ಚಿತ್ರದುರ್ಗ: ಮುರುಘಾ ಮಠದ ಮುರುಘ ರಾಜೇಂದ್ರ ಶರಣರ ಮೇಲಿನ ಅತ್ಯಾಚಾರ ಪ್ರಕರಣಗಳು ಮತ್ತು ನ್ಯಾಯಾಂಗ ಬಂಧನದ ಹಿನ್ನೆಲೆಯಲ್ಲಿ ಮಠದ ಪೂಜಾ ಕೈಂಕರ್ಯ ನೋಡಿಕೊಳ್ಳಲು ಪ್ರಭಾರ ಪೀಠಾಧ್ಯಕ್ಷರಾಗಿ ದಾವಣಗೆರೆ ವಿರಕ್ತ ಮಠದ ಬಸವ ಪ್ರಭು ಶ್ರೀಗಳನ್ನು ನೇಮಕ ಮಾಡಲಾಗಿದೆ.
ಮುರುಘಾ ಶರಣರು ತಮ್ಮ ಮೇಲಿನ ಆರೋಪಗಳಿಂದ ಹೊರಬರುವವರೆಗೆ ಪೀಠತ್ಯಾಗ ಮಾಡಬೇಕು ಎಂದು ಭಕ್ತರ ಒಂದು ವರ್ಗ ಒತ್ತಾಯಿಸುತ್ತಿರುವ ಬೆನ್ನಲ್ಲೇ ಈ ನೇಮಕಾತಿ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಪೀಠತ್ಯಾಗ ಮಾಡಲು ಒಲ್ಲದ ಮುರುಘಾ ಶರಣರು ಮಠದ ಆಡಳಿತ ವ್ಯವಸ್ಥೆ ನೋಡಿಕೊಳ್ಳಲು ಬಸವಪ್ರಭು ಶರಣರನ್ನು ನೇಮಕಾತಿ ಮಾಡಿದ್ದು, ಈಗಾಗಲೇ ಅವರು ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.

ದಾವಣಗೆರೆಯ ಬಸವಪ್ರಭು ಸ್ವಾಮೀಜಿ ಭಕ್ತರಿಂದ ದುಶ್ಚಟಗಳನ್ನು ಭಿಕ್ಷೆ ಬೇಡುವ ಹೊಸ ಆಂದೋಲನ ನಡೆಸಿ ಜನಮೆಚ್ಚುಗೆ ಪಡೆದಿದ್ದರು. ಬೀಡಿ, ತಂಬಾಕು, ಸಿಗರೇಟು, ಮದ್ಯಪಾನ ಬಿಡುವಂತೆ ಮನವೊಲಿಸುವ ಅಭಿಯಾನದ ಮೂಲಕ ಸ್ವಾಮೀಜಿ ಹೆಸರು ಮಾಡಿದ್ದರು.