ಇ-20 ಕುರಿತು ಪ್ರಶ್ನಿಸಿದ ನಾಲ್ವರು ಇನ್‌ಫ್ಲೂಯೆನ್ಸರ್‌ಗಳ ವಿರುದ್ಧ ಎಫ್‌ಐಆರ್ ದಾಖಲು

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಥನಾಲ್ ಮಿಶ್ರಿತ ಇಂಧನ ನೀತಿಯ (ಇ-20 ಪೆಟ್ರೋಲ್) ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಪ್ರಶ್ನಿಸಿದ ಕಾರಣಕ್ಕಾಗಿ ನಾಲ್ವರು ಸಾಮಾಜಿಕ ಜಾಲತಾಣ ಇನ್‌ಫ್ಲೂಯೆನ್ಸರ್‌ಗಳ ವಿರುದ್ಧ ನಾಗ್ಪುರದ ಸರ್ದಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

ಬಿಜೆಪಿ ಸಾಮಾಜಿಕ ಜಾಲತಾಣದ ಪದಾಧಿಕಾರಿ ಅರುಣ್ ಭಿವಪುರೆ ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಆರೋಪಿಗಳು ಸರ್ಕಾರದ ಎಥನಾಲ್ ನೀತಿಯ ವಿರುದ್ಧ ವ್ಯವಸ್ಥಿತವಾಗಿ ದುಷ್ಪ್ರಚಾರ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ತಿಂಗಳ ಜುಲೈ 3 ರಂದು ಎಥನಾಲ್ ನೀತಿಯ ಕುರಿತು ನಿತಿನ್ ಗಡ್ಕರಿ ಅವರು ಮಾಡಿದ್ದ ಭಾಷಣದ ವಿಡಿಯೋವನ್ನು ಈ ಇನ್‌ಫ್ಲೂಯೆನ್ಸರ್‌ಗಳು ತುಂಡು-ತುಂಡಾಗಿ ಕತ್ತರಿಸಿ (ಎಡಿಟ್ ಮಾಡಿ), ವಾಸ್ತವವನ್ನು ವಿಕೃತಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದಾರೆ ಎಂಬುದು ಮುಖ್ಯ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಯೂಟ್ಯೂಬರ್ ಮನೀಶ್ ಕಶ್ಯಪ್, ಸಾಮಾಜಿಕ ಜಾಲತಾಣ ಇನ್‌ಫ್ಲೂಯೆನ್ಸರ್‌ಗಳಾದ ಹರ್ಷಿತ್ ರಾಠಿ, ಅಂಕಲೇಶ್ ಇನ್ವಾಟೆ ಹಾಗೂ ‘ದೇಶಿ ಬಾಯ್ಸ್ ಎನ್‌ಸಿಆರ್’ (Desi Boys NCR) ಎಂಬ ಇನ್‌ಸ್ಟಾಗ್ರಾಮ್ ಪೇಜ್ ವಿರುದ್ಧ ಪೊಲೀಸರು ಮೊಕದ್ದಮೆ ಹೂಡಿದ್ದಾರೆ.

ಆದರೆ, ಇಂಧನ ನೀತಿಯಿಂದ ವಾಹನ ಸವಾರರಿಗಾಗುತ್ತಿರುವ ತೊಂದರೆಗಳ ಬಗ್ಗೆ ಕೇವಲ ಪ್ರಶ್ನೆ ಕೇಳಿದ್ದಕ್ಕಾಗಿಯೇ ಇನ್‌ಫ್ಲೂಯೆನ್ಸರ್‌ಗಳ ವಿರುದ್ಧ ಈ ರೀತಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿರುವುದಕ್ಕೆ ಸಾರ್ವಜನಿಕ ವಲಯ ಹಾಗೂ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Related Articles

ಇತ್ತೀಚಿನ ಸುದ್ದಿಗಳು