Friday, June 28, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ರಾಜೀನಾಮೆ ಸಾಧ್ಯತೆ ; ಯಾರಾಗಬಹುದು ಮುಂದಿನ ಅಧ್ಯಕ್ಷ?

ರಾಜ್ಯದಲ್ಲಿ ಬಿಜೆಪಿ ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಧ್ಯದಲ್ಲೇ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಚುನಾವಣಾ ಸೋಲಿಗೆ ತಾನೇ ನೈತಿಕ ಹೊಣೆ ಹೊತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆ ಹಿನ್ನೆಲೆಯಲ್ಲಿ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ಪಕ್ಕಾ ಎಂದು ಹೇಳಲಾಗಿದೆ.

ಚುನಾವಣಾ ಪೂರ್ವದಲ್ಲಿ ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದೇ ತೀರುತ್ತೇನೆಂಬ ಹಠಕ್ಕೆ ಬಿದ್ದಿದ್ದ ನಳಿನ್ ಕುಮಾರ್ ರಾಜ್ಯಾದ್ಯಂತ ಪ್ರವಾಸ ಮಾಡಿ ಬಹುತೇಕ ಎಲ್ಲಾ ಅಭ್ಯರ್ಥಿಗಳಿಗೂ ಪ್ರಚಾರಕ್ಕೆ ಮುಂದಾಗಿದ್ದರು. ಆದರೆ ಬಿಜೆಪಿ ಪಕ್ಷ ರಾಜ್ಯದಲ್ಲಿ ಸ್ಪಷ್ಟವಾಗಿ ಸೋಲುಂಡಿದ್ದು, ಅದರ ನೇರ ಹೊಣೆ ಕಟೀಲ್ ಹೊತ್ತಿದ್ದು ರಾಜೀನಾಮೆ ಮುನ್ಸೂಚನೆ ನೀಡಿದ್ದಾರೆ.

ಸಧ್ಯ ರಾಜೀನಾಮೆಗೆ ಯಾವುದೇ ಒತ್ತಡ ಇಲ್ಲ, ಸ್ವಯಂ ಘೋಷಣೆ ಎಂಬ ಮಾತೂ ಕೇಳಿ ಬಂದರೂ, ಬಿಜೆಪಿ ಮೂಲದಿಂದ ಹೈಕಮಾಂಡ್ ಸಂಸ್ಕೃತಿ ಇರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರ ನಾಯಕರು ಪಟ್ಟು ಹಿಡಿದಿರುವ ಮುನ್ಸೂಚನೆ ಸಿಕ್ಕಿದೆ. ಜೊತೆಗೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಹಿನ್ನೆಲೆಯಲ್ಲಿ ನಳಿನ್ ರಾಜೀನಾಮೆಯನ್ನು ಹೈಕಮಾಂಡ್ ಸೂಚಿಸಿರಬಹುದು. ಈಗ ನಳಿನ್ ಕುಮಾರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಯಾರು ಅಧ್ಯಕ್ಷರಾಗಬಹುದು ಎಂಬ ಅಂಶ ಕುತೂಹಲದ ಕೂಡಿದೆ.

ಯಾರಾಗಬಹುದು ಬಿಜೆಪಿ ನೂತನ ರಾಜ್ಯಾಧ್ಯಕ್ಷ?
ಯಡಿಯೂರಪ್ಪರ ಚುನಾವಣಾ ರಾಜಕೀಯದ ನಿವೃತ್ತಿ ಹಿನ್ನೆಲೆಯಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಬಿಜೆಪಿ ಅತ್ಯಂತ ಕಳಪೆ ಫಲಿತಾಂಶ ಬಂದಿದ್ದು, ಅಧಿಕಾರದ ದುರ್ಬಳಕೆಯಷ್ಟೆ, ನಾಯಕತ್ವದ ಕೊರತೆ ಕೂಡಾ ಕಾರಣ ಎಂಬುದು ಸ್ಪಷ್ಟ. ನಳಿನ್ ಕುಮಾರ್ ಕಟೀಲ್ ಅದೆಷ್ಟೇ ರಾಜ್ಯ ಪ್ರವಾಸ ಮಾಡಿ ಸಂಘಟನೆ ಮಾಡಿದರೂ, ಪಕ್ಷ ಸಂಘಟನೆಯಲ್ಲಿ ಅವರ ಕೇರ್ ಲೆಸ್ ನಡೆ ಮತ್ತು ಜನರನ್ನು ಬೆಳೆಯಬಹುದೆಂಬ ಅವರ ಜೋಕರ್ ಮಾದರಿಯ ನಡೆ ಜನರನ್ನು ಆಕರ್ಷಿಸಲು ಸೋತಿತ್ತು. ಇದು ಬಿಜೆಪಿಗೆ ಅರ್ಥವಾಗುವಷ್ಟರಲ್ಲಿ ಚುನಾವಣೆ ಕೂಡಾ ಮುಗಿದಿತ್ತು.

ಚುನಾವಣೆ ನಂತರದಲ್ಲಿ ಕಾಂಗ್ರೆಸ್ ನ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಲೇವಡಿ ಮಾಡಿದ್ದ ಬಿಜೆಪಿಗೆ ಈಗ ಎರಡೆರಡು ಸಮಸ್ಯೆ ತಲೆದೋರಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿಗೆ ಈಗ ವಿರೋಧ ಪಕ್ಷದ ನಾಯಕನ ಆಯ್ಕೆಯ ಜೊತೆಗೆ ರಾಜ್ಯಾಧ್ಯಕ್ಷರ ನೇಮಕದ ತಲೆಬಿಸಿ ಶುರುವಾಗಿದೆ.

ಸಧ್ಯ ರೇಸ್ ನಲ್ಲಿ ಹಲವಷ್ಟು ನಾಯಕರುಗಳ ಹೆಸರು ಕೇಳಿ ಬಂದರೂ ಬಿಜೆಪಿ ಇಂತಹ ವಿಚಾರದಲ್ಲಿ ಅಚ್ಚರಿಯ ಹೆಸರು ಹೊರಹಾಕುವುದು ಸ್ಪಷ್ಟ. ಬಿಜೆಪಿ ಹೈಕಮಾಂಡ್ ಪಟ್ಟಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆರ್.ಅಶೋಕ್, ವಿ.ಸೋಮಣ್ಣ, ವಿಜಯೇಂದ್ರ ಹೆಸರು ಓಡಾಡುತ್ತಿದ್ದರೆ, ಇತ್ತ ಪ್ರತಾಪ್ ಸಿಂಹ, ಅರವಿಂದ್ ಬೆಲ್ಲದ್, ವಿಶ್ವೇಶ್ವರ ಹೆಗಡೆ ಕಾಗೇರಿ, ಅಶ್ವಥ್ ನಾರಾಯಣ್ ಹೆಸರೂ ಸಹ ಕೇಳಿ ಬರುತ್ತಿದೆ.

ಇತ್ತೀಚೆಗೆ ಪ್ರತಾಪ್ ಸಿಂಹ ಕೂಡಾ ತನ್ನ ಸಂಸದ ವ್ಯಾಪ್ತಿಯನ್ನೂ ಮೀರಿ, ಪಕ್ಷದ ಲೋಪಗಳ ಬಗ್ಗೆ ಹೆಚ್ಚು ಮಾತನಾಡುವ ಹಿನ್ನೆಲೆಯಲ್ಲಿ ಅಚ್ಚರಿಯ ಆಯ್ಕೆಯಾಗಿ ಪ್ರತಾಪ್ ಸಿಂಹ ಬಂದರೂ ಅಚ್ಚರಿ ಇಲ್ಲ. ಹಾಗೆಯೇ ಯಡಿಯೂರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಹಿನ್ನೆಲೆಯಲ್ಲಿ ಲಿಂಗಾಯತರ ಕೋಪಕ್ಕೆ ಬಿಜೆಪಿ ಗುರಿಯಾಗಿರುವುದು ಸ್ಪಷ್ಟ. ಆ ಡ್ಯಾಮೇಜ್ ಪ್ಯಾಚ್ ಅಪ್ ಗೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೂರಿಸಿದರೂ ಅಚ್ಚರಿ ಪಡಬೇಕಿಲ್ಲ.

ಇನ್ನೇನು ಪಕ್ಷ ಬಿಡುವ ನಿರ್ಧಾರ ಕೈಗೊಂಡಿದ್ದ ಊಹಾಪೋಹಗಳಿಗೆ ಕೊನೆಯ ಕ್ಷಣದಲ್ಲಿ ನಿರ್ಧಾರ ಕೈಬಿಟ್ಟಿದ್ದ ವಿ.ಸೋಮಣ್ಣ ಹಳೆಮೈಸೂರು ಭಾಗ ಮತ್ತು ಲಿಂಗಾಯತರ ಹಿರಿಯ ನಾಯಕ ಅನ್ನಿಸಿಕೊಂಡವರು. ಆ ನಿಟ್ಟಿನಲ್ಲಿ ಸೋಮಣ್ಣ ಹೆಸರು ಕೂಡಾ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಚಿಸುವ ಸಾಧ್ಯತೆ ಇದೆ. ಆದರೆ Capability ಆಧಾರದಲ್ಲಿ ಸೋಮಣ್ಣ ಅಷ್ಟು ಸೂಕ್ತ ಅಲ್ಲ ಎಂಬ ಮಾತೂ ಕೂಡಾ ಚಾಲ್ತಿಯಲ್ಲಿದೆ.

ಇನ್ನು ಯಡಿಯೂರಪ್ಪ ತನ್ನ ವರ್ಚಸ್ಸು ಇನ್ನೂ ಇದೆ ಎಂದು ತೋರಿಸಿಕೊಳ್ಳಲು ಸೂಚಿಸುವ ಮೊದಲ ಹೆಸರು ಬಿ.ವೈ.ವಿಜಯೇಂದ್ರ. ಇನ್ನೇನು ಸಿದ್ದರಾಮಯ್ಯ ಎದುರು ವಿಜಯೇಂದ್ರ ಸ್ಪರ್ಧಿಸಬಹುದು ಎಂಬ ಸುದ್ದಿ ವ್ಯಾಪಕವಾಗಿ ತೇಲಿ ಬಂದಿತ್ತು. ಆಗೆಲ್ಲಾ ರಾಜ್ಯಾದ್ಯಂತ ವಿಜಯೇಂದ್ರ ಹೆಸರು ಹೆಚ್ಚು ಚಾಲ್ತಿಯಲ್ಲಿತ್ತು. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಡಿವಾಣ ಹಾಕಲು ವಿಜಯೇಂದ್ರ ಸೂಕ್ತ ಎಂಬ ಅಭಿಪ್ರಾಯ ಬಿಜೆಪಿಯ ಇನ್ನೊಂದು ಲೆಕ್ಕಾಚಾರವಾಗಿದೆ.

ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಹೆಣ್ಣು ಮಕ್ಕಳ ವಿಶ್ವಾಸ ಗಳಿಸುವುದರಲ್ದಿ ಯಶಸ್ವಿಯಾಗಿದೆ. ಆದರೆ ಆ ಜನಪ್ರಿಯತೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಅಷ್ಟು ಸ್ಪಷ್ಟವಿಲ್ಲ ಎಂಬ ನಿಟ್ಟಿನಲ್ಲಿ ಶೋಭಾ ಕರಂದ್ಲಾಜೆ ಯನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೂರಿಸುವ ಅಚ್ಚರಿಯ ನಿಲುವನ್ನು ಬಿಜೆಪಿ ತಗೆದುಕೊಳ್ಳಬಹುದು ಎಂಬುದೂ ಸಹ ಇನ್ನೊಂದು ಲೆಕ್ಕಾಚಾರ.

ಸಧ್ಯ ನಳಿನ್ ಕುಮಾರ್ ರಿಂದ ತೆರವಾದ ಸ್ಥಾನದಿಂದ ಈಗ ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಆಯ್ಕೆಯ ಜೊತೆಗೆ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆಯ ಗೊಂದಲವನ್ನು ತಲೆ ಮೇಲೆ ಹಾಕಿಕೊಂಡಂತಿದೆ. ಇತ್ತ ಎರಡೂ ಆಯ್ಕೆಯ ಹೆಸರುಗಳನ್ನು ಒಂದೇ ಬಾರಿ ಬಿಡುಗಡೆ ಮಾಡಬಹುದು ಎಂಬ ಮಾತುಗಳು ಬಿಜೆಪಿ ವಲಯದಿಂದ ಕೇಳಿ ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು