Monday, June 17, 2024

ಸತ್ಯ | ನ್ಯಾಯ |ಧರ್ಮ

ನಾಳೆಯ ಆರ್‌ಎಸ್‌ಎಸ್‌ ಮೆರವಣಿಗೆ ಕಾರ್ಯಕ್ರಮ ಮುಂದೂಡಿಕೆ

ತಮಿಳುನಾಡು: ನವೆಂಬರ್‌ 6ರಂದು ತಮಿಳುನಾಡಿನಾದ್ಯಂತ 44 ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಮೆರವಣಿಗೆ ನಡೆಸಲು ಹೈಕೋರ್ಟ್‌ ಸಮ್ಮತಿ ನೀಡಿತ್ತು. ಆದರೆ ಮೆರೆವಣಿಗೆ ಮತ್ತು ಸಾರ್ವಜನಿಕ ಸಭೆಗಳನ್ನು ಮುಂದೂಡಲಾಗಿದೆ ಎಂದು ಸಂಘದ ಮೂಲಗಳು ಇಂದು ದೃಢಪಡಿಸಿವೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಹೈಕೋರ್ಟ್ ಅನುಮತಿ ಮೇರೆಗೆ ನವೆಂಬರ್ 6ರ ಭಾನುವಾರದಂದು ತಮಿಳುನಾಡಿನಾದ್ಯಂತ 44 ಸ್ಥಳಗಳಲ್ಲಿ ನಿಗದಿತ ಮಾರ್ಗ ಮೆರವಣಿಗೆಗಳು ಮತ್ತು ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಆದರೆ ಇಂದು ಆ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಲು ಆರ್‌ಎಸ್‌ಎಸ್ ನಿರ್ಧರಿಸಿದೆ.

ಅದಲ್ಲದೆ ನ್ಯಾಯಮೂರ್ತಿ ಜಿ.ಕೆ.ಇಳಂತಿರಾಯನ್ ಅವರಿದ್ದ ಏಕಸದಸ್ಯ ಪೀಠವು ಕೆಲವು ಷರತ್ತುಗಳೊಂದಿಗೆ 44 ಸ್ಥಳಗಳಲ್ಲಿ ಮಾತ್ರ ಕಾರ್ಯಕ್ರಮಗಳಿಗೆ ಶುಕ್ರವಾರ ಅನುಮತಿ ನೀಡಿತ್ತು. ಈ ಆದೇಶದ ವಿರುದ್ಧ 50 ಸ್ಥಳಗಳಲ್ಲಿ ಮೆರವಣಿಗೆಗೆ ಅನುಮತಿ ಬೇಕು ಮತ್ತು ಅವುಗಳಲ್ಲಿ ಒಂದು ಮೆರವಣಿಗೆ ಮತ್ತು ಸಾರ್ವಜನಿಕ ಸಭೆಗಳನ್ನು ಮೈದಾನ ಅಥವಾ ಕ್ರೀಡಾಂಗಣದಂತಹ ಆವರಣಗಳಲ್ಲಿ ನಡೆಸಲು ಅನುಮತಿ ನೀಡಬೇಕೆಂದು ಕೋರಿ ಆರ್‌ಎಸ್‌ಎಸ್‌ ಮದ್ರಾಸ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

50 ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಆರ್‌ಎಸ್‌ಎಸ್‌ ನ್ಯಾಯಾಲಯದ ಅನುಮೋದನೆಯನ್ನು ಕೋರಿತ್ತು. ಈ ಮನವಿಯ ಕುರಿತು ಆದೇಶ ನೀಡಿರುವ ಮದ್ರಾಸ್‌ ಹೈಕೋರ್ಟ್‌ನ ನ್ಯಾಯಾಧೀಶರು, ʼತಿರುಪ್ಪೂರು ಜಿಲ್ಲೆಯ ಪಲ್ಲಡಂ, ಕನ್ಯಾಕುಮಾರಿಯ ಅರುಮನೈ ಮತ್ತು ನಾಗರ್ ಕೋಯಿಲ್, ಕೊಯಮತ್ತೂರು, ಮೆಟ್ಟುಪಾಳಯಂ ಮತ್ತು ಪೊಲ್ಲಾಚಿ ಈ ಆರು ಸ್ಥಳಗಳಲ್ಲಿ ಮೆರವಣಿಗೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳುವುದರ ಜೊತೆಗೆ ಕಾರ್ಯಕ್ರಮದ ಸಮಯದಲ್ಲಿ ಯಾರೂ ಹಾಡುಗಳನ್ನು ಹಾಡಬಾರದು ಅಥವಾ ಯಾವುದೇ ವ್ಯಕ್ತಿ, ಜಾತಿ ಮತ್ತು ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಬಾರದುʼ ಎಂದು ಹೇಳಿದರು.

ಅಲ್ಲದೇ ಮೆರವಣಿಗೆಯಲ್ಲಿ ಭಾಗಿಯಾಗುವವರು ಯಾವುದೇ ಕಾರಣಕ್ಕೂ ಯಾರಿಗೂ ತೊಂದರೆಯುಂಟುಮಾಡಬಾರದು. ಮೆರವಣಿಗೆಗೆ ಕೋಲು, ಲಾಠಿ ಅಥವಾ ಯಾವುದೇ ರೀತಿಯ ಆಯುಧಗಳನ್ನು ತರಬಾರದು ಎಂದು ಹೇಳಿದ್ದು, ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರದಿಂದ ನಿಷೇಧಿಸಲ್ಪಟ್ಟ ಸಂಘಟನೆಗಳ ಪರವಾಗಿ ಏನನ್ನೂ ಮಾತನಾಡಬಾರದು. ದೇಶದ ಸಮಗ್ರತೆಗೆ ಭಂಗ ತರುವ ಯಾವುದೇ ಕೆಲಸಗಳನ್ನು ಮಾಡಬಾರದುʼ ಎಂದು ನ್ಯಾಯಾಧೀಶರು ತಿಳಿಸಿದ್ದರು.

ʼಮೆರವಣಿಗೆಯಲ್ಲಿ ಮಾರ್ಗಮಧ್ಯೆ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯುಂಟಾದರೆ ಆ ವೆಚ್ಚವನ್ನು ಮರುಪಾವತಿಸುವ ಮತ್ತು ಪರಿಹಾರ ವೆಚ್ಚಗಳನ್ನು ಭರಿಸುವ ಮುಚ್ಚಳಿಕೆ ಬರೆದು ಕೊಡತಕ್ಕದ್ದು. ಈ ಕಾರ್ಯಕ್ರಮದಿಂದ ಹಾನಿಗೊಳಗಾಗಿ ಅರ್ಜಿ ಸಲ್ಲಿಸಬಹುದಾದ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ಅದನ್ನು ಭರಿಸುವ ಭರವಸೆ ನೀಡಲಾಗಿದೆ ಮತ್ತು ವಿಧಿಸಲಾದ ಷರತ್ತುಗಳಲ್ಲಿ ಯಾವುದಾದರೂ ಒಂದನ್ನು ಉಲ್ಲಂಘಿಸಿದರೆ, ಕಾನೂನಿನ ಪ್ರಕಾರ ಅಗತ್ಯ ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸ್ವಾತಂತ್ರ್ಯವಿದೆʼ ಎಂದು ನ್ಯಾಯಮೂರ್ತಿ ಜಿ.ಕೆ.ಇಳಂತಿರಾಯನ್ ಅವರು ಹೇಳಿದ್ದರು.

Related Articles

ಇತ್ತೀಚಿನ ಸುದ್ದಿಗಳು