Home ಇನ್ನಷ್ಟು ಕೋರ್ಟು - ಕಾನೂನು ಮುಸ್ಲಿಂ ಮಹಿಳೆಗೆ ಗಂಡನಿಂದ ಜೀವನಾಂಶ ಪಡೆಯಲು ಅರ್ಹತೆ ಇದೆ: ಸುಪ್ರೀಂ ಕೋರ್ಟ್‌

ಮುಸ್ಲಿಂ ಮಹಿಳೆಗೆ ಗಂಡನಿಂದ ಜೀವನಾಂಶ ಪಡೆಯಲು ಅರ್ಹತೆ ಇದೆ: ಸುಪ್ರೀಂ ಕೋರ್ಟ್‌

0

ಹೊಸದಿಲ್ಲಿ: ಮುಸ್ಲಿಂ ಮಹಿಳೆಗೆ ತನ್ನ ಪತಿಯ ವಿರುದ್ಧ ಜೀವನಾಂಶಕ್ಕೆ ಅರ್ಜಿ ಸಲ್ಲಿಸಲು ಅಪರಾಧ ಸಂಹಿತೆ ಪ್ರಕ್ರಿಯೆಯ ಸೆಕ್ಷನ್-125ರ ಅಡಿಯಲ್ಲಿ ಅರ್ಹತೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.

ವಿಚ್ಛೇದನ ಪಡೆದ ಪತ್ನಿಗೆ ಸಿಆರ್‍ಪಿಸಿ ಸೆಕ್ಷನ್ 125ರ ಅಡಿಯಲ್ಲಿ ಮಧ್ಯಂತರ ಜೀವನಾಂಶ ನೀಡಬೇಕು ಎಂಬ ಆದೇಶದ ವಿರುದ್ಧ ಮುಸ್ಲಿಂ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ವಜಾಗೊಳಿಸಿದೆ. ಮುಸ್ಲಿಂ ಮಹಿಳೆಯರ (ವಿಚ್ಛೇದನದಲ್ಲಿ ಹಕ್ಕುಗಳ ರಕ್ಷಣೆ) ಕಾಯ್ದೆ-1986, ಜಾತ್ಯತೀತ ಕಾನೂನಿನ ಎದುರು ಸಮರ್ಥನೀಯವಲ್ಲ ಎಂದು ಸ್ಪಷ್ಟಪಡಿಸಿದೆ. ಉಭಯ ನ್ಯಾಯಮೂರ್ತಿಗಳು ಪ್ರತ್ಯೇಕ ಆದರೆ, ಸಹಮತದ ತೀರ್ಪು ನೀಡಿರುವುದು ವಿಶೇಷವಾಗಿದೆ.

“ಸಿಆರ್‍ಪಿಸಿ ಸೆಕ್ಷನ್ 125 ಕೇವಲ ವಿವಾಹಿತ ಮಹಿಳೆಯರಿಗೆ ಮಾತ್ರವಲ್ಲದೇ ಎಲ್ಲ ಮಹಿಳೆಯರಿಗೆ ಅನ್ವಯವಾಗುತ್ತದೆ ಎಂಬ ನಿರ್ಣಯದೊಂದಿಗೆ ಅಪರಾಧ ಮೇಲ್ಮನವಿಯನ್ನು ವಜಾಗೊಳಿಸುತ್ತಿದ್ದೇವೆ” ಎಂದು ನ್ಯಾಯಮೂರ್ತಿ ನಾಗರತ್ನ ಸ್ಪಷ್ಟವಾಗಿ ಹೇಳಿದ್ದಾರೆ.

ಸಿಆರ್‍ಪಿಸಿ ಸೆಕ್ಷನ್ 125ರಡಿ ಸಲ್ಲಿಸಿದ ಅರ್ಜಿ ವಿಚಾರಣೆಗೆ ಬಾಕಿ ಇದ್ದಲ್ಲಿ ವಿಚ್ಛೇದಿತ ಮುಸ್ಲಿಂ ಮಹಿಳೆ, ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ಸಂರಕ್ಷಣೆ) ಕಾಯ್ದೆ-2019ನ್ನು ಅವಲಂಬಿಸಬಹುದಾಗಿದೆ. ಇದರಲ್ಲಿ ದೊರಕುವ ಪರಿಹಾರವು ಸಿಆರ್‍ಪಿಸಿ ಸೆಕ್ಷನ್ 125ರ ಅಡಿಯಲ್ಲಿ ಸಿಗುವ ಪರಿಹಾರಕ್ಕೆ ಹೆಚ್ಚುವರಿಯಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

You cannot copy content of this page

Exit mobile version