Friday, June 21, 2024

ಸತ್ಯ | ನ್ಯಾಯ |ಧರ್ಮ

ಎಸ್‌ಐಟಿ ಸಹಾಯವಾಣಿಗೆ ಈವರೆಗೆ 30 ಕ್ಕೂ ಹೆಚ್ಚು ಸಂತ್ರಸ್ತೆಯರ ಕರೆ! : ಮತ್ತಷ್ಟು ಗಂಭೀರತೆ ಪಡೆದುಕೊಳ್ಳಲಿದೆ ಲೈಂಗಿಕ ದೌರ್ಜನ್ಯದ ಪ್ರಕರಣ

ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯದ ಕರ್ಮಕಾಂಡದ ನಂತರ ರಾಜ್ಯ ಸರ್ಕಾರದ ವಿಶೇಷ ತನಿಖಾ ತಂಡ ಎಸ್‌ಐಟಿ, ಪ್ರಕರಣದ ಸಂತ್ರಸ್ತೆಯರಿಗಾಗಿ 6360938947 ಸಹಾಯವಾಣಿ ಬಿಡುಗಡೆ ಮಾಡಿತ್ತು. ಪ್ರಕರಣ ದಾಖಲಾಗಿ ಇಂದಿಗೆ 28 ದಿನ ಕಳೆಯುತ್ತಿದ್ದಂತೆ, ಈವರೆಗೆ ಸಹಾಯವಾಣಿಗೆ 30 ಕ್ಕೂ ಹೆಚ್ಚು ಮಂದಿ ಸಂತ್ರಸ್ತೆಯರು ಕರೆ ಮಾಡಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಅತಿ ದೊಡ್ಡ ಲೈಂಗಿಕ ದೌರ್ಜನ್ಯದ ಪ್ರಕರಣ ಇದಾಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತೆಯರು ಬಿಚ್ಚಿಟ್ಟ ಸತ್ಯದ ಬಗ್ಗೆ ಎಸ್‌ಐಟಿ ಗೌಪ್ಯತೆ ಉಳಿಸಿಕೊಂಡಿದೆ. ಈ ಅಷ್ಟೂ ಮಂದಿ ಸಂತ್ರಸ್ತೆಯರ ಹೇಳಿಕೆಗಳು ಮಹತ್ವ ಪಡೆಯುವುದು ಪ್ರಜ್ವಲ್ ರೇವಣ್ಣ ಭಾರತಕ್ಕೆ ಬಂದ ನಂತರವೇ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಹಾಗೊಂದು ವೇಳೆ ಸಹಾಯವಾಣಿಗೆ ಕರೆ ಮಾಡಿರುವ ಸಂತ್ರಸ್ತೆಯರ ಮಾಹಿತಿ ಬಿಡುಗಡೆ ಆಗಿದ್ದೇ ಆದರೆ ಆರೋಪಿ ಪರ ಇರುವವರು ಸಾಕ್ಷ್ಯ ನಾಶಕ್ಕೂ ಮುಂದಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಸಂತ್ರಸ್ತೆಯರು ಈಗಾಗಲೇ ನೀಡಿರುವ ದೂರನ್ನು ಆಧರಿಸಿ ಹೇಳುವುದಾದರೆ, ಪ್ರಜ್ವಲ್ ಭಾರತಕ್ಕೆ ಮರಳುತ್ತಿದ್ದಂತೆ ರಾಜ್ಯ ಪೊಲೀಸ್ ಇಲಾಖೆ ಪ್ರತಿಯೊಂದು ಪ್ರಕರಣಕ್ಕೂ ಪ್ರತ್ಯೇಕ ದೂರು ದಾಖಲಿಸಿ ಸುಮೋಟೋ ಕೇಸ್ ದಾಖಲು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾರಣ ಏನೆಂದರೆ, ಈವರೆಗೆ ಸಹಾಯವಾಣಿ ಮೂಲಕ ಎಸ್‌ಐಟಿ ಸಂಪರ್ಕಿಸಿರುವ ಸಂತ್ರಸ್ತೆಯರು ಯಾರೂ ಸಹ ನೇರವಾಗಿ ದೂರನ್ನು ಕೊಡಲು ಮುಂದಾಗಿಲ್ಧ. ನ್ಯಾಯಾಂಗ ವ್ಯವಸ್ಥೆಗೆ ನೇರ ದೂರು ಪ್ರಮುಖ ಆಧಾರವಾಗಿ ನಿಲ್ಲುವುದರಿಂದ ಎಸ್‌ಐಟಿ ಈಗಾಗಲೇ ಸಹಾಯವಾಣಿ ಮೂಲಕ ಸಂಪರ್ಕಿಸಿದವರನ್ನು ನೇರವಾಗಿ ಭೇಟಿ ಮಾಡಿ ದೂರು ದಾಖಲಿಸುವಂತೆ ಒತ್ತಾಯ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಷ್ಟೇ ಅಲ್ಲದೇ ನಿಮ್ಮೆಲ್ಲಾ ಮಾಹಿತಿ ಗೌಪ್ಯವಾಗಿರುವುದು ಅಲ್ಲದೇ, ಸೂಕ್ತ ಭದ್ರತೆಯ ಜವಾಬ್ಧಾರಿಯನ್ನೂ ಸರ್ಕಾರ ಮತ್ತು ಎಸ್‌ಐಟಿ ವಹಿಸಲಿದೆ ಎಂದು ಅಭಯ ನೀಡಿದರೂ ಈವರೆಗೆ ಕೇವಲ 3 ನೇರ ದೂರು ದಾಖಲಾಗಿದೆ.

ಹಾಗೊಂದು ವೇಳೆ ನ್ಯಾಯಾಲಯ ಸಹಾಯವಾಣಿ ಮೂಲಕ ಕರೆ ಮಾಡಿ ಸಂಕಷ್ಟ ಹೇಳಿಕೊಂಡವರ ಹೇಳಿಕೆಯನ್ನೂ ಪರಿಗಣಿಸುವುದಾದರೆ ಪ್ರಕರಣ ಮತ್ತಷ್ಟು ಗಂಭೀರತೆ ಪಡೆದುಕೊಳ್ಳಲಿದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು