Saturday, April 19, 2025

ಸತ್ಯ | ನ್ಯಾಯ |ಧರ್ಮ

‘ಮನಿಹೈಸ್ಟ್’ ಮಾದರಿಯ ದರೋಡೆ; ಕರ್ನಾಟಕದ ಚಿನ್ನ, ತಮಿಳುನಾಡಿನಲ್ಲಿ ಪತ್ತೆ!

ತಮಿಳುನಾಡಿನ ಮೂಲತಃ ಮಧುರೈನ ಸುರಹೊನ್ನೆ ಎಂಬ ಊರಿನ ಬೇಕರಿ ವ್ಯಾಪಾರಿ ವಿಜಯಕುಮಾರ್ (30), ವಿಜಯ್ ಸಹೋದರ ಅಜಯ ಕುಮಾರ್ (28) ನಡೆಸಿದ ದರೋಡೆ ಪ್ರಕರಣ, ಅದಕ್ಕೆ ಸಿದ್ಧತೆಗಳು ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಅಷ್ಟೇ ಅಲ್ಲದೆ ಈ ಪ್ರಕರಣ ಭೇದಿಸಿದ ದಾವಣಗೆರೆ ಪೊಲೀಸರ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ಎಸ್ ಬಿಐ ಬ್ಯಾಂಕ್ ಕಳ್ಳತನದ ಐದು ತಿಂಗಳ ನಂತರ, ಮಾಸ್ಟರ್ ಮೈಂಡ್ ಆಗಿರುವ ತಮಿಳುನಾಡಿನ ಮಧುರೈನ ವಿಜಯ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಎಸ್‌ಬಿಐ ಶಾಖೆಯನ್ನು ಗುರಿಯಾಗಿಸಿಕೊಂಡು ಸುಮಾರು 16 ಕೋಟಿ ರೂ. ಮೌಲ್ಯದ 17.7 ಕೆಜಿ ಚಿನ್ನವನ್ನು ಲೂಟಿ ಮಾಡುವ ಮೊದಲು, ಬ್ಯಾಂಕ್ ದರೋಡೆ ಸಾಕ್ಷ್ಯಚಿತ್ರಗಳು ಮತ್ತು ಯೂಟ್ಯೂಬ್ ವೀಡಿಯೊಗಳು ಹಾಗೂ ನೆಟ್ ಫ್ಲಿಕ್ಸ್ ನ ‘ಮನಿ ಹೀಸ್ಟ್ ‘ ಎಂಬ ವೆಬ್ ಸೀರೀಸ್ ನ್ನು 15 ಬಾರಿ ವೀಕ್ಷಿಸಿದ್ದ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

ಅಪರಾಧ ಎಸಗಿದ ವಿಜಯಕುಮಾರ್ (30), ವಿಜಯ್ ಸಹೋದರ ಅಜಯ ಕುಮಾರ್ (28), ನ್ಯಾಮತಿ ಪಟ್ಟಣದ ಬೆಳಗುತ್ತಿ ಕ್ರಾಸ್ ನ ಶಾಂತಿನಗರ ಶಾಲೆಯ ಎದುರಿನ ವಾಸಿ ಅಭಿಷೇಕ (23), ಸುರಹೊನ್ನೆಯ ಶಾಂತಿನಗರ ವಾಸಿ ತೆಂಗಿನ ವ್ಯಾಪಾರಿ ಚಂದ್ರು (23), ಚಾಲಕ ಮಂಜುನಾಥ್ 32) ಹಾಗೂ ಸಿಹಿ ತಿಂಡಿ ವ್ಯಾಪಿರ ಪರಮಾನಂದ (30) ಇವರನ್ನು ಬಂಧಿಸಲಾಗಿದೆ. ಒಟ್ಟು 17 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಮುಖ ಆರೋಪಿ ವಿಜಯ್ ಈ ಹಿಂದೆ ತಮ್ಮ ಬೇಕರಿ ವ್ಯವಹಾರಕ್ಕಾಗಿ ಎಸ್ ಬಿಐ ನ್ಯಾಮತಿ ಶಾಖೆಯಲ್ಲಿ 15 ಲಕ್ಷ ರೂ. ಸಾಲಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಕಡಿಮೆ ಸಿಬಿಲ್ ಸ್ಕೋರ್ ಕಾರಣ ಆತನ ಅರ್ಜಿಯನ್ನು ತಿರಸ್ಕರಿಸಲಾಯಿತು. ಹತಾಶೆಗೊಂಡ ವಿಜಯ್ ಸಾಲ ತಿರಸ್ಕಾರದ ಏಕೈಕ ಉದ್ದೇಶಕ್ಕೆ ಈ ದರೋಡೆಗೆ ಇಳಿದ” ಎಂದು ದಾವಣಗೆರೆ ಐಜಿ ರವಿಕಾಂತೇ ಗೌಡ ಹೇಳಿದರು.

ಕದ್ದು ತಂದಂತಹ ಚಿನ್ನವನ್ನು ವಿಜಯಕುಮಾರನು ತನ್ನ ಮನೆಯಲ್ಲಿದ್ದಂತಹ ಸಿಲ್ವರ್ ಕಲರ್ ಡಸ್ಟರ್ ಕಾರಿನ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದು ಅದನ್ನು ಯಾವ ರೀತಿಯಲ್ಲಿ ವಿಲೇವಾರಿ ಮಾಡಬೇಕೆಂದು ಪ್ರತ್ತೇಕವಾದ ಪ್ಲಾನ್ ಮಾಡಿದ್ದ. ಕೃತ್ಯಕ್ಕೆ ಬಳಸಿದ ವಸ್ತುಗಳಾದ ಮಂಕಿ ಕ್ಯಾಪ್, ಹ್ಯಾಂಡ್ ಗ್ಲೌಸ್‌ಗಳನ್ನು ನಾಶಪಡಿಸಿದ್ದು, ಇನ್ನುಳಿದ ಹೈಡ್ರಾಲಿಕ್ ಕಟ್ಟರ್, ಗ್ಯಾಸ್ ಸಿಲೆಂಡರ್ ಇತರ ವಸ್ತುಗಳನ್ನು ಸವಳಂಗ ಕೆರೆಗೆ ಎಸೆದಿದ್ದ.

ಎಸ್.ಬಿ.ಐ. ಬ್ಯಾಂಕ್ ನಿಂದ ತಂದಿದ್ದಂತಹ ಹಾರ್ಡ್ ಡಿಸ್ಕ್, ಡಿವಿಆರ್‌ನ್ನು ಮೊದಲು ಕಲ್ಲಿನಿಂದ ಜಜ್ಜಿ ಹಾಳು ಮಾಡಿ ನಂತರ ಕೆರೆಗೆ ಎಸೆದಿದ್ದ. ಕಳೆದ ವರ್ಷದ ನವೆಂಬರ್ ಮೊದಲನೆ ವಾರದಲ್ಲಿ ವಿಜಯ ತನ್ನ ಸ್ವಂತ ಊರಾದ ತಮಿಳುನಾಡಿನ ಮಧುರೈನ ಮನೆಗೆ ಒಬ್ಬನೇ ತನ್ನ ಡಸ್ಟರ್ ಕಾರಿನಲ್ಲಿ ತಲುಪಿ, ಮನೆಯು ಊರಿನ ಹೊರಗಡೆ ನಿರ್ಜನ ಪ್ರದೇಶದಲ್ಲಿದ್ದು ಸುತ್ತಲೂ ದಟ್ಟ ಅರಣ್ಯವಿದ್ದದ್ದನ್ನು ಗಮನಿಸಿದ್ದಾನೆ. ಸುಮಾರು 25ರಿಂದ 30 ಅಡಿ ಆಳವಿರುವ ಬಾವಿಯಲ್ಲಿ ಒಂದು ಸಣ್ಣ ಲಾಕರ್‌ಗೆ ಚಿನ್ನವನ್ನು ತುಂಬಿ ಅದಕ್ಕೆ ಹಗ್ಗ ಕಟ್ಟಿ ಆ ಬಾವಿಯಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಬಚ್ಚಿಟ್ಟಿದ್ದ. ಈ ವಿಷಯ ಯಾರಿಗೂ ಹೇಳಿರಲಿಲ್ಲ.

ಆ ಚಿನ್ನದಲ್ಲಿ ಸ್ವಲ್ಪ ಭಾಗ ತೆಗೆದುಕೊಂಡು ಬ್ಯಾಂಕ್‌ಗಳಲ್ಲಿ ಮತ್ತು ಚಿನ್ನದ ಅಂಗಡಿಗಳಲ್ಲಿ ತನ್ನ ಹಾಗೂ ಸಂಬಂಧಿಕರ ಹೆಸರಿನಲ್ಲಿ ಅಡವಿಟ್ಟು ಹಣ ಪಡೆದಿದ್ದ. ಆ ಹಣದಿಂದ ಸ್ವಲ್ಪ ಹಣವನ್ನು ಅಭಿ, ಚಂದ್ರು, ಮಂಜುಗೆ ತಲಾ 1 ಲಕ್ಷ ತಂದುಕೊಟ್ಟು ಊರಿನಲ್ಲಿ ಒಂದು ದೊಡ್ಡ ಮನೆ ಕಟ್ಟಿಸಿದ್ದ. ಕೆಲವು ನಿವೇಶನಗಳನ್ನು ಖರೀದಿ ಮಾಡಿದ್ದು, ತನ್ನ ಸಂಬಂಧಿಗಳಿಗೆ ಸ್ವಲ್ಪ ಚಿನ್ನವನ್ನು ಕೊಟ್ಟಿರುವುದಾಗಿ ತಿಳಿಸಿದ್ದ.

ಉಳಿದ ಚಿನ್ನವನ್ನು 2ರಿಂದ 3 ವರ್ಷಗಳ ವರೆಗೆ ತೆಗೆಯಬಾರದೆಂದು, ಪೊಲೀಸರು ಆ ಪ್ರಕರಣದ ತನಿಖೆ ಅಥವಾ ವಿಚಾರಣೆಯನ್ನು ನಿಲ್ಲಿಸಿದಾಗ ಈ ಚಿನ್ನವನ್ನು ಹೊರತೆಗೆಯೋಣ ಎಂದು ಪ್ಲ್ಯಾನ್ ರೂಪಿಸಿದ್ದ ಎಂದು ಐಜಿಪಿ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page