ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಸಂದೇಶ: ಜೆಮ್‌ಶೆಡ್‌ಪುರದ ತರಕಾರಿ ವ್ಯಾಪಾರಿಯನ್ನು ಬಂಧಿಸಿದ ಮುಂಬೈ ಪೊಲೀಸರು

ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಸಂದೇಶ ಕಳುಹಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಜೆಮ್‌ಶೆಡ್‌ಪುರದ ವ್ಯಕ್ತಿಯೊಬ್ಬನನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಆರೋಪಿಯನ್ನು ಶೇಖ್ ಹುಸೇನ್ ಶೇಖ್ ಮೌಸಿನ್ (24) ಎಂದು ಗುರುತಿಸಲಾಗಿದ್ದು, ಈತ ಜೆಮ್‌ಶೆಡ್‌ಪುರ ಮೂಲದ ತರಕಾರಿ ವ್ಯಾಪಾರಿ.

ಕಳೆದ ವಾರ ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ನಟನಿಂದ 5 ಕೋಟಿ ರೂಪಾಯಿ ಕೊಡಿಸಬೇಕೆಂದು ಬೆದರಿಕೆ ಸಂದೇಶ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ತನಿಖೆಯಲ್ಲಿ ಸಂದೇಶ ಜಾರ್ಖಂಡ್‌ ಮೂಲದ ಸಂಖ್ಯೆಯಿಂದ ಬಂದಿರುವುದನ್ನು ಪತ್ತೆಮಾಡಿದ್ದಾರೆ. ಇದೇ ಆಧಾರದಲ್ಲಿ ಆರೋಪಿಯನ್ನು ಬಂಧಿಸುವ ಸಲುವಾಗಿ ಅಧಿಕಾರಿಗಳ ತಂಡವನ್ನು ರಚಿಸಿ ಜಾರ್ಖಂಡ್‌ ಹಾಗೂ ಗುವಾಹಟಿಗೆ ಕಳುಹಿಸಲಾಗಿದೆ.

ಸಂದೇಶ ಕಳುಹಿಸಿದವರನ್ನು ಪತ್ತೆಹಚ್ಚಲು ಪೊಲೀಸರು ಡ್ರ್ಯಾಗ್‌ನೆಟ್ ಬಳಸಿ ಸಂದೇಶವನ್ನು ಕಳುಹಿಸಿದವನ ಪತ್ತೆಗಾಗಿ ಪ್ರಯತ್ನಿಸುತ್ತಿದ್ದಾಗಲೂ ಆರೋಪಿ ಅದೇ ಸಂಖ್ಯೆಯಿಂದ ಸಂದೇಶ ಕಳುಹಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಮನಾರ್ಹವಾಗಿ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್ ಖಾನ್‌‌ ಅವರಿಗೆ ಈ ಹಿಂದೆ ಕೊಲೆ ಬೆದರಿಕೆಗಳು ಬಂದಿದ್ದವು. ಗ್ಯಾಂಗ್‌ನ ಶಂಕಿತ ಸದಸ್ಯರು ಈ ವರ್ಷದ ಏಪ್ರಿಲ್‌ನಲ್ಲಿ ನಟನ ಬಾಂದ್ರಾ ಮನೆಯ ಹೊರಗೆ ಗುಂಡು ಹಾರಿಸಿದ್ದರು.

ಕೆಲವು ತಿಂಗಳ ಹಿಂದೆ, ನವಿ ಮುಂಬೈ ಪೊಲೀಸರು ಸಲ್ಮಾನ್‌ ಖಾನ್‌ ಅವರನ್ನು ಕೊಲ್ಲಲು ಬಿಷ್ಣೋಯ್ ಗ್ಯಾಂಗ್ ನಡೆಸಿದ ಸಂಚನ್ನು ಬಹಿರಂಗಪಡಿಸಿದ್ದರು, ಇದರ ನಂತರ ಈ ನಟನಿಗೆ ಭದ್ರತೆ ಹೆಚ್ಚಿಸಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು