ಮುಲ್ಕಿ: ಇಲ್ಲಿನ ಪಕ್ಷಿಕೆರೆ ಎನ್ನುವಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುತ್ತಿರುವಾಗ ಅದನ್ನು ಕದ್ದು ರೆಕಾರ್ಡ್ ಮಾಡುತ್ತಿದ್ದ ಯುವಕನೊಬ್ಬನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಯುವಕ ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಸದಸ್ಯ ಎನ್ನಲಾಗಿದ್ದು, ಬಂಧಿತನನ್ನು ಪಕ್ಷಿಕೆರೆ ಹೊಸಕಾಡು ನಿವಾಸಿ ಸುಮಂತ ಪೂಜಾರಿ ಎಂದು ಗುರುತಿಸಲಾಗಿದೆ.
ಆರೋಪಿ ಸುಮಂತ್ ತನ್ನ ನೆರೆ ಮನೆಯ ಬಚ್ಚಲು ಕೋಣೆಯಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುವುದನ್ನು ವೀಡಿಯೊ ಮಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಮೊಬೈಲ್ ಕ್ಯಾಮರಾ ಗಮನಿಸಿದ ಮಹಿಳೆ ಕಿರುಚಾಡಿದ್ದು ಈ ವೇಳೆ ನೆರೆಮನೆಯವರು ಸುಮಂತ್ ನನ್ನು ಹಿಡಿದು ಥಳಿಸಿದ್ದಾರೆ ಎನ್ನಲಾಗಿದೆ. ಬಳಿಕ ಮುಲ್ಕಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಹಿಳೆ ಸ್ನಾನ ಮಾಡುವ ವೀಡಿಯೊ ಮಾಡಿದ್ದ ಮೊಬೈಲ್ ಸಹಿತ ಆತನನ್ನು ವಶಕ್ಕೆ ಪಡೆದು ಠಾಣೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳೀಯ ಸಂಘ ಪರಿವಾರದ ನಾಯಕರ ಮಾತುಗಳಿಗೆ ಮಣಿದು ಪೊಲೀಸರು ಜಾಮೀನು ನೀಡಬಹುದಾದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಿಡುಗಡೆ ಮಾಡಲಾಗಿದೆಯೆಂದು ವರದಿಯಾಗಿದೆ.
ಯುವಕನ ಮಾವ ಐವತ್ತು ಸಾವಿರ ರೂಪಾಯಿಗಳ ಬಾಂಡ್ ನೀಡಿದ ನಂತರ ಬಿಡುಗಡೆ ಮಾಡಲಾಗಿದೆಯೆಂದೂ ಹೇಳಲಾಗುತ್ತಿದೆ. ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಾಗಿದೆ.
ಇತ್ತೀಚೆಗಷ್ಟೇ ಉಡುಪಿಯ ಟಾಯ್ಲೆಟ್ಟಿನಲ್ಲಿ ಮೊಬೈಲ್ ಇಟ್ಟು ರೆಕಾರ್ಡ್ ಮಾಡಿದ್ದಾರೆಂದು ಕರಾವಳಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಲಪಂಥೀಯ ಸಂಘಟನೆಯ ನಾಯಕರು ಈ ಕುರಿತು ಇನ್ನೂ ಪ್ರತಿಕ್ರಿಯೆ ನೀಡಿಲ್ಲ.