Friday, February 20, 2026

ಸತ್ಯ | ನ್ಯಾಯ |ಧರ್ಮ

ಮೈಸೂರಿನಲ್ಲಿ ಹೀಲಿಯಂ ಬಲೂನ್ ಬಳಕೆ ನಿಷೇಧ

ಮೈಸೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ಶಾಂತಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಬಲೂನ್‌ಗಳಿಗೆ ತುಂಬಲು ಹೀಲಿಯಂ ಗ್ಯಾಸ್ ಸಿಲಿಂಡರ್‌ಗಳನ್ನು ಬಳಸುವುದನ್ನು ನಿಷೇಧಿಸಿ ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಟ್ಕರ್ ಅವರು ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ಮೈಸೂರು ಅರಮನೆಯ ಜಯಮಾರ್ತಾಂಡ ಗೇಟ್ ಬಳಿ ಬಲೂನ್ ಮಾರಾಟಗಾರನೊಬ್ಬ ಬಳಸುತ್ತಿದ್ದ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡು ಮೂವರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದ ಘಟನೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಸಿಲಿಂಡರ್ ಸ್ಫೋಟದಂತಹ ಅವಘಡಗಳು ಮರುಕಳಿಸದಂತೆ ತಡೆಯಲು ಸೀಮಾ ಲಟ್ಕರ್ ಅವರು ‘ಭಾರತೀಯ ನ್ಯಾಯ ಸಂಹಿತೆ 2023’ರ (BNS) ಸೆಕ್ಷನ್ 153 ರ ಅಡಿಯಲ್ಲಿ ತಮಗೆ ನೀಡಲಾದ ಅಧಿಕಾರವನ್ನು ಬಳಸಿ ಈ ಆದೇಶವನ್ನು ಹೊರಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಪಾಯಕಾರಿ ಅನಿಲ ಸಿಲಿಂಡರ್‌ಗಳ ಬಳಕೆಯು ಜನರ ಜೀವಕ್ಕೆ ಸಂಚಕಾರ ತರುವ ಸಾಧ್ಯತೆ ಇರುವುದರಿಂದ ಈ ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಹಬ್ಬಗಳು ಅಥವಾ ವಿಶೇಷ ಸಮಾರಂಭಗಳ ಸಂದರ್ಭದಲ್ಲಿ ಮೈಸೂರಿನಲ್ಲಿ ಬಲೂನ್ ಮಾರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ, ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಿರಬೇಕು ಮತ್ತು ನಿಯಮ ಪಾಲನೆಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page