Friday, July 26, 2024

ಸತ್ಯ | ನ್ಯಾಯ |ಧರ್ಮ

ಮುಡಾ ನಿವೇಶನ ಪ್ರಕರಣ l ನನ್ನ ಪತ್ನಿಗೆ ಬದಲಿ ನಿವೇಶನ ಹಂಚಿಕೆಯಾಗಿರುವುದರಲ್ಲಿ ಯಾವ ಅಕ್ರಮವೂ ನಡೆದಿಲ್ಲ: ಸಿಎಂ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ತಮ್ಮ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಿರುವುದರಲ್ಲಿ ಯಾವ ಅಕ್ರಮವೂ ನಡೆದಿಲ್ಲ. ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ತಮ್ಮ ಪಾತ್ರವೂ ಇಲ್ಲವೇ ಇಲ್ಲ ಎಂದುಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರಎರಡೂವರೆ ಗಂಟೆ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ ನನ್ನ ಪತ್ನಿ ಪಾರ್ವತಿ ಹೆಸರಿನಲ್ಲಿದ್ದ 3 ಎಕರೆ 16 ಗುಂಟೆ ಜಮೀನನ್ನು ಮುಡಾ ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಿಸಿತ್ತು. ಅದಕ್ಕೆ ಪರಿಹಾರವಾಗಿ ಬದಲಿ ನಿವೇಶನ ಹಂಚಿಕೆ ಮಾಡಿದೆ. ಇದರಲ್ಲಿ ಅಕ್ರಮ ಏನಿದೆ? ನೀವೇ ಹೇಳಿ” ಎಂದರು.

ಪರಿಶಿಷ್ಟ ಜಾತಿಯ ಜವರ ಎಂಬುವವರು 1935ರಲ್ಲಿ ಸರ್ಕಾರಿ ಹರಾಜಿನಲ್ಲಿ ಸದರಿ ಜಮೀನನ್ನು ಖರೀದಿಸಿದ್ದರು. ಅವರಿಗೆ ಮೂರು ಜನ ಮಕ್ಕಳಿದ್ದರು. ಜವರ ಮೃತರಾದ ಬಳಿಕ ಕುಟುಂಬದ ಇತರ ಸದಸ್ಯರ ಒಪ್ಪಿಗೆ ಮೇರೆಗೆ ದೇವರಾಜು ಎಂಬ ಮಗನಿಗೆ ಜಮೀನಿನ ಖಾತೆ ವರ್ಗಾವಣೆ ಆಗಿತ್ತು. ಅವರಿಂದ ನನ್ನ ಪತ್ನಿಯ ಅಣ್ಣ ಮಲ್ಲಿಕಾರ್ಜುನಸ್ವಾಮಿ ಖರೀದಿಸಿದ್ದರು. ಇದು ಹರಾಜಿನಲ್ಲಿ ಖರೀದಿಸಿದ ಜಮೀನು ಆಗಿರುವುದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಜಮೀನು ಖರೀದಿ ನಿಷೇಧ (ಪಿಟಿಸಿಎಲ್) ಕಾಯ್ದೆ ಅನ್ವಯ ಬರುವುದಿಲ್ಲ ಎಂದರು.

ಸಂಬಂಧಿಸಿದ ದಾಖಲೆ ಪ್ರದರ್ಶಿಸುತ್ತಾ ಮಾತನಾಡಿದ ಸಿಎಂ, ಕೆಸರೆ ಗ್ರಾಮದ 3 ಎಕರೆ 16 ಗುಂಟೆ ಜಮೀನಿನ ಸ್ವಾಧೀನಕ್ಕೆ ಮುಡಾ 1992ರಲ್ಲಿ ಪ್ರಾಥಮಿಕ ಅಧಿಸೂಚನೆ ಮತ್ತು 1997ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಜಮೀನು ಮಾಲೀಕರ ಮನವಿಯಂತೆ ಸದರಿ‌ ಜಮೀನನ್ನು ಡಿನೋಟಿಫೈ ಮಾಡಿ 1997ರಲ್ಲಿ ಆದೇಶ ಹೊರಡಿಸಲಾಗಿತ್ತು ಎಂದರು.

2005ರಲ್ಲಿ ಈ‌ ಜಮೀನು ಖರೀದಿಸಿದ್ದ ಮಲ್ಲಿಕಾರ್ಜುನ ಸ್ವಾಮಿ, ಭೂ ಪರಿವರ್ತನೆಯನ್ನೂ ಮಾಡಿಸಿದ್ದರು. 2006ರಲ್ಲಿ ತಮ್ಮ ಪತ್ನಿ ಪಾರ್ವತಿ ಅವರಿಗೆ ದಾನಪತ್ರ ಮಾಡಿಕೊಟ್ಟಿದ್ದರು ಎಂದರು.

ಪತ್ನಿ ಚರ್ಚಿಸಲು ಬಂದಾಗ ನಿರಾಕರಿಸಿದ್ದೆ: ಆ ಜಮೀನನ್ನು ಮುಡಾ ಒತ್ತುವರಿ ಮಾಡಿರುವುದು 2013ರಲ್ಲಿ ನಮ್ಮ ಕುಟುಂಬಕ್ಕೆ ಗೊತ್ತಾಯಿತು. ಬಳಿಕ ಬದಲಿ ಜಮೀನು ಕೊಡುವಂತೆ ಪಾರ್ವತಿ ಮುಡಾಕ್ಕೆ ಅರ್ಜಿ ಸಲ್ಲಿಸಿದ್ದರು‌. 2014 ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಬದಲಿ ನಿವೇಶನ ಕೋರಿರುವ ವಿಷಯವನ್ನು ಪತ್ನಿ ತಿಳಿಸಿದ್ದರು. ಮುಖ್ಯಮಂತ್ರಿ ಹುದ್ದೆಯಲ್ಲಿದ್ದು ಆ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದಿದ್ದೆ. ಸದರಿ ಕಡತದ ಬಗ್ಗೆ ನನ್ನ ಬಳಿ ಚರ್ಚಿಸದಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದೆ’ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದರು.

‘ಬದಲಿ ನಿವೇಶನ ಹಂಚಿಕೆ ಮಾಡಿರುವುದು ಬಿಜೆಪಿ ಆಡಳಿತದ ಅವಧಿಯಲ್ಲಿ. ಬಿಜೆಪಿ ಶಾಸಕರಾಗಿದ್ದ ಎಸ್.ಎ. ರಾಮದಾಸ್, ನಾಗೇಂದ್ರ, ಜೆಡಿಎಸ್ ಶಾಸಕರಾಗಿದ್ದ ಜಿ.ಟಿ. ದೇವೇಗೌಡ ಉಪಸ್ಥಿತರಿದ್ದ ಮುಡಾ ಆಡಳಿತ ಮಂಡಳಿ ಸಭೆಯಲ್ಲಿ ನಿವೇಶನ ಹಂಚಿಕೆ ನಿರ್ಣಯ ಕೈಗೊಳ್ಳಲಾಗಿದೆ. ಇದರಲ್ಲಿ ಕಾಂಗ್ರೆಸ್ಸಿನ ಪಾತ್ರವಿಲ್ಲ. 2023ರ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಹತಾಶರಾಗಿದ್ದಾರೆ. ಆ ಕಾರಣದಿಂದ ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

Related Articles

ಇತ್ತೀಚಿನ ಸುದ್ದಿಗಳು