ಉದ್ಯಮಿ ರಾಜ್ ಶಮಾನಿ ನಡೆಸಿದ ವಿಜಯ್ ಮಲ್ಯ ಜೊತೆಗಿನ ಪಾಡ್ ಕಾಸ್ಟ್ ಈಗ ಭಾರತದಲ್ಲಿ ಟಾಕ್ ಆಫ್ ಟೌನ್ ಆಗಿದೆ. ಇದಕ್ಕೆ ವಿಜಯ್ ಮಲ್ಯ ಹರ್ಷ ವ್ಯಕ್ತಪಡಿಸಿದ್ದು, ಹೆಚ್ಚು ವೀಕ್ಷಣೆ ಪಡೆದದ್ದಕ್ಕೆ ವೀಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ X ಪೋಸ್ಟ್ ನಲ್ಲಿ ಬರೆದುಕೊಂಡಿರುವ ವಿಜಯ್ ಮಲ್ಯ, ನನ್ನ ಬಗ್ಗೆ ಇರುವ ಕಲ್ಪಿತ ಅಪಪ್ರಚಾರದಲ್ಲಿ ಈ ಪಾಡ್ ಕಾಸ್ಟ್ ಸಾಕಷ್ಟು ಜನರಿಗೆ ತಲುಪಿರುವುದು ಸಂತಸ ತಂದಿದೆ ಎಂದು ಬರೆದುಕೊಂಡಿದ್ದಾರೆ.
‘ನನಗೆಷ್ಟು ಖುಷಿ ಆಗುತ್ತಿದೆ ಎಂಬುದನ್ನು ಹೇಗೆ ವರ್ಣಿಸುವುದು ಗೊತ್ತಾಗುತ್ತಿಲ್ಲ. ರಾಜ್ ಶಮಾನಿ ಜೊತೆಗಿನ ನನ್ನ ಪಾಡ್ಕ್ಯಾಸ್ಟ್ ನಾಲ್ಕು ದಿನದಲ್ಲಿ 20 ಮಿಲಿಯನ್ ವೀಕ್ಷಣೆ ಪಡೆದಿದೆ. ನಾಲ್ಕು ಗಂಟೆಗೂ ಹೆಚ್ಚು ಅವಧಿಯ ಈ ಪಾಡ್ಕ್ಯಾಸ್ಟ್ ವೀಕ್ಷಿಸಲು ಸಮಯ ನೀಡಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಅದೆಷ್ಟು ರೀಪೋಸ್ಟ್ಗಳಾಗಿವೆಯೋ ಬಹಳ ಸಂತಸ ಆಗುತ್ತಿದೆ. ನಿಮಗೆಲ್ಲಾ ಆ ದೇವರು ಆಶೀರ್ವದಿಸಲಿ’ ಎಂದು ವಿಜಯ್ ಮಲ್ಯ ತಮ್ಮ X ಖಾತೆಯ ಮೂಲಕ ತಿಳಿಸಿದ್ದಾರೆ.
ಸುಮಾರು 4 ಗಂಟೆಗೂ ಹೆಚ್ಚಿರುವ ರಾಜ್ ಶಮಾನಿ ಜೊತೆಗಿನ ಪಾಡ್ ಕಾಸ್ಟ್ ನಲ್ಲಿ ರಾಜ್ ಶಮಾನಿ ಕೇಳಿದ ಹಲವು ಪ್ರಶ್ನೆಗಳಿಗೆ ವಿಜಯ್ ಮಲ್ಯ ನೇರವಾಗಿ ಉತ್ತರಿಸಿದ್ದಾರೆ. ತಾನು ವೈಯಕ್ತಿಕವಾಗಿ ಯಾವ ಸಾಲ ಮಾಡಿಲ್ಲ. ಕಿಂಗ್ಫಿಶರ್ ಸಂಸ್ಥೆ ಮಾಡಿದ ಸಾಲ ಅದು. ಆಸ್ತಿ ಮಾರಿಯಾದರೂ ಸಾಲ ತೀರಿಸುತ್ತೇನೆ ಎಂದು ಬಾರಿ ಬಾರಿ ಹೇಳಿದರೂ ಬ್ಯಾಂಕುಗಳು ಮತ್ತು ಸರ್ಕಾರ ಕೇಳಲಿಲ್ಲ. ತಾನೆಷ್ಟು ಸಾಲ ಕೊಡಬೇಕು ಎಂದು ಲೆಕ್ಕವನ್ನೂ ಕೊಡುತ್ತಿಲ್ಲ. ತಾನು ಬಾಕಿ ಉಳಿಸಿಕೊಂಡಿರುವ ಸಾಲಕ್ಕಿಂತ ಹಲವು ಪಟ್ಟು ಹೆಚ್ಚು ಹಣವನ್ನು ಬ್ಯಾಂಕುಗಳು ಜಫ್ತಿ ಮಾಡಿಕೊಂಡಿವೆ. ಆದರೂ ಕೂಡ ನನ್ನನ್ನು ಕಳ್ಳ ಎಂದು ಕರೆಯಲಾಗುತ್ತಿದೆ ಎಂದು ವಿಜಯ್ ಮಲ್ಯ ಈ ಪಾಡ್ಕ್ಯಾಸ್ಟ್ನಲ್ಲಿ ಹೇಳಿದ್ದಾರೆ.
ತಾನು ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ದೇಶಬಿಟ್ಟು ಹೋಗಲಿಲ್ಲ. ಸಂಸತ್ನಲ್ಲಿ ಹಣಕಾಸು ಸಚಿವರಿಗೆ ತಿಳಿಸಿಯೇ ಏರ್ಪೋರ್ಟ್ಗೆ ಹೋಗಿದ್ದೆ. ಕದ್ದು ಹೋಗುವ ಉದ್ದೇಶ ಇರಲಿಲ್ಲ. ತತ್ಕ್ಷಣವೇ ಮರಳಿ ಬರುವ ಸಂದರ್ಭ ಅದಾಗಿರಲಿಲ್ಲ. ಹೀಗಾಗಿ, ಮರಳಿ ಬರಲಿಲ್ಲ ಎಂದು ವಿಜಯ್ ಮಲ್ಯ ಹೇಳಿದ್ದಾರೆ.
ಸಧ್ಯ ಈ ಪಾಡ್ ಕಾಸ್ಟ್ ಈ ಸಮಯಕ್ಕೆ ಪಡೆದ ವೀಕ್ಷಣೆ 2.12 ಕೋಟಿ. ರಾಜ್ ಶಮಾನಿ ಅವರ ಯೂಟ್ಯೂಬ್ ವಿಡಿಯೋಗಳ ಪೈಕಿ ಇದು ಎರಡನೇ ಅತಿಹೆಚ್ಚು ವೀಕ್ಷಣೆ ಹೊಂದಿದೆ. ನಿರೀಕ್ಷೆಯಂತೆ ಮುಂದುವರೆದರೆ ರಾಜ್ ಶಮಾನಿ ವಿಡಿಯೋಗಳಲ್ಲೇ ಹೆಚ್ಚು ವೀಕ್ಷಣೆ ಪಡೆದ ವಿಡಿಯೋಗಳಲ್ಲಿ ಇದು ಮೊದಲ ಸ್ಥಾನಕ್ಕೆ ಬರಲಿದೆ.