Saturday, July 13, 2024

ಸತ್ಯ | ನ್ಯಾಯ |ಧರ್ಮ

ನಿರೂಪಕಿ ಅಪರ್ಣಾ ನೆನಪಿನಲ್ಲಿ ಪತಿ, ಕತೆಗಾರ ನಾಗರಾಜ ವಸ್ತಾರೆ ಬರೆದ ಕವಿತೆ

ಕನ್ನಡ ದೂರದರ್ಶನದ ಆರಂಭಿಕ ನಿರೂಪಕರಲ್ಲಿ ಒಬ್ಬರಾಗಿದ್ದ ಅಪರ್ಣಾ ವಸ್ತಾರೆ ಕನ್ನಡಿಗರ ನೆಚ್ಚಿನ ನಿರೂಪಕಿಯೂ ಹೌದು. ಸರ್ಕಾರಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ತಮ್ಮ ನಿರೂಪಣೆಯ ಮೂಲಕ ಜೀವ ತುಂಬುತ್ತಿದ್ದ ಅರ್ಪಣಾ ನಿನ್ನೆ ನಮ್ಮನ್ನು ಅಗಲಿದ್ದಾರೆ. ಅವರು ಹಲವು ದಿನಗಳಿಂದ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದರು.

ಅಪರ್ಣಾ ಕೆಲವು ವರ್ಷಗಳ ಹಿಂದೆ ಕತೆಗಾರ, ಕವಿ ಹಾಗೂ ವಾಸ್ತುಶಿಲ್ಪಿ ನಾಗರಾಜ ವಸ್ತಾರೆಯವರನ್ನು ಮದುವೆಯಾಗಿದ್ದರು.

ಅಪರ್ಣಾ ಅಗಲಿಕೆಯ ನೋವು ಇಡೀ ರಾಜ್ಯದ್ದೂ ಹೌದಾದರೂ, ಸಂಗಾತಿಯನ್ನು ಕಳೆದುಕೊಂಡ ನಾಗರಾಜ ವಸ್ತಾರೆಯವರ ನೋವನ್ನು ನಾವು ಅಳೆಯಲಾಗದು. ಅವರು ತಮ್ಮ ಸಂಗಾತಿಯ ಅಗಲಿಕೆಯ ನೋವನ್ನು ಕಾವ್ಯ ರೂಪದಲ್ಲಿ ವ್ಯಕ್ತಪಡಿಸಿದ್ದು, ಆ ಕವಿತೆಯನ್ನು ಪೀಪಲ್‌ ಮೀಡಿಯಾ ತನ್ನ ಓದುಗರಿಗಾಗಿ ಹಂಚಿಕೊ‍ಳ್ಳುತ್ತಾ ವಸ್ತಾರೆಯವರ ನೋವಿನಲ್ಲಿ ಭಾಗಿಯಾಗುತ್ತಿದೆ. ಅವರಿಗೆ ನೋವನ್ನು ಸಹಿಸುವ ಶಕ್ತಿ ಸಿಗಲಿ ಎಂದು ಮೂಲಕ ಪ್ರಾರ್ಥಿಸುತ್ತಿದ್ದೇವೆ

ಬೆಳಗಿಕೊಂಡಿರೆಂದು
ಕಿಡಿ ತಾಕಿಸಿ ಹೊರಟಿತು
ಹೆಣ್ಣು

ಚಿತ್ತು ತೆಗೆದು
ಬತ್ತಿಯ ನೆತ್ತಿ ಚೆನ್ನಾಗಿಸಿ
ತಿರುಪಿ ತಿದ್ದಿ

ಇರು
ತುಸುವಿರೆಂದು ಕರೆದರೂ
ನಿಲ್ಲದೆಯೇ
ಬೇರಾವುದೋ ಕರೆಗೆ
ತಣ್ಣಗೆ ಓಗೊಟ್ಟ ಮೇರೆ
ಯಲ್ಲಿ

ಒಂದೇ ಒಂದು
ನಿಮಿಷ
ಬಂದೇನೆಂದು ಕಡೆಗಳಿಗೆ
ಯ ಸೆರಗಿನ ಬೆನ್ನಿನಲ್ಲಿ
ಅಂದು.

ಕಾದಿದ್ದೇನೆ
ಈಗ ಬಂದಾಳೆಂದು
ಆಗ ಬಂದಾಳೆಂದು
ಮರಳಿ
ಜೀವ ತಂದಾಳೆಂದು
ಇದು
ಮೂರನೇ ದಿವಸ

ಇಷ್ಟಾಗಿ
ಬೆಳಗಲಿಟ್ಟ ಕಿರಿಸೊಡರ
ಬೆಳಕು ನಾನು
ಉರಿವುದಷ್ಟೇ ಕೆಲಸ
ಇರುವ ತನಕ.

Related Articles

ಇತ್ತೀಚಿನ ಸುದ್ದಿಗಳು