Monday, June 17, 2024

ಸತ್ಯ | ನ್ಯಾಯ |ಧರ್ಮ

ಸ್ವಾಮೀಜಿಯ ಲೈಂಗಿಕ ದೌರ್ಜನ್ಯಕ್ಕೆ ಮಠದ ಸಾಧಕರೇ ಬೆಂಗಾವಲು!: FIRನಲ್ಲಿ ದಾಖಲಾದ ಆಘಾತಕಾರಿ ಅಂಶಗಳು

ಬೆಂಗಳೂರು: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಗುರಿಯಾಗಿರುವ ಚಿತ್ರದುರ್ಗದ ಬೃಹನ್ಮಠದ ಮುರುಘಾ ಶರಣ ಶಿವಮೂರ್ತಿಯವರ ಕುರಿತು ಮತ್ತಷ್ಟು ಆಘಾತಕಾರಿ ಸಂಗತಿಗಳು ತಡರಾತ್ರಿ ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು FIR ಮೂಲಕ ಬಯಲಾಗಿವೆ.

FIR ಪ್ರತಿಯು ಪೀಪಲ್‌ ಮೀಡಿಯಾ.ಕಾಂ ಗೆ ಲಭ್ಯವಾಗಿದ್ದು ಅದರ ಮಾಹಿತಿಗಳು ಕೆಳಗಿನಂತಿವೆ.  

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯರಿಬ್ಬರ ಪೈಕಿ ಒಬ್ಬ ಬಾಲಕಿ ಋತುಮತಿಯಾಗುವ ತನಕವೂ ಅಂದರೆ ಅವಳು 7 ನೇ ತರಗತಿ ಓದುತ್ತಿರುವವರೆಗೂ ಸತತವಾಗಿ ಮುರುಘಾ ʼಶರಣʼ ಶಿವಮೂರ್ತಿ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು  FIR ನಲ್ಲಿ ತಿಳಿಸಲಾಗಿದೆ.  

ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆಂದು ಹೇಳಲಾದ ಬಾಲಕಿಯರಿಬ್ಬರ ತಾಯಿ ತಾವು ಬಡವರಾಗಿದ್ದ ಕಾರಣ ತನ್ನಿಬ್ಬರು ಮಕ್ಕಳನ್ನೂ ಮಠದಲ್ಲಿನ ವಸತಿ ನಿಲಯಕ್ಕೆ ಸೇರಿಸಿದ್ದರು. ಈ ಮಕ್ಕಳಿಬ್ಬರು ಹಿಂದುಳಿದ ಸಮುದಾಯಕ್ಕೆ ಸೇರಿದವರು ಎಂದೂ FIRನಲ್ಲಿ ಉಲ್ಲೇಖವಾಗಿದೆ.

ಬೆದರಿಕೆ- ಲೈಂಗಿಕ ದೌರ್ಜನ್ಯ

ಬಾಲಕಿಯರನ್ನು ಒತ್ತಾಯಪೂರ್ವಕವಾಗಿ ಶರಣರ ಖಾಸಗಿ ಕೊಠಡಿಗೆ ಕಳಿಸಲಾಗುತ್ತಿತ್ತು.
ಆ ಸಮಯದಲ್ಲಿ ಬಾಗಿಲಲ್ಲಿ ನಿಂತು ಬೇರೆ ಯಾರೂ ಹೋಗದಂತೆ ನೋಡಲಾಗುತ್ತಿತ್ತಲ್ಲದೆ ಮಕ್ಕಳು ಕೊಠಡಿಗೆ ಹೋಗಲು ಹಿಂಜರಿದರೆ ಅವರನ್ನು ಮುರುಘಾ ಶರಣ ಶಿವಮೂರ್ತಿಯವರ ಸಹಾಯಕರು ಹೆದರಿಸುತ್ತಿದ್ದರು ಎಂಬ ಅಂಶವೂ ಅದರಲ್ಲಿದೆ.

ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಇರುವ ಪೋಕ್ಸೋ (pocso act) ಕಾಯ್ದೆಯಡಿಯಲ್ಲಿ ದಾಖಲಾಗಿರುವ FIRನಲ್ಲಿ ಮುರುಘಾ ಶರಣ ಶಿವಮೂರ್ತಿ ಮೊದಲನೇ ಆರೋಪಿಯಾಗಿದ್ದಾರೆ. ವಾರ್ಡನ್‌ ರಶ್ಮಿ ಎರಡನೇ ಆರೋಪಿ, ಬಸವಾದಿತ್ಯ ಮೂರನೇ ಆರೋಪಿ, ಪರಮಶಿವಯ್ಯ ನಾಲ್ಕನೇ ಆರೋಪಿ, ಗಂಗಾಧರಯ್ಯ ಐದನೇ ಆರೋಪಿ, ಮಹಾಲಿಂಗ ಆರನೇ ಆರೋಪಿ, ಕರಿಬಸಪ್ಪ ಏಳನೇ ಆರೋಪಿಗಳಾಗಿದ್ದಾರೆ.

ದೂರುದಾರ ಮಹಿಳೆ ದಾಖಲಿಸಿರುವಂತೆ, ಅವರ ಮಗಳು 7ನೇ ತರಗತಿ ಓದುತ್ತಿದ್ದಾಗ ಅಂದರೆ 2019ರಿಂದ ಹಾಗೂ ಎರಡನೇ ಮಗಳು ಸಹ ಓದುತ್ತಿದ್ದಾಗ ಕೊವಿಡ್‌ ರಜೆಯಲ್ಲಿದ್ದಾಗ ಮುರುಘಾ ಶರಣ ಶಿವಮೂರ್ತಿಯವರು ವಾರ್ಡನ್‌ ರಶ್ಮಿ ಮೂಲಕ ತಮ್ಮ ಖಾಸಗಿ ಕೋಣೆಗೆ ಮಕ್ಕಳನ್ನು ಕರೆಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದನ್ನು ಮಕ್ಕಳು ತಿಳಿಸಿದ್ದರೆಂದು ದಾಖಲಿಸಿದ್ದಾರೆ.    

ಮಠದ ಸಾಧಕರ ಬೆಂಗಾವಲು

ಸ್ವಾಮೀಜಿಯ ಕೊಠಡಿಗೆ ಮಕ್ಕಳು ಹೋಗಲು ಒಪ್ಪದಿದ್ದ ಸಂದರ್ಭದಲ್ಲಿ ಮುರುಘಾ ಮಠದ ಸಾಧಕರಾದ ಬಸವಾದಿತ್ಯ, ಪರಮಶಿವಯ್ಯ, ಗಂಗಾಧರಯ್ಯ ಮಕ್ಕಳನ್ನು ಹೆದರಿಸಿ ಒತ್ತಾಯ ಮಾಡಿ ಕಳಿಸುತ್ತಿದ್ದರು, ಸ್ವಾಮೀಜಿಯ ಅಸಿಸ್ಟೆಂಟ್‌ ಮಹಾಲಿಂಗ ಹಾಗೂ ಅಡುಗೆ ಭಟ್ಟ ಕರಿಬಸಪ್ಪ ಇವರುಗಳು ಮಕ್ಕಳನ್ನು ಸ್ವಾಮೀಜಿಯ ಖಾಸಗಿ ಕೊಠಡಿಗೆ ಕರೆದುಕೊಂಡು ಹೋಗಿ ಬಿಡುವುದು ಹಾಗೂ ಬಾಗಿಲಲ್ಲಿ ನಿಂತು ಬೇರೆ ಯಾರೂ ಹೋಗದಂತೆ ಕಾಯ್ದುಕೊಳ್ಳುವುದು ಮತ್ತು ಮಕ್ಕಳು ಕೊಠಡಿಗೆ ಹೋಗಲು ಹಿಂಜರಿದಾಗ ಹೆದರಿಸುವುದು ಮಾಡುತ್ತಿದ್ದರು ಎಂದು ಬಾಲಕಿಯರ ತಾಯಿ ದೂರಿನಲ್ಲಿ ವಿವರಿಸಿದ್ದಾರೆ.

ಬಾಲಕಿಯರಿಬ್ಬರೂ ತಮ್ಮ ತಾಯಿಯೊಂದಿಗೆ ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟಾನ್ಲಿ ಅವನ್ನು ಸಂಪರ್ಕಿಸಿದ್ದರು. ಅವರ ಸಲಹೆ ಮೇರೆಗೆ ಮಕ್ಕಳು ಮತ್ತು ತಾಯಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.  

Related Articles

ಇತ್ತೀಚಿನ ಸುದ್ದಿಗಳು