ಭಟ್ಕಳದ ಮುರ್ಡೇಶ್ವರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯ ವೇಳೆ ತಾತ್ಕಾಲಿಕವಾಗಿ ಅಳವಡಿಸಲಾಗಿದ್ದ ಲಿಫ್ಟ್ ಕುಸಿದ ಪರಿಣಾಮ ಗುರುವಾರ ಸಂಜೆ ದುರ್ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಮುರ್ಡೇಶ್ವರದ ಬಸ್ತಿಯ ನಿವಾಸಿ ಪ್ರಭಾಕರ ಮುತಪ್ಪ ಶೆಟ್ಟಿ ಮತ್ತು ಬೈಂದೂರು ತಾಲೂಕಿನ ನಿವಾಸಿ ಬಾಬಣ್ಣ ಪೂಜಾರಿ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಮುರ್ಡೇಶ್ವರದ ಓಲಗ ಮಂಟಪದ ಸಮೀಪ ನಾಲ್ಕು ಮಹಡಿಗಳ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ಸಾಮಗ್ರಿಗಳನ್ನು ಮೇಲ್ಮಹಡಿಗೆ ಸಾಗಿಸಲು ಅಲ್ಲಿ ತಾತ್ಕಾಲಿಕ ಲಿಫ್ಟ್ ಅಳವಡಿಸಲಾಗಿತ್ತು. ಆದರೆ ಗುರುವಾರ ಸಂಜೆ, ಆ ಲಿಫ್ಟ್‌ಗೆ ಭಾರ ಹೆಚ್ಚಾದ ಕಾರಣ ಅದರ ಹಗ್ಗ ಇದ್ದಕ್ಕಿದ್ದಂತೆ ತುಂಡಾಗಿದೆ ಎಂದು ತಿಳಿದುಬಂದಿದೆ. ಇದರ ಪರಿಣಾಮವಾಗಿ ಭಾರವಾದ ಲಿಫ್ಟ್ ನೆಲಕ್ಕುರುಳಿದೆ.
ಈ ದುರಂತ ಸಂಭವಿಸಿದಾಗ ಲಿಫ್ಟ್‌ನಲ್ಲಿದ್ದ ಇಬ್ಬರು ಕಾರ್ಮಿಕರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ಕುರಿತು ಮಾಹಿತಿ ತಿಳಿದ ಕೂಡಲೇ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಭಟ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.
