Friday, April 4, 2025

ಸತ್ಯ | ನ್ಯಾಯ |ಧರ್ಮ

ನಿಯಮ ಉಲ್ಲಂಘನೆ ; ನಮ್ಮ ಮೆಟ್ರೋದಲ್ಲಿ 6 ತಿಂಗಳಲ್ಲಿ 27,000 ಕ್ಕೂ ಹೆಚ್ಚು ಪ್ರಕರಣ ದಾಖಲು

ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಹಾಗೂ ಮೆಟ್ರೋ ನಿಯಮಗಳ ಉಲಂಘನೆ ಮಾಡಿದ ಪ್ರಕರಣಗಳ ಅಡಿಯಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಸುಮಾರು 27,000 ಕ್ಕೂ ಹೆಚ್ಚು ಘಟನೆಗಳು ಬಹಿರಂಗವಾಗಿದೆ. ಇದರಲ್ಲಿ ಯಾವುದೇ ಪ್ರಕರಣಗಳಿಗೆ ದಂಡ ವಿಧಿಸಿಲ್ಲ ಎಂಬುದು ವಿಶೇಷ.

ಸೆಪ್ಟೆಂಬರ್ 2024 ರಿಂದ ಮಾರ್ಚ್ 2025ರ ನಡುವೆ ಕಳೆದ ಆರು ತಿಂಗಳ ಅವಧಿಯಲ್ಲಿ ಸಂಚಾರ ದಟ್ಟಣೆ ಇಲ್ಲದ ಸಮಯದಲ್ಲಿ ಮೆಟ್ರೋದ ಭದ್ರತಾ ದಳವು ನಡೆಸಿದ ವಾಡಿಕೆಯ ಭದ್ರತಾ ತಪಾಸಣೆಯ ಪ್ರಕಾರ ಈ ಪ್ರಕರಣಗಳು ದಾಖಲಾಗಿವೆ.

ಮೆಟ್ರೋ ನಿಯಮ ಉಲ್ಲಂಘನೆಯ ಪ್ರಮುಖ ಕಾರಣಗಳಲ್ಲಿ ಪ್ರಯಾಣಿಕರಿಂದ ಜೋರಾಗಿ ಸಂಗೀತವನ್ನು ಮೊಬೈಲ್ ನಲ್ಲಿ ಹಾಕಿಕೊಂಡು ಕೇಳುತ್ತಿರುವುದು ಒಟ್ಟು 11,922 ಪ್ರಕರಣಗಳು, ವಿಕಲಾಂಗ ವ್ಯಕ್ತಿಗಳು (PwD), ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಶಿಶುಗಳೊಂದಿಗೆ ಪ್ರಯಾಣಿಸುವವರಿಗೆ ಆದ್ಯತೆಯ ಆಸನಗಳನ್ನು ನೀಡದಿರುವುದು 14,162 ಪ್ರಕರಣಗಳು ಹಾಗೂ ರೈಲಿನಲ್ಲಿ ಪ್ರಯಾಣ ಮಾಡುವಾಗ ತಿಂಡಿ ತಿನಿಸುಗಳ ಸೇವನೆಯ 554 ಪ್ರಕರಣಗಳು ಕಂಡುಬಂದಿವೆ. ಅಲ್ಲದೆ, 474 ಘಟನೆಗಳು ದೊಡ್ಡ ಗಾತ್ರದ ಲಗೇಜ್ ಗಳನ್ನು ಸಾಗಿಸುವ ಪ್ರಯಾಣಿಕರನ್ನು ಒಳಗೊಂಡಿವೆ.

ಪ್ರಯಾಣಿಕರಲ್ಲಿ ಹೆಚ್ಚಿನ ಅರಿವು ಮತ್ತು ಪರಿಗಣನೆಯ ಅಗತ್ಯವನ್ನು ಎತ್ತಿ ತೋರಿಸುವ ಉದ್ದೇಶದಿಂದ ಈ ಪ್ರಕರಣ ದಾಖಲಾಗಿವೆ. ಇದಕ್ಕೆ ಯಾವುದೇ ದಂಡ ವಿಧಿಸಿಲ್ಲ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಅಂತಹ ನಡವಳಿಕೆಗಳನ್ನು ನಿರುತ್ಸಾಹಗೊಳಿಸಲು ಮತ್ತು ಸಾಮರಸ್ಯದ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ ಮಾರ್ಗಸೂಚಿಗಳನ್ನು ಅನುಸರಿಸುವ ಪ್ರಾಮುಖ್ಯತೆಯನ್ನು ಬಲಪಡಿಸುವ ಉದ್ದೇಶದಿಂದ ಭದ್ರತಾ ದಳವು ಕಠಿಣ ಎಚ್ಚರಿಕೆಗಳನ್ನು ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page