Thursday, June 20, 2024

ಸತ್ಯ | ನ್ಯಾಯ |ಧರ್ಮ

ಸಿಎಮ್‌ ಎಚ್ಚರಿಕೆ ನೀಡಿದ ಮರುದಿನವೇ ಮತ್ತೆ ಅನೈತಿಕ ಪೊಲೀಸ್‌ ಗಿರಿ: ಹಿಂದೂ ಜಾಗರಣ ವೇದಿಕೆಯ ಐವರ ಬಂಧನ

ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದರೂ ಕೂಡ ಅನೈತಿಕ ಪೊಲೀಸ್ ಗಿರಿ ಮುಂದುವರೆದಿದ್ದು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಅನೈತಿಕ ಪೊಲೀಸ್ ಗಿರಿ ನಡೆಸಿದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ ಒಂದೇ ಕಾರಿನಲ್ಲಿ ಮಂಗಳೂರಿನಿಂದ ಶೃಂಗೇರಿ ತೆರಳಿ ಕಾರ್ಕಳದ ಕುಂಟಲ್ಪಾಡಿ ಮಾರ್ಗವಾಗಿ ಮಂಗಳೂರಿಗೆ ವಿಭಿನ್ನ ಕೋಮಿನವರು ತೆರಳುತ್ತಿದ್ದರು. ಮಂಗಳೂರಿನ ಹೆಸರಾಂತ ಕಾಲೇಜೊಂದರ ನಾಲ್ವರು ವೈದ್ಯರು ಹಾಗೂ ಅದೇ ಕಾಲೇಜಿನ ಇಬ್ಬರು ಮಹಿಳಾ ಪ್ರೊಫೆಸರ್ ಅವರೊಂದಿಗೆ ಒಂದೇ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರಿಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮಾಳ ಎಸ್ ಕೆ ಬಾರ್ಡರ್ ಬಳಿಯಿಂದ ಇವರ ಕಾರನ್ನು ಹಿಂಬಾಲಿಸಿದ್ದು ಮತ್ತೊಂದು ಕಾರಿನಲ್ಲಿ ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ದೂರು ದಾಖಲಾಗಿದೆ.

ಕಾರಿನಲ್ಲಿದ್ದ ಮಹಿಳೆಯರು ನೇರವಾಗಿ ಸಹಾಯವಾಣಿ 112 ಕ್ಕೆ ಕರೆ ಮಾಡಿ ಘಟನೆಯ ಕುರಿತು ಪೊಲೀಸ್ ಮಾಹಿತಿ ನೀಡಿದ್ದು ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಅರವಿಂದ ಕಲ್ಲಗುಜ್ಜೆ, ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ್ , ನಗರ ಠಾಣಾಧಿಕಾರಿ ಸಂದೀಪ್ ಶೆಟ್ಟಿ, ಗ್ರಾಮಾಂತರ ಠಾಣಾಧಿಕಾರಿ ದಿಲೀಪ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಬಂಧಿತರನ್ನು ಸಂತೋಷ್ ನಂದಳಿಕೆ, ಕಾರ್ತಿಕ್ ಪೂಜಾರಿ, ಸುನೀಲ್ ಮೂಲ್ಯ ಮಿಯ್ಯಾರು, ಸಂದೀಪ್ ಪೂಜಾರಿ ಮಿಯ್ಯಾರು, ಸುಜಿತ್ ಸಫಲಿಗ ತೆಳ್ಳಾರು ಎಂದು ಗುರುತಿಸಲಾಗಿದೆ.

ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನಂತರ ಜಾಮೀನಿನ ಬಿಡುಗಡೆ ಮಾಡಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು