Friday, January 23, 2026

ಸತ್ಯ | ನ್ಯಾಯ |ಧರ್ಮ

ಸಾರಂಡಾ ಅರಣ್ಯದಲ್ಲಿ ನಕ್ಸಲರ ವಿರುದ್ಧ ಭದ್ರತಾ ಪಡೆಗಳ ಭಾರಿ ಕಾರ್ಯಾಚರಣೆ ; ಎಂಟಕ್ಕೂ ಹೆಚ್ಚು ನಕ್ಸಲರು ಸಾವಿನ ಶಂಕೆ

ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಸಾರಂಡಾ ಅರಣ್ಯದ ಕುಮ್ಡಿ ಪ್ರದೇಶದ ಬಳಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಈ ಎನ್‌ಕೌಂಟರ್‌ನಲ್ಲಿ ಎಂಟಕ್ಕೂ ಹೆಚ್ಚು ನಕ್ಸಲರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ಸಂಖ್ಯೆ ಇನ್ನೂ ಅಧಿಕೃತವಾಗಿ ದೃಢಪಡಿಸಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ, 209ನೇ ಕೋಬ್ರಾ ಬೆಟಾಲಿಯನ್ ನೇತೃತ್ವದಲ್ಲಿ ಭದ್ರತಾ ಪಡೆಗಳು ಸಾರಂಡಾ ಅರಣ್ಯದಲ್ಲಿ ನಕ್ಸಲರ ವಿರುದ್ಧ ದೊಡ್ಡ ಮಟ್ಟದ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ. ಕಾರ್ಯಾಚರಣೆಯ ವೇಳೆ ನಕ್ಸಲೈಟ್ ಏರಿಯಾ ಕಮಾಂಡರ್ ಬಳಕೆ ಮಾಡುತ್ತಿದ್ದ ಬಂಕರ್‌ನ್ನು ಭದ್ರತಾ ಪಡೆಗಳು ಧ್ವಂಸಗೊಳಿಸಿವೆ. ಎನ್‌ಕೌಂಟರ್‌ನಲ್ಲಿ ಏರಿಯಾ ಕಮಾಂಡರ್ ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಚೈಬಾಸಾದ ಸಾರಂಡಾ ಅರಣ್ಯದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಎರಡೂ ಕಡೆಯಿಂದ ನಿರಂತರ ಗುಂಡಿನ ದಾಳಿ ಮುಂದುವರೆದಿದೆ ಎಂದು ಜಾರ್ಖಂಡ್ ಪೊಲೀಸರು ತಿಳಿಸಿದ್ದಾರೆ. ಕಿರು ಬುರು ಪ್ರದೇಶದಲ್ಲಿ ಪೊಲೀಸರನ್ನು ಕಂಡ ನಕ್ಸಲರು ಮೊದಲು ಗುಂಡು ಹಾರಿಸಿದ್ದು, ಭದ್ರತಾ ಪಡೆಗಳು ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿ ನಕ್ಸಲರಿಗೆ ಭಾರೀ ನಷ್ಟ ಉಂಟುಮಾಡಿವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ದಟ್ಟವಾದ ಅರಣ್ಯ ಮತ್ತು ಕಷ್ಟಕರ ಭೌಗೋಳಿಕ ಪರಿಸ್ಥಿತಿಯ ಕಾರಣದಿಂದ ನಕ್ಸಲರು ಇನ್ನೂ ಅಡಗಿಕೊಂಡು ಗುಂಡು ಹಾರಿಸುತ್ತಿದ್ದಾರೆ. ಈ ಹಿನ್ನೆಲೆ ಸಿಆರ್‌ಪಿಎಫ್ ಸೇರಿದಂತೆ ಇತರ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ನಕ್ಸಲರ ಅಡಗುತಾಣಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದೇ ಈ ಕಾರ್ಯಾಚರಣೆಯ ಪ್ರಮುಖ ಗುರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಈವರೆಗೆ ಮೂರಕ್ಕೂ ಹೆಚ್ಚು ನಕ್ಸಲರು ಸಾವನ್ನಪ್ಪಿರುವುದಾಗಿ ಅಂದಾಜಿಸಲಾಗಿದೆ. ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಸಂಪೂರ್ಣ ಮಾಹಿತಿಯನ್ನು ಪ್ರಕಟಿಸಲಾಗುವುದು ಎಂದು ಜಾರ್ಖಂಡ್ ಪೊಲೀಸ್ ಪ್ರಧಾನ ಕಚೇರಿ ಸ್ಪಷ್ಟಪಡಿಸಿದೆ.

ಸಾರಂಡಾ: ನಕ್ಸಲೀಯರಿಗೆ ಇನ್ನೂ ದೊಡ್ಡ ಸವಾಲು
ಜಾರ್ಖಂಡ್ ಅನ್ನು ನಕ್ಸಲೀಯ ಮುಕ್ತ ರಾಜ್ಯವನ್ನಾಗಿ ಮಾಡುವ ಪ್ರಯತ್ನದಲ್ಲಿ ಸಾರಂಡಾ ಅರಣ್ಯ ಇನ್ನೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜಾರ್ಖಂಡ್ ಪೊಲೀಸ್ ವರದಿಯಂತೆ, ರಾಜ್ಯದಲ್ಲಿನ ನಕ್ಸಲ ಚಟುವಟಿಕೆಗಳಿಗೆ ನಿಷೇಧಿತ ಸಿಪಿಐ (ಮಾವೋವಾದಿ) ಪಕ್ಷದ ಪಾಲಿಟ್‌ಬ್ಯೂರೋ ಸದಸ್ಯ ಮಿಸಿರ್ ಬೆಸ್ರಾ ನೇತೃತ್ವ ನೀಡುತ್ತಿದ್ದು, ಆತನ ತಲೆಗೆ ಒಂದು ಕೋಟಿ ರೂ. ಬಹುಮಾನ ಘೋಷಿಸಲಾಗಿದೆ.

ಮಿಸಿರ್ ಬೆಸ್ರಾ ಬಳಿ ಸುಮಾರು 60 ಮಂದಿ ಕಟ್ಟಾ ನಕ್ಸಲರ ತಂಡವಿದ್ದು, ಕೇಂದ್ರ ಸಮಿತಿ ಸದಸ್ಯರಾದ ಅನಲ್ ದಾ, ಅಸಿಮ್ ಮಂಡಲ್ ಹಾಗೂ ಜಾರ್ಖಂಡ್–ಬಿಹಾರ ವಿಶೇಷ ಪ್ರದೇಶ ಸಮಿತಿಯ ಸುಶಾಂತ್ ಸೇರಿದಂತೆ ಹಲವು ಉನ್ನತ ನಾಯಕರೂ ಈ ಪ್ರದೇಶದಲ್ಲೇ ಸಕ್ರಿಯರಾಗಿದ್ದಾರೆ. ಜೊತೆಗೆ, ಕುಖ್ಯಾತ ನಕ್ಸಲೈಟ್ ಕಮಾಂಡರ್ ಅಜಯ್ ಮಹ್ತೊಗಾಗಿ ಕಾರ್ಯನಿರ್ವಹಿಸುವ 20 ರಿಂದ 25 ನಕ್ಸಲರ ಮತ್ತೊಂದು ಗುಂಪು ಪಶ್ಚಿಮ ಸಿಂಗ್ಭೂಮ್‌ನಲ್ಲಿ ತಂಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page