Tuesday, July 2, 2024

ಸತ್ಯ | ನ್ಯಾಯ |ಧರ್ಮ

ಮೊಟ್ಟೆ ಎಸೆತ: ಸಿದ್ಧರಾಮಯ್ಯ ಹತ್ಯೆ ಸಂಚಿನ ತಾಲೀಮು ಇರಬಹುದೇ?

ಕೊಡಗು ಜಿಲ್ಲೆಯಲ್ಲಿ ಆದ ಮೊಟ್ಟೆ ಎಸೆದ ಘಟನೆ ಬಗ್ಗೆ ಸಿದ್ದರಾಮಯ್ಯರ ಕಡೆಯಿಂದ ವಿರೋಧದ ಸಂದೇಶ ಹೊರಬರುವ ವರೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಡೆಯಿಂದ ಯಾವುದೇ ಖಂಡನೆಯ ಸಂದೇಶ ಬಂದಿರಲಿಲ್ಲ. ನಂತರ ತಕ್ಷಣವೇ ಬಸವರಾಜ ಬೊಮ್ಮಾಯಿಯವರು ಕಾಟಾಚಾರಕ್ಕೆಂಬಂತೆ ಆ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ನಿಜಕ್ಕೂ ಆಘಾತಕಾರಿ. ಎಸೆದದ್ದು ಮೊಟ್ಟೆಯಾಗಿರಬಹುದು, ಮೊಟ್ಟೆಯ ಬದಲು ಇನ್ನೇನನ್ನಾದರೂ ಎಸೆದಿದ್ದರೆ? ಮಾಜಿ ಮುಖ್ಯಮಂತ್ರಿಗೆ ಸರಿಯಾದ ರಕ್ಷಣೆಯಿಲ್ಲದೆ ಹೋದರೆ ಜನಸಾಮಾನ್ಯರ ಪಾಡೇನು? ಮೊಟ್ಟೆ ಎಸೆತ ಸಿದ್ಧರಾಮಯ್ಯ ಹತ್ಯೆ ಸಂಚಿನ ತಾಲೀಮು ಇರಬಹುದೇ ಎಂಬೆಲ್ಲ ಅನುಮಾನಗಳು ಈಗ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಕೂಡಾ RSS ನ್ನು ಸೈದ್ಧಾಂತಿಕವಾಗಿ ನೇರವಾಗಿ ಟೀಕಿಸುತ್ತಿರುವುದು ಎದ್ದುಕಾಣುತ್ತಿದೆ. ಸಿದ್ಧರಾಮಯ್ಯ ಹೊರತಾಗಿ ಮತ್ತೆ ಯಾವ ರಾಜಕೀಯ ನಾಯಕರೂ ಸಂಘ ಪರಿವಾರವನ್ನು ಎದುರು ಹಾಕಿಕೊಂಡಿಲ್ಲ. ಇಡೀ ದಕ್ಷಿಣ ಭಾರತದಲ್ಲೇ ಬಿಜೆಪಿ ಮೊದಲ ಬಾರಿಗೆ ತಳವೂರಲು ಜಾಗ ಸಿಕ್ಕಿದ್ದು ಕರ್ನಾಟಕದಲ್ಲಿ. ಸದ್ಯಕ್ಕೆ ಎದ್ದಿರುವ ಬಿಜೆಪಿ ವಿರೋಧಿ ಅಲೆ ಮತ್ತು ಸಿದ್ದರಾಮಯ್ಯ ಪರವಾದ (ಸಿದ್ದರಾಮಯ್ಯ ಹುಟ್ಟಿದ ದಿನಕ್ಕೆ ಸೇರಿದ ಜನಸ್ತೋಮ) ಅಲೆ ಬಿಜೆಪಿ ಮಾತ್ರವಲ್ಲ, ಸಂಘಪರಿವಾರದ ನಿದ್ದೆಗೆಡಿಸಿದೆ. ಹೀಗಾಗಿ ಸಿದ್ಧರಾಮಯ್ಯ ಅವರನ್ನು ಸುಮ್ಮನಾಗಿಸುವುದೇ ಅವರಿಗೆ ದೊಡ್ಡ ತಲೆನೋವಾಗಿದೆ.

ಸೈದ್ಧಾಂತಿಕ ದ್ವೇಷದ ಆಧಾರದಲ್ಲಿ ಕರ್ನಾಟಕದಲ್ಲಿ ಕೊಲೆಗಳ ಸರಪಳಿ ನಡೆಯುತ್ತಾ ಇರುವುದನ್ನು ನಾವು ಗಮನಿಸಬಹುದು. ಹಿರಿಯ ಸಂಶೋಧಕ ಎಂ.ಎಂ.ಕಲ್ಬುರ್ಗಿಯವರನ್ನು ಸನಾತನ ಸಂಸ್ಥೆಯ ಭಯೋತ್ಪಾದಕರು ಗುಂಡಿಟ್ಟು ಸಾಯಿಸಿದರು. ಅದೇ ಸನಾತನ ಭಯೋತ್ಪಾದಕರು ಪತ್ರಕರ್ತೆ ಗೌರಿ ಲಂಕೇಶ್‌ ಅವರನ್ನು ಗುಂಡಿಟ್ಟು ಕೊಂದರು. ಇದೇ ರೀತಿ ಸಾಹಿತಿ ಕೆ.ಎಸ್.ಭಗವಾನ್‌ ಅವರನ್ನು ಸಾಯಿಸುವ ಸಂಚು ವಿಫಲವಾಯಿತು. ಈ ಹತ್ಯಾ ಸರಪಳಿ ಮುಂದುವರೆದಂತೆ ಪ್ರಗತಿಪರ ಚಿಂತಕರು, ರಾಜಕಾರಣಿಗಳು ಸನಾತನದಂಥ ಭಯೋತ್ಪಾದಕರ ಸಂಘಟನೆಗಳ ಟಾರ್ಗೆಟ್‌ ಆಗಿದ್ದಾರೆ.

ಮೋದಿ ಪ್ರಧಾನಿಯಾಗಿ ಆಯ್ಕೆ ಆದ ನಂತರದ ಬೆಳವಣಿಗೆಯಲ್ಲಿ ಈ ದೇಶದ ವಿಚಾರವಾದಿಗಳನ್ನು, ಮಹಾನ್ ಚಿಂತಕರನ್ನು, ಬಲಪಂಥೀಯ ವಿರೋಧಿಗಳನ್ನು ನಾನಾ ರೀತಿಯಲ್ಲಿ ಕಟ್ಟಿ ಹಾಕುವ ವ್ಯವಸ್ಥೆಯ ಹಿಂದೆ ಕೂಡಾ ಕೆಲವು ಸ್ಥಾಪಿತ ಶಕ್ತಿಗಳ ಕೈವಾಡ ಇರುವುದು ಹೊಸ ವಿಷಯವೇನಲ್ಲ. ಒಕ್ಕೂಟ ತನ್ನ ಸಿದ್ಧಾಂತಕ್ಕೆ ವಿರುದ್ಧವಾಗಿರುವವರನ್ನು ವಿವಿಧ ಸರ್ಕಾರಿ ಏಜೆನ್ಸಿಗಳನ್ನು ಬಳಸಿಕೊಂಡು ವರ್ಷಗಟ್ಟಲೆ ಜೈಲಿಗೆ ತಳ್ಳುತ್ತಿದೆ. ಜೊತೆಜೊತೆಗೆ ಕೆಲವು ಹಿಂದುತ್ವವಾದಿ ಸಂಘಟನೆಗಳು ಹಿಂಸೆಗೆ ಇಳಿದಿದ್ದು, ರಾಜಕೀಯ ವಿರೋಧಿಗಳನ್ನು ಮುಗಿಸಿಬಿಡುವ ಕಾರ್ಯದಲ್ಲಿ ನಿರತವಾಗಿವೆ. ನೆರೆಯ ಮಹಾರಾಷ್ಟ್ರದಲ್ಲಿ ನಡೆದ ವಿಚಾರವಾದಿಗಳಾದ ದಾಬೋಲ್ಕರ್‌, ಪನ್ಸಾರೆ ಕೊಲೆ ಪ್ರಕರಣಗಳು ಇದಕ್ಕೆ ಉದಾಹರಣೆ.

ಆಘಾತಕಾರಿ ವಿಷಯವೇನೆಂದರೆ ಹಿಂದುತ್ವವಾದಿ ಸಂಘಟನೆಗಳು ಯಾವ ಕಾನೂನಿನ ಭಯವೂ ಇಲ್ಲದಂತೆ ದೇಶದ ನಾನಾ ಕಡೆಗಳಲ್ಲಿ ಶಸ್ತ್ರಾಭ್ಯಾಸ, ಫೈರಿಂಗ್ ಕ್ಯಾಂಪ್ ಆಯೋಜಿಸುತ್ತಿದೆ. ಹಬ್ಬಗಳ ಆಚರಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ತ್ರಿಶೂಲ ವಿತರಣೆ ಮಾಡಿದೆ. ‘ಪರಿವಾರ’ ನಾನಾ ರೀತಿಯಲ್ಲಿ ಇದನ್ನು ಸಮರ್ಥಿಸಿದರೂ ಇದರ ದುರುಪಯೋಗವೇ ಎಲ್ಲೆಡೆ ಹೆಚ್ಚಾಗಿ ನಡೆಯುತ್ತಿರೋದು ಸ್ಪಷ್ಟ.

ಸಧ್ಯ ಭದ್ರತೆಯ ಲೋಪದ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಮುಂದೆ ಬಿಟ್ಟು ಪರಿಸ್ಥಿತಿ ಏನಾಗಬಹುದು ಎಂದು ಕೆಲವು ದುಷ್ಟಶಕ್ತಿಗಳು ದೂರದಿಂದಲೇ ನೋಡುತ್ತಿರುವಂತಿದೆ. ಇದೇ ಮಾದರಿ ಮುಂದುವರಿದರೆ ಮುಂದೆ ಬಾಂಬ್ ದಾಳಿಯೋ, ಆಸಿಡ್ ದಾಳಿಯೋ ಅಥವಾ ಇನ್ನಾವುದೇ ಹತ್ಯೆ ಮಾದರಿ ಉಪಯೋಗಿಸುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.

ಸಂವಿಧಾನ ದತ್ತವಾಗಿ ಮುಖ್ಯಮಂತ್ರಿಗಳಿಗೆ ಎಷ್ಟು ರಕ್ಷಣೆ ನೀಡಬೇಕಾಗಿತ್ತೋ ಅಷ್ಟೇ ರಕ್ಷಣೆಯನ್ನು ವಿರೋಧ ಪಕ್ಷದ ನಾಯಕರಿಗೆ ಸರ್ಕಾರ ನೀಡಬೇಕು. ಆದರೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಕ್ಷಣೆ ನೀಡದೆ ಕರ್ತವ್ಯಲೋಪ ಎಸಗಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸುತ್ತಿದ್ದಾರೆ. ಸರ್ಕಾರ ಗಂಭೀರವಾಗಿ ಕಾರ್ಯೋನ್ಮುಖವಾಗಿ ಇಂಥ ಗೂಂಡಾಗಿರಿಯನ್ನು ತಡೆಯಬೇಕು. ಮೊಟ್ಟೆ ಎಸೆದ ಗೂಂಡಾಗಳು ಸರ್ಕಾರದ ಸಮರ್ಥಕರೇ ಆಗಿರುವುದರಿಂದ ಸರ್ಕಾರವೇ ಘಟನೆಯ ಹೊಣೆ ಹೊರಬೇಕಾಗುತ್ತದೆ.

ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.

ಪ್ರಗತ್‌ ಕೆ.ಆರ್
ಸಾಮಾಜಿಕ ಹೋರಾಟಗಾರರು

Related Articles

ಇತ್ತೀಚಿನ ಸುದ್ದಿಗಳು