Saturday, June 15, 2024

ಸತ್ಯ | ನ್ಯಾಯ |ಧರ್ಮ

ಮೊಟ್ಟ ಮೊದಲ ಕಾಲಾಪಾನಿ ಶಿಕ್ಷೆ ಅನುಭವಿಸಿ ಜೈಲಲ್ಲೇ ಹುತಾತ್ಮರಾದ  ಕ್ರಾಂತಿಕಾರಿ ಮೌಲವಿ.

ಭಾರತದ ಸ್ವಾತಂತ್ರ್ಯ ಚಳುವಳಿಯು ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕು, ಪ್ರಾಣವನ್ನು ಮುಡಿಪಾಗಿಟ್ಟ ಜನರ  ನಿಸ್ವಾರ್ಥ ಹೋರಾಟದ ಸುದೀರ್ಘ ಇತಿಹಾಸದ ಜನ ಸಂಗ್ರಾಮ. ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ವಿರುದ್ಧ ಶಸ್ತ್ರ ಹಿಡಿದು ಹೋರಾಟ ಮಾಡದೇ ಹೋದರೂ ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ಧಾರೆ ಎರೆದ ಹಲವರ ತ್ಯಾಗ ಬಲಿದಾನ ಹೋರಾಟದ ಸುದೀರ್ಘ ಇತಿಹಾಸವು ದೇಶದ ಮೂಲೆ ಮೂಲೆಗಳಲ್ಲಿ ಪಿಸುಗುಡುತ್ತಿದ್ದು ಈ ಹೋರಾಟಗಾರರ ಬಗ್ಗೆ ಇತಿಹಾಸದ ಪುಟಗಳು ತೆರೆ ಮರೆಯಲ್ಲಿ ಉಳಿದು ಮೌನವಾಗಿವೆ. ಆ ತೆರೆ ಸರಿಸಿ ಮರೆಯಲ್ಲಿ ಉಳಿದ, ಹೆಚ್ಚು ಪ್ರಚಾರ ಪಡೆಯದ ಸಾಮಾನ್ಯರ ಹೋರಾಟದ ಚರಿತ್ರೆಯನ್ನು ಸ್ಮರಿಸುವ ಪ್ರಯತ್ನ ಮಾಡುವುದು  ಸ್ವಾತಂತ್ರ್ಯ- 75ರ ಈ ಸಂದರ್ಭಕ್ಕೆ ಪೀಪಲ್‌ ಮೀಡಿಯಾ ಸಲ್ಲಿಸುವ ಗೌರವವೆಂದು ನಾವು ಭಾವಿಸುತ್ತೇವೆ. 

ನಾನು ಈಗಾಗಲೇ ಬರೆದಂತೆ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಈ ದೇಶದ ಮದ್ರಸಾ ಮತ್ತು ಮಸೀದಿಗಳು ಕೊಟ್ಟಷ್ಟು ಕ್ರಾಂತಿಕಾರಿ ಹೋರಾಟಗಾರರನ್ನು ಯಾವ ಯುನಿವರ್ಸಿಟಿಯೂ ನೀಡಿಲ್ಲ.. ಅಂತಹ  ಕ್ರಾಂತಿಕಾರಿಗಳಲ್ಲೊಬ್ಬರು ಮೌಲಾನಾ ಅಲಾವುದ್ದೀನ್ ಹೈದರ್… ಅಲಾವುದ್ದೀನ್ ಹೈದರರ ಹೋರಾಟದ ಕಥೆ ಕೇಳಿದರೆ ನಿಜವಾದ ದೇಶಪ್ರೇಮಿಗೆ ರೋಮಾಂಚನವಾಗದಿರದು.. ಅವರು ಹೈದರಾಬಾದಿನ ಇತಿಹಾಸ ಪ್ರಸಿದ್ಧ ಮಕ್ಕಾ ಮಸೀದಿಯ ಇಮಾಮರಾಗಿದ್ದರು. ಇಸ್ಲಾಮೀ ಕರ್ಮಶಾಸ್ತ್ರ ಮತ್ತು‌ ಶರೀಯತ್ ಕಾನೂನಿನ ಕುರಿತಂತಹ ಅಪ್ರತಿಮ ವಿದ್ವಾಂಸರಲ್ಲೊಬ್ಬರಾಗಿದ್ದರು. ಹೈದ್ರಾಬಾದ್ ಪ್ರಾಂತ್ಯವನ್ನು ಅಂದು ಆಳುತ್ತಿದ್ದ ನಿಝಾಮರು ತಮ್ಮ ರಾಜಸತ್ತೆಯನ್ನು ಉಳಿಸಲು ಬ್ರಿಟಿಷರೊಂದಿಗೆ ಕೈ ಜೋಡಿಸಿದ್ದರು. ಅವರು ಹಿಂದೆ ಹಝ್ರತ್ ಟಿಪ್ಪು ಸುಲ್ತಾನರಿಗೆದುರಾಗಿ ಬ್ರಿಟಿಷ್ ಪಾಳಯಕ್ಕೆ ನಿಷ್ಟೆ ತೋರಿದವರೇ ಆಗಿದ್ದರು. ಅವರ ರಾಜಧಾನಿ ಹೈದರಾಬಾದ್ ನಗರದ ಹೃದಯ ಭಾಗದಲ್ಲೇ ಇದ್ದ ಪ್ರಮುಖ ಮಸೀದಿಯಾಗಿತ್ತು ಇತಿಹಾಸ ಪ್ರಸಿದ್ಧ ಮಕ್ಕಾ ಮಸೀದಿ. ಮಕ್ಕಾ ಮಸೀದಿಯು ಹೈದ್ರಾಬಾದಿನ ಪ್ರಮುಖ ಐತಿಹಾಸಿಕ ಕಟ್ಟಡಗಳಲ್ಲೊಂದಾದ ಚಾರ್ ಮಿನಾರ್‌ಗಿಂತ ಕೂಗಳತೆ ದೂರದಲ್ಲಿಯೇ ಇದೆ.  

ಅತ್ತ ದೆಹಲಿಯಲ್ಲಿ 1857ರ ಮೊದಲ ಏಕೀಕೃತ ಸ್ವಾತಂತ್ರ್ಯ ಸಂಗ್ರಾಮದ ಕರೆಯನ್ನು ಅಂತಿಮ ಮೊಗಲ್ ದೊರೆ ಬಹಾದ್ದೂರ್ ಷಾ ಝಫರ್‌ರ ನೇತೃತ್ವದಲ್ಲಿ ನೀಡಲಾಯಿತು. ಇತಿಹಾಸದಲ್ಲಿ ದಾಖಲಿಸಲಾದಂತೆ ನಾನಿದನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎನ್ನುವುದಕ್ಕಿಂತ ಮೊದಲ ಏಕೀಕೃತ ಸ್ವಾತಂತ್ರ್ಯ ಸಂಗ್ರಾಮ ಎಂದೇ ಹೇಳ ಬಯಸುವೆ. ಒಂದು ವೇಳೆ ಇದನ್ನು ನಾವು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದರೆ ಅದಕ್ಕಿಂತ ಮೊದಲು ಬ್ರಿಟಿಷ್ ವಸಾಹತುಶಾಹಿಯಿಂದ ವಿಮೋಚನೆಗಾಗಿ ಕಾದಾಡಿ ಹುತಾತ್ಮರಾದ ಟಿಪ್ಪು ಸುಲ್ತಾನರಾದಿಯಾಗಿ ಹೋರಾಟಗಾರರ ಹೋರಾಟಗಳನ್ನು ಕಡೆಗಣಿಸಿದಂತಾಗುತ್ತದೆ.   ಅತ್ತ ದೆಹಲಿಯಿಂದ ಮೊದಲ ಏಕೀಕೃತ ಸ್ವಾತಂತ್ರ್ಯ ಸಂಗ್ರಾಮದ ಸಮರ ಘೋಷ ಮೊಳಗುತ್ತಿದ್ದಂತೆಯೇ ದೇಶದ ವಿವಿದೆಡೆಗಳಿಂದ ಹೋರಾಟಗಾರರು ತಮ್ಮ ಕೆಚ್ಚನ್ನು ನೂರ್ಮಡಿಗೊಳಿಸಿ ಹೋರಾಟದ ಕಣಕ್ಕೆ ದುಮುಕಿದರು. ಹಾಗೆ ಹೋರಾಟದ ಕಣಕ್ಕೆ ದುಮುಕಿದವರಲ್ಲಿ ಹೈದರಾಬಾದ್ ಮಕ್ಕಾ ಮಸೀದಿಯ ಇಮಾಮರಾಗಿದ್ದ ವೀರ ಸಿಂಹ ಮೌಲಾನಾ ಅಲಾವುದ್ದೀನ್ ಹೈದರ್ ಕೂಡಾ ಒಬ್ಬರಾಗಿದ್ದರು.  

1857ರ ಜುಲೈ ಹದಿನೇಳರಂದು ಮಕ್ಕಾ ಮಸೀದಿಯ ಇಮಾಮರಾಗಿದ್ದ ಮೌಲಾನಾ ಅಲಾವುದ್ದೀನ್ ಹೈದರ್ ಮತ್ತು ತುರ್ರೇಬಾಝ್ ಖಾನ್ ನೇತೃತ್ವದಲ್ಲಿ 500 ಮಂದಿ ಕ್ರಾಂತಿಕಾರಿ ಹೋರಾಟಗಾರರ ಪಡೆ ಮಕ್ಕಾ ಮಸೀದಿಯಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಹೈದ್ರಾಬಾದ್‌ ನಗರದಲ್ಲಿರುವ ಬ್ರಿಟಿಷ್ ರೆಸಿಡೆನ್ಸಿಗೆ ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗಿದರು. ಏಕಾ ಏಕಿ ನಡೆದ ಈ ಮುತ್ತಿಗೆಯಿಂದ ಕಂಗಾಲಾದ ಬ್ರಿಟಿಷರು ಹೋರಾಟಗಾರರ ಮೇಲೆ ಗುಂಡಿನ ದಾಳಿಗೈದರು. ತಕ್ಕ ಮಟ್ಟಿಗೆ ಶಸ್ತ್ರಸಜ್ಜಿತರಾಗಿಯೇ ಮುತ್ತಿಗೆ ಹಾಕಿದ್ದ ಹೋರಾಟಗಾರರು ಮರುದಾಳಿ ನಡೆಸಿ ವೀರಾವೇಶದಿಂದಲೇ ಹೋರಾಡಿದರು. ‌ಆದರೆ ಬ್ರಿಟಿಷರ ಕೈಯಲ್ಲಿದ್ದ ಆ ಕಾಲದ ಆಧುನಿಕ ಶಸ್ತ್ರಾಸ್ತ್ರಗಳ ಮುಂದೆ ಮೌಲವಿ ಅಲಾವುದ್ದೀನ್ ಹೈದರರ ಸೇನೆ ಸೋಲೊಪ್ಪಿಕೊಳ್ಳಲೇ ಬೇಕಾಯಿತು.ಮೌಲಾನಾರ ಸೈನ್ಯದ ಪ್ರಮುಖ ನಾಯಕ ತುರ್ರೇಬಾಝ್ ಖಾನ್‌ರನ್ನು ಬ್ರಿಟಿಷ್ ಸೈನ್ಯ ಸೆರೆ ಹಿಡಿಯಿತು. ತೀವ್ರ ಗಾಯಗಳಿಂದ ಜರ್ಜರಿತರಾಗಿದ್ದ ಮೌಲಾನಾ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೌಲಾನಾರ  ಬಲ ಭುಜಕ್ಕೆ ಮತ್ತು ಹಣೆಗೆ ಬಲವಾದ ಕತ್ತಿಯೇಟು ತಾಗಿತ್ತು. ಮಾತ್ರವಲ್ಲದೇ ಅವರ ಕೈಗೆ ಗುಂಡಿನೇಟು ತಾಗಿತ್ತು. ಹಾಗೆ ತಪ್ಪಿಸಿಕೊಂಡ ಮೌಲಾನಾ ಎರಡು ವರ್ಷಗಳ ಕಾಲ ಭೂಗತರಾಗಿ ಬ್ರಿಟಿಷ್ ಪ್ರಭುತ್ವದ ವಿರುದ್ಧ ತಂತ್ರಗಳನ್ನು ಹೆಣೆಯುತ್ತಿದ್ದರು. ಆ ಬಳಿಕ ಮೌಲಾನಾರ ಹುಡುಗರು ಅಲ್ಲಲ್ಲಿ ದಂಗೆಯೇಳುತ್ತಾ ಬ್ರಿಟಿಷ್ ಪ್ರಭುತ್ವಕ್ಕೆ ತಲೆನೋವಾಗಿ ಪರಿಣಮಿಸಿದರು. ಭೂಗತರಾಗಿದ್ದ ಮೌಲಾನಾರನ್ನು 1859ರ ಜೂನ್‌ ಇಪ್ಪತ್ತೆಂಟರಂದು ಬ್ರಿಟಿಷ್ ಪ್ರಭುತ್ವ ಬಂಧಿಸುವಲ್ಲಿ ಯಶಸ್ವಿಯಾಯಿತು.

ಆಗಿನ್ನೂ ಮೌಲಾನಾರಿಗೆ ಕೇವಲ ಮೂವತ್ತಾರು ವರ್ಷಗಳು. ಮೌಲಾನಾರನ್ನು ಸಾದಾ ಜೈಲಿನಲ್ಲಿಟ್ಟರೆ ಅಪಾಯ ತಪ್ಪಿದ್ದಲ್ಲ ಎಂದು ಮನವರಿಕೆ ಮಾಡಿಕೊಂಡ ಬ್ರಿಟಿಷರು ಅವರನ್ನು ಅಂಡಮಾನ್ ದ್ವೀಪದ ಸೆಲ್ಯುಲಾರ್ ಜೈಲಿಗೆ ತಳ್ಳಿ ಅವರ ಮೇಲೆ ಕಾಲಾಪಾನಿ ಅಥವಾ ಕರಿನೀರಿನ ಶಿಕ್ಷೆ ವಿಧಿಸಿದರು. ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕಾಲಾಪಾನಿ ಸಜೆಗೆ ಗುರಿಯಾದ ಕ್ರಾಂತಿಕಾರಿ ಎಂಬ ಗೌರವ ಮೌಲಾನಾರಿಗೆ ಸಲ್ಲುತ್ತದೆ. ಜೈಲಿನಲ್ಲಿ ಮೌಲಾನಾರಿಗೆ ವಿಪರೀತ ಯಾತನೆ ನೀಡಿದರು. ಕತ್ತಿಯೇಟಿನಿಂದ ಭುಜಕ್ಕೂ,ಗುಂಡಿನೇಟಿನಿಂದ ಗೂ ತೀವ್ರ ಸ್ವರೂಪದ ಗಾಯಗಳಾದುದರಿಂದ ಮೌಲಾನಾರ ಬಲಗೈ ಸ್ವಾಧೀನ ಕಳಕೊಂಡಿತು. ತೀವ್ರ ಅನಾರೋಗ್ಯದ ಕಾರಣ  ಮುಂದಿಟ್ಟು ಮೌಲಾನಾ ಬಿಡುಗಡೆಗಾಗಿ ಪತ್ರ ಬರೆದರು. ಆದರೆ ಮೌಲಾನಾ ಕ್ಷಮೆಯಾಚಿಸಲಿಲ್ಲ. 30 ವರ್ಷಗಳ ಕಾಲ ಕಠಿಣಾತಿ ಕಠಿಣ ಅಂಡಮಾನ್ ಜೈಲಿನಲ್ಲಿ ಕಳೆದ  ಆ ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧ ಅಂಡಮಾನ್ ಜೈಲಿನ ಕತ್ತಲೆ ಕೋಣೆಯಲ್ಲೇ ಹುತಾತ್ಮರಾದರು.. ದೇಶ ವಿಮೋಚನೆಗಾಗಿ ಹೋರಾಡಿದ್ದಕ್ಕಾಗಿ ತನ್ನ ಬದುಕಿನ ಅರ್ಧ ಭಾಗವನ್ನು ಅವರು ಸೆರೆಮನೆಯಲ್ಲೇ ಕಳೆಯಬೇಕಾಗಿ ಬಂದಿತ್ತು.   ಎರಡು ವರ್ಷಗಳ ಹಿಂದೆ ಹೈದರಾಬಾದ್‌ಗೆ ಭೇಟಿ ನೀಡಿದ್ದಾಗ ಮಕ್ಕಾ ಮಸ್ಜಿದ್‌ನಲ್ಲಿ ಲುಹ್ರ್ ( ಮಧ್ಯಾಹ್ನದ) ನಮಾಝ್ ನಿರ್ವಹಿಸಿದ್ದೆ… ಆ ಮಸೀದಿಯ ಪರಿಸರ, ವುಝಾ ( ಅಂಗಸ್ನಾನದ) ಕೊಳ ಅಲ್ಲೆಲ್ಲಾ ತಿರುಗಾಡುತ್ತಿದ್ದಾಗ ಮನದ ತುಂಬಾ ಆ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧ ಅಲ್ಲೆಲ್ಲಾ ನಡೆದಾಡಿರಬಹುದಲ್ವಾ ಎಂದು ಅಲ್ಲಲ್ಲಿ ಕೂತು ಆತ್ಮಾನುಭೂತಿ ಪಡೆದುಕೊಂಡಿದ್ದೆ.. ಆ ಸ್ವಾತಂತ್ರ್ಯ ಯೋಧ ನಮಾಝಿಗೆ ನೇತೃತ್ವ ನೀಡುತ್ತಿದ್ದ ಮಸೀದಿಗೂ ಬಾಂಬ್ ದಾಳಿ ಮಾಡಿದ ಭಯೋತ್ಪಾದಕರು ಇಂದು ಆ ಕ್ರಾಂತಿಕಾರಿಯ ಸಮುದಾಯದೊಂದಿಗೆ ದೇಶಪ್ರೇಮದ ಸರ್ಟಿಫಿಕೇಟ್ ಕೇಳುತ್ತಿರುವುದು ವರ್ತಮಾನದ ಕ್ರೂರ ವ್ಯಂಗ್ಯವಲ್ಲದೇ ಇನ್ನೇನು…?  

ಇಸ್ಮತ್_ಪಜೀರ್
ಸಾಮಾಜಿಕ ಕಾರ್ಯಕರ್ತರು ಮತ್ತು ಲೇಖಕರು.                                            

Related Articles

ಇತ್ತೀಚಿನ ಸುದ್ದಿಗಳು