರೋಲಿಸಿದರೆ ಅದನ್ನು ನಾಗರೀಕತೆ ಎಂದು ಪರಿಗಣಿಸಲಾಗದು.

ಹೆಣ್ಣು ಕೂಡಾ ಇಂಥಾ ಸಾರ್ವತ್ರಿಕ ಶೋಷಣೆಗೆ ತುತ್ತಾದವಳು. ಹೆಣ್ಣಿನ ಬಲವೇ ಅವಳ ಸಂತಾನೋತ್ಪತ್ತಿಯ ಶಕ್ತಿ. ಆ ಶಕ್ತಿಯನ್ನೇ ಬಲಹೀನತೆಯಾಗಿಸಲು ಅವಳ ಹೆಣ್ತನವನ್ನು ಅಬಲೀಕರಿಸಲಾಗಿದೆ. ಮನುಷ್ಯನನ್ನು ಹೊರತುಪಡಿಸಿ ಬೇರೆಲ್ಲ ಜೀವಸಂಕುಲಗಳಲ್ಲೂ ಹೆಣ್ಣು ತಳಿಯೇ ಬಲಶಾಲಿ. ಆದರೆ ಮನುಷ್ಯರಲ್ಲಿ ಮಾತ್ರ, ಹೆಣ್ಣನ್ನು ಅವಳ ಅಪಾರ ದುಡಿಮೆ-ತ್ಯಾಗ-ಸೇವೆಯ ಹೊರತಾಗಿಯೂ ಅಬಲೆ ಎಂದು ಹಣೆಪಟ್ಟಿ ಹಚ್ಚಲಾಗಿದೆ. ಆ ಮೂಲಕ `ನಾನು ಹೆಣ್ಣು, ನಾನು ಗಂಡಿಗಿಂತ ದುರ್ಬಲಳು’ ಎಂದು ಅವಳನ್ನೂ ನಂಬಿಸಲಾಗಿದೆ. ಗಂಡಿನ ಆಸರೆಯಿಲ್ಲದೆ ಸ್ವತಂತ್ರವಾಗಿ ಬದುಕುವ  ಅವಕಾಶವನ್ನು ಕಿತ್ತುಕೊಳ್ಳಲಾಗಿದೆ. ಅಂದರೆ, ಇಲ್ಲಿ ಸಂತತಿ ಬೆಳೆಸುವ ಅವಳ ಶಕ್ತಿಯಾದ ಹೆಣ್ತನವನ್ನೇ ಅವಳ ಬಲಹೀನತೆ ಆಗಿಸಲಾಗಿದೆ. ಆ ಹೆಣ್ತನದ ಪ್ರಧಾನ ಕುರುಹುಗಳೇ ಮೊಲೆ ಮತ್ತು ಯೋನಿ! ಇವೆರಡರ ಹೊರತಾಗಿ ಹೆಣ್ಣು-ಗಂಡಿನ ಬಾಹ್ಯ ರಚನೆಯಲ್ಲಿ ಬೇರಾವ ಗಣನೀಯ ವ್ಯತ್ಯಾಸಗಳಿಲ್ಲ. ನಿಜ ಹೇಳಬೆಕೆಂದರೆ ಇವೆರಡೂ ಅವಳ ‘ಬಲ’. ಆದರೆ ಆಕೆಯನ್ನು ಶೋಷಿಸಲು ಇವುಗಳನ್ನೇ ಅವಳ ಬಲಹೀನತೆಯಾಗಿಸಿ, ಶೀಲದ ಚೌಕಟ್ಟು ತೊಡಿಸಿ ಶೋಷಣೆಯ ಸಂಕೇತಗಳನ್ನಾಗಿ ಮಾಡಲಾಗಿದೆ.

ಈಗ ಹೆಣ್ಣು ತನ್ನ ಶೋಷಣೆಯ ಸಂಕೇತಗಳಾಗಿ ಬಳಕೆಯಾಗುತ್ತಿರುವ ಯೋನಿ, ಮೊಲೆ ಮತ್ತು ದೇಹವನ್ನೇ ಪ್ರತಿರೋಧದ ಅಸ್ತ್ರವಾಗಿ ಮಾಡಿಕೊಳ್ಳುವುದರಲ್ಲಿ ತಪ್ಪೇನಿದೆ? ವಾಸ್ತವದಲ್ಲಿ, ಅದೇ ಸರಿಯಾದ ಪ್ರತಿರೋಧ. ಯಾವ ದೇಹದ ಕಾರಣಕ್ಕಾಗಿ, ಯಾವ ಅಂಗಗಳ ಕಾರಣಕ್ಕಾಗಿ, ಆ ಅಂಗಗಳಿಗಾಗಿ ತನ್ನನ್ನು ಶೋಷಿಸಲಾಗುತ್ತಿದೆಯೋ ಆ ಅಂಗವನ್ನೇ ಪ್ರತಿರೋಧದ ದಾರಿಯಾಗಿಸಿಕೊಳ್ಳುವುದು ಆಕೆಯ ಅನಿವಾರ್ಯತೆಯೂ ಹೌದು. ಇದಕ್ಕಾಗಿ ನಾವು, ಅಂದರೆ, ಶೋಷಕ ರೂಪದ ಗಂಡಸರು ನಾಚಿಕೆ ಪಟ್ಟುಕೊಳ್ಳಬೇಕೆ ವಿನಾ, ತನ್ನ ಶೋಷಣೆಯನ್ನು ಸಂಕೇತಗಳ ಮೂಲಕ ಅಭಿವ್ಯಕ್ತಿಸಿದ ಆಕೆಯ ಶೈಲಿಯನ್ನು ಪ್ರಶ್ನಿಸುವುದು ತರವಲ್ಲ.

ತನ್ನ ಶೋಷಣೆಗೆ ಸಂಕೇತವಾಗಿದ್ದ ದೇಹಸೌಂದರ್ಯದ ಬಂಧನವ ತುಂಡರಿಸಲು ಹುಟ್ಟುಡುಗೆಯಲ್ಲಿ ನಿಂತ ಅಕ್ಕಮಹಾದೇವಿ ಜಗತ್ತಿಗೆ ಸಾರಿಹೋದ ಪ್ರತಿರೋಧ ತಪ್ಪೇ? ಕೆಳಜಾತಿಯವರು ಮೊಲೆ ಮುಚ್ಚಿಕೊಳ್ಳುವುದಕ್ಕೂ ಕರ ಹೇರಿದ್ದ ಮೇಲ್ಜಾತಿಯವರ ವಿರುದ್ಧ ಕೇರಳದ ನಂಗೇಲಿ, ಶೋಷಣೆಗೆ ಸಂಕೇತವಾಗಿದ್ದ ತನ್ನ ಮೊಲೆಗಳನ್ನೇ ಕತ್ತರಿಸಿಕೊಟ್ಟ ಪ್ರತಿರೋಧ ತಪ್ಪೇ? ಆಂತರಿಕ ಭದ್ರತೆಯ ಹೆಸರಲ್ಲಿ ತಮ್ಮ ಮೇಲಾಗುತ್ತಿದ್ದ ಅತ್ಯಾಚಾರದ ಸ್ವೇಚ್ಛೆಯನ್ನು ಧಿಕ್ಕರಿಸಿ ಮಣಿಪುರದ ತಾಯಂದಿರು ಸೇನಾ ಕಚೇರಿಯ ಮುಂದೆ ಸಾಲಾಗಿ ಬೆತ್ತಲಾಗಿ ನಿಂತು, ಬನ್ನಿ ನಮ್ಮನ್ನು ರೇಪ್‌ ಮಾಡಿ ಎಂದು ಪ್ರತಿಭಟಿಸಿದ ಆಕ್ರೋಶದಲ್ಲಿ ತಪ್ಪಿತ್ತೇ? ಅವರೆಲ್ಲರ ಪ್ರತಿರೋಧದಲ್ಲಿ ತಪ್ಪು ಗೋಚರಿಸಿದ್ದೇ ಆದಲ್ಲಿ, ನಾವೆಷ್ಟೇ ಪ್ರಗತಿಪರರು ಅಂತ ಹೇಳಿಕೊಂಡರೂ ನಮ್ಮಲ್ಲಿ ಕಳೆದುಕೊಳ್ಳಬೇಕಿರುವುದು ತುಂಬಾ ಇದೆ ಅಂತಲೇ ಅರ್ಥ. ಅಶ್ಲೀಲವೆಂದುಕೊಳ್ಳುವ ಕಾರಣಕ್ಕೋ, ಕ್ಲೀಷೆಯೆಂದುಕೊಳ್ಳುವ ಕಾರಣಕ್ಕೋ ಮಮತಾ ಸಾಗರ್‍‌ ಅವರ ಪದ್ಯವನ್ನು ಟೀಕಿಸುತ್ತಿರುವವರು ಕೂಡಾ ತಮ್ಮನ್ನು ತಾವು ಮರುಭೇಟಿ ಮಾಡಿಕೊಳ್ಳಬೇಕಿದೆ.

ಮೊಲೆ ಮತ್ತು ಯೋನಿಯ  ಸಂಕೇತಗಳನ್ನು ಬಳಸಿಕೊಂಡೇ ಅವಳ ಮೇಲೆ ಶೋಷಣೆ ನಡೆಯುತ್ತಿದೆ. ಆದರೆ ಆಕೆ ಮಾತ್ರ ಆ ಸಂಕೇತಗಳನ್ನು ಬಳಸಿಕೊಂಡು ಪ್ರತಿರೋಧಿಸಬಾರದು ಎನ್ನುವುದು ಯಾವ ನ್ಯಾಯ? ಹಾಗೆ ಮಾಡುವುದರಿಂದ ಶೋಷಣೆಯನ್ನು ನಾವು ಬೆಂಬಲಿಸಿದಂತಾಗುವುದಿಲ್ಲವೇ? ಹೇಲು, ಮೊಲೆ, ಯೋನಿಗಳು ತೀರಾ ಸಹಜವಾದವು. ಆದರೆ ಅವುಗಳನ್ನು ಶೋಷಣೆಯ ಸಂಕೇತಗಳಾಗಿಸಿರುವುದರಿಂದ ನಾವು ಅವುಗಳಿಗೆ ಅಸಹ್ಯ, ಅಶ್ಲೀಲದ ಹಣೆಪಟ್ಟಿ ಅಂಟಿಸಿದ್ದೇವೆ. ಆ ಹಣೆಪಟ್ಟಿಯನ್ನು ಕಿತ್ತು ಬಿಸಾಡಲು, ಶೋಷಿತರು ಆ ಸಂಕೇತಗಳನ್ನು ಬಳಸಿಕೊಂಡಾಗ, ಅವರ ಜೊತೆ ನಿಲ್ಲುವುದು ನಾಗರೀಕತೆಯ ಹೊಣೆಗಾರಿಕೆ; ಅವರನ್ನು ಟ್ರೋಲ್ ಮಾಡುವುದಲ್ಲ….

Related Articles

ಇತ್ತೀಚಿನ ಸುದ್ದಿಗಳು

You cannot copy content of this page