ಮಾತು ತಡೆಯುವವರ ಮುಂದೆ ಮಾತನಾಡುತ್ತಲೇ ಇರಬೇಕು. ದಮನಿಸುವವರ ನಡುವೆ ಎದ್ದೇಳುತ್ತಲೇ ಇರಬೇಕು. ಆಗಲೇ ತಾವಿರುವ ನೆಲದಲ್ಲಿ ತಾವು ಬದುಕ ಬೇಕಾದವರು ಎಂಬ ಭಾವವನ್ನು ಪ್ರಭುತ್ವದೆಡೆಗೆ ದಾಟಿಸುವಂತಾಗುವುದು… ಹೀಗೆ ಬರೆಯುವ ಲೇಖಕಿ ಸಿಹಾನಾ ಬಿ ಎಂ ಅವರ ಈ ಬಾರಿಯ ʼಮೈಂಡ್ ಬ್ಲಾಕ್ʼ ಅಂಕಣದೊಳಗೆ ಇಣುಕಿ ಏನಿದೆ ನೋಡಿ…
ಹಸಿರು ತುಂಬಿದ ಬಯಲು. ಹೊಸ ಊರು, ಹೊಸ ಪರಿಸರ, ಹೊಸ ವಾತಾವರಣದಲ್ಲಿದ್ದರೂ ಈ ಹಸಿರು ಲೋಕ ಎಂದೆಂದಿಗೂ ಚಿರಪರಿಚಿತ. ಮನೆಯ ಮುಂದೆ ಬೆಳೆದ ಹಸಿರು ಗಿಡ, ಬಳ್ಳಿಗಳು ಮನೆಯ ಮುಂಭಾಗದವರೆಗೆ ಹಬ್ಬದಿರಲೆಂದು ಒಂದು ಲಕ್ಷ್ಮಣರೇಖೆಯನ್ನು ಎಳೆಯುತ್ತೇವೆ. ಮನೆ ಬಾಗಿಲ ಮೆಟ್ಟಿಲು ದಾಟಿ ಒಂದಲ್ಪ ಜಾಗವನ್ನು ಬರಿದಾಗಿಸಿ ಹಸಿರು ಬೆಳೆಯದಂತೆ ತಡೆಗಟ್ಟುವುದು ಮನೆಯಾಕೆಯ ಕೌಶಲ್ಯ. ಬೆಳಗೆದ್ದ ತಕ್ಷಣ ಅಂಗಳವನ್ನು ಗುಡಿಸಿ, ಕಸಕಡ್ಡಿಗಳನ್ನು ಮೂಲೆಯ ತುದಿಯಲ್ಲಿ ರಾಶಿ ಹಾಕಿ ಸುಟ್ಟುಬಿಡುವ ಕಾಯಕ ದಿನದ ಪ್ರಾರಂಭದ ಹೆಜ್ಜೆ. ಅಂಗಳದಲ್ಲಿ ಕಸ ಇರಲಿ ಇಲ್ಲದಿರಲಿ ದಿನಕ್ಕೊಮ್ಮೆ ಗುಡಿಸದಿದ್ದರೆ ತೃಪ್ತಿಯಿರದು. ಮಡುಗಟ್ಟಿದ ಮಂಜು – ಮೋಡದ ಜೊತೆ ಗುದ್ದಾಡುತ್ತಾ ಕೋಳಿ ಕೂಗುವ ಮುನ್ನ ಮನೆಯಿಂದ ಮಂಗಳೂರಿನ ಬಂದರಿನ ದಕ್ಕೆಗೆ ಹೊರಡುವವನಿಗೆ ಒಂದು ಲೋಟ ಕಾಫಿ ಮಾಡಿ ಕೊಟ್ಟು, ತಾನೂ ಕುಡಿದು ಮನೆಕೆಲಸ, ಟಿಫನ್, ಮಧ್ಯಾಹ್ನದ ಬುತ್ತಿ ಕಟ್ಟುವತ್ತ ಗಮನ ಹರಿಸುವ ಮೊದಲು ಕಣ್ಣಿಗೆ ಬೀಳುವುದು ಈ ಅಂಗಳ. ಮನೆಯಿಂದ ಕರ್ತವ್ಯದತ್ತ ಹೊರಡುವಾಗ ಅಂಗಳದ ಸುತ್ತ ಕಣ್ಣಾಡಿಸಿ ಮೆಚ್ಚುಗೆಯ ನೋಟ ಹರಿಸಿದರೆ ಆ ದಿನದ ಆರಂಭ ಸಂತೃಪ್ತಿಯಿಂದ ಕೂಡಿರುತ್ತದೆ.
ಕೆಲವು ದಿನಗಳಿಂದ ಮಳೆ ಹಿಡಿದು ಅಂಗಳದಲ್ಲೆಲ್ಲ ಹಸಿರು ಇನ್ನಷ್ಟು ಎತ್ತರಕ್ಕೆ ಬೆಳೆದಿತ್ತು. ತ್ರಾಣಿ ಗಿಡ, ಕುದನೆ ಗಿಡ, ಮುನಿಗಿಡ, ನಾಯಿ ಕರಂಬು, ಕೆಸುವಿನ ಗಿಡ, ನಾಚಿಕೆ ಮುಳ್ಳು, ಕಾಡುಬಳ್ಳಿ ಅಂಗಳವನ್ನು ಆವರಿಸಿತ್ತು. ಅಲ್ಲಲ್ಲಿ ನೀರು ನಿಂತು ಕೆಸರು ತುಂಬಿತ್ತು. ನಾಚಿಕೆ ಮುಳ್ಳಿನಲ್ಲಿ ಸುಂದರ ಹೂವುಗಳು ಬಿರಿದಿದ್ದುವು. ಕುದನೆ ಗಿಡ ಕಾಯಿ ಬಿಟ್ಟಿತ್ತು. ಅಲ್ಲೇ ಬಟ್ಟೆ ಒಣಗಿಸಲು ಹಗ್ಗ, ತಂತಿಯನ್ನು ಎರಡು ಮೂರು ತೆಂಗಿನ ಮರಗಳಿಗೆ ಕಟ್ಟಿದ್ದೆವು. ಮಳೆ ಹಿಡಿದ ದಿನಗಳಲ್ಲಿ ಸಲೀಸಾಗಿ ಬಟ್ಟೆ ಒಣಗಿಸುವಂತಿಲ್ಲ. ಕೆಸರು, ಬಳ್ಳಿ, ಕಳ್ಳಿ, ಮುಳ್ಳುಗಳ ಜೊತೆ ಹರಸಾಹಸ ಪಡುತ್ತಾ ಬಟ್ಟೆ ಒಣಗಿಸುವಾಗ ಸಾಕು ಸಾಕೆನಿಸುತ್ತದೆ. ಕೆಸರು ನಿಂತ ಸ್ಥಳಗಳನ್ನು ಬಿಟ್ಟು ನಾಚಿಕೆ ಮುಳ್ಳು ಚುಚ್ಚದಂತೆ, ಜಾರಿ ಬೀಳದಂತೆ ಬಲು ಎಚ್ಚರಿಕೆಯಿಂದ ಬಟ್ಟೆ ಒಣಗಿಸ ಬೇಕಾಗುತ್ತದೆ.
ಈ ಹಾಳಾದ ಕುರುಚಲು ಗಿಡಗಳ ಮಧ್ಯೆ ಹೆಜ್ಜೆಯಿಟ್ಟು ಬಟ್ಟೆ ಒಣಗಿಸಲು ಭಯ. ಎಲ್ಲಾದರು ಹಾವು ಗೀವು ಹರಿದಾಡಿದರೂ ಗೊತ್ತಾಗುವುದಿಲ್ಲ. ಈ ಎಲ್ಲಾ ಗಡಿಬಿಡಿಯ ನಡುವೆ ಕಾಲೇಜಿಗೂ ಓಡಬೇಕು. ದೇಹ ಮತ್ತು ಮನಸ್ಸು ಎರಡೂ ಹೊಂದಾಣಿಕೆ ಆಗದ ಹುಟ್ಟು. ಹಲವಾರು ವಿಷಯಗಳಲ್ಲಿ ಹೀಗೆಯೇ. ಹೊಂದಿ ಕೊಳ್ಳಲು ಕಷ್ಟವಾಗುವ ವಿಷಯಗಳಲ್ಲೂ ಹೊಂದಿ ಕೊಳ್ಳಬೇಕು. ಸಂಬಂಧಗಳ ಹಳಿ ತಪ್ಪದಂತೆ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಾ ಕಠಿಣ ಸಂದರ್ಭ ಎದುರಾದಾಗಲೂ ಹೊಂದಾಣಿಕೆಯೊಂದಿಗೆ ಬದುಕಬೇಕು. ಕೆಲವೊಮ್ಮೆ ಭ್ರಮೆಯೊಂದಿಗೆ ಉಸಿರಾಡುತ್ತಾ ಬದುಕು ಕಟ್ಟುವುದೂ ಇದೆ. ಅದುವೇ ಹುಟ್ಟು ಸಾವಿನ ನಡುವಿನ ಬದುಕಿನ ರಹಸ್ಯ.
ಒಂದು ವಾರದಿಂದ ಯಾರಾದರು ಹುಲ್ಲು ಕೀಳುವವರನ್ನು ಕರೆದುಕೊಂಡು ಬನ್ನಿ ಎಂದು ಪತಿಯೊಂದಿಗೆ ದುಂಬಾಲು ಬಿದ್ದಿದ್ದೆ. ನನ್ನ ಪರಿಚಯದ ಅಷ್ಟಿಷ್ಟು ಜನರಲ್ಲೂ ವಿಚಾರಿಸಿದೆ. ಇಂದಿನ ದಿನಗಳು ಹಿಂದಿನಂತಲ್ಲ. ಇಂತಹ ಚಿಲ್ಲರೆ ಕೆಲಸಗಳಿಗೆ ಆಳು ಸಿಗುವುದು ಕಷ್ಟ. ಸಿಕ್ಕರೂ ಗಂಟೆಗಿಷ್ಟೆಂದು ರೊಕ್ಕ ಕೊಡಬೇಕು. ಅಧಿಕಾರ, ಅಂತಸ್ತು, ಹಣ ಎಲ್ಲದಕ್ಕೂ ತಾಳೆ ಹಾಕುವ ಜನರ ಮಧ್ಯೆ ಇಂತಹವರಿಗೆ ಸಿಗುವ ಮಾನ್ಯತೆಯಾದರೂ ಎಷ್ಟಿದೆ! ಬಿಸಿಲು, ಮಳೆ, ಚಳಿ ಎಲ್ಲವನ್ನು ಲೆಕ್ಕಿಸದೆ ದುಡಿಯುವ ಇವರು ಹಲವಾರು ಬಾರಿ ದುಡಿಸುವವರ ಮೂದಲಿಕೆ, ದಬ್ಬಾಳಿಕೆ, ಟೀಕೆ, ತಾತ್ಸಾರಗಳಿಗೆ ಗುರಿಯಾಗುತ್ತಿರುವುದು ನಿತ್ಯದ ಆಟ. ಎಷ್ಟೇ ದುಡಿದರೂ ದುಡಿಸಿದರೂ ಸಾಕಾಗದ ಕಾರ್ಮಿಕ ವರ್ಗ ಇವರದ್ದು. ಬೆವರಾರುವ ಮುನ್ನ ನೀಡಬೇಕಾದ ವೇತನದಲ್ಲೂ ಚೌಕಾಸಿ ನಡೆಸುವವರ ಮಧ್ಯೆ ತಮ್ಮ ದುಡಿಮೆಯನ್ನು ಸಾಬೀತುಪಡಿಸುವ ಸಂದರ್ಭಗಳು ಇವರಿಗೆದುರಾಗುತ್ತಲೇ ಇರುತ್ತವೆ. ಈ ಎಲ್ಲಾ ಅಟ್ಟಹಾಸಗಳನ್ನು ಮಟ್ಟ ಹಾಕುವ ಶಕ್ತಿಯೂ ಕೆಲವೊಮ್ಮೆ ಅವರಿಗಿರುವುದಿಲ್ಲ. ಧ್ವನಿಯೆತ್ತಿದರೂ, ಎದುರು ನಿಂತರೂ ಭಯ ಬಿಡದು. ಮುಂದಿನ ಕಸುಬಿಗೆ ಕಲ್ಲು ಬೀಳಬಹುದೇನೋ ಎಂಬ ಅಂಜಿಕೆ ಅವರ ಮಾತನ್ನು ಕ್ಷಣದಲ್ಲೇ ಮೌನವಾಗಿಸುತ್ತದೆ.
ಈಗ್ಗೆ ಒಂದು ವಾರ ಕಳೆದ ಮೇಲೆ ಅದೆಲ್ಲಿಂದಲೋ ಹುಡುಕಿ ಹುಲ್ಲು ಕೀಳುವವನನ್ನು ಕರೆ ತಂದಿದ್ದರು. ಬಂದವನು ಮಧ್ಯಾಹ್ನದ ನಂತರ ಸಂಜೆ ಐದರವರೆಗೂ ಯಂತ್ರದ ಸಹಾಯದಿಂದ ಹುಲ್ಲು ಕೀಳುತ್ತಲೇ ಇದ್ದ. ಅತ್ತಿತ್ತ ನೋಡದೆ ತನ್ನ ಕೆಲಸದಲ್ಲೇ ಮಗ್ನನಾಗಿದ್ದ. ಗಂಟೆಗಿಷ್ಟೆಂದು ನಿಗದಿ ಪಡಿಸಿ ನಾಲ್ಕು ಗಂಟೆಗಳ ಕಾಲ ತನ್ನ ಕೆಲಸ ಮಾಡಿ ಮುಗಿಸಿದ. ಸಂಜೆ ಚಹಾದ ಸಮಯ. ಚಹಾದ ಜೊತೆ ಉಪ್ಪಿಟ್ಟು ಮಾಡಿಟ್ಟಿದ್ದೆ. ಕೈ ಕಾಲು ಮುಖ ತೊಳೆದು ತಿಂಡಿ, ಚಹಾದ ಬಟ್ಟಲನ್ನು ಎತ್ತಿಕೊಂಡವನು ಹೊಸ್ತಿಲು ದಾಟಿ ಮನೆ ಒಳಗೆ ಬರಲು ಕೇಳಲಿಲ್ಲ. ಅಲ್ಲೇ ಜಗುಲಿಯ ಮೂಲೆಯಲ್ಲಿ ಕೂರಲು ಅತ್ತ ನಡೆದ. ಎಷ್ಟೇ ಕರೆದರೂ ಒಳ ಬರಲೊಪ್ಪಲಿಲ್ಲ. ಕೊನೆಗೆ ಪತಿಯ ಜೋರು ಧ್ವನಿಗೆ ಹಿಡಿದ ಪಟ್ಟನ್ನು ಬಿಟ್ಟು ಒಳ ಬಂದು ಸೋಫಾದ ಮೇಲೆ ಕೂತು ತಿನ್ನತೊಡಗಿದ. “ನಮ್ಮನ್ನು ಈ ರೀತಿ ಒಳ ಕರೆದು ಆದರಿಸುವವರು ಬಹಳ ಕಮ್ಮಿ. ನಮ್ಮ ನೆರಳು ಕಂಡರೆ ಉಗುಳುವ ಜನರೇ ತುಂಬಿದ್ದಾರೆ. ಮುಟ್ಟಿಸಿಕೊಳ್ಳಲು, ಹತ್ತಿರ ಕೂರಿಸಲು ಹಿಂಜರಿಯುವ ಜನರ ಮಧ್ಯೆ ಬದುಕುವವರು ನಾವು. ಮೊನ್ನೆಯಷ್ಟೇ ನನ್ನೊಬ್ಬ ಗೆಳೆಯನಿಗೆ ಇದೇ ಪರಿಸರದಲ್ಲಿ ಛೀಮಾರಿ ಹಾಕಿದವರೂ ಇದ್ದಾರೆ. ಇಂತಹ ಜನರ ತಾತ್ಸಾರ, ಹೀಯಾಳಿಕೆಯಿಂದ ಬೆಳೆದ ನಮಗೆ ಯಾರದೇ ಮನೆಯೊಳಗೆ ಬರಲು ಧೈರ್ಯ ಇಲ್ಲ. ಮನೆ ಬಿಡಿ.. ಅವರ ನಳ್ಳಿಯ ನೀರು ಕುಡಿಯಲೂ ಭಯ. ನಿಮ್ಮಂತಹವರ ಮನೆಯಲ್ಲಿ ಸಿಗುವ ಆದರ, ಆತಿಥ್ಯ ನಮಗೆ ಹಬ್ಬದೌತಣ…” ಎಂದು ಹೇಳುವಾಗ ಆತನ ಕಣ್ಣುಗಳಲ್ಲಿ ಒಂದು ಹೊಳಹು ದಾಟಿತು.
ಇತ್ತೀಚಿನ ದಿನಗಳಲ್ಲಿ ಜಾತಿಯ ಹೆಸರಿನಲ್ಲಿ ಧರ್ಮದ ಕಾರಣವಿಟ್ಟು ಅವಮಾನ, ಅಪಮಾನ, ನಿಂದನೆಗಳನ್ನು ಎದುರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಮಾನತೆಯನ್ನು ಹಾಡಿದ ನಾಡಿನಲ್ಲಿ ಅಸಮಾನತೆಯ ಕರಿಮೋಡದ ನೆರಳು ಹಾಸಿದೆ. ಸಾಮಾಜಿಕ ನ್ಯಾಯದ ಮಾತು ಇನ್ನೂ ದೂರವೇ. ಹೀಗೆ ಜಾತಿಯ ಹೆಸರಿನಲ್ಲಿ ನಿಂದಿಸಲ್ಪಟ್ಟ, ಅವಮಾನಿಸಲ್ಪಟ್ಟ, ಮುಟ್ಟಿಸಿಕೊಳ್ಳದೆ ದೂರ ಇಟ್ಟ ವರ್ಗವು ತಮ್ಮ ಇರುವಿಕೆಯ ಸ್ಥಾನವನ್ನು ಅರ್ಥ ಮಾಡದೆ ತಮ್ಮನ್ನು ತಾವೇ ದೂರ ಇಡುತ್ತಾ ಆ ವ್ಯವಸ್ಥೆಯೊಂದಿಗೆ ರಾಜಿಯಾಗುತ್ತಾ ಬಂದಿರುವುದು ಅವರಲ್ಲೂ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಕನಸು ಕಾಣುವ ಕಣ್ಣುಗಳು ಅವರಲ್ಲೂ ಇವೆ. ಆ ಕನಸಿಗೆ ಬಣ್ಣ ಹಚ್ಚಿ ನನಸಾಗಿಸುವ ಧೈರ್ಯವನ್ನು ಅವರಿಂದ ಬಲವಂತವಾಗಿ ಕಿತ್ತು ತೆಗೆಯಲಾಗಿದೆ. ಕಸಿಯುವವರಿಗೆ ಉತ್ತರವಾಗಿ ಬೆಳೆದವರೂ ಇದ್ದಾರೆ. ಅದು ಅಭಿನಂದನಾರ್ಹ. ಆದರೆ ಕನಸು ಕಾಣಲು ಬಿಡದವರ ನಡುವೆ ಕನಸು ಕಾಣುತ್ತಲೇ ಬೆಳೆಯಬೇಕು. ಮನುಷ್ಯ ಕನಸುಗಳಿಲ್ಲದೆ ಬದುಕಲಾರ.
“ದೀಪಗಳಿಲ್ಲದೆ ಕತ್ತಲೆಯಲ್ಲಿ ನಡೆಯಬಹುದು. ಕನಸುಗಳಿಲ್ಲದೆ ಮನುಷ್ಯ ಬದುಕಲಾರ.” ಗಿರೀಶ್ ಕಾರ್ನಾಡ್ ರವರ ಈ ಸಾಲುಗಳಲ್ಲಿ ಅನುಭವದ ಪಾಠಗಳಿವೆ. ಇದನ್ನು ಇಲ್ಲಿ ನೆನಪಿಸಲು ಕಾರಣವಿದೆ. ಬದುಕು ಎಂಬುದು ಕೆಲವು ಸೀಮಿತ ವರ್ಗಕ್ಕೆ ಮಾತ್ರ ಸಿಕ್ಕ ವರದಾನವಲ್ಲ. ಭೂಮಿಗಿಳಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅದರಲ್ಲೂ ಮನುಷ್ಯ ಮಾತ್ರ ಕನಸುಗಳೊಂದಿಗೆ ಬದುಕುವವನು. ಕನಸು ಕಾಣುವುದಕ್ಕೂ ಇಷ್ಟೆಲ್ಲ ತಡೆಗೋಡೆ, ಕಟ್ಟಳೆಗಳಿದ್ದರೆ ಕನಸು ಕಾಣುವುದು ಬಿಡಿ, ಉಸಿರಾಡುವುದು ಕೂಡ ಕಷ್ಟ. ನೆಲಕ್ಕೆ ಹತ್ತಿರವಾದವರು ನೆಲದವರೊಂದಿಗೆ ಹತ್ತಿರವಾಗುವಂತಿಲ್ಲ. ಕೈ ಕೈ ಮಿಲಾಯಿಸುವಂತಿಲ್ಲ. ಬಿಗಿದಪ್ಪಿಕೊಳ್ಳುವ ಮಾತಂತೂ ಬಲು ದೂರ. ಆ ದೂರಗಳಿಗೆ ಹೊಂದಿಕೊಳ್ಳುವ ಇವರ ಮನಸ್ಥಿತಿಗೆ ಮರುಕವಾಗಲಿಲ್ಲ. ಬದಲಾಗಿ ಇವರು ಯಾವಾಗ ಇಂತಹ ಮನಸ್ಥಿತಿಯಿಂದ ಹೊರ ಬರುವರೆಂಬ ಸಣ್ಣ ನೋವು ಕಾಡಿತು.
ಮೊನ್ನೆ ಮೊನ್ನೆಯಷ್ಟೇ ಜಾತಿಯ ಹೆಸರಿನಲ್ಲಿ ಕೊಲ್ಲಲ್ಪಟ್ಟ ಮುಗ್ಧ ಮಗುವಿನ ಮುಖ ಮರೆಯುವಂತಿಲ್ಲ. ಹಸಿದ ಹೊಟ್ಟೆಯ ಕಾರಣದಿಂದ ಕಳ್ಳತನ ಮಾಡಿದ ಮಧುವಿನ ರೋಧನೆ ಇನ್ನೂ ಮರೆಯಾಗಿಲ್ಲ. ನಳ್ಳಿಯ ನೀರು ಕುಡಿದ ಕಾರಣಕ್ಕೆ ಹೆಂಗಳೆಯರನ್ನು ಬೆತ್ತಲಾಗಿಸಿ ಅಟ್ಟಹಾಸ ಮೆರೆದವರನ್ನು ನೆನೆಯುವಾಗ ಅಸಹ್ಯವಾಗುತ್ತಿದೆ. ಅದೆಷ್ಟೋ ಮಂದಿಯನ್ನು ಈ ಜಾತಿಯ ಹೆಸರಿನಲ್ಲಿ ಕಟ್ಟಿ ಹಾಕಿ, ಕೂಡಿ ಹಾಕಿ ಹಿಂಸಿಸಿದ ಹಿಂಸೆಗಳಿಗೆ ಲೆಕ್ಕವಿದೆಯೇ? ಜೀವಕ್ಕೂ ಮಾನಕ್ಕೂ ಬೆಲೆಯಿಲ್ಲದ ಝಲ್ಲೆನಿಸುವ ಕ್ಷಣಗಳು ಎಷ್ಟು ಬಾರಿ ಬಂದು ಹೋಗಿದ್ದವು? ಮಾನವೀಯತೆಯ ಗಳಿಗೆಗಳಾದ ಪ್ರವಾಹ, ಕೊರೋನಗಳ ಸಂದರ್ಭದ ಮರುಕ್ಷಣದಲ್ಲಿ ಅಮಾನವೀಯತೆಯ ಈ ವೈಪರೀತ್ಯಗಳಿಗೆ ಕೊನೆಯೆಂಬುದು ಇಲ್ಲವೇ ?
ರಾಜಕೀಯ ಕಾರಣಗಳಿಗಾಗಿ, ಅಧಿಕಾರದ ಲಾಲಸೆಗಳಿಗಾಗಿ ಭಾವನೆಗಳನ್ನು, ಸಂಬಂಧಗಳನ್ನು ಗುರುತಿಸಲಾಗದವರ ನಡುವೆ ಬದುಕುತ್ತಿರುವುದು ನಿಜಕ್ಕೂ ಕೆಂಡದ ಮೇಲೆ ಹೆಜ್ಜೆ ಇಟ್ಟಷ್ಟು ತ್ರಾಸ. ಅನಾಥ ಭಾವದೊಂದಿಗೆ, ಅಭದ್ರತೆಯೊಂದಿಗೆ ಬದುಕುವ ಇವರು ಇನ್ನೂ ಮಿಥ್ಯೆಯೆದುರು ಸೆಟೆದು ನಿಲ್ಲದೆ ಆ ಮೌಢ್ಯ ವ್ಯವಸ್ಥೆಯೊಂದಿಗೆ ಹೊಂದಿಕೊಳ್ಳುವುದು, ಅವರ ಕೆಲಸಗಳಿಗೆ ಏಜೆಂಟಾಗಿಯೂ, ಎಂಜಲಾಗಿಯೂ ಬದುಕುತ್ತಿರುವುದು ಇವರನ್ನು ಇವರೇ ಬಾವಿಗೆ ತಳ್ಳಿದಂತೆ. ಅದೂ ಅಲ್ಲದೆ ಅವಮಾನಕ್ಕೊಳಗಾದೆನೆಂದು ತನ್ನ ಜೀವವನ್ನು ತಾನೇ ಕೊಯ್ದುಕೊಂಡ ವಾರ್ತೆ ಮೊನ್ನೆಯಷ್ಟೇ ಪತ್ರಿಕೆಯಲ್ಲಿ ಓದಿ ತುಚ್ಛವೆನಿಸಿತು. ಹೋರಾಟದ ಹಾದಿಯ ಮೂಲಕ ಎಲ್ಲಾ ಕ್ಲೀಷೆಗಳನ್ನು ದಾಟಿ ತಮ್ಮ ಇರುವನ್ನು ಸಾಬೀತು ಪಡಿಸುತ್ತಾ, ತಾವು ಈ ನೆಲದವರೆಂದು ಘೋಷಿಸುತ್ತಾ, ಮೌಲ್ಯ, ಮಾನ್ಯತೆಗಳ ನೆಲೆಯನ್ನು ಕಂಡುಕೊಳ್ಳುತ್ತಾ, ತಮ್ಮೊಳಗೆ ಅಂತರ್ಗತವಾದ ಕಿಚ್ಚನ್ನು ಹೊರ ಹಾಕುತ್ತಾ ಉತ್ತರ ಹುಡುಕುತ್ತಲೇ ನಡೆಯಬೇಕು. ಮಾತು ತಡೆಯುವವರ ಮುಂದೆ ಮಾತನಾಡುತ್ತಲೇ ಇರಬೇಕು. ದಮನಿಸುವವರ ಮಧ್ಯೆ ಎದ್ದೇಳುತ್ತಲೇ ಇರಬೇಕು. ಆಗಲೇ ತಾವಿರುವ ನೆಲದಲ್ಲಿ ತಾವು ಬದುಕ ಬೇಕಾದವರು ಎಂಬ ಭಾವವನ್ನು ಪ್ರಭುತ್ವದೆಡೆಗೆ ದಾಟಿಸುವಂತಾಗುವುದು.
(ಮುಂದುವರಿಯುವುದು..)
ಸಿಹಾನ ಬಿ.ಎಂ.ಉದಯೋನ್ಮುಖ ಲೇಖಕಿ, ಕವಯಿತ್ರಿ