ಮುಂಬೈ: ಸೆಲೆಬ್ರಿಟಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬಿಜೆಪಿ ಶಾಸಕ ನಿತೀಶ್ ರಾಣೆ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಈ ಸಂಬಂಧ ಗುರುವಾರ ಸಮನ್ಸ್ ಜಾರಿ ಮಾಡಲಾಗಿದ್ದು, ಜುಲೈ 12ರಂದು ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ. ಮುಂಬೈ ಪೊಲೀಸರ ನೋಟಿಸ್‌ಗೆ ಬಿಜೆಪಿ ಶಾಸಕ ನಿತೀಶ್ ರಾಣೆ ಪ್ರತಿಕ್ರಿಯಿಸಿದ್ದಾರೆ. ತಾನು ದಿಶಾ ನಿಗೂಢ ಸಾವಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ನೀಡುವುದಾಗಿ ಹೇಳಿದ್ದಾರೆ. ‘ನನಗೆ ಈಗಷ್ಟೇ ಸಮನ್ಸ್ ಬಂದಿದೆ. ಇದು ಕೊಲೆ ಪ್ರಕರಣ ಎಂದು ಮೊದಲ ದಿನದಿಂದಲೂ ಹೇಳುತ್ತಿದ್ದೇನೆ. ನಾನು ಮುಂಬೈ ಪೊಲೀಸರೊಂದಿಗೆ ಸಹಕರಿಸಲು ಸಿದ್ಧನಿದ್ದೇನೆ. ಹಿಂದಿನ MVA ಸರ್ಕಾರವು ಆದಿತ್ಯ ಠಾಕ್ರೆ ಮತ್ತು ಅವರ ಸ್ನೇಹಿತರನ್ನು ರಕ್ಷಿಸಲು ಪ್ರಯತ್ನಿಸಿತು. ನನ್ನ ಬಳಿ ಮಾಹಿತಿ ಇದ್ದಲ್ಲಿ ಪೊಲೀಸರಿಗೆ ನೀಡಲು ಸಿದ್ಧ’ ಎಂದರು.
ಈ ಹಿಂದೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗುವ ಕೆಲವು ದಿನಗಳ ಮೊದಲು, ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್, 28, ಜೂನ್ 14, 2020ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಪೊಲೀಸರ ಪ್ರಕಾರ, ಅವರು ಮಲಾಡ್‌ನ ಬಹುಮಹಡಿ ಕಟ್ಟಡದ 14ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ತನಿಖೆಯ ಕುರಿತು ಯಾವುದೇ ಅನುಮಾನವಿಲ್ಲ ಎಂದು ಆಕೆಯ ತಂದೆ ಹೇಳಿದ್ದಾರೆ. ದಿಶಾ ಸಾವನ್ನು ಅಪಘಾತ ಎಂದು ಘೋಷಿಸಿ ಮಾಲ್ವಾನಿ ಪೊಲೀಸ್ ಠಾಣೆ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು.
ಮತ್ತೊಂದೆಡೆ, ಬಿಜೆಪಿ ಶಾಸಕ ನಿತೀಶ್ ರಾಣೆ ದಿಶಾ ಸಾವು ಕೊಲೆ ಪ್ರಕರಣವಾಗಿದ್ದು, ಆದಿತ್ಯ ಠಾಕ್ರೆ ಮತ್ತು ಅವರ ಸ್ನೇಹಿತರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಪೊಲೀಸ್ ಅಧಿಕಾರಿ ಚಿಮಾಜಿ ಅಧವ್ ಅವರು ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿಲ್ಲವೆಂದು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಶಿಂಧೆ ಸರ್ಕಾರದ ಆದೇಶದ ಮೇರೆಗೆ ದಿಶಾ ಸಾವಿನ ಮರು ತನಿಖೆಗೆ ಮುಂಬೈ ಪೊಲೀಸರು ಎಸ್‌ಐಟಿ ರಚಿಸಿದ್ದಾರೆ.