Home ರಾಜ್ಯ ಕಲ್ಬುರ್ಗಿ ಘತ್ತರಗಾ ಹಾಗೂ ಗಾಣಗಾಪೂರ ಸೇತುವೆ ಮಟ್ಟ ಮೀರಿ ಹರಿಯುತ್ತಿರುವ ನೀರು: ಸಂಚಾರ ನಿಷೇಧ

ಘತ್ತರಗಾ ಹಾಗೂ ಗಾಣಗಾಪೂರ ಸೇತುವೆ ಮಟ್ಟ ಮೀರಿ ಹರಿಯುತ್ತಿರುವ ನೀರು: ಸಂಚಾರ ನಿಷೇಧ

0

ಕಲಬುರಗಿ,ಆ.8(ಕ.ವಾ) ಮಹಾರಾಷ್ಟ್ರದ ಉಜ್ಜನಿ ಮತ್ತು ವೀರ್ ಜಲಾಶಯದಿಂದ ಸೋಮವಾರ (ಜು.5 ರಂದು) ಭೀಮಾ ನದಿಗೆ ಹರಿಬಿಡಲಾದ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಕ್ಯುಸೆಕ್ಸ್ ನೀರು ಬುಧವಾರ ತಡರಾತ್ರಿ ಅಫಜಲಪೂರ ತಾಲೂಕಿನ ಸೊನ್ನ ಬ್ರಿಡ್ಜ್ ಮೂಲಕ ಜಿಲ್ಲೆಯ ಭೀಮಾ ನದಿಗೆ ಪ್ರವೇಶಿಸಿದ ಕಾರಣ ಅಫಜಲಪೂರ ತಾಲೂಕಿನ ಘತ್ತರಗಾ ಹಾಗೂ ಗಾಣಗಾಪೂರ ಸೇತುವೆ ಮೇಲೆಯೂ ನೀರು ಬಂದಿರುವುದರಿಂದ ಮುನ್ನೆಚ್ಚರಿಕೆಯಾಗಿ ಗುರುವಾರ ಮತ್ತು ಶುಕ್ರವಾರ ಸೇತುವೆ ಮೇಲಿನ ಸಂಚಾರ ನಿರ್ಬಂಧಿಸಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಅಫಜಲಪೂರ ತಾಲೂಕಿನ ಘತ್ತರಗಾ-ಜೇರಟಗಿ ಮತ್ತು ಗಾಣಗಾಪುರ-ಇಟಗಾ ಸಂಪರ್ಕ ಕಲ್ಪಿಸುವ ಈ ಎರಡು ಸೇತುವೆ ಬಳಿ ಪೊಲೀಸ್ ಸಿಬ್ಬಂದಿ ಠಿಕಾಣಿ ಹೂಡಿದ್ದು, ತಡರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದಂತೆ ಮುಂಜಾಗ್ರತೆಯ ಕ್ರಮವಾಗಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಸಂಚಾರ ಬಂದ್ ಮಾಡಿದ್ದಾರೆ. ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಡಿ.ಸಿ. ಅವರು ಮನವಿ ಮಾಡಿದ್ದಾರೆ.

ಗ್ರಾಮಗಳಿಗೆ ಭೇಟಿ ನೀಡಲು ಡಿ.ಸಿ. ಸೂಚನೆ: ಭೀಮಾ ನದಿಗೆ ತಡರಾತ್ರಿ ಅಪಾರ ನೀರು ಬಂದು ರಸ್ತೆ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಗ್ರಾಮಗಳಲ್ಕಿ ರಕ್ಷಣಾ ಕಾರ್ಯಚರಣೆ ಮತ್ತು ಕಾಳಜಿ ಕೇಂದ್ರ ತೆರೆಯಲು ಮೇಲುಸ್ತುವಾರಿಗೆ ನೇಮಿಸಿದ ಅಫಜಲಪೂರ, ಕಲಬುರಗಿ ಹಾಗೂ ಜೇವರ್ಗಿ ತಂಡದ ನೋಡಲ್ ಅಧಿಕಾರಿಗಳು ಎಚ್ಚರದಿಂದಿರಲು ಮತ್ತು ಕೂಡಲೆ ಪ್ರವಾಹಕ್ಕೆ ತುತ್ತಾದ ಗ್ರಾಮಗಳಿಗೆ ಭೇಟಿ ನೀಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಅಲ್ಲದೆ ತಾಲೂಕಿನ ತಹಶೀಲ್ದಾರರು, ತಾಲೂಕಾ ಪಂಚಾಯತ್ ಇ.ಓ ಹಾಗೂ ಪೊಲೀಸ್ ಇಲಾಖೆಯು ನೋಡಲ್ ಅಧಿಕಾರಿಗಳೊಂದಿಗೆ ಸತತ ಸಂಪರ್ಕ ಸಾಧಿಸಿ ಪ್ರವಾಹದಿಂದ ಯಾವುದೇ ಜನ, ಜಾನುವಾರ ಜೀವ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಡಿ.ಸಿ. ಅವರು ತಿಳಿಸಿದ್ದಾರೆ.

You cannot copy content of this page

Exit mobile version