Monday, June 17, 2024

ಸತ್ಯ | ನ್ಯಾಯ |ಧರ್ಮ

ನಮೀಬಿಯಾದಿಂದ ಭಾರತಕ್ಕೆ ಹೊರಟ ಚೀತಾಗಳು – ಮಾಧ್ಯಮಗಳಿಗೆ ಬೇಕಿತ್ತಾ ಈ ಕರಾಮತ್ತು

ಭಾರತಕ್ಕೆ ನಮೀಬಿಯಾದಿಂದ ಚೀತಾಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭಾರತದ ಮಾಧ್ಯಮಗಳು ವರದಿ ಮಾಡಿದ ರೀತಿಯ ಕುರಿತು ಹಿರಿಯ ಪತ್ರಕರ್ತರಾದ ರಾಜಾರಾಮ್ ತಲ್ಲೂರು ಅವರು ವಿಶ್ಲೇಷಣೆಯೊಂದನ್ನು ಬರೆದಿದ್ದಾರೆ ಪೀಪಲ್ ಮೀಡಿಯಾದ ಓದುಗರಿಗಾಗಿ ನಾವು ಅದನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ

ಸುದ್ದಿಗಳನ್ನು ಮೂಲದಲ್ಲೇ ಕಲುಷಿತಗೊಳಿಸುವ ತಂತ್ರದ ಬಗ್ಗೆ ನಾನು ಹಲವು ಬಾರಿ ಹೇಳಿದ್ದೇನೆ. ಒಂದು ತಾಜಾ ಉದಾಹರಣೆ ಸಹಿತ ಅದನ್ನು ವಿವರಿಸುವೆ. ಈಗೀಗ ಈ “ಫೇಕ್” ಸುದ್ದಿ ಪ್ರಚಾರ ಬಾಜಾ ಭಜಂತ್ರಿಗಳ ಸಹಿತ ನಡೆದಾಗ, ಸುಳ್ಳೂ ಸತ್ಯವಾಗತೊಡಗುತ್ತದೆ. ಬೇಕಿದ್ದರೆ ನಿಮ್ಮ ಈವತ್ತಿನ ಪತ್ರಿಕೆಗಳನ್ನು ತೆರೆದು ನೋಡಿ!

ಇದೇ “ಜೋರ್ ಸೆ ಬೋಲೋ ಷೋರ್ ಸೆ ಬೋಲೊ” ಕರಾಮತ್ತು!
ವಿಷ್ಯ ಇನ್ನೇನಿಲ್ಲ, ನಮೀಬಿಯಾದಿಂದ ಎಂಟು ಚಿರತೆಗಳು ಬರುತ್ತಿವೆ. ಅದನ್ನು ತರಲು ಭಾರತದಿಂದ ವಿಮಾನ ಹೋಗಿದೆ. ಆ ಚಿರತೆಗಳು ಬರುವುದು ನಿಜಕ್ಕೂ ಮಾನವಾಸಕ್ತಿಯ ಸುದ್ದಿ. ಅದರಲ್ಲೇನೂ ಕೊರತೆ ಇಲ್ಲ.

ಆದರೆ, ಮೊನ್ನೆಯಿಂದ ಟ್ವಿಟ್ಟರ್, ಫೇಸ್‌ಬುಕ್ ಇತ್ಯಾದಿಗಳಲ್ಲಿ ಒಂದು ಚಿರತೆ ಮುಖದ ವಿಮಾನದ ಸುದ್ದಿ ಹರಿದಾಡುತ್ತಿದೆ. ಗಮನಿಸಿ, ಹಾಗೆ ಸುತ್ತುತ್ತಿರುವುದು ಕೇವಲ ಒಂದೇ ಒಂದು ಫೋಟೊ!
ಒಂದೆರಡು ದಿನಗಳ ಹಿಂದೆ ನಮೀಬಿಯಾದಲ್ಲಿ ಭಾರತದ ರಾಯಭಾರ ಕಚೇರಿಯದೆನ್ನಲಾದ ಟ್ವಿಟ್ಟರ್ ಹ್ಯಾಂಡಲ್ ಒಂದು, ಈ ಬಗ್ಗೆ ಟ್ವೀಟ್ ಮಾಡಿತ್ತು. ಅದಾದ ಬಳಿಕ ತಕ್ಕೊಳ್ಳಿ, ANI, PTI ಇತ್ಯಾದಿ ಸುದ್ದಿಮೂಲ ಸಂಸ್ಥೆಗಳು ಅದನ್ನು ಟ್ವೀಟ್ ಮಾಡಿದವು, ಅದಕ್ಕೆ ವೇಷ, ಬಣ್ಣ ಕಟ್ಟಿದವು. ತಕ್ಕೊಳ್ಳಿ, ಅದರ ಬೆನ್ನಿಗೇ ದೇಶದ ಮಾಧ್ಯಮಗಳು ಥೈದ ಥೈದ…. ಎಂದು ಕುಣಿದು ಧೂಳೆಬ್ಬಿಸಿದ್ದೇನು, ಗಿರಕಿ ಹಾಕಿದ್ದೇನು…!!

ತಮಾಷೆ ಎಂದರೆ, ಈ ಸುದ್ದಿ ಹೇಳುತ್ತಿರುವುದು: ಚಿರತೆ ಕೊಂಡೊಯ್ಯಲು ಚಿರತೆ ಮುಖದ ವಿಮಾನ ಭಾರತದಿಂದ ನಮೀಬಿಯಾಕ್ಕೆ ಬಂದಿದೆ ಎಂದು. ಈಗ ಮಾಧ್ಯಮಗಳಿಗೆ ಲಭ್ಯ ಇರುವುದು ಭಾರತದಲ್ಲೇ ಪೇಂಟ್ ಆಗಿ ನಮೀಬಿಯಾಕ್ಕೆ ಹೋದ ವಿಮಾನದ ಕೇವಲ “ಒಂದೇ ಒಂದು” ಫೋಟೊ, ಅದೂ ನಮೀಬಿಯಾದಿಂದ ಬಂದದ್ದು! ಯಾರಿಗೂ ಯಾವ ಶಂಕೆಯೂ ಉಂಟಾಗಲಿಲ್ಲ… ಅಂದರೆ ಅಚ್ಚರಿ ಅಲ್ಲವೇ? ನಮ್ಮ ಸುದ್ದಿಮನೆಗಳಲ್ಲಿ ಎಂತೆಂತಹಾ ಘನಂಧಾರಿಗಳು ಕುಳಿತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ!! ಝೀ ಟೀವಿ ಅಂತೂ ಈ ಸುದ್ದಿಯನ್ನು ಒಂದೇ ಫೋಟೋ ಇದ್ದರೂ, ದೊಡ್ಡ ವೀಡಿಯೊ ಸುದ್ದಿ ಮಾಡಿ ಬಿತ್ತರಿಸಿದ್ದನ್ನು ನೋಡಿದೆ.

ಈಗ RTI ಕಾರ್ಯಕರ್ತ ಸಾಕೇತ್ ಗೋಖಲೆ, ಮಾಧ್ಯಮಗಳನ್ನು “ದಿಗಂಬರ”ಗೊಳಿಸಿದ್ದಾರೆ. ಈ ಚಿತ್ರಗಳು, ಮೂಲತಃ ಮಾಸ್ಕೊದ ಟ್ರಾನ್ಸೆರೊ ಏರ್ ಲೈನ್ಸ್ ವಿಮಾನದ ಚಿತ್ರವಾಗಿರಬಹುದು ಎಂಬ ಶಂಕೆ ಅವರದು. ಆ ವಿಮಾನ ಕಂಪನಿ ಚಿರತೆ ಮಾತ್ರವಲ್ಲ, ಹುಲಿ ಮತ್ತಿತರ ಪ್ರಾಣಿಗಳ ಮುಖವನ್ನೂ ತನ್ನ ವಿಮಾನಗಳಲ್ಲಿ ಬಳಸಿದೆ. ಹೆಚ್ಚಿನಂಶ, ಅದೇ ಚಿತ್ರವನ್ನು ಎಲ್ಲ ಮಾಧ್ಯಮಗಳೂ ಇಂದು PTI, UNI ಸುದ್ದಿಮೂಲಗಳನ್ನು ಉಲ್ಲೇಖಿಸಿ ಪ್ರಕಟಿಸಿವೆ.

ನನಗೆ ಸಾಕೇತ್ ಹೇಳುತ್ತಿರುವುದು ಸತ್ಯ ಇರಬಹುದು ಅನ್ನಿಸುತ್ತದೆ. ಏಕೆಂದರೆ, ವಿಮಾನ ದೇಶದೊಳಗೇ ಪೇಂಟ್ ಆಗಿದ್ದರೆ, ಅದರ ಹಲವಾರು ಚಿತ್ರಗಳು ಲಭ್ಯ ಇರಬೇಕಿತ್ತು. ಚಿರತೆ ಬರುವ ಸುದ್ದಿಯ ಬದಲು, ಅದನ್ನು ತರಹೋಗಿದೆಯೆನ್ನಲಾದ ವಿಮಾನದ ಮುಖವನ್ನು ಸುದ್ದಿ ಮಾಡಿ, ತಮ್ಮ ಧಣಿಗಳ ಜನ್ಮ ದಿನದ ಸಂಭ್ರಮ ಆಚರಿಸಲು ಸಿದ್ಧತೆ ಮಾಡಿಕೊಂಡಿರುವ ಮಾಧ್ಯಮಗಳು ಈಗ ಸಿಕ್ಕಿಹಾಕಿಕೊಂಡಂತಿದೆ. ಈಗ ಏನಾಗಿದೆ ಎಂದು ಸ್ಪಷ್ಟನೆ ಕೊಡಬೇಕಾದ ಜವಾಬ್ದಾರಿ ಮಾಧ್ಯಮಗಳದು ಅಲ್ಲವೇ?!
ಇದನ್ನೇ ಅಲ್ಲವೇ ಹಿಂದೊಮ್ಮೆ, “ಬಗ್ಗಿ ಎಂದರೆ ತೆವಳುವುದು” ಎಂದು ಎಲ್ ಕೆ ಆಡ್ವಾಣಿಯವರು ಹೇಳಿದ್ದು!

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ರಾಜಾರಾಂ ತಲ್ಲೂರ್‌
ಪತ್ರಕರ್ತರು, ಬರಹಗಾರರು

Related Articles

ಇತ್ತೀಚಿನ ಸುದ್ದಿಗಳು