Tuesday, June 25, 2024

ಸತ್ಯ | ನ್ಯಾಯ |ಧರ್ಮ

ಕೊಲೆ, ಕಳ್ಳತನ, ಅಪಹರಣ ಯತ್ನ, ಕಳಪೆ ದರ್ಜೆಯ ಮದ್ಯ ಮಾರಾಟ; ಗೃಹ ಸಚಿವರ ಕ್ಷೇತ್ರದಲ್ಲಿ ಲಾ & ಆರ್ಡರ್ ಢಮಾರ್!

ಒಂದು ತಿಂಗಳ ಪ್ರೋಗ್ರೆಸ್ ರಿಪೋರ್ಟ್ ಕಡೆಗೆ ಗಮನ ಹರಿಸಿ ಮುಖ್ಯ ವಿಚಾರಕ್ಕೆ ಬರೋಣ. ಶಾಲೆ ಮತ್ತು ಕಾಲೇಜುಗಳಲ್ಲಿ ಸರಣಿ ಕಳ್ಳತನ, ವಿದ್ಯಾರ್ಥಿನಿ ಮೇಲೆ ಅಪರಣ ಯತ್ನ, ಕಳಪೆ ದರ್ಜೆಯ ಮದ್ಯ ಮಾರಾಟ, ಅನುಮಾನಾಸ್ಪದ ಸಾವು ; ಕೊಲೆ ಶಂಕೆ…! ಇಂತಹ ಆತಂಕಕಾರಿ ದುರ್ಘಟನೆಗಳು ನಡೆಯುತ್ತಿರೋದು ಯಾವುದೋ ದೂರದ ಉತ್ತರ ಪ್ರದೇಶ ಅಥವಾ ಬಿಹಾರದಂತಹ ರಾಜ್ಯಗಳಲ್ಲಿ ಅಲ್ಲ. ಇದು ಕರ್ನಾಟಕ ರಾಜ್ಯದ ಘನತೆವೆತ್ತ ಗೃಹಮಂತ್ರಿ ಆರಗ ಜ್ಞಾನೇಂದ್ರರ ಸ್ವಕ್ಷೇತ್ರ ತೀರ್ಥಹಳ್ಳಿ ಕ್ಷೇತ್ರದಲ್ಲಿ.

ಎಲ್ಲೋ ಒಂದು ಕಡೆ ತೀರ್ಥಹಳ್ಳಿ ಕ್ಷೇತ್ರಕ್ಕೆ ಬಹುಕಾಲದ ನಂತರ ರಾಜ್ಯ ಸರ್ಕಾರದ ಅತ್ಯುನ್ನತ ಸಚಿವ ಸ್ಥಾನ ಗೃಹಮಂತ್ರಿ ಪಟ್ಟ ಸಿಕ್ಕಿತ್ತು ಅಂತಲೇ ಕ್ಷೇತ್ರದ ಜನ ಎರಡು ವರ್ಷಗಳ ಹಿಂದೆ ಬಹಳ ಸಂತಸ ಪಟ್ಟಿದ್ದರು. ಮುಖ್ಯಮಂತ್ರಿ ನಂತರದ ಅತ್ಯಂತ ಪ್ರಭಾವಿ ಹುದ್ದೆ ಸಿಕ್ಕಿದ್ದಕ್ಕೆ ಆಡಳಿತ ಪಕ್ಷದ ಜೊತೆಗೆ ವಿರೋಧ ಪಕ್ಷದ ಕಾರ್ಯಕರ್ತರು ಮುಖಂಡರಾದಿಯಾಗಿ ಸಚಿವ ಆರಗ ಜ್ಞಾನೇಂದ್ರರಿಗೆ ಅಭಿನಂದನೆ ಸುರಿಮಳೆಗೈದಿದ್ದರು. ಆದರೆ ನಂತರದ ದಿನಗಳಲ್ಲಿ ಆರಗ ಜ್ಞಾನೇಂದ್ರರ ಆಡಳಿತ ವೈಖರಿ, ಸಾಮಾಜಿಕವಾಗಿ ಅವರು ಕೊಡುವ ಬಹಿರಂಗ ಹೇಳಿಕೆಗಳು, ತಗೆದುಕೊಳ್ಳುವ ನಿರ್ಧಾರಗಳು ಅತ್ಯಂತ ಕಳಪೆ ಮಟ್ಟದ್ದಾಗಿತ್ತು ಮತ್ತು ಕ್ಷೇತ್ರದ ಪ್ರಜ್ಞಾವಂತ ಜನತೆ ತಲೆ ತಗ್ಗಿಸುವಂತದ್ದಾಗಿತ್ತು.

ಮೈಸೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಜನಪ್ರತಿನಿಧಿಯಾಗಿ, ಜವಾಬ್ದಾರಿಯುತ ಸ್ಥಾನದ ಸಚಿವರಾಗಿ ಆರಗ ಜ್ಞಾನೇಂದ್ರ ಕೊಟ್ಟ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಬೆಂಗಳೂರಿನ ದಲಿತ ಯುವಕನ ಕೊಲೆ ಸಂದರ್ಭದಲ್ಲೂ ತನಿಖೆಗೆ ಮುನ್ನವೇ ಮುಸ್ಲಿಂ ಧ್ವೇಷದ ಹಿನ್ನೆಲೆಯಲ್ಲಿ ‘ಉರ್ದು ಮಾತನಾಡದ್ದಕ್ಕೆ ಕೊಲೆ ನಡೆಯಿತು’ ಎಂಬ ರೀತಿಯ ಹೇಳಿಕೆ ಕೂಡಾ ಇಡೀ ಸರ್ಕಾರವೇ ತಲೆ ತಗ್ಗಿಸುವಂತೆ ಮಾಡಿತ್ತು. ಪ್ರಸ್ತುತ ರಾಜ್ಯದ ಅತ್ಯಂತ ದೊಡ್ಡ ಸ್ಕ್ಯಾಮ್ ಪಿಎಸ್ಐ ಹಗರಣ ಸಹ ಆರಗ ಜ್ಞಾನೇಂದ್ರರ ಅವಧಿಯಲ್ಲೇ ನಡೆದದ್ದು ಮತ್ತು ಬೆಳಕಿಗೆ ಬಂದದ್ದು ಎಂಬುದು ಉಲ್ಲೇಖಾರ್ಹ.

ಸಚಿವ ಜ್ಞಾನೇಂದ್ರ ಮೇಲೆ ಇಂತದ್ದೊಂದು ಸಣ್ಣ ಪೀಠಿಕೆಗೆ ಉದ್ದೇಶವಿದೆ. ಒಬ್ಬ ವ್ಯಕ್ತಿ ಆಡಳಿತಾತ್ಮಕವಾಗಿ ಎಷ್ಟು ಬಲಿಷ್ಠನಾಗಿದ್ದಾನೆ, ಎಷ್ಟು ಪಕ್ವನಾಗಿದ್ದಾನೆ ಎಂಬುದು ಸಾಮಾಜಿಕವಾಗಿ ಅವರು ಕೊಡುವ ಹೇಳಿಕೆ ಮತ್ತು ತಗೆದುಕೊಳ್ಳುವ ನಿರ್ಧಾರಗಳ ಮೇಲೆ ನಿಲ್ಲುತ್ತದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ನಡೆದ ಕ್ರೈಂ ಪ್ರಕರಣಗಳ ಮೇಲೆ ಕಣ್ಣಾಡಿಸಿದರೆ ಸಚಿವ ಆರಗ ಜ್ಞಾನೇಂದ್ರ ಇಡೀ ರಾಜ್ಯದ ಆಡಳಿತದ ಬಗ್ಗೆ ತಲೆ ಕೆಡಿಸಿಕೊಳ್ಳುವುದಕ್ಕಿಂತ ತಮ್ಮ ಕ್ಷೇತ್ರದ ಜನತೆ, ಅಲ್ಲಿನ ವ್ಯವಸ್ಥೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದದು ಹೆಚ್ಚು ಸೂಕ್ತ ಎಂದೇ ತೀರ್ಥಹಳ್ಳಿ ಮಹಾಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

ಸರಣಿ ಕಳ್ಳತನದ ಬಗ್ಗೆ ವ್ಯಾಪಕ ಟೀಕೆ
ಕೇವಲ ಒಂದು ವಾರದ ಅಂತರದಲ್ಲಿ ತೀರ್ಥಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಸರಣಿ ಕಳ್ಳತನಕ್ಕೆ ಕ್ಷೇತ್ರದ ಜನತೆ ಕಳ್ಳರ ಜೊತೆಗೆ ಗೃಹ ಮಂತ್ರಿಗಳಿಗೂ ಹಿಡಿಶಾಪ ಹಾಕುತ್ತಿದ್ದಾರೆ. ಹೊಸನಗರ ಪಟ್ಟಣದ ಕೊಡಚಾದ್ರಿ ಪದವಿ ಪೂರ್ವ ಕಾಲೇಜಿನಲ್ಲಿ ರೂಂಗಳ ಬೀಗಗಳನ್ನು ತುಂಡರಿಸಿ 15ಕ್ಕೂ ಹೆಚ್ಚು ಕಾಲೇಜಿನ ಕಡತಗಳು, ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ ಮೊದಲಾದ ದಾಖಲೆಗಳಿರುವ ಕಡತಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ನಂತರ ಬೀರುನಲ್ಲಿದ್ದ ಅಂದಾಜು 20,000 ರೂಪಾಯಿಗಳಷ್ಟು ಹಣವನ್ನು ದೋಚಿಕೊಂಡು ಹೋಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ನಗರದ ಅಮೃತಾಮಯಿ ಶಾಲೆ ಸೇರಿದಂತೆ ಒಟ್ಟು ಎರಡು ಶಾಲೆಗಳಲ್ಲಿ ಕಳ್ಳತನ ಪ್ರಕರಣ ನಡೆದಿದೆ. ಕೋಣಂದೂರು ವಿವೇಕಾನಂದ ಶಾಲೆಯಲ್ಲಿ ಕಳ್ಳತನ ಪ್ರಕರಣ ನಡೆದಿದೆ. ಅಮೃತ ಪದವಿಪೂರ್ವ ಕಾಲೇಜಿನ ಬೀಗ ಮುರಿದು ಕಳ್ಳತನ ನಡೆದ ಬಗ್ಗೆಯೂ ಕ್ಷೇತ್ರದ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ರಿಪ್ಪನ್ ಪೇಟೆಯ ನಿವೃತ್ತ ಎಎಸ್ಐ ಮನೆಯಲ್ಲಿ ಹಾಡ ಹಗಲೇ ಕಳ್ಳತನ ನಡೆದಿದ್ದು 10 ಲಕ್ಷಕ್ಕೂ ಹೆಚ್ಚು ಹಣ ಮತ್ತು ಚಿನ್ನಾಭರಣ ಕಳುವಾದ ಪ್ರಕರಣ ದಾಖಲಾಗಿದೆ. ಇನ್ನು ಕ್ಷೇತ್ರದಲ್ಲಿ ಕಳ್ಳರು ಸ್ಮಶಾನವನ್ನೂ ಬಿಡದೇ ಕಟ್ಟೆಹಕ್ಕಲು ಸಾಲ್ಗಡಿ ಎಂಬಲ್ಲಿ ಸ್ಮಶಾನದ ಚೇಂಬರ್ ಕಳ್ಳತನ ಮಾಡಿರುವುದು, ಕ್ಷೇತ್ರದಲ್ಲಿ ಆಡಳಿತ ವ್ಯವಸ್ಥೆ ಎಷ್ಟು ಬಲಿಷ್ಠವಾಗಿದೆ ಎಂಬುದಕ್ಕೆ ಸಾಕ್ಷಿ ಕೊಡುವಂತಿದೆ. ತೀರ್ಥಹಳ್ಳಿ ಪಟ್ಟಣಕ್ಕೆ ಸಮೀಪವೇ ಇರುವ ಮೇಲಿನ ಕುರುವಳ್ಳಿ ಗ್ರಾಮದಲ್ಲಿ 6 ನೇ ತರಗತಿ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳು ಓಮ್ನಿ ಕಾರಿನಲ್ಲಿ ಅಪಹರಣಕ್ಕೆ ಯತ್ನಿಸಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ವಿದ್ಯಾರ್ಥಿನಿ ಅಪಹರಣ ಪ್ರಕರಣ ತಪ್ಪಿದೆ.

ಅಕ್ರಮ ಮದ್ಯ ಮಾರಾಟದ ಆರೋಪ, ವ್ಯಕ್ತಿ ಸಾವು ; ಕೊಲೆ ಶಂಕೆ
ಗೃಹ ಸಚಿವರ ಸ್ವಗೃಹ ಗುಡ್ಡೇಕೊಪ್ಪ ಊರಿನ ಕೆಲವೇ ದೂರದಲ್ಲಿ ಬರುವ ಹೊದಲ ಬಾಳೆಕೋಡ್ಲು ಎಂಬಲ್ಲಿ ಮದ್ಯ ಮಾರಾಟ ವಿಚಾರದಲ್ಲಿ ಗಲಾಟೆಯೊಂದು ನಡೆದಿತ್ತು. ಅದರಲ್ಲಿ ರಮೇಶ್ ಎಂಬುವರಿಗೆ ಗಂಭೀರವಾಗಿ ಪೆಟ್ಟುಬಿದ್ದು ಅಸುನೀಗಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಇದು ಅಕ್ರಮ ಮದ್ಯ ಸೇವನೆಯಿಂದಾದ ಸಾವು ಎಂಬ ಮಾತು ಬಂದರೂ ರಮೇಶ್ ಮೈಮೇಲೆ ಆದ ಗಂಭೀರ ಗಾಯಗಳು ಇದೊಂದು ಕೊಲೆ ಎಂಬುದನ್ನು ಸಾರಿ ಹೇಳುತ್ತಿದೆ. ದುರಂತ ಎಂದರೆ ಈ ಬಗ್ಗೆ ಇಲ್ಲಿಯವರೆಗೂ ಇಷ್ಟು ದಿನವಾದರೂ ಆರೋಪಿಗಳ ಬಂಧನವಾಗಿಲ್ಲ ಮತ್ತು ಪೊಲೀಸ್ ಇಲಾಖೆ ಅಡಿಯಲ್ಲಿ ಎಫ್ಐಆರ್ ಕೂಡ ದಾಖಲಾಗದಿರುವುದು ಆಡಳಿತ ಯಂತ್ರದಲ್ಲಿ ಗೃಹ ಮಂತ್ರಿಗಳ ಹಿಡಿತ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಹೇಳುತ್ತಿದೆ.

ರಮೇಶ್ ಸಾವಿನ ಪ್ರಕರಣದಲ್ಲಿ ಅಬಕಾರಿ ಇಲಾಖೆಯ ಭ್ರಷ್ಟ ಲಂಚಾವತಾರದ ಬಗ್ಗೆಯೂ ಮಾತುಗಳು ಕೇಳಿ ಬಂದಿವೆ. ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆದಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ರಮೇಶ್ ಸಾವಿನ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪೊಲೀಸರು ಇಲ್ಲಿಯವರೆಗೂ ಎಫ್ಐಆರ್ ದಾಖಲು ಮಾಡದ ಹಿನ್ನೆಲೆಯಲ್ಲಿ ಇದರಲ್ಲಿ ರಾಜಕೀಯ ಹಿತಾಸಕ್ತಿ ಅಡಗಿದೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮೃತ ರಮೇಶ್ ಸಚಿವ ಆರಗ ಜ್ಞಾನೇಂದ್ರರ ದೂರದ ಸಂಬಂಧಿ ಎಂಬುದು ವಿಶೇಷ.

ಈ ಪ್ರಕರಣದಲ್ಲಿ ರಮೇಶ್ ಪರವಾಗಿ ದೂರು ದಾಖಲಿಸಲಾಗಿದೆ. ಆದರೆ ಹಿನ್ನೆಲೆಯಿಂದ ದೂರು ನೀಡಿದವರಿಗೆ ದೂರನ್ನು ವಾಪಸ್ ತಗೆದುಕೊಳ್ಳಲು ಒತ್ತಡ ಹೇರಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಸಧ್ಯ ಈ ಎಲ್ಲಾ ಗಂಭೀರ ಪ್ರಕರಣ ನಡೆದಿರೋದು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಅಲ್ಲ. ಕೇವಲ ಗೃಹ ಮಂತ್ರಿ ಆರಗ ಜ್ಞಾನೇಂದ್ರರ ಸ್ವಕ್ಷೇತ್ರದಲ್ಲಿ ಎಂಬುದು ಉಲ್ಲೇಖಾರ್ಹ ವಿಚಾರ. ಅದೂ ಕೇವಲ ಒಂದು ತಿಂಗಳ ಪ್ರೋಗ್ರೆಸ್ ರಿಪೋರ್ಟ್.

ಇಲ್ಲಿ ಗೃಹ ಮಂತ್ರಿಗಳಿಗೆ ಕ್ಷೇತ್ರದ ಆಡಳಿತದಲ್ಲಿ ಹಿಡಿತ ತಪ್ಪಿದೆಯೇ? ಸ್ವತಃ ಗೃಹ ಮಂತ್ರಿಗಳು ಸ್ವಜನ ಪಕ್ಷಪಾತಿಯಾಗಿ ಕಳ್ಳರ, ಪುಂಡ ಪೋಕರಿಗಳ, ಕೊಲೆಗಡುಕರ ಪರ ನಿಂತಿದ್ದಾರೆಯೇ? ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿಗಳು ಇದ್ದರೂ ಇಲ್ಲಿಯವರೆಗೂ ಅಧಿಕೃತವಾಗಿ ಗೃಹ ಸಚಿವ ಜ್ಞಾನೇಂದ್ರ ಅಧಿಕಾರಿಗಳಿಗೆ ಯಾಕೆ ನಿಯಂತ್ರಣದ ಆದೇಶ ನೀಡಿಲ್ಲ.? ಅಥವಾ ಸ್ವತಃ ಗೃಹ ಸಚಿವರಿಗೆ ಕ್ಷೇತ್ರವನ್ನು ಹಿಡಿತದಲ್ಲಿ ಇಡಲು ಸೋತಿದ್ದಾರೆಯೇ? ಎಂಬ ಹತ್ತಾರು ಪ್ರಶ್ನೆಗಳು ಕ್ಷೇತ್ರದ ಜನರ ಬಾಯಲ್ಲಿ ಓಡಾಡುತ್ತಿದೆ.

ಮುಖ್ಯಮಂತ್ರಿ ಹುದ್ದೆ ನಂತರದ ಸ್ಥಾನ ಎಂದೇ ಗೃಹ ಇಲಾಖೆಯನ್ನು ಬಣ್ಣಿಸಲಾದರೂ, ರಾಜ್ಯದ ಮೂಲೆ ಮೂಲೆಗಳಲ್ಲಿ ಅದೆಂತಹ ಗಂಭೀರ ಅಪರಾಧ ಪ್ರಕರಣ ನಡೆದರೂ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಮಾತ್ರ ಕ್ಷೇತ್ರ ಬಿಟ್ಟು ಕದಲಲ್ಲ. ವಾರದ ಏಳು ದಿನಗಳಲ್ಲಿ ಐದಾರು ದಿನವೂ ಇವರು ಕ್ಷೇತ್ರದಲ್ಲೇ ಇರುತ್ತಾರೆ. ಇದು ಆರಗ ಜ್ಞಾನೇಂದ್ರ ಮೇಲಿರುವ ಗಂಭೀರವಾದ ಆರೋಪ. ಇವರು ರಾಜ್ಯದ ಗೃಹ ಮಂತ್ರಿಯೋ ಅಥವಾ ತೀರ್ಥಹಳ್ಳಿ ಗೃಹ ಮಂತ್ರಿಯೋ ಎಂಬುದು ಜ್ಞಾನೇಂದ್ರ ವಿರೋಧಿಗಳ ಅಣಕ.

Related Articles

ಇತ್ತೀಚಿನ ಸುದ್ದಿಗಳು