Home ದೇಶ ಮುಸ್ಲಿಮರ ಆಕ್ರೋಶಕ್ಕೆ ಕಾರಣವಾದ ʼಮಸೀದಿ ನೆಲಸಮʼ ಕಾರ್ಯಾಚರಣೆ

ಮುಸ್ಲಿಮರ ಆಕ್ರೋಶಕ್ಕೆ ಕಾರಣವಾದ ʼಮಸೀದಿ ನೆಲಸಮʼ ಕಾರ್ಯಾಚರಣೆ

0

ಹೈದರಾಬಾದ್: ಶಂಶಾಬಾದ್‌ನಲ್ಲಿ ನಿರ್ಮಿಸಲಾಗಿದ್ದ ಮಸೀದಿಯೊಂದನ್ನು ನಗರಪಾಲಿಕೆ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಈ ಘಟನೆ ಸ್ಥಳೀಯ ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದ್ದು ಪ್ರತಿಭಟನೆ ನಡೆಸಿದ್ದಾರೆ.

ಹೊರವಲಯದ ಶಂಶಾಬಾದ್‌ನ ಗ್ರೀನ್ ಅವಿನ್ಯೂ ಕಾಲೋನಿಯಲ್ಲಿ ನಿರ್ಮಿಸಲಾಗಿದ್ದ
ಮಸ್ಜಿದ್–ಇ–ಖಾಜಾ ಮಹ್ಮೂದ್ ಮಸೀದಿಯನ್ನು ನಿಗದಿತವಲ್ಲದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಗ್ರೀನ್ ಅವಿನ್ಯೂ ಕಾಲೋನಿಯ ನಿವಾಸಿಗಳು ಶಂಶಾಬಾದ್ ನಗರಪಾಲಿಕೆಗೆ ದೂರು ನೀಡಿದ್ದರು. ಹೀಗಾಗಿ ನಗರಪಾಲಿಕೆ ಅಧಿಕಾರಿಗಳು ಮಸೀದಿಯನ್ನು ಅನಧಿಕೃತವಾಗಿ ನಿರ್ಮಿಸಿರುವ ಕುರಿತು ದೂರು ಬಂದ ಬಳಿಕ,  ಬಿಗಿ ಪೊಲೀಸ್ ಭದ್ರತೆಯಲ್ಲಿ ಮಂಗಳವಾರ ಬೆಳಗ್ಗೆ ನೆಲಸಮ ಕಾರ್ಯಚರಣೆ ಮಾಡಿದ್ದಾರೆ.

ಮಸೀದಿ ನೆಲಸಮ ಕಾರ್ಯಾಚರಣೆಯನ್ನು ವಿರೋಧಿಸಿ  ʼಆಲ್ ಇಂಡಿಯಾ ಮಜ್ಲಿಸ್–ಇ–ಇತ್ತೆಹಾದುಲ್ ಮುಸ್ಲಿಮೀನ್ʼ (ಎಐಎಂಐಎಂ) ಮತ್ತು ʼಮಜ್ಲಿಸ್ ಬಚಾವೊ ತೆಹ್ರೀಕ್ʼ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಂಬಿಟಿ ನಾಯಕ ಅಮ್ಜೆದುಲ್ಲಾ ಖಾನ್, ಗ್ರೀನ್ ಅವೆನ್ಯೂ ಕಾಲೋನಿ 15 ಎಕರೆ ಜಾಗದಲ್ಲಿ ಶಂಶಾದ್ ಗ್ರಾಮ ಪಂಚಾಯಿತಿಯಿಂದ ಸೂಕ್ತ ಅನುಮತಿ ಪಡೆದು ಪ್ಲಾಟ್ ಮಾಡಿ ಮಾರಾಟ ಮಾಡಲಾಗಿತು. 250 ಚದರ ಗಜಗಳ ಎರಡು ಪ್ಲಾಟ್‌ಗಳನ್ನು ಮಸೀದಿಗಾಗಿ ಒಂದು ನಿವೇಶನ ಎಂದು ಗುರುತಿಸಿ, ಮೂರು ವರ್ಷಗಳ ಹಿಂದೆ ಮಸೀದಿಯನ್ನು ನಿರ್ಮಿಸಲಾಗಿತ್ತು. ಅಲ್ಲಿ ಶುಕ್ರವಾರದ ಪ್ರಾರ್ಥನೆ ಸೇರಿದಂತೆ ಪ್ರತಿದಿನ ಐದು ಬಾರಿ ನಮಾಜ್‌ಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದೆ.  ಆದರೆ ಮಸೀದಿಯ ಪಕ್ಕದಲ್ಲಿ ಮನೆ ಹೊಂದಿರುವ ವ್ಯಕ್ತಿಯೊಬ್ಬರು ಇತರ ಕೆಲವು ನಿವಾಸಿಗಳೊಂದಿಗೆ, ಮಸೀದಿ ನಿರ್ಮಾಣದ ವಿರುದ್ಧ ಶಂಶಾದ್ ಪುರಸಭೆಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಪುರಸಭೆ ಅಧಿಕಾರಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಕಟ್ಟಡ ಕೆಡವಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

You cannot copy content of this page

Exit mobile version