Sunday, March 16, 2025

ಸತ್ಯ | ನ್ಯಾಯ |ಧರ್ಮ

ನನ್ನ ಬೇರುಗಳಿರುವುದು ಕೋಲಾರದ ಮಣ್ಣಿನಲ್ಲಿ: ಈ ಮಣ್ಣಿನ ಋಣ ತೀರಿಸುತ್ತಿದ್ದೇನೆ: ಕೆ ವಿ ಪ್ರಭಾಕರ್

ಕೋಲಾರ ಮಾ 16: ನಾನು ನನಗೆ ಸಿಕ್ಕ ಅವಕಾಶಗಳ ಕಾರಣಕ್ಕೆ ಬಹಳ ಎತ್ತರಕ್ಕೆ ಬೆಳೆದಿದ್ದೇನೆ ಎಂದು ನಿಮಗೆಲ್ಲಾ ಅನ್ನಿಸಿರಬಹುದು ಆದರೆ, ನನ್ನ ಬೇರುಗಳಿರುವುದು ಕೋಲಾರದ ಮಣ್ಣಿನಲ್ಲಿ. ಇದೇ ಮಣ್ಣಿನಲ್ಲಿ ನನ್ನ ಬೇರುಗಳು ಆಳವಾಗಿ ಇಳಿದಿವೆ. ಆದ್ದರಿಂದಲೇ ಈ ಮಣ್ಣಿನ ಋಣ ತೀರಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭಾವನಾತ್ಮಕವಾಗಿ ನುಡಿದರು.

ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಕಲ್ಯಾಣಕ್ಕೆ ಸರ್ಕಾರದಿಂದ 25 ಲಕ್ಷ ರೂ ಅನುದಾನ ಒದಗಿಸಿದಕ್ಕಾಗಿ ಸಂಘ ಮತ್ತು ನಾಗರಿಕ ಜನ ಸಂಘಟನೆಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ನನ್ನ ಹುಟ್ಟು, ಬಾಲ್ಯ ಎಲ್ಲಾ ಕೋಲಾರ ಮಣ್ಣಿನಲ್ಲಿ ಬೆರೆತಿದೆ. ನನ್ನ ಪತ್ರಿಕಾ ವೃತ್ತಿ ಬದುಕನ್ನು ಮಾತ್ರವಲ್ಲ, ನನ್ನ ವ್ಯಕ್ತಿತ್ವವನ್ನು ರೂಪಿಸಿದ್ದೂ ಕೋಲಾರದ ಬೀದಿಗಳು ಎಂದು ಸ್ಮರಿಸಿದರು.

ಕಾರ್ಮಿಕ ಚಳವಳಿ, ದಲಿತ ಚಳವಳಿ, ಅಹಿಂದ ಹೋರಾಟ, ಪ್ರಗತಿಪರ ಚಳವಳಿಗಳ ನೆಲ ಕೋಲಾರ. ಈ ಎಲ್ಲಾ ಹೋರಾಟ, ಚಳವಳಿಗಳಿಗೆ ಸಾಕ್ಷಿಯಾಗಿ ನಾನು ಇಲ್ಲಿ ಬೆಳೆದಿದ್ದೇನೆ. 40 ವರ್ಷಗಳಲ್ಲಿ ಕೋಲಾರದ ಬದುಕು ಮತ್ತು ಬದಲಾವಣೆಗಳನ್ನು ನಾನು ನೋಡಿದ್ದೇನೆ. ಆದರೆ ಕೋಲಾರ ಜನರ ಹೃದಯ, ಪ್ರೀತಿ, ವಿಶ್ವಾಸ ಮಾತ್ರ 40 ವರ್ಷಗಳಿಂದ ಹಾಗೇ ಇದೆ. ಹೀಗಾಗಿ ಕೋಲಾರದ ಮಣ್ಣಿನ ಜೊತೆಗೆ ನನಗೆ ಭಾವನಾತ್ಮಕ ಬೆಸುಗೆ ಇದೆ. ಇವತ್ತು ನಾನು ಸ್ವೀಕರಿಸಿದ ಈ‌ ಅಭಿನಂದನೆ, ಗೌರವ ಎಲ್ಲವನ್ನೂ ಕೋಲಾರ ಜನರ ಹೃದಯಕ್ಕೆ, ಈ ಮಣ್ಣಿಗೆ ಅರ್ಪಿಸುತ್ತೇನೆ.

ನಾನು ಮುಖ್ಯಮಂತ್ರಿಗಳ ಸಲಹೆಗಾರನಾಗಿ, ಕ್ಯಾಬಿನೆಟ್ ದರ್ಜೆ ಪಡೆದು ಕೋಲಾರ ಪ್ರವೇಶಿಸಿದಾಗ ನನಗೆ ಮೊದಲು ನೆನಪಾಗಿದ್ದು ನಾನು ಓದಿದ ಶಾಲೆ, ನನ್ನನ್ನು ತಿದ್ದಿದ ಗುರುಗಳು ಮತ್ತು ನನಗೆ ಮೊದಲ ಸಂಬಳ ಕೊಟ್ಟ ನನ್ನ ಕೋಲಾರ ಪತ್ರಿಕೆ. ಹೀಗಾಗಿ ನಾನು ಓದಿದ ಶಾಲೆಗೆ ಮೊದಲು ಋಣ ತೀರಿಸುವ ಪ್ರಯತ್ನಕ್ಕೆ ಮುಂದಾದೆ. ಹೀಗೇ ಇಲ್ಲಿನ ಪತ್ರಿಕಾ ಸಮೂಹಕ್ಕೆ ಅನುದಾನವನ್ನು ಒದಗಿಸುವ ಸೌಭಾಗ್ಯ ಕೂಡ ನನಗೆ ಒದಗಿ ಬಂತು. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರಕ್ಕಾಗಿ ನಾನು ಕೇಳಿದ್ದೆಲ್ಲವನ್ನೂ ಒದಗಿಸಿದ್ದಾರೆ. ಅವರಿಗೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಮಾಸಿದ ಬಟ್ಟೆಯಲ್ಲಿ ನನ್ನ ಜೊತೆಗೆ ಓಡಾಡದ, ಆಡಿದ, ಒಡನಾಡಿದ ಗೆಳೆಯರು ಇಲ್ಲಿದ್ದಾರೆ. ಒಂದೇ ತಟ್ಟೆಯಲ್ಲಿ ತುತ್ತು ಹಂಚಿಕೊಂಡು ಊಟ ಮಾಡಿದ ಗೆಳೆಯರು ಇಲ್ಲಿದ್ದಾರೆ. ಮೊದಲ ಬಾರಿಗೆ ಒಟ್ಟೊಟ್ಟಿಗೇ ಪೆಗ್ ಹಾಕಿದ ಸ್ನೇಹಿತರೂ ಇಲ್ಲಿದ್ದಾರೆ. ಇವರೆಲ್ಲರೂ ನನ್ನ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಲ್ಲರಿಗೂ ನಾನು ಎದೆಯಾಳದಿಂದ ಅಭಿನಂದಿಸುತ್ತೇನೆ.

ಕೋಲಾರ ನನ್ನ ಜನ್ಮ ಭೂಮಿ, ಕಾಯಕ ಭೂಮಿ, ಕರ್ಮ ಭೂಮಿ ಎಲ್ಲವೂ ಹೌದು. ಇದರ ಋಣ ನನ್ನ ಮೇಲಿದೆ. ಈ ಋಣ ತೀರಿಸುವುಕ್ಕಾಗಿ ನಾನು ನನಗೆ ಸಿಕ್ಕ ಅವಕಾಶಗಳೆಲ್ಲವನ್ನೂ ಬಳಸಿಕೊಳ್ಳುತ್ತೇನೆ ಎಂದು ಭರವಸೆ ನೀಡುತ್ತೇನೆ.

“ನಾವು ಖುಷಿಯಲ್ಲಿದ್ದಾಗ ಚಪ್ಪಾಳೆ ತಟ್ಟಲು ಹತ್ತು ಬೆರಳುಗಳಿರುತ್ತವೆ. ಕಣ್ಣೀರು ಬಂದಾಗ ಒರೆಸಲು ಬರುವುದು ಒಂದೇ ಬೆರಳು” ಎನ್ನುವ ಕೊಪ್ಪಳ ಗವಿ ಮಠದ ಶ್ರೀಗಳ ಮಾತನ್ನು ಉಲ್ಲೇಖಿಸಿ, ಪತ್ರಕರ್ತರ ಕುಟುಂಬಗಳ ಕಣ್ಣೀರು ಒರೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದಾರೆ. ನಾವೆಲ್ಲಾ ಅವರ ನೆರಳಲ್ಲಿ ನಾವಿದ್ದೀವಿ ಎಂದು ಸ್ಮರಿಸಿದರು.

ತಮ್ಮ ವ್ಯಕ್ತಿತ್ವವನ್ನು ರೂಪಿಸಲು ಸಹಕರಿಸಿದ ಕೋಲಾರದ ಎಲ್ಲಾ ಹಿರಿಯ ಪತ್ರಕರ್ತರು ಮತ್ತು ತಮ್ಮ ಶಿಕ್ಷಕರುಗಳ ಹೆಸರಿಡಿದು ಸ್ಮರಿಸಿ ಎಲ್ಲರಿಗೂ ಧನ್ಯತೆ ಅರ್ಪಿಸಿದರು.

ಇದೇ ಸಂದರ್ಭದಲ್ಲಿ ಮೀರಾ ಪ್ರಭಾಕರ್ ಅವರನ್ನೂ ಸಭೆ ಅಭಿನಂದಿಸಿತು.

ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ, ವಸತಿ ಸಚಿವರ ಮಾಧ್ಯಮ ಸಲಹೆಗಾರರಾದ ಲಕ್ಷ್ಮೀನಾರಾಯಣ್, ಅಕಾಡೆಮಿ ಸದಸ್ಯರಾದ ಪತ್ರಕರ್ತ ಚಿದಾನಂದ ಪಟೇಲ್, ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಿನಾಥ್ ಮತ್ತು ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page