Tuesday, June 18, 2024

ಸತ್ಯ | ನ್ಯಾಯ |ಧರ್ಮ

ನದಿ ಹರಿಯಲಿ ಎದೆ ಬಯಲಲಿ..

ವಿಶ್ವ ನದಿ ದಿನ ವಿಶೇಷ

ಒಂದು ಭಾಷೆ ನಾಶವಾದರೆ ಒಂದು ಸಂಸ್ಕೃತಿ ನಾಶವಾದಂತೆ. ಹಾಗೆಯೇ ಒಂದು ನದಿ ಬತ್ತಿ ಹೋದರೆ ಕೂಡಾ ಒಂದು ಸಂಸ್ಕೃತಿ ನಾಶವಾಗುತ್ತದೆ. ಅಷ್ಟು ಮಾತ್ರವಲ್ಲ ಅದರೊಂದಿಗೆ ಲಕ್ಷಾಂತರ ಜನರ ಬದುಕೂ ನಾಶವಾಗುತ್ತದೆ ಎನ್ನುತ್ತಾರೆ ಕೃಷಿಕ, ರಂಗಕರ್ಮಿ ಪ್ರಸಾದ ರಕ್ಷಿದಿ.  

 ಭೂಮಿ, ನಮ್ಮ ಇದುವರೆಗಿನ ಜ್ಞಾನದ ಪ್ರಕಾರ ಜಗತ್ತಿನ ಏಕೈಕ ಜೀವಂತ ಗ್ರಹ. ವಿಶ್ವದಲ್ಲಿ ಬೇರೆ ಕಡೆಗಳಲ್ಲಿ ಜೀವಸಂಕುಲ ಇರಬಹುದು ಎನ್ನುವುದು ಸಕಾರಣವಾದ ಊಹೆ, ಅಭಿಪ್ರಾಯ ಎಲ್ಲವೂ. ನಮ್ಮ ಭೂಮಿಯಲ್ಲಿ ಜೀವಸಂಕುಲ ಬೆಳೆಯಲು ಉಳಿಯಲು ಖಗೋಳದಲ್ಲಿನ ಅನೇಕ ಸಂಗತಿಗಳು ಮತ್ತು ಈ ಗ್ರಹದ ಹಲವಾರು ವೈಶಿಷ್ಟ್ಯಗಳು ಕಾರಣವಾಗಿವೆ.. ವೈಜ್ಞಾನಿಕ ಅಧ್ಯಯನಗಳು ಮುಂದುವರೆದಂತೆ ಇದಕ್ಕೆ ಇನ್ನೂ ಹಲವಾರು ಸಂಗತಿಗಳು ಸೇರಬಹುದು.

ಭೂಮಿಯಲ್ಲಿನ ಜೀವಸಂಕುಲದ ಇರುವಿಕೆಗೆ ಅತ್ಯಂತ ‌ಮುಖ್ಯ ಕಾರಣಗಳೆಂದರೆ ಇಲ್ಲಿರುವ ಗಾಳಿ ಮತ್ತು ನೀರು. ಮತ್ತೆ

ಇವೆರಡರಲ್ಲಿ ನೀರು ಮತ್ತು ನೀರಿನ ಪರಿವರ್ತನಾ ಚಕ್ರದ ಒಂದು ಭಾಗವೇ ಭೂಮಿಯ ಪಾಲಿಗೆ ರಕ್ತ ನಾಳಗಳಂತಿರುವ ನದಿಗಳು. ಪ್ರಾಣಿಗಳಲ್ಲಿ ಜೀವ ಉಳಿಯಲು ರಕ್ತ ಪರಿಚಲನೆ ಎಷ್ಟು ಮುಖ್ಯವೋ ಭೂಮಿಯಲ್ಲಿ ಜೀವಸಂಕುಲ ಉಳಿಯಲು ನದೀಜಾಲ ಅಷ್ಟೇ ಮುಖ್ಯವಾದುದು.

ಸೂರ್ಯನ ಶಕ್ತಿಯಿಂದ ಆವಿಯಾಗುವ ಸಮುದ್ರದ ಮತ್ತು ಭೂಮಿಯ ಮೇಲಿರುವ ನೀರು‌ ಮಂಜಾಗಿಯೋ ಮಳೆಯಾಗಿಯೋ ಸುರಿದು ನದಿಗಳಾಗುವುದು ಎಲ್ಲರಿಗೂ ಗೊತ್ತು. ಇವುಗಳು ನೆಲದ ಮೇಲೆ ಬಿದ್ದು ಸಾಕಷ್ಟು ಪ್ರಮಾಣದಲ್ಲಿ ಇಂಗುತ್ತದೆ. ಭೂಮಿಯ ರಚನೆ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ, ಅದರಂತೆ ಇಂಗುವ ಪ್ರಮಾಣ ವ್ಯತ್ಯಾಸವಾಗುತ್ತದೆ. ಅದರೂ ಒಟ್ಟೂ ಭೂಮಂಡಲದಲ್ಲಿ ನೆಲಕ್ಕೆ ಬಿದ್ದ ನೀರಿನ ಮೂರನೇ ಎರಡು ಪಾಲು ಭೂಮಿಯಲ್ಲಿ ಇಂಗಿ ಅಂತರ್ಜಲವಾಗುತ್ತದೆ. ಇದರಲ್ಲಿ ಕೆಲವು ಭಾಗ ನಂತರದ ದಿನಗಳಲ್ಲಿ ನಿರಂತರವಾಗಿ  ನದಿಯ ಹರಿವಿಗೆ ಮತ್ತು ಸಸ್ಯಗಳ ಉಳಿವಿಗೆ ಕಾರಣವಾಗುತ್ತದೆ.

ಒಟ್ಟು ನೆಲಕ್ಕೆ ಬೀಳುವ ನೀರಿನ ಮೂರನೇ ಒಂದು ಭಾಗ ಮಾತ್ರ  ನಾನಾ ವಿಧದಲ್ಲಿ ಹರಿದು ಕಾಲುವೆ, ಹಳ್ಳ ತೊರೆಗಳಾಗಿ ಒಗ್ಗೂಡಿ ನದಿಗಳಾಗಿ ಗಾತ್ರವನ್ನೂ ಬಲವನ್ನೂ ಹೆಚ್ಚಿಸಿಕೊಂಡು ತಗ್ಗಿನಲ್ಲಿ ಹರಿದು ಸಮುದ್ರದ ಕಡೆಗೆ ಸಾಗುತ್ತವೆ.. ಇವೇ ನಮ್ಮ ಜೀವ ಸಂಕುಲದ ಮುಖ್ಯ ರಕ್ತನಾಳಗಳು.

ನೆಲದ ರಚನೆ ಈ ನೀರಿನ ಹರಿವಿಗೆ ಎಷ್ಟು ಕಾರಣವೋ ಹಾಗೆ ನೆಲದ ರಚನೆಯನ್ನು ಬದಲಾಯಿಸುವುದರಲ್ಲಿ ಈ ನದಿಗಳು ಅಂದರೆ ನೀರಿನ ಹರಿವು ಕಾರಣವಾಗುತ್ತದೆ. ಒಂದು ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣ ಮತ್ತು ಮಾದರಿ ಅಲ್ಲಿ ಹರಿಯುವ ನದಿಗಳ ಗುಣ ಲಕ್ಷಣಗಳನ್ನು ಹೇಗೆ ನಿರ್ಧರಿಸುತ್ತದೋ ಹಾಗೆ ಅಲ್ಲಿ ಹರಿಯುವ ನದಿಗಳು ಅಲ್ಲಿನ ಸಸ್ಯ ಮತ್ತು ಪ್ರಾಣಿ ಸಂಕುಲವನ್ನು ಮತ್ತು ಅವುಗಳ ಬದುಕನ್ನು ನಿರ್ಧರಿಸುತ್ತದೆ.

ಮಳೆ ಬಿದ್ದು ಅಥವಾ ಹಿಮ ಕರಗಿ ನದಿಗಳಾಗಿ ಹರಿಯುವ ಜಾಡಿನಲ್ಲಿ ಭೂ ಸವಕಳಿ ಉಂಟಾಗುತ್ತದೆ. ಪ್ರತಿವರ್ಷ ಲಕ್ಷಾಂತರ ಟನ್ ಗಳಷ್ಟು ಮಣ್ಣು ಈ ಮೂಲಕ ಸಮುದ್ರ ಸೇರುತ್ತದೆ. ಸಹಜವಾಗಿಯೇ ನಡೆಯುವ ಈ ಭೂ ಸವಕಳಿ ನಿರಂತರವಾಗಿ ನಡೆಯುತ್ತಿದ್ದು ಒಂದು ಅಧ್ಯಯನದ ಪ್ರಕಾರ ಈ ರೀತಿಯ ಭೂ ಸವಕಳಿಯಿಂದ ಬೆಟ್ಟ ಗುಡ್ಡ, ಎತ್ತರ ತಗ್ಗುಗಳಿಂದ ಕೂಡಿದ ನೆಲ ಮಟ್ಟಸವಾಗುತ್ತ ಹೋಗುತ್ತದೆ. ಸುಮಾರು ಎರಡೂವರೆ ಕೋಟಿ ವರ್ಷಗಳಲ್ಲಿ ಇಡೀ ಭೂಮಿಯ ನೆಲ ಸಮುದ್ರ ಮಟ್ಟಕ್ಕೆ ಬರುತ್ತದೆ! ಅಂದರೆ ಭೂಮಿ ಒಂದು ಉರುಟಾದ ಚೆಂಡಿನಂತಾಗಬಹುದು. ಅಥವಾ ಮತ್ತೆ ಭೂ ಖಂಡದ ಚಲನೆಗಳಿಂದ ಒತ್ತಡವುಂಟಾಗಿ ಬೆಟ್ಟ ಗುಡ್ಡಗಳು ಮತ್ತೆ ಮೇಲೇಳಬಹುದು. ಇವೆಲ್ಲ ವೈಜ್ಞಾನಿಕ ಅಧ್ಯಯನದ ವಿಷಯಗಳು.

ನೀರಿನಿಂದ ನಡೆಯುವ ಭೂ ಸವಕಳಿಯನ್ನು ತಡೆಯುವುದು ಮತ್ತು ನಿಧಾನಗೊಳಿಸುವುದು ಸಸ್ಯ ಸಂಕುಲ ಮಾತ್ರವೇ. ಪ್ರಕೃತಿ ಅಂತಹ ಸಸ್ಯಗಳನ್ನು ತಾನೇ ಸೃಷ್ಟಿಸಿಕೊಂಡಿದೆ. ಇವೆಲ್ಲ ಪ್ರಕೃತಿಯಲ್ಲಿ ಸಹಜವಾಗಿ ನಡೆಯುವ ವಿದ್ಯಮಾನಗಳಾದವು. ಆದರೆ ಈ ಭೂಮಿಯಲ್ಲಿ ಮನುಷ್ಯನೆಂಬ ಜೀವಿ ಹುಟ್ಟಿ ಬುದ್ಧಿವಂತ ಎನಿಸಿಕೊಂಡ ನಂತರ ಇವೆಲ್ಲ ಬದಲಾಗುತ್ತ ಬಂದಿವೆ.

ಮನುಷ್ಯನ ಸಮೂಹ ಜೀವನ ಪದ್ಧತಿಯಿಂದಾಗಿ ಜನರು ಒಂದೆಡೆಯಲ್ಲಿ ನೆಲೆಸಲು ಪ್ರಾರಂಭಿಸಿದ್ದರಿಂದ ನಾಗರಿಕತೆ ಹುಟ್ಟಿತು.. ಇದು ಮೊದಲು ಅವತರಿಸಿದ್ದೇ ನದಿಗಳ ದಡದಲ್ಲಿ ಎಂದು ಇತಿಹಾಸ ತಿಳಿಸುತ್ತದೆ. ಪ್ರತಿಯೊಂದು ನದಿಯನ್ನೂ ಒಂದೊಂದು ಸಂಸ್ಕೃತಿಯ ತಾಣ ಎನ್ನುತ್ತೇವೆ. ಪ್ರತಿಯೊಂದು ಸಂಸ್ಕೃತಿಯೂ ನದಿಯನ್ನು ತಾಯಿಯೆಂದೋ, ದೇವತೆಯೆಂದೋ ಭಾವಿಸಿದೆ. ಪವಿತ್ರವೆಂದು ಪರಿಗಣಿಸಿದೆ. ನದೀ ತಟದಲ್ಲಿ ಹಲವಾರು ಧೀಮಂತರು ವಿಜ್ಞಾನಿಗಳು ಹುಟ್ಟಿದ್ದಾರೆ. ಗ್ರಂಥಗಳು ರಚನೆಯಾಗಿವೆ.  ನಮ್ಮ ಮಹಾಕಾವ್ಯಗಳು ನದಿಗಳಂತೆಯೇ ಜನ ಮಾನಸದಲ್ಲಿ ಹರಿದಿವೆ.

ನಮ್ಮ ಕೃಷಿ, ಪಶುಪಾಲನೆ, ರಾಜ್ಯಗಳ ಸ್ಥಾಪನೆ ಎಲ್ಲವೂ ನದಿಗಳ ಪಕ್ಕಗಳಲ್ಲಿಯೇ ಪ್ರಾರಂಭವಾದದ್ದು. ಅಷ್ಟೇ ಯಾಕೆ ಅನೇಕ ಯುದ್ಧಗಳೂ ಸಂಭವಿಸಿದ್ದು ಕೂಡಾ ನದಿಗಳ ದಡದಲ್ಲಿ ಮತ್ತು ಹಲವು ಸಲ ನದಿಗಳಿಗಾಗಿಯೇ.

ಮನುಷ್ಯ ನಗರಜೀವಿಯಾದ ನಂತರ ಎಲ್ಲವೂ ವೇಗ ಪಡೆದುಕೊಳ್ಳ ತೊಡಗಿತು. ಆತನ ಎಲ್ಲ ಚಟುವಟಿಕೆಗಳು, ಭಾಷೆ, ಉಪಕರಣಗಳ ಬಳಕೆ, ನಂತರ ಯಂತ್ರಗಳ ಆವಿಷ್ಕಾರ ಇತರ ಕಲಿಕೆಗಳು, ಆ ಮೂಲಕ ತನ್ನ ಶಕ್ತಿ ಹೆಚ್ಚಿಸಿಕೊಳ್ಳುವುದು ಮತ್ತು ವಿಸ್ತರಿಸಿಕೊಳ್ಳುವುದು ವೇಗ ಪಡೆದುಕೊಂಡಿತು. ಕಳೆದ ಐದು ಸಾವಿರ ವರ್ಷಗಳಲ್ಲಿ ಈ ಪಕೃತಿಯಲ್ಲಿ ಮನುಷ್ಯನ ಹಸ್ತಕ್ಷೇಪದ ವೇಗೋತ್ಕರ್ಷ ಹೇಗಿದೆಯೆಂದರೆ ಅದು ಭೂಮಿಗೆ ಬೀಳುತ್ತಿರುವ ಉಲ್ಕೆಯಂತೆ ವೇಗ ಹೆಚ್ಚಿಸಿಕೊಳ್ಳುತ್ತಿದೆ.

ಅಂತಾರಾಷ್ಟ್ರೀಯ ಖ್ಯಾತಿಯ ಜಲ ಸಂರಕ್ಷಣ ಹೋರಾಟಗಾರ ಮಾರ್ಕ್‌ ಏಂಜೆಲೊ ೧೯೮೦ರಲ್ಲಿ ಪಶ್ಚಿಮ ಕೆನಡಾದಲ್ಲಿ ಜಾಗತಿಕ ಮಟ್ಟದಲ್ಲಿ ನದಿಗಳ ದಿನಾಚರಣೆಯನ್ನು ಆಚರಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ನೀರಿನ ಮಹತ್ತ್ವವನ್ನು ಅರಿತ ವಿಶ್ವಸಂಸ್ಥೆಯು ಜಲಮೂಲಗಳನ್ನು ಸಂರಕ್ಷಿಸುವ ಉದ್ದೇಶದಿಂದ 2005 ರಲ್ಲಿ ʼವಾಟರ್ ಫಾರ್ ಲೈಫ್ʼ ಎಂಬ ಸಂದೇಶದೊಂದಿಗೆ ಸೆಪ್ಟೆಂಬರ್‌ ತಿಂಗಳ ಕೊನೆಯ ಭಾನುವಾರವನ್ನು ವಿಶ್ವ ನದಿಗಳ ದಿನ ಎಂದು ಘೋಷಿಸಿತು. ಅಂದಿನಿಂದ ಜಲ ಸಂಪನ್ಮೂಲಗಳ ಬಗ್ಗೆ ಕಾಳಜಿ ವಹಿಸುವ ಅಗತ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಈ ದಿನವನ್ನು ಅಚರಿಸುತ್ತಿದ್ದು  ಈ ಬಾರಿ ಸೆ. ೨೫ ವಿಶ್ವ ನದಿ ದಿನವಾಗಿರುತ್ತದೆ. ನದಿ ನಮ್ಮ ಜೀವನದುದ್ದಕ್ಕೂ ಹರಿದು ಬದುಕು ರೂಪಿಸಿಕೊಳ್ಳುವಲ್ಲಿ ಮೊದಲ ಸ್ಥಾನ ಅಲಂಕರಿಸುವ ಜೀವ ಜಲ. ಆದರೆ ಪ್ರತಿ ದೇಶವೂ ಇವುಗಳನ್ನು ಶುಚಿಯಾಗಿ ಇಟ್ಟುಕೊಳ್ಳುವಲ್ಲಿ ಸೋಲುತ್ತಲೇ ಇದೆ; ಓಂದಿಲ್ಲೊಂದು ನದಿ ಅಪಾಯದ ಸ್ಥಿತಿಯನ್ನು ತಲಪುತ್ತಲೇ ಇದೆ. ಜನರು ಎಚ್ಚೆತ್ತು ಕಾರ್ಯ ನಿರತರಾದರೆ ಮಾತ್ರ ನಮ್ಮ ಭವಿಷ್ಯದ ಪೀಳಿಗೆಗೆ ಸತ್ತ ನದಿಗಳನ್ನಷ್ಟೇ ಪರಿಚಯಿಸುವ ದಿನಗಳಿಂದ ಹೊರಗುಳಿಯಬಹುದು.

ನದಿ ದಡದಲ್ಲಿ ನೆಲೆನಿಂತ ಮನುಷ್ಯ ನದಿಯನ್ನು ತನ್ನ ಉಪಯೋಗಕ್ಕಾಗಿ ಬಳಸತೊಡಗಿದ. ಅದು ಸಂಚಾರಕ್ಕಿರಬಹುದು ಕೃಷಿಗೂ ಇರಬಹುದು. ನದಿಯ ಹರಿವಿನಲ್ಲಿ, ನದೀ ಪಾತ್ರಗಳಲ್ಲಿ ಹಲವಾರು ಬದಲಾವಣೆಗಳನ್ನು ಆತ ಮಾಡತೊಡಗಿದ. ನಂತರ ಇದು ಇತರ ಪ್ರಾಕೃತಿಕ ವಿಷಯಗಳತ್ತ ಹೊರಳಿತು. ಅರಣ್ಯಕ್ಕೆ ಲಗ್ಗೆಯಿಟ್ಟ.. ಖನಿಜ ಜ್ಞಾನ ಗಳಿಸಿದ ನಂತರ ಗುಡ್ಡ ಬೆಟ್ಟಗಳೂ ಅವನ ಸ್ವತ್ತಾದವು… ಇವೆಲ್ಲವೂ ನದಿಗಳಿಂದ ಸಹಜವಾಗಿ ನಡೆಯುತ್ತಿದ್ದ ಭೂ ಸವಕಳಿಯ ವೇಗವನ್ನು ಹಲವು ಪಟ್ಟು ಹೆಚ್ಚಿಸಿದವು.

 ಇವೆಲ್ಲವೂ ಒಂದು ಹಂತವಾದರೆ, ಸದ್ಯದ ಒಂದು ಶತಮಾನ ಅಂದರೆ ಜಗತ್ತಿನಲ್ಲಿ ಕೈಗಾರಿಕಾ ಕ್ರಾಂತಿ ನಡೆದು ಮನುಷ್ಯ ಆಧುನಿಕವೆನ್ನುವ ಈ ಕಾಲಕ್ಕೆ ಬಂದ ನಂತರ ನಡೆಯುತ್ತಿರುವ ವಿದ್ಯಮಾನಗಳು ಮತ್ತು ಅವುಗಳ ವೇಗ ಊಹೆಗೂ ಮೀರಿದ್ದು. ಮನುಷ್ಯನ ಉಪಭೋಗಗಳ ಹಸಿವು ಭೂತಾಕಾರವಾಯಿತು. ಇದರ ಮೊದಲ ಬಲಿಯೇ ನದಿಗಳು. ಕೈಗಾರಿಕೆಗಳು ನದಿಯ ದಡದಲ್ಲೇ ತಲೆಯೆತ್ತಿದವು, ನಗರಗಳು ಎಲ್ಲೆ ಮೀರಿ ಬೆಳೆದವು. ನೀರಿನ ಬಳಕೆ ನೂರಾರು ಪಟ್ಟು ಹೆಚ್ಚಿತು. ನೀರಿಗಾಗಿ ನದಿಗಳನ್ನು ದೋಚಿದೆವು, ಮರಳಿಗಾಗಿ ನದಿಗಳನ್ನು ಬಗೆದೆವು, ಎಲ್ಲ ಕಸ ಕಡ್ಡಿ, ತ್ಯಾಜ್ಯ, ವಿಷವಸ್ತುಗಳು ಎಲ್ಲವನ್ನೂ ನದಿಗೆ ಸುರಿದೆವು.. ಸುರಿಯುತ್ತಲೇ ಇದ್ದೇವೆ. ಇದೆಲ್ಲದರಿಂದಾಗಿ ವಾತಾವರಣದಲ್ಲಿ ಕೂಡಾ ಹಲವು ಬದಲಾವಣೆಗಳಾದವು. ಅವೆಲ್ಲದರ ಪರಿಣಾಮವನ್ನು ಈಗ ನಾವು ಅನುಭವಿಸುತ್ತಿದ್ದೇವೆ..

ಹಿಂದೆ ಕೂಡಾ ಕೆಲವು ನದಿಗಳು ಸಂಪೂರ್ಣವಾಗಿ ಬತ್ತಿ ಹೋಗಿ ಮಾಯವಾದ ಉದಾಹರಣೆಗಳಿವೆ.. ಈಗ ಅವುಗಳ ಸಾಧ್ಯತೆ ಹಲವಾರು ಪಟ್ಟು ಹೆಚ್ಚಾಗಿದೆ.

ನದಿಗಳಿಗಾಗಿ ಯುದ್ಧಗಳಾಗಿವೆ, ಆಗುತ್ತಿವೆ. ಮನುಷ್ಯ ನಾಗರಿಕತೆಯಲ್ಲಿ ಭಾಷೆಯನ್ನು ನದಿಗೆ ಹೋಲಿಸಲಾಗುತ್ತಿದೆ. ಒಂದು ಭಾಷೆ ನಾಶವಾದರೆ ಒಂದು ಸಂಸ್ಕೃತಿ ನಾಶವಾದಂತೆ. ಒಂದು ನದಿ ಬತ್ತಿ ಹೋದರೆ ಕೂಡಾ ಒಂದು ಸಂಸ್ಕೃತಿ ನಾಶವಾಗುತ್ತದೆ, ಅಷ್ಟು ಮಾತ್ರವಲ್ಲ ಅದರೊಂದಿಗೆ ಲಕ್ಷಾಂತರ ಜನರ ಬದುಕೂ ನಾಶವಾಗುತ್ತದೆ.

ಪ್ರಸಾದ್ ರಕ್ಷಿದಿ
ರಂಗಕರ್ಮಿ, ಕೃಷಿಕ

Related Articles

ಇತ್ತೀಚಿನ ಸುದ್ದಿಗಳು