ಫೆಬ್ರವರಿ 10 ಕ್ಕೆ ಪೃಥ್ವಿ ಅಂಬರ್ – ಮಿಲನ ನಾಗರಾಜ್ ಅಭಿನಯದ “F0R REGN” ಚಿತ್ರ ಬಿಡುಗಡೆ
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು: ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ನಾಯಕ – ನಾಯಕಿಯಾಗಿ ನಟಿಸಿರುವ “F0R REGN”. (ಫಾರ್ ರಿಜಿಸ್ಟರೇಷನ್) ಚಿತ್ರ 2023 ರ ಫೆಬ್ರವರಿ 10ರಂದು ಬಿಡುಗಡೆಯಾಗಲಿದೆ.
ಕರ್ನಾಟಕ ರಾಜ್ಯೋತ್ಸವದ ಶುಭದಿನದಂದು ಚಿತ್ರದ ಬಿಡುಗಡೆ ದಿನಾಂಕ ಹಾಗೂ ಫಸ್ಟ್ ಲುಕ್ ಅನಾವರಣಗೊಂಡಿದೆ. ನಿರ್ಮಾಪಕ ನವೀನ್ ರಾವ್ ಹಾಗೂ ನಿರ್ದೇಶಕ ನವೀನ್ ದ್ವಾರಕನಾಥ್ ಅವರ ಪೋಷಕರು ಫಸ್ಟ್ ಲುಕ್ ಹಾಗೂ ಬಿಡುಗಡೆ ದಿನಾಂಕವನ್ನು ಅನಾವರಣಗೊಳಿಸಿದರು.
ಈ ವೇಳೆ ನಿರ್ದೇಶಕ ನವೀನ್ ದ್ವಾರಕನಾಥ್ ಮಾತನಾಡಿ, ನಾನು ಹಾಗೂ ನಿರ್ಮಾಪಕ ನವೀನ್ ರಾವ್ ಸಹಪಾಠಿಗಳು. ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದಾಗ, ನನಗೆ ಒಂದು ದಿನ ನನ್ನ ಸ್ನೇಹಿತ ನವೀನ್ ರಾವ್ ಈ ಚಿತ್ರವನ್ನು ನಿರ್ದೇಶಿಸಲು ಪ್ರೇರೇಪಿಸಿದರು. ನಂತರ ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ನಾಯಕ – ನಾಯಕಿ ಅಂತ ನಿರ್ಧರಿಸಲಾಯಿತು. ಆಗ ಅವರಿಬ್ಬರ ” ದಿಯಾ” ಹಾಗೂ “ಲವ್ ಮಾಕ್ಟೇಲ್” ಸಿನಿಮಾಗಳು ಯಶಸ್ವಿಯಾಗಿದ್ದವು. ಹೀಗೆ ಚಿತ್ರ ಆರಂಭವಾಗಿ ಈಗ ಬಿಡುಗಡೆ ಹಂತಕ್ಕೆ ತಲುಪಿದೆ. ಫೆಬ್ರವರಿ ಹತ್ತರಂದು ಚಿತ್ರ ಬಿಡುಗಡೆಯಾಗುತ್ತಿದೆ. ಹೀಗಾಗಿ ಎಲ್ಲರ ಪ್ರೋತ್ಸಾಹವಿರಲಿ ಎಂದರು.
ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದಾಗ ನನಗೆ ಅನಿಸಿದ್ದು, ನಿರ್ಮಾಪಕ ಹಣ ಒದಗಿಸಿಕೊಡತ್ತಾರೆ. ಆದರೆ ಇಡೀ ತಂಡ ಚಿತ್ರಕ್ಕಾಗಿ ಎಷ್ಟು ಕಷ್ಟ ಪಡುತ್ತದೆ. ಅವರೆಲ್ಲರ ಶ್ರಮದಿಂದ ಉತ್ತಮ ಚಿತ್ರವೊಂದು ನಿರ್ಮಾಣವಾಗಿದೆ. ನೋಡಿ ಹಾರೈಸಿ ಎಂದರು ನಿರ್ಮಾಪಕ ನವೀನ್ ರಾವ್.
ನಾಯಕ ಪೃಥ್ವಿ ಅಂಬರ್ ಮಾತನಾಡಿ, ನಾನು ತುಳು ಸಿನಿಮಾ ಒಂದನ್ನು ಆಗಷ್ಟೇ ಮುಗಿಸಿದೆ. ಮಂಗಳೂರಿನಲ್ಲಿ ನಿರ್ದೇಶಕರು ಈ ಚಿತ್ರದ ಕಥೆ ಹೇಳಿದರು. ಇಷ್ಟವಾಯಿತು. ಎಲ್ಲದ್ದಕ್ಕೂ ರಿಜಿಸ್ಟ್ರೇಷನ್ ಕಡ್ಡಾಯ. ನಾವು ಪ್ರೀತಿಗೂ ರಿಜಿಸ್ಟ್ರೇಷನ್ ಕಡ್ಡಾಯವಾದರೆ ಹೇಗೆ ಎಂಬುದನ್ನು ತೋರಿಸಿದ್ದೇವೆ ಎಂದು ಹೇಳಿದರು.
ಒಳ್ಳೆಯ ತಂಡದೊಂದಿಗೆ ಒಳ್ಳೆಯ ಚಿತ್ರ ಮಾಡಿದ್ದು ಖುಷಿಯಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಫೆಬ್ರವರಿ ತಿಂಗಳು ನನಗೆ ಲಕ್ಕಿ. ಈ ಚಿತ್ರ ಕೂಡ ಅದೇ ತಿಂಗಳಲ್ಲಿ ತೆರೆಗೆ ಬರುತ್ತಿರುವುದು ಮತ್ತಷ್ಟು ಖುಷಿಯಾಗಿದೆ ಎಂದರು ನಾಯಕಿ ಮಿಲನ ನಾಗರಾಜ್.
ಪೃಥ್ವಿ ಅಂಬರ್, ಮಿಲನ ನಾಗರಾಜ್, ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಹರೀಶ್ ಹಾಗೂ ಕಾರ್ಯಕಾರಿ ನಿರ್ಮಾಪಕ ನಿರಂಜನ್ ಉಪಸ್ಥಿತರಿದ್ದರು.
Peepal Media Desk
Peepal Media · ಸಿನಿಮಾ ವಿಭಾಗ