ಮೊಹರಂ ಮೆರವಣಿಗೆಯಲ್ಲಿ 15,000 ಜನರಿಗೆ ವಿಷದ ಕ್ಯಾಪ್ಸೂಲ್‌ ಹಂಚಿದವ ಮುಸ್ಲಿಂ ಧರ್ಮವನ್ನು ತೊರೆದಿದ್ದ, ಭಾರತದ ಬಲಪಂಥೀಯರಿಗೆ ಸಂದರ್ಶನ ನೀಡಿದ್ದ: ವರದಿ

ಮುಂಬೈ: ಮುಂಬೈನ ಬೈಕುಲ್ಲಾ (Byculla) ಪ್ರದೇಶದಲ್ಲಿ ನಡೆಯುತ್ತಿದ್ದ ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ ಭಕ್ತರಿಗೆ ಇಮ್ಯುನಿಟಿ ಬೂಸ್ಟರ್ ಮತ್ತು ಪೇನ್‌ಕಿಲ್ಲರ್ ಎಂದು ಹೇಳಿ ಅತ್ಯಂತ ವಿಷಕಾರಿ ರಾಸಾಯನಿಕ ಹೊಂದಿದ್ದ ಕ್ಯಾಪ್ಸೂಲ್‌ಗಳನ್ನು ಹಂಚುತ್ತಿದ್ದ ಪುಣೆಯ ಫಯ್ಯಾಜ್ ಪ್ರೇಮ್‌ಜಿ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ರೇ ರೋಡ್‌ನ ರೆಹಮತಾಬಾದ್ ಸ್ಮಶಾನದ ಬಳಿ ಆಶೂರಾ ಮೆರವಣಿಗೆಗೆ ಭಾರಿ ಸಂಖ್ಯೆಯ ಜನ ಜಮಾಯಿಸಿದ್ದಾಗ ಈ ಘಟನೆ ನಡೆದಿದೆ.

ಆರೋಪಿ ನೀಡಿದ ಮಾತ್ರೆಗಳನ್ನು ಸೇವಿಸಿದ ತಕ್ಷಣವೇ ಭಕ್ತರಲ್ಲಿ ವಾಂತಿ ಮತ್ತು ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಸ್ವಯಂಸೇವಕರು ಹಾಗೂ ಭದ್ರತಾ ಸಿಬ್ಬಂದಿ ತಕ್ಷಣವೇ ಎಚ್ಚೆತ್ತುಕೊಂಡಿದ್ದಾರೆ. ಮಾತ್ರೆ ಸೇವಿಸಿ ಅಸ್ವಸ್ಥಗೊಂಡ ಕನಿಷ್ಠ 11 ಜನರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಮಹಿಳಾ ಸ್ವಯಂಸೇವಕರ ಸಮಯಪ್ರಜ್ಞೆಯಿಂದಾಗಿ ಈ ಭಾರಿ ದುರಂತ ತಪ್ಪಿದೆ.

ಪೊಲೀಸ್ ತನಿಖೆಯ ವೇಳೆ ಆರೋಪಿ ಹಂಚುತ್ತಿದ್ದ ಕ್ಯಾಪ್ಸೂಲ್‌ಗಳಲ್ಲಿ ‘ಜಿಂಕ್ ಫಾಸ್ಫೈಡ್’ (Zinc Phosphide) ಎಂಬ ಭೀಕರ ರಾಸಾಯನಿಕ ಇರುವುದು ಪತ್ತೆಯಾಗಿದೆ. ಇದನ್ನು ಸಾಮಾನ್ಯವಾಗಿ ಇಲಿಗಳನ್ನು ಕೊಲ್ಲುವ ಪಾಷಾಣವಾಗಿ ಬಳಸಲಾಗುತ್ತದೆ. ಇದು ಜಠರದಲ್ಲಿನ ಆಮ್ಲದೊಂದಿಗೆ ಸೇರಿ ಅತ್ಯಂತ ವಿಷಕಾರಿ ಗ್ಯಾಸ್ ಬಿಡುಗಡೆ ಮಾಡುವ ಮೂಲಕ ಲಿವರ್, ಕಿಡ್ನಿ ಮತ್ತು ಮೆದುಳಿಗೆ ಹಾನಿ ಮಾಡುತ್ತದೆ. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ತಂಗಿದ್ದ ಡೋಂಗ್ರಿಯ ಗೆಸ್ಟ್‌ಹೌಸ್‌ನಿಂದ ಬರೋಬ್ಬರಿ 14,900 ವಿಷಕಾರಿ ಕ್ಯಾಪ್ಸೂಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ವಿಚಾರಣೆಯ ವೇಳೆ ಬಿಬಿಎ (BBA) ಪದವೀಧರನಾಗಿರುವ ಆರೋಪಿ ಫಯ್ಯಾಜ್ ಪ್ರೇಮ್‌ಜಿ ಆಘಾತಕಾರಿ ಸತ್ಯಗಳನ್ನು ಒಪ್ಪಿಕೊಂಡಿದ್ದಾನೆ. ಎರಡು ವರ್ಷಗಳ ಹಿಂದೆ ಆತನ ಪತ್ನಿ ಆತನಿಂದ ದೂರಾಗಿದ್ದರಿಂದ ಇಡೀ ಜಗತ್ತೇ ತನ್ನ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ನಂಬಿದ್ದ ಆತ, “ಇಡೀ ವಿಶ್ವದ ಮೇಲೆ ಸೇಡು ತೀರಿಸಿಕೊಳ್ಳಲು ಕನಿಷ್ಠ 15,000 ಜನರನ್ನು ಕೊಲ್ಲಲು ಈ ಸಂಚು ರೂಪಿಸಿದ್ದೆ,” ಎಂದು ಹೇಳಿಕೆ ನೀಡಿದ್ದಾನೆ. ಇದಕ್ಕಾಗಿ ಆನ್‌ಲೈನ್ ಮೂಲಕ 50 ಕೆಜಿ ಜಿಂಕ್ ಫಾಸ್ಫೈಡ್ ಮತ್ತು 30,000 ಖಾಲಿ ಕ್ಯಾಪ್ಸೂಲ್‌ಗಳನ್ನು ಆರ್ಡರ್ ಮಾಡಿ ಕಳೆದ 15 ದಿನಗಳಿಂದ ತಾನೇ ಅವುಗಳಿಗೆ ವಿಷ ತುಂಬುತ್ತಿದ್ದಾಗಿ ಒಪ್ಪಿಕೊಂಡಿದ್ದಾನೆ. ಪ್ರಾಥಮಿಕ ತನಿಖೆಯ ಪ್ರಕಾರ ಈತ ಮಾನಸಿಕವಾಗಿ ಅಸ್ವಸ್ಥನಾಗಿರುವಂತೆ ಕಾಣುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫಯ್ಯಾಜ್ ಪ್ರೇಮ್‌ಜಿ ಹಿಂದೆ ಇರಾನ್ ಮತ್ತು ಇರಾಕ್‌ಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಭಯೋತ್ಪಾದನಾ ನಿರೋಧಕ ದಳ (ATS) ಮತ್ತು ಇಂಟೆಲಿಜೆನ್ಸ್ ಬ್ಯೂರೋ (IB) ಅಧಿಕಾರಿಗಳು ಸಹ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಪುಣೆಯ ‘ಖೋಜಾ ಶಿಯಾ ಇಸ್ನಾ ಅಶಾರಿ ಜಮಾತ್’ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಈತ ಕೆಲವು ವರ್ಷಗಳ ಹಿಂದೆಯೇ ಶಿಯಾ ಧರ್ಮ ಮತ್ತು ಸಮುದಾಯದ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಿ ತಾನು ಧರ್ಮ ತೊರೆದಿರುವುದಾಗಿ ಘೋಷಿಸಿಕೊಂಡಿದ್ದನು.

ಹಲವು ವರದಿಗಳಲ್ಲಿ ಆರೋಪಿಯನ್ನು ‘ಮಾಜಿ ಮುಸ್ಲಿಂ’ ಎಂದು ಬಿಂಬಿಸಲಾಗಿದ್ದು, ಈತ ಈ ಹಿಂದೆ ಬಲಪಂಥೀಯ ಪ್ರಭಾವಿ ವ್ಯಕ್ತಿಗಳಿಗೆ (ಇನ್‌ಫ್ಲುಯೆನ್ಸರ್‌ಗಳು) ಸಂದರ್ಶನಗಳನ್ನು ನೀಡಿದ್ದನು. ಈತ ಬಿಬಿಎ (BBA) ಪದವೀಧರನಾಗಿದ್ದು, ಮೂಲತಃ ಪುಣೆಯ ವಿಮಾನ್ ನಗರ ಪ್ರದೇಶದವನಾಗಿದ್ದಾನೆ. ಘಟನೆ ನಡೆಯುವ ಎರಡು ವಾರಗಳ ಮುಂಚಿನಿಂದ ಈತ ಮುಂಬೈನ ಡೋಂಗ್ರಿ ಪ್ರದೇಶದಲ್ಲಿ ತಂಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಮಾಜಘಾತುಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈತನನ್ನು ಈಗಾಗಲೇ ಜಮಾತ್‌ನಿಂದ ಬಹಿಷ್ಕರಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಸದ್ಯ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಕೊಲೆ ಯತ್ನ ಹಾಗೂ ವಿಷ ನೀಡಿ ಜೀವಹಾನಿ ಮಾಡಲು ಯತ್ನಿಸಿದ ಗಂಭೀರ ಪ್ರಕರಣಗಳನ್ನು ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು