Home ಚುನಾವಣೆ 2023 ಮೈಸೂರು ಜಿಲ್ಲೆ ವಿಧಾನಸಭಾ ಕ್ಷೇತ್ರಗಳು: ಅಹಿಂದ ನಾಯಕರ ಜಿಲ್ಲೆಯಲ್ಲಿ ಕೋಮು ಗಲಭೆಯ ಕಿಡಿಗಳು

ಮೈಸೂರು ಜಿಲ್ಲೆ ವಿಧಾನಸಭಾ ಕ್ಷೇತ್ರಗಳು: ಅಹಿಂದ ನಾಯಕರ ಜಿಲ್ಲೆಯಲ್ಲಿ ಕೋಮು ಗಲಭೆಯ ಕಿಡಿಗಳು

0

ಮೈಸೂರು ಒಂದು ಕಾಲದ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ. ಆಡಳಿತ ಸೌಧ ಬೆಂಗಳೂರಿನಲ್ಲಿದ್ದರೂ ಆಡಳಿತದ ದಿಕ್ಕು ನಿರ್ಧರಿಸಬಲ್ಲ ಚಿಂತಕ ದನಿಗಳು ಇಲ್ಲಿಂದ ಹೊರಡುತ್ತಿದ್ದವು. ಇಲ್ಲಿನ ವಿಶ್ವವಿದ್ಯಾಲಯ ಚಿಂತಕ ಸಾಹಿತಿಗಳ ತವರಾಗಿತ್ತು.ಅವರು ಸರಕಾರಗಳ ಚಳಿ ಬಿಡಿಸಬಲ್ಲವರಾಗಿದ್ದರು. ಒಂದು ಬಹಿರಂಗ ಪತ್ರ ಬರೆಯುವ ಮೂಲಕ ರಾಜಕಾರಣಿಗಳಿಗೆ ನಡುಕ ಹುಟ್ಟಿಸಬಲ್ಲವರಾಗಿದ್ದರು. ಮೈಸೂರು ಅರಮನೆ ನಗರ, ಸಾಹಿತ್ಯದ ತೊಟ್ಟಿಲು, ನಿವೃತ್ತರ ಸ್ವರ್ಗ ಹೀಗೆ ಹಲವು ಹೆಸರು ಪಡೆದಿದೆ.

ಹಿರಿಯ ರಾಜಕಾರಣಿಗಳಾದ ಸಿದ್ಧರಾಮಯ್ಯ, ದೇವರಾಜ ಅರಸು ಅವರ ತವರು ಜಿಲ್ಲೆಯಿದೆ. ಈ ಇಬ್ಬರಿಗೂ ಐದು ವರ್ಷಗಳ ಕಾಲ ಸಿಎಮ್‌ ಕುರ್ಚಿಯನ್ನು ಆಳಿದವರು ಎನ್ನುವ ಗರಿಮೆಯಿದೆ. ರಾಜ್ಯದಲ್ಲಿ ಹೀಗೆ ಪೂರ್ಣಾವಧಿ ಮುಖ್ಯಮಂತ್ರಿಗಳು ಇವರಿಬ್ಬರೇ ಎನ್ನುವುದು ಕೂಡಾ ಅವರ ಹೆಮ್ಮೆ. ಈ ಇಬ್ಬರೂ ಅಹಿಂದ ನಾಯಕರು ಎನ್ನುವುದು ಕೂಡಾ ಕಾಕತಾಳೀಯವೇನಲ್ಲ. ಇಲ್ಲಿನ ವೈಚಾರಿಕ ವಾತಾವರಣ ಅವರನ್ನು ಹೀಗೆ ರೂಪಿಸಿದೆ.

ಮೈಸೂರನ್ನು ಗೆಲ್ಲಲು ಬಿಜೆಪಿ ಇಂದಿಗೂ ತಿಣುಕುತ್ತಿದೆ. ಈ ಭಾಗವನ್ನು ಗೆಲ್ಲಲಾಗದೆ ಅದು ಬಹುಮತ ಹತ್ತಿರ ಬಂದು ಎಡವುತ್ತಿದೆ. ಅಷ್ಟರಮಟ್ಟಿಗೆ ಕೋಮುವಾದಿ ಬಿಜೆಪಿಯನ್ನು ಇಷ್ಟು ವರ್ಷಗಳ ಕಾಲ ದೂರವಿಟ್ಟ ಮಂಡ್ಯ-ಮೈಸೂರು ಜನರಿಗೆ ಕರ್ನಾಟಕದ ಜನರು ಋಣಿಯಾಗಿರಬೇಕು.

ಆದರೆ ಮೈಸೂರು ಈಗ ಹಾಗಿಲ್ಲ. ಎಲ್ಲೆಡೆಯಂತೆ ಅಲ್ಲಿಗೂ ಕೋಮುವಾದದ ಕರಾಳ ನೆರಳು ಬೀಳತೊಡಗಿದೆ. ಅವಿದ್ಯಾವಂತ ರಾಜಕಾರಣಿಯಷ್ಟೇ ಅಲ್ಲ ವಿದ್ಯಾವಂತ ರಾಜಕಾರಣಿಯೂ ಮಾರಕವಾಗಬಲ್ಲ ಎನ್ನುವುದನ್ನು ಮಾಜಿ ಅಂಕಣಕಾರ ಕಮ್‌ ಪತ್ರಕರ್ತ ಮತ್ತು ಹಾಲಿ ಸಂಸದ ಪ್ರತಾಪ ಸಿಂಹ ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ. ಅವಕಾಶ ಸಿಕ್ಕಲ್ಲೆಲ್ಲ ಕೋಮು ರಾಜಕಾರಣದ ಪ್ರಯೋಗವನ್ನು ಮಾಡುತ್ತಿರುವ ಸಿಂಹ ನಿಧಾನವಾಗಿ ರೈತ ಸಂಘದ ಪ್ರತೀಕವಾಗಿದ್ದ ಹಸಿರು ಶಾಲು ಹೊದೆಯುತ್ತಿದ್ದ ಹೆಗಲುಗಳು ಕೇಸರಿ ಶಾಲು ತೊಡುವಂತೆ ಮಾಡುತ್ತಿದ್ದಾರೆ. ಶ್ರೀರಂಗಪಟ್ಟಣದ ಮಸೀದಿ ವಿಷಯ ಎತ್ತಿಕೊಂಡು ಒಮ್ಮೆಲೇ ಮಂಡ್ಯ ಮೈಸೂರು ಎರಡನ್ನೂ ಕೋಮು ಸಾಮ್ರಾಜ್ಯವನ್ನಾಗಿಸುವ ಪ್ರಯತ್ನದಲ್ಲಿ ಸಿಟಿ ರವಿ ಸೇರಿದಂತೆ ಹಲವು ರಾಜಕಾರಣಿಗಳು ತೊಡಗಿಕೊಂಡಿದ್ದಾರೆ.

ಮೈಸೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲೀಗ ಭೂಮಿಗೆ ಚಿನ್ನದ ಬೆಲೆ. ಬೆಂಗಳೂರಿಗೆ ಮೈಸೂರನ್ನು ಹತ್ತಿರವಾಗಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಬೆಂಗಳೂರು ಮೈಸೂರಿಗೆ ಹತ್ತಿರವಾದಷ್ಟೂ ರಿಯಲ್‌ ಎಸ್ಟೇಟ್‌ ಎನ್ನುವುದು ಬಾನಿಗೆ ಜಿಗಿಯಲಿದೆ. ಹಾಗೆಯೇ ರಿಯಲ್‌ ಎಸ್ಟೇಟ್‌ ವ್ಯವಹಾರದ ಸುತ್ತಲೂ ಒಂದು ಕ್ಯಾಕ್ಟಸ್‌ ಬೆಳೆಯತೊಡಗುತ್ತದೆ. ಮತ್ತು ಅದು ರಾಜಕಾರಣವನ್ನು ಸಹ ನಿಯಂತ್ರಿಸಲು ಬಯಸುತ್ತದೆ. ಆದರೆ ಹಾಗೆ ಅದು ನಿಯಂತ್ರಿಸಲು ಬರುವಾಗ ತನ್ನ ನಿಜವಾದ ವೇಷದಲ್ಲಿ ಬರುವುದಿಲ್ಲ. ಅದು ದೇವರ ಧರ್ಮದ ಹೆಸರು ಹೇಳಿಕೊಂಡು ಕೂಡಾ ಬರಬಲ್ಲದು. ಜನರನ್ನು ನಿಯಂತ್ರಣಕ್ಕೆ ಪಡೆಯಲು ದೇವರು ಧರ್ಮಕ್ಕಿಂತಲೂ ಒಳ್ಳೆಯ ಆಯುಧ ಇನ್ನೊಂದಿಲ್ಲ.

ಈ ಬಾರಿ ಬಿಜೆಪಿ ಕರ್ನಾಟಕದ ಈ ಭಾಗದಲ್ಲಿ ದೊಡ್ಡ ಮಟ್ಟದಲ್ಲೇ ತನ್ನ ಪ್ರಚಾರ ಕಾರ್ಯಕ್ಕೆ ಇಳಿದಿದೆ. ಅದಕ್ಕಾಗಿ ಅದು ಮೈಸೂರಿನ ರಂಗಾಯಣವನ್ನು ಕೂಡಾ ಬಳಸಿಕೊಂಡು ಟಿಪ್ಪುವಿನ ನಿಜ ಕನಸುಗಳು ಎನ್ನುವ ನಾಟಕವನ್ನು ತನ್ನ ಹಿಂಬಾಲಕ ಅಡ್ಡಂಡ ಕಾರ್ಯಪ್ಪನ ಮೂಲಕ ಬರೆಯಿಸಿ ಪ್ರತಿಭಟನೆಗಳಿಗೆ ಬೆದರಿ ಪೊಲೀಸ್‌ ರಕ್ಷಣೆಯಲ್ಲಿ ನಾಟಕ ಆಡಿಸಿತ್ತು. ಅಲ್ಲದೆ ಉರಿ-ನಂಜೆಗೌಡ್‌ ಎನ್ನುವ ಎರಡು ಕಾಲ್ಪನಿಕ ಪಾತ್ರಗಳು ಒಂದಷ್ಟು ಕಾಲ ಚಲಾವಣೆಗೆ ಬಂದು ನಂತರ ಸ್ಥಳೀಯರ ಆಕ್ರೋಶದಿಂದಾಗಿ ಅವೆರಡು ಪಾತ್ರಗಳು ಅಕಲಾ ಮರಣವನ್ನು ಹೊಂದಿದವು.

ಇಂತಹ ಮೈಸೂರು ಜಿಲ್ಲೆಯಲ್ಲಿ ಒಟ್ಟು ಹನ್ನೊಂದು ವಿಧಾನಸಭಾ ಕ್ಷೇತ್ರಗಳಿದ್ದು ತಿ.ನರಸೀಪುರ, ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರಗಳು. ಹೆಗ್ಗಡದೇವನಕೋಟೆ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿದೆ. ಇನ್ನು ಎಂಟು ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳಾಗಿವೆ. ಇತ್ತೀಚೆಗೆ ಚುನಾವಣಾ ಆಯೋಗ ಬಿಡುಗಡೆ ಮಾಡಿದ ಜಿಲ್ಲಾವಾರು ಮತದಾರರ ಪಟ್ಟಿಯ ಪ್ರಕಾರ ಮೈಸೂರು ಚುನಾವಣಾ ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 2655988. ಅಲ್ಲಿನ ಸದ್ಯದ ಸ್ಥಿತಿ-ಗತಿಗಳನ್ನು ಗಮನಿಸೋಣ ಬನ್ನಿ.

ಪಿರಿಯಾಪಟ್ಟಣ: ಜೆಡಿಎಸ್‌ V/S ಕಾಂಗ್ರೆಸ್

ಈ ಕ್ಷೇತ್ರದ ಇತಿಹಾಸವನ್ನು ಗಮನಿಸಿದರೆ, 1952ರಲ್ಲಿ ವಿಧಾನಸಭೆಗೆ ನಡೆದ ಮೊದಲ ಚುನಾವಣೆಯ ನಂತರ ಇದು ಕಾಂಗ್ರೆಸ್ ಭದ್ರಕೋಟೆಯಾಗಿದೆ. ಕಾಂಗ್ರೆಸ್ ಆರು ಬಾರಿ, ಜನತಾ ಪರಿವಾರ ನಾಲ್ಕು ಬಾರಿ, ಸ್ವತಂತ್ರಎರಡು ಬಾರಿ ಮತ್ತು ಬಿಜೆಪಿ ಒಮ್ಮೆ ಕ್ಷೇತ್ರವನ್ನು ಪ್ರತಿನಿಧಿಸಿದೆ.

ಕುತೂಹಲದ ಸಂಗತಿಯೆಂದರೆ, ಚೊಚ್ಚಲ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಎಸ್‌ಎಂ ಮರಿಯಪ್ಪ 534 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನ ಎಚ್‌ಎಂ ಚನ್ನಬಸಪ್ಪ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದರು.

ಈ ಬಾರಿ ಮತ್ತೊಂದು ಅಧಿಕಾರಾವಧಿಯ ಮೇಲೆ ಕಣ್ಣಿಟ್ಟಿರುವ ಜನತಾ ದಳದ (ಜಾತ್ಯತೀತ) ಕೆ.ಮಹದೇವ್‌ ಅವರು ಅಮ್ ಆದಿ ಪಕ್ಷದ ರಾಜಶೇಖರ್ ದೊಡ್ಡಣ್ಣ, ಕಾಂಗ್ರೆಸ್‌ನ ಕೆ.ವೆಂಕಟೇಶ್ ಮತ್ತು ಭಾರತೀಯ ಜನತಾ ಪಕ್ಷದ ಸಿ.ಎಚ್‌.ವಿಜಯಶಂಕರ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಕಳೆದ ಬಿಜೆಪಿಯಲ್ಲಿ ಈ ಭಾಗದ ನಾಯಕ ವಿಶ್ವನಾಥ್‌ ಅವರು ಮತ್ತೆ ಕಾಂಗ್ರೆಸ್‌ ಪರ ಬ್ಯಾಟ್‌ ಮಾಡಲು ಆರಂಭಿಸಿರುವುದು ಮತ್ತು ಸಿದ್ಧರಾಮಯ್ಯನವರು ಇದೇ ಜಿಲ್ಲೆಯಿಂದ ಸ್ಪರ್ಧಿಸುತ್ತಿರುವುದು ಈ ಬಾರಿಯ ಚುನಾವಣೆಯು ಕಾಂಗ್ರೆಸ್‌ ಪಾಲಿಗೆ ಮತ್ತಷ್ಟು ರೋಚಕವಾಗಿದೆ.

ಇಲ್ಲಿ ಒಕ್ಕಲಿಗ ಮತ್ತು ಕುರುಬ ಮತಗಳು ಬಹುತೇಕ ಸಮಾನಾಗಿದ್ದು ಈ ಸ ಮುದಾಯಗಳ ಮತವನ್ನು ಕಸಿಯಲು ಯಶಸ್ವಿಯಾದವರು ಗೆಲ್ಲುವುದು ಪಕ್ಕಾ.

2018ರಲ್ಲಿ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಕೆ. ಮಹದೇವ 7493 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ರನ್ನರ್ ಅಪ್ ಆಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಕೆ.ವೆಂಕಟೇಶ್ ಕಣದಲ್ಲಿ ಉಳಿದಿದ್ದರು, ಜೆಡಿಎಸ್ ಒಟ್ಟು ಮತಗಳಲ್ಲಿ 49.95% ರಷ್ಟನ್ನು ಗಳಿಸಿದರೆ, INC 45.14% ಮತಗಳನ್ನು ಗಳಿಸಿತ್ತು. ಕಾಂಗ್ರೆಸ್‌ನ ಕೆ. ವೆಂಕಟೇಶ್ ವಿರುದ್ಧ 2013 ಮತ್ತು 2008ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ JD(S) K. ಮಹದೇವ ಅವರಿಗೆ ಇದು ಅಚ್ಚರಿಯ ಗೆಲುವಾಗಿತ್ತು. ಕಳೆದ ಬಾರಿ ಬಿಜೆಪಿ ಇಲ್ಲಿ ಕೇವಲ 4,047 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿತ್ತು. ಈ ಬಾರಿ ಬಿಜೆಪಿಯಿಂದ ಸಿ ಎಚ್‌ ವಿಜಯಶಂಕರ್‌ ನಿಂತಿದ್ದಾರೆ.

ಪಿರಿಯಾಪಟ್ಟಣವನ್ನು 15 ವಾರ್ಡುಗಳನ್ನಾಗಿ ವಿಂಗಡಿಸಲಾಗಿದ್ದು, 2019ರ ಲೋಕಸಭಾ ಚುನಾವಣೆಯ ಪ್ರಕಾರ ಪಿರಿಯಾಪಟ್ಟಣವು 183642 ಮತದಾರರನ್ನು ಒಳಗೊಂಡಿದೆ. ಅದರಲ್ಲಿ 32% ಒಕ್ಕಲಿಗ ಮತದಾರರು 20% ಕುರುಬ ಮತದಾರರು, 12% ಮೇಲ್ಜಾತಿ ಸಮಾಜದ ಮತದಾರರು ಮತ್ತು 6% ಲಿಂಗಾಯತ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಗ್ರಾಮೀಣ ಮತದಾರರು ಸರಿಸುಮಾರು 171,044, ಉಳಿದ 12,598 (ಸುಮಾರು 6.80%) ನಗರ ಮತದಾರರು, ವಿಧಾನಸಭಾ ಕ್ಷೇತ್ರದಲ್ಲಿ 31,605 ಎಸ್‌ಸಿ ಮತದಾರರಿದ್ದರೆ 15573 ಎಸ್‌ಟಿ ಮತದಾರರಿದ್ದಾರೆ.

ಒಟ್ಟಾರೆಯಾಗಿ ಈ ಬಾರಿ ಈ ಕ್ಷೇತ್ರ ಕಾಂಗ್ರೆಸ್‌ ಪಾಲಾಗುವ ಸಾಧ್ಯತೆಗಳು ಹೆಚ್ಚಿವೆ.

ಹುಣಸೂರು: ಅರಸರ ಊರಿನ ಪಟ್ಟ ಯಾರಿಗೆ?

ಕರ್ನಾಟಕ ಕಂಡ ಮೊದಲ ಅಹಿಂದ ನಾಯಕ ದೇವರಾಜ ಅರಸುವವರನ್ನು ಹಲವು ಬಾರಿ ಆರಿಸಿ ಕಳಿಸಿದ್ದ ಈಕ್ಷೇತ್ರದಲ್ಲಿ ಕಳೆದ ಬಾರಿ ಎಚ್‌ ವಿಶ್ವನಾಥ್‌ ಗೆದ್ದಿದ್ದರು. ಆದರೆ ಅವರು ನಂತರ ಬಾಂಬೆಯಲ್ಲಿ ನಡೆದ ಆಪರೇಷನ್‌ಗೆ ಬಲಿಯಾಗಿ ಕಮಲ ಪಾಳಯಕ್ಕೆ ಹೋಗಿದ್ದರು. ನಂತರ ಬಿಜೆಪಿಯಿಂದ ಸ್ಪರ್ಧಿಸಿ 39,727 ಭಾರೀ ಅಂತರದಿಂದ ಹೀನಾಯ ಸೋಲು ಕಂಡಿದ್ದರು. ಕಳೆದ ಬಾರಿ ಇವರೆದುರು ಗೆದ್ದು ಬೀಗಿದ ಎಚ್. ಪಿ ಮಂಜುನಾಥ್ ಈ ಬಾರಿ ಮತ್ತೆ ಟಿಕೆಟ್‌ ಪಡೆದು ಬೀಗಿದ್ದಾರೆ. ಇನ್ನು ಬಿಜೆಪಿ ಪಕ್ಷದಿಂದ ದೇವರಹಳ್ಳಿ ಸೋಮಶೇಖರ್‌ ನಿಂತಿದ್ದಾರೆ. ಇತ್ತ ಜೆಡಿಎಸ್ ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡರ ಪುತ್ರ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಅವರಿಗೆ ಇಲ್ಲಿ ಟಿಕೆಟ್ ಘೋಷಿಸಿದೆ. ಹೀಗಾಗಿ ಇಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನೇರಾನೇರ ಸ್ಪರ್ಧೆಯಿರಲಿದೆ. ಕಳೆದ ಬಾರಿ ಬಿಜೆಪಿಯಲ್ಲಿದ್ದ ವಿಶ್ವನಾಥ್‌ ಈ ಬಾರಿ ಕಾಂಗ್ರೆಸ್‌ ಕಡೆ ಒಲವು ತೋರಿದ್ದಾರೆ.

ನಂಜನಗೂಡು: ಅನುಕಂಪದ ಅಲೆಗೆ ಜೆಡಿಎಸ್‌ ಬೆಂಬಲ

ಕಾಂಗ್ರೆಸ್ಸಿನ ಕೋಟೆಯಾಗಿದ್ದ ಈ ಕ್ಷೇತ್ರವನ್ನು ಕಾಂಗ್ರೆಸ್ಸಿನಿಂದ ಹೊರಬಂದು ಬಿಜೆಪಿ ಸೇರಿದ ಶ್ರೀನಿವಾಸಪ್ರಸಾದ್‌ ತಮ್ಮ ಅಳಿಯನನ್ನು ಬಿಜೆಪಿಯಿಂದ ಕಣಕ್ಕಿಳಿಸಿ ತಮ್ಮ ವಶಮಾಡಿಕೊಂಡು ಕಮಲ ಪತಾಕೆ ಹಾರಿಸಿದರು. ಆದರೆ ಈ ಬಾರಿ ಗೆಲುವಿನ ಪತಾಕೆ ಮತ್ತೆ ಕಾಂಗ್ರೆಸ್‌ ನಾಯಕರ ಮನೆಯ ಮೇಲೆ ಹಾರುವ ಎಲ್ಲಾ ಸಾಧ್ಯತೆ ಕಂಡುಬರುತ್ತಿದೆ. ಈ ಹಿಂದೆ ಇಲ್ಲಿನ ಸಂಸದರಾಗಿದ್ದ ಧ್ರುವ ನಾರಾಯಣ ಅವರು ಇತ್ತೀಚೆಗೆ ತೀರಿಕೊಂಡಿದ್ದರು. ಅದಾದ ಕೆಲವೇ ದಿನಗಳಲ್ಲಿ ಅವರ ಪತ್ನಿಯೂ ತೀರಿಕೊಂಡರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅವರ ಮಗನಾದ ದರ್ಶನ್ ಧ್ರುವನಾರಾಯಣ್ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿ ಟಿಕೆಟ್‌ ನೀಡಿ ಕಣಕ್ಕಿಳಿದಿದೆ. ಇಲ್ಲಿ ತನ್ನದೇ ಆದ ಮತ ಗೊಂಚಲನ್ನು ಹೊಂದಿರುವ ಜೆಡಿಎಸ್‌ ಕೂಡಾ ದರ್ಶನ್‌ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿ ತನ್ನ ಉಮೇದುವಾರಿಕೆಯಿಂದ ಹಿಂದೆ ಸರಿದಿದೆ.

ಈ ಬಾರಿ ಗೆಲುವು ದರ್ಶನ್‌ ಧ್ರುವನಾರಾಯಣ್‌ ಗೆಲ್ಲುವ ಎಲ್ಲಾ ಲಕ್ಷಣಗಳೂ ಇದ್ದು ಹಾಲಿ ಶಾಸಕ ಹರ್ಷವರ್ಧನ್‌ ಗೆಲ್ಲಲು ಬಹಳ ಶ್ರಮ ಹಾಕಬೇಕಿದೆ.

ಕೆ ಆರ್‌ ನಗರ: ಸಾರಾ ಓಟಕ್ಕೆ ಬೀಳುವುದೆ ಕಡಿವಾಣ?

ಬಿಜೆಪಿ ಅಡ್ರೆಸ್ಸಿಗೇ ಇಲ್ಲದ ಕ್ಷೇತ್ರಗಳಲ್ಲಿ ಕೃಷ್ಣರಾಜನಗರ ಕ್ಷೇತ್ರ ಕೂಡಾ ಒಂದು. ಇದುವರೆಗೂ ಬಿಜೆಪಿ ಇಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಕಳೆದ ಸಲ ಅದು ಇಲ್ಲಿ ಪಡೆದ ಮತ 2,716. ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಕಳೆದ ಬಾರಿ ಇಲ್ಲಿ ಕತ್ತುಕತ್ತಿನ ಹೋರಾಟ ನಡೆದಿತ್ತು ಸಾರಾ ಮಹೇಶ್‌ ಕಾಂಗ್ರೆಸ್‌ ಅಭ್ಯರ್ಥಿ ರವಿ ಶಂಕರ್‌ ಅವರ ವಿರುದ್ಧ ಕೇವಲ 1,779 ಮತಗಳ ಅಂತರದಿಂದ ಗೆದ್ದು ಜೆಡಿಎಸ್‌ ಪಕ್ಷದಿಂದ ಶಾಸಕರಾಗಿದ್ದರು.

ಇದು ಒಂದು ಕಾಲದ ಎಚ್‌ ವಿಶ್ವನಾಥ್‌ ಅವರ ಕ್ಷೇತ್ರ. ಆದರೆ ಅವರೀಗ ಇಲ್ಲಿಂದ ಸ್ಪರ್ಧಿಸುತ್ತಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಳೆದ ಬಾರಿಯ ಉಮೇದುವಾರರುಗಳನ್ನೇ ಕಣಕ್ಕಿಳಿಸಿದ್ದು ಇಬ್ಬರೂ ಗೆಲ್ಲುವ ಭರವಸೆಯೊಂದಿಗೆ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಈ ಬಾರಿ ಬಿಜೆಪಿ ವೆಂಕಟೇಶ್‌ ಹೊಸಳ್ಳಿ ಎನ್ನುವವರನ್ನು ಕಣಕ್ಕಿಳಿಸಿದೆ.

ಸಾರಾ ಮಹೇಶ್‌ ನಾಲ್ಕನೇ ಬಾರಿ ಇಲ್ಲಿಂದ ಆಯ್ಕೆ ಬಯಸಿ ಕಣಕ್ಕಿಳಿದ್ದಿದ್ದಾರಾದರೂ ಈ ಬಾರಿ ಅವರು ಒಳ್ಳೆಯ ವಿಷಯಗಳಿಗೆ ಸುದ್ದಿಯಾಗಿದ್ದಕ್ಕಿಂತಲೂ ಕೆಟ್ಟ ವಿಷಯಗಳಿಗೆ ಸುದ್ದಿಯಾಗಿದ್ದೇ ಹೆಚ್ಚು. ಇಲ್ಲಿ ಡಿಸಿಯಾಗಿದ್ದ ರೋಹಿಣಿ ಸಿಂಧೂರಿಯವರೊಡನೆ ನೇರಾ ನೇರ ಹೋರಾಟಕ್ಕೆ ಇಳಿದು ಪರಸ್ಪರ ಕೆಸರು ಎರಚಾಟ ಮಾಡಿಕೊಂಡಿದ್ದಾರೆ. ಇದರಲ್ಲಿ ಸಾರಾ ಮಹೇಶ ಅವರ ವಿರುದ್ಧ ಭೂ ಹಗರಣದ ಆರೋಪವೂ ಕೇಳಿ ಬಂದಿತ್ತು. ಇದನ್ನೆಲ್ಲ ಮೀರಿ ಗೆಲ್ಲುವರೇ ಎನ್ನುವುದನ್ನು ಕಾದು ನೋಡಬೇಕಿದೆ.

ಇನ್ನು ರವಿಶಂಕರ್‌ ಕೂಡಾ ಕಳೆದ ಬಾರಿಯ ಸೋಲನ್ನು ಈ ಬಾರಿ ಗೆಲುವಾಗಿ ಪರಿವರ್ತಿಸುವ ಆತುರದಲ್ಲಿದ್ದಾರೆ.

ತಿ. ನರಸೀಪುರ: ಮತ್ತೆ ಗೆಲ್ಲುವರೇ ಮಹದೇವಪ್ಪ?

ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆದ್ದ ದಾಖಲೆ ಹೊಂದಿರುವ ಡಾ. ಎಚ್‌ ಸಿ ಮಹದೇವಪ್ಪ ಕಳೆದ ಬಾರಿ ಜೆಡಿಎಸ್‌ ಅಭ್ಯರ್ಥಿ ಎಮ್‌ ಅಶ್ವಿನ್‌ ಕುಮಾರ್‌ ಅವರೆದುರು ಸೋತಿದ್ದರು. ಈ ಬಾರಿ ಮತ್ತೆ ಕ್ರಮವಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಟಿಕೆಟ್‌ ನೀಡಿದ್ದರೆ ಬಿಜೆಪಿ ಸರ್ಕಾರಿ ವೈದ್ಯರಾಗಿದ್ದ ರೇವಣ್ಣ ಎನ್ನುವವರನ್ನು ಕಣಕ್ಕಿಳಿಸುವ ಮೂಲಕ ತಂತ್ರ ಹೂಡಿದೆ.

ಇದುವರೆ ಕ್ಷೇತ್ರದಿಂದ ಸ್ಪರ್ಧಿಸಿದ ಎಂಟು ಚುನಾವಣೆಗಳಲ್ಲಿ ಐದರಲ್ಲಿ ಗೆದ್ದಿರುವ ಮಹದೇವಪ್ಪನವರು ಪಕ್ಕಾ ಅಂಬೇಡ್ಕರ್‌ ವಾದಿಯೂ ಹೌದು. ಇವರು ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ಬಾರಿ ತನ್ನ ಮಗನಿಗೆ ಕ್ಷೇತ್ರವನ್ನು ಬಿಟ್ಟುಕೊಡುವ ಯೋಚನೆಯಲ್ಲಿದ್ದ ಅವರು ಕೊನೆಯ ಕ್ಷಣದಲ್ಲಿ ನಿರ್ಧಾರ ಬದಲಾಯಿಸಬೇಕಾಯಿತು.

ಅಮ್ ಆದಿ ಪಕ್ಷ (ಎಎಪಿ)ದಿಂದ ಸೋಸಲೆ ಸಿದ್ಧರಾಜು ಹಾಗೂ ಬಿಎಸ್ಪಿಯಿಂದ ಬಿ.ಆರ್.ಪುಟ್ಟಸ್ವಾಮಿ ಟಿಕೆಟ್ ಪಡೆದುಕೊಂಡಿದ್ದಾರೆ. ಜಾತ್ಯಾತೀತ ಮತಗಳು ವಿಭಜನೆಯಾದಲ್ಲಿ ಬಿಜೆಪಿ ಅದರ ಲಾಭ ಪಡೆಯುವ ಸಾಧ್ಯತೆಯಿದೆ.

ಹೆಗ್ಗಡದೇವನ ಕೋಟೆ: ಬಿಜೆಪಿಯ ಪಾಲಿಗೆ ಕಗ್ಗತ್ತಲ ಕೋಟೆ

ಹೆಗ್ಗಡದೇವನ ಕೋಟೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆಯೇ ಹಣಾಹಣಿ ನಡೆಯಲಿದೆ. ಇಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಈ ಬಾರಿ ಮತ್ತೆ ಅನಿಲ್‌ ಚಿಕ್ಕಮಾದು ಗೆಲ್ಲುವ ಭರವಸೆಯಲ್ಲಿದ್ದಾರೆ. ಅತ್ತ ಜೆಡಿಎಸ್‌ನಿಂದ ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್‌ ಅವರಿಗೆ ಟಿಕೆಟ್‌ ಸಿಕ್ಕಿದೆ. ಬಿಜೆಪಿಯಿಂದ ಸ್ಥಳೀಯ ಮುಖಂಡ ಕೃಷ್ಣ ನಾಯಕ್‌ ಅವರಿಗೆ ಟಿಕೆಟ್‌ ದೊರಕಿದ್ದು ಇವರು ಸಾಕಷ್ಟು ಬೆಂಬಲಿಗರನ್ನು ಹೊಂದಿದ್ದಾರಾದರೂ ಮೊದಲ ಸಲವೇ ಚುನಾವಣೆ ಗೆಲ್ಲುವುದು ಕಷ್ಟ. ಇಲ್ಲೇನಿದ್ದರೂ ಈಗ ಇಬ್ಬರು ಮಾಜಿ ಶಾಸಕರ ಮಕ್ಕಳ ನಡುವೆ ಪೈಪೋಟಿ ನಡೆಯಲಿದೆ.

ಕೃಷ್ಣರಾಜ: ರಾಮದಾಸನಿಲ್ಲದ ಬಿಜೆಪಿಗೆ ಗೆಲು ದಕ್ಕೀತೆ?

ಇದೊಂದು ಬ್ರಾಹ್ಮಣ ಬಾಹುಳ್ಯದ ಕ್ಷೇತ್ರವಾಗಿದ್ದು ಇಲ್ಲಿಂದ ರಾಮದಾಸ್‌ ನಾಲ್ಕು ಬಾರಿ ಗೆದ್ದಿದ್ದಾರೆ. ಆದರೆ ಅವರಿಗೆ ಈ ಬಾರಿ ಪಕ್ಷ ಟಿಕೆಟ್‌ ನೀಡಿಲ್ಲ. ಮೊದಲಿಗೆ ಸಾಕಷ್ಟು ಹೈಡ್ರಾಮ ಕ್ರಿಯೆಟ್‌ ಮಾಡಿದ್ದ ರಾಮದಾಸ್‌ ನಂತರ ಟಿಕೆಟ್‌ ಪಡೆದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಬಿಜೆಪಿ ಈ ಬಾರಿ ಶ್ರೀವತ್ಸ ಎನ್ನುವವರಿಗೆ ಟಿಕೆಟ್‌ ನೀಡಿದ್ದರೆ ಕಾಂಗ್ರೆಸ್‌ ತನ್ನ ಹಿಂದಿನ ಅಭ್ಯರ್ಥಿ ಎಂ ಕೆ ಸೋಮಶೇಖರ ಅವರಿಗೆ ಟಿಕೆಟ್‌ ನೀಡಿದೆ. ಜೆಡಿಎಸ್‌ ಪಕ್ಷದಿಂದ ಮಲ್ಲೇಶ್ ಕಣಕ್ಕಿಳಿದಿದ್ದು ಕಳೆದ ಬಾರಿ ಅವರು ಮೂರನೇ ಸ್ಥಾನದಲ್ಲಿದ್ದರು. ಈ ಬಾರಿ ಬಿಜೆಪಿಯಲ್ಲಿ ರಾಮದಾಸ್‌ ಏನಾದರೂ ಕೈಚಳಕ ತೋರಿದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ರೊಟ್ಟಿ ಜಾರಿ ತುಪ್ಪದಲ್ಲಿ ಬೀಳುವುದು ಖಾತರಿ.

ಚಾಮರಾಜ: ಬಿಜೆಪಿಯ ಭದ್ರಕೋಟೆ

ಇದು ಇನ್ನೊಂದು ಬಿಜೆಪಿಯ ಭದ್ರಕೋಟೆ ಇಲ್ಲಿಂದ ಬಿಜೆಪಿಯ ಶಂಕರಲಿಂಗೇಗೌಡ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲೂ ಇಲ್ಲಿಂದ ಬಿಜೆಪಿಯೇ ಗೆದ್ದಿದೆ. ಈ ಬಾರಿಯೂ ಬಿಜೆಪಿ ಹಾಲಿ ಶಾಸಕ ಎಲ್‌ ನಾಗೇಂದ್ರ ಅವರಿಗೆ ಟಿಕೆಟ್‌ ನೀಡಿದೆ.

ಇತ್ತ ಕಾಂಗ್ರೆಸ್‌ ಕೆ. ಹರೀಶ್ ಗೌಡ ಅವರಿಗೆ ಟಿಕೆಟ್‌ ನೀಡಿದರೆ ಜೆಡಿಎಸ್‌ ಎಚ್ ಕೆ ರಮೇಶ್ ಅವರಿಗೆ ಟಿಕೆಟ್‌ ನೀಡಿದೆ. ಆಮ್‌ ಆದ್ಮಿ ಪಕ್ಷದಿಂದ ಮಾಳವಿಕ ಗುಬ್ಬಿವಾಣಿ ಕಣದಲ್ಲಿದ್ದಾರೆ.

ಈ ಬಾರಿ ಮೈಸೂರಿನಿಂದಲೇ ಸಿದ್ಧರಾಮಯ್ಯನವರೂ ಸ್ಪರ್ಧಿಸುತ್ತಿರುವುದರಿಂದ ಅದರ ಅನುಕೂಲ ದೊರೆತಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಬಹುದು ಇಲ್ಲವಾದಲ್ಲಿ ಬಿಜೆಪ್ ಅಭ್ಯರ್ಥಿ ಗೆಲ್ಲುವುದು ಪಕ್ಕಾ.

  ಕ್ಷೇತ್ರದಲ್ಲಿ 2,42,760 ಮತದಾರರಿದ್ದು ಈ ಪೈಕಿ 1,23,030 ಮಹಿಳಾ ಮತದಾರರು ಹಾಗೂ 1,19,701 ಪುರುಷ ಮತದಾರರು. 29 ಇತರ ಮತದಾರರಿದ್ದಾರೆ. ಇಲ್ಲಿ ಮಹಿಳಾ ಅ=ಮತದಾರರದೇ ಮೇಲುಗೈ. ಇಲ್ಲಿ ಗೆದ್ದವರಲ್ಲಿ ಎಲ್ಲರೂ ಒಕ್ಕಲಿಗ ಅಭ್ಯರ್ಥಿಗಳೇ ಅಗಿದ್ದು ಇದೊಂದು ಒಕ್ಕಲಿಗ ಮತ ಬಾಹುಳ್ಯದ ಕ್ಷೇತ್ರವಾಗಿದೆ.

ನರಸಿಂಹರಾಜ ಕ್ಷೇತ್ರ: ಮತ್ತೆ ಗೆಲ್ಲುವರೇ ತನ್ವೀರ್‌ ಶೇಠ್?‌

ಇದು ತನ್ವೀರ್‌ ಶೇಠ್‌ ಮತ್ತು ಅಜೀಜ್‌ ಶೇಠ್‌ ಅವರ ಖಾಯಂ ಗೆಲ್ಲುವ ಕ್ಷೇತ್ರ. ಈ ಅಪ್ಪ ಮಗನ ಜೋಡಿ ಇಲ್ಲಿ ಒಟ್ಟು ಹನ್ನೊಂದು ಬಾರಿ ಗೆದ್ದಿದೆ. ಮುಸ್ಲಿಂ ಬಾಹುಳ್ಯದ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವೆನ್ನುವುದು ಸದಾ ಕಟ್ಟಿಟ್ಟ ಬುತ್ತಿ.

ಆದರೆ ಈ ಬಾರಿ ಕಾಂಗ್ರೆಸ್‌ನ ಈ ಬುತ್ತಿಯನ್ನು ಕಸಿದು ಉಣ್ಣಲು ಎಸ್‌ಡಿಪಿಐ ಮತ್ತು ಬಿಜೆಪಿ ಹೊಂಚುಹಾಕಿ ಕಾದಿವೆ. ಈ ಬಾರಿ ಬಿಜೆಪಿ ಸಂದೇಶ್‌ ನಾಗರಾಜ್‌ ಅವರ ತಮ್ಮ ಸ್ವಾಮಿ ಸಂದೇಶ್‌ ಅವರಿಗೆ ಟಿಕೆಟ್‌ ನೀಡಿದೆ. ಸಂದೇಶ್‌ ಅವರು ಪ್ರಸ್ತುತ ಕಾಂಗ್ರೆಸ್‌ ಪಕ್ಷದಲ್ಲಿದ್ದಾರೆ. ಜೆಡಿಎಸ್‌ ಪಕ್ಷದಿಂದ ಅಬ್ದುಲ್ ಖಾದರ್ ಶಾಹಿದ್ ಕಣಕ್ಕಿಳಿದಿದ್ದರೆ ಆಮ್‌ ಆದ್ಮಿ ಪಕ್ಷದಿಂದ ಧರ್ಮಶ್ರೀ ಎನ್ನುವವರು ಕಣದಲ್ಲಿದ್ದಾರೆ. ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಕೂಡಾ ಕಣದಲ್ಲಿದ್ದು ಅವರು ಕಳೆದ ಬಾರಿ 33 ಸಾವಿರ ಚಿಲ್ಲರೆ ವೋಟುಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದರು. ಈ ಬಾರಿ ಏನಾದರೂ ಅದಕ್ಕಿಂತಲೂ ದೊಡ್ಡ ಮಟ್ಟದ ವೋಟು ಕಸಿದಲ್ಲಿ ಜೆಡಿಎಸ್‌, ಎಸ್‌ಡಿಪಿಐ ಪಕ್ಷಗಳು ಸೇರಿ ತನ್ವೀರ್‌ ಸೇಠ್‌ ಅವರನ್ನು ಮನೆಯಲ್ಲಿ ಕೂರಿಸುವುದು ಗ್ಯಾರಂಟಿ.

ಚಾಮುಂಡೇಶ್ವರಿ: ಒಂದು ಕಾಲದ ಸಿದ್ಧರಾಮಯ್ಯನವರ ಅಖಾಡ

ಕಳೆದ ಬಾರಿ ಇಲ್ಲಿಂದ ಸಿದ್ಧರಾಮಯ್ಯ ಭಾರೀ ಅಂತರದಿಂದ ಹೀನಾಯವಾಗಿ ಸೋತಿದ್ದರೂ ಹಿಂದೆ ಐದು ಬಾರಿ ಇಲ್ಲಿಂದ ಗೆದ್ದು ಬೀಗಿದ್ದಾರೆ. ಪ್ರಸ್ತುತ ಜಿಟಿ ದೇವೇಗೌಡರ ಶಾಸಕತ್ವದಲ್ಲಿರುವ ಈ ಕ್ಷೇತ್ರಕ್ಕೆ ಈ ಬಾರಿಯೂ ಅವರೇ ಜೆಡಿಎಸ್ ಅಭ್ಯರ್ಥಿ.

ಕಾಂಗ್ರೆಸ್‌ ಪಕ್ಷದಿಂದ ಸಿದ್ದೇಗೌಡ ಸ್ಪರ್ಧಿಸಿದ್ದರೆ ಬಿಜೆಪಿಯಿಂದ ಕವೀಶ್‌ ಗೌಡ ಸ್ಪರ್ಧಿಸಿದ್ದಾರೆ, ಇದು ಈಗ ಒಕ್ಕಲಿಗರ ತ್ರಿಕೋನ ಸ್ಪರ್ಧೆಯ ಕ್ಷೇತ್ರವಾಗಿ ಮಾರ್ಪಟ್ಟಿದ್ದು ಜಿಟಿಡಿ ಗೆಲ್ಲುವುದು ಬಹುತೇಕ ಖಚಿತ.

ವರುಣಾ: ಈ ಬಾರಿಯ ಚುನಾವಣೆಯ ಹಾಟ್‌ಸ್ಪಾಟ್‌

ಈ ಮೊದಲು ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದ ಸಿದ್ಧರಾಮಯ್ಯ ಕೊನೆಗೆ ವರುಣಾವನ್ನೇ ಆಯ್ಕೆ ಮಾಡಿಕೊಂಡರು. ಅತ್ತ ಬಿಜೆಪಿಯಿಂದ ವಿಜಯೇಂದ್ರ ನಿಲ್ಲುತ್ತಾರೆಂದು ಎಲ್ಲೆಡೆ ಗುಲ್ಲು ಹಬ್ಬಿಸಲಾಗಿತ್ತಾದರೂ ಯಡಿಯೂರಪ್ಪ ತನ್ನ ಮಗನನ್ನು ಹರಕೆಯ ಕುರಿ ಮಾಡಲು ಒಪ್ಪದೆ ವಿಜಯೇಂದ್ರರಿಗೆ ಶಿಕಾರಿಪುರದಿಂದಲೇ ಟಿಕೆಟ್‌ ಗಿಟ್ಟಿಸಿಕೊಂಡರು. ಕೊನೆಗೆ ತೀರಾ ಮೊನ್ನೆಯವರೆಗೂ ಆಗ ಕಾಂಗ್ರೆಸ್‌ ಸೇರಿದರು ಈಗ ಕಾಂಗ್ರೆಸ್‌ ಸೇರಿದರು ಎಂದು ಬೇಲಿ ಮೇಲೆಯೇ ಕುಳಿತಿದ್ದ ಸೋಮಣ್ಣನಿಗೆ ಚಾಮರಾಜನಗರದ ಜೊತೆಗೆ ವರುಣಾ ಟಿಕೆಟನ್ನು ಕೂಡಾ ನೀಡಲಾಗಿದೆ.

ಸೋಮಣ್ಣನಿಗೆ ಟಿಕೆಟ್‌ ನೀಡಿರುವುದರ ಹಿಂದೆ ಅವರು ಲಿಂಗಾಯತರು ಎನ್ನುವ ಲೆಕ್ಕಾಚಾರವಿದೆ. ಇಲ್ಲಿ ಆ ಸಮುದಾಯದ ಮತ ಬಹಳಷ್ಟು ಇರುವುದರಿಂದ ಜಾತಿಪ್ರೇಮ ವರ್ಕೌಟ್‌ ಆಗಬಹುದು ಎನ್ನುವುದು ಬಿಜೆಪಿಯ ಲೆಕ್ಕಾಚಾರ. ಇನ್ನು ಲಿಂಗಾಯತರಲ್ಲದೆ ಕುರುಬ ಮತ್ತು ಪರಿಶಿಷ್ಟ ಸಮುದಾಯಗಳ ಮತವೂ ಇಲ್ಲಿ ಧಾರಾಳವಾಗಿದ್ದು ಈಗ ಸಿದ್ಧರಾಮಯ್ಯ ಆ ಮತಗಳ ಮೇಲೆ ಹೆಚ್ಚು ಅವಲಂಬಿತರಾಗಿರಬೇಕಾಗಿದೆ.

ಬಿಜೆಪಿಯವರಿಗೇ ಇಲ್ಲಿ ಸೋಮಣ್ಣ ಗೆಲ್ಲುವುದರ ಕುರಿತು ಅನುಮಾನವಿದ್ದು ಪ್ರತಾಪ ಸಿಂಹ ಮಾತ್ರ ಗೆಲ್ಲಿಸಿಯೇ ತೀರುವವರ ಹಾಗೆ ಕ್ಷೇತ್ರದ ಎಲ್ಲೆಡೆ ಓಡಾಡುತ್ತಿದ್ದಾರೆ. ಇನ್ನು ಇಲ್ಲಿ ಬಿಜೆಪಿಯಿಂದ ಡಾ.ಭಾರತಿ ಶಂಕರ್ ಕಣದಲ್ಲಿದ್ದಾರೆ.

You cannot copy content of this page

Exit mobile version