Monday, September 15, 2025

ಸತ್ಯ | ನ್ಯಾಯ |ಧರ್ಮ

ಮೂರು ಹೊಸ ಕಾನೂನುಗಳಿಗೆ ಹಿಂದಿ ಹೆಸರುಗಳನ್ನಿಟ್ಟಿರುವುದು ಹಿಂದಿ ಸಾಮ್ರಾಜ್ಯಶಾಹಿಯ ಪ್ರತಿಬಿಂಬದಂತಿದೆ: ಎಮ್‌ ಕೆ ಸ್ಟಾಲಿನ್‌

ಹಿಂದಿ ಹೇರಿಕೆಯ ವಿರುದ್ಧ ಹೆಚ್ಚುತ್ತಿರುವ ಪ್ರತಿರೋಧದ ಕಡೆಯೂ ಗಮನ ಹರಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಮ್‌ ಕೆ ಸ್ಟಾಲಿನ್‌ ಕೇಂದ್ರ ಸರ್ಕಾರಕ್ಕೆ ತೀವ್ರವಾದ ಎಚ್ಚರಿಕೆಯನ್ನು ನೀಡಿದ್ದಾರೆ.

ನ್ಯೂ ಡೆಲ್ಲಿ: ಬ್ರಿಟಿಷ್‌ ಕಾಲದ ಮೂರು ಕಾನೂನುಗಳಿಗೆ ಹಿಂದಿ ಹೆಸರಿಡುವ ಕ್ರಮವು “ ದೇಶದ ವೈಧ್ಯತೆಯನ್ನು ಹಾಳುಗೆಡವುವ, ಮತ್ತು ಭಾಷಾ ಸಾಮ್ರಾಜ್ಯಶಾಹಿಯನ್ನು ಹೇರುವ ಧಾಡಸಿ ಪ್ರಯತ್ನವಾಗಿದೆ” ಎಂದು ಎಮ್‌ ಕೆ ಸ್ಟಾಲಿನ್‌ ಹೇಳಿದ್ದಾರೆ. ಈ ಹಿಂದಿ ಹೇರಿಕೆಯ ಪ್ರಯತ್ನದ ವಿರುದ್ಧ ತಮ್ಮ ಪಕ್ಷವು ಹೋರಾಟವನ್ನು ಮುಂದುವರೆಸಲಿದೆ ಎಂದೂ ಅವರು ಹೇಳಿದ್ದಾರೆ

ಮೂರು ಕಾನೂನುಗಳಿಗೂ ಹಿಂದಿ ಹೆಸರನ್ನೇ ಇಡುವ ಮೂಲಕ ಇನ್ನು ಮುಂದೆ ತಮಿಳಿನ ಹೆಸರನ್ನು ಎತ್ತುವ ನೈತಿಕ ಹಕ್ಕನ್ನು ಪ್ರಧಾನಿ ಮೋದಿ ಹಾಗೂ ಬಿಜೆಪಿ ಕಳೆದುಕೊಂಡಿದ್ದಾರೆ ಎಂದು ಸ್ಟಾಲಿನ್‌ ಕಿಡಿ ಕಾರಿದ್ದಾರೆ.

“ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷರತಾ ಮಸೂದೆಗಳ ಮೂಲಕ ಭಾರತದ ವೈವಿಧ್ಯತೆಯ ಸಾರವನ್ನು ಹಾಳುಮಾಡುವ ಕೇಂದ್ರ ಬಿಜೆಪಿ ಸರ್ಕಾರದ ಸಾಹಸದ ಪ್ರಯತ್ನವು ಭಾಷಾ ಸಾಮ್ರಾಜ್ಯಶಾಹಿಯನ್ನು ಪ್ರತಿಬಿಂಬಿಸುತ್ತದೆ. ಇದು ಭಾರತದ ಏಕತೆಯ ಅಡಿಪಾಯಕ್ಕೆ ಮಾಡಿದ ಅವಮಾನ ಎಂದು ಸ್ಟಾಲಿನ್ ಹೇಳಿದ್ದಾರೆ.

ಇತಿಹಾಸದ ಕೂಪದಲ್ಲಿ, ತಮಿಳುನಾಡು ಮತ್ತು ಡಿಎಂಕೆ ಇಂತಹ ದಬ್ಬಾಳಿಕೆಯ “ಅತಿರೇಕಗಳ” ವಿರುದ್ಧ ಮುಂಚೂಣಿಯಲ್ಲಿ ಹೊರಹೊಮ್ಮಿವೆ ಮತ್ತು ರಾಜ್ಯವು ತನ್ನ ಭಾಷಾ ಅಸ್ಮಿತೆಯನ್ನು ರಕ್ಷಿಸುವ ಈ ಹಿಂದೆ “ಹಿಂದಿ ಹೇರಿಕೆಯ” ಬಿರುಗಾಳಿಯನ್ನು ಎದುರಿಸಿ ನಿಂತಿತ್ತು ಎಂದು ಸ್ಟಾಲಿನ್ ಹೇಳಿದರು.

“ಈಗ ನಾವು ಮತ್ತೆ ಅದೇ ದೃಢ ನಿಶ್ಚಯದೊಡನೆ ಅಂತಹ ಹೋರಾಟಕ್ಕೆ ಧುಮುಕುತ್ತೇವೆ. ಹಿಂದಿ ವಸಾಹತುಶಾಹಿಯ ವಿರುದ್ಧದ ಪ್ರತಿರೋಧದ ಕಿಚ್ಚನ್ನು ಮತ್ತೆ ಹೊತ್ತಿಸುತ್ತೇವೆ. ಹಿಂದಿಯನ್ನು ನಮ್ಮ ಅಸ್ಮಿತೆಯನ್ನಾಗಿಸಲು ಹೊರಟಿರುವ ಬಿಜೆಪಿಯ ಪ್ರಯತ್ನವನ್ನು ನಾವು ಹಿಮ್ಮೆಟ್ಟಿಸಿಯೇ ತೀರುತ್ತೇವೆ” ಎಂದಿದ್ದಾರೆ ಸ್ಟಾಲಿನ್

“ಹಿಂದಿಯನ್ನು ಯಾವ ವಿರೋಧವಿಲ್ಲ ಒಪ್ಪಿಕೊಳ್ಳಲಾಗುತ್ತಿದೆ” ಎನ್ನುವ ಅಮಿತ್‌ ಶಾ ಅವರ ಹೇಳಿಕೆ ಪ್ರತಿಕ್ರಿಯಿಸಿರುವ ಸ್ಟಾಲಿನ್‌, “1965ರ ಕಿಚ್ಚನ್ನು ಮತ್ತೆ ಹೊತ್ತಿಸಲು ಪ್ರಯತ್ನಿಸಬೇಡಿ. ಕರ್ನಾಟಕ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳು ಹಿಂದಿ ಹೇರಿಕೆಗೆ ತೋರಿಸುತ್ತಿರುವ ಪ್ರತಿರೋಧವನ್ನು ನಿರ್ಲಕ್ಷಿಸದಿರಿ” ಎಂದು ತಮಿಳುನಾಡು ಮುಖ್ಯಮಂತ್ರಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಹಿಂದಿ ಹೇರಿಕೆಯನ್ನು ವಿರೋಧಿಸುವುದು DMK ಹಾಗೂ ಅದರ ಹಿಂದಿನ ಪಕ್ಷ AIADMKಯ ಸ್ಥಾಪಕ ತತ್ವಗಳಲ್ಲಿ ಒಂದಾಗಿದ್ದು, ಇವು “ಹಿಂದಿ ಹೇರುವ” ಕೇಂದ್ರ ಸರ್ಕಾರಗಳ ಕ್ರಮವನ್ನು ಹಿಮ್ಮೆಟ್ಟಿಸುತ್ತಲೇ ಬಂದಿವೆ. 1960ರ ದಶಕದಿಂದೀಚೆಗೆ ತಮಿಳು ಮತ್ತು ಇಂಗ್ಲಿಷ್ ದ್ವಿಭಾಷಾ ನೀತಿಯನ್ನು ಅನುಸರಿಸುತ್ತಿರುವ ಭಾರತದ ಏಕೈಕ ರಾಜ್ಯ ತಮಿಳುನಾಡು.

ಕರ್ನಾಟಕ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಕೇಂದ್ರಕ್ಕೆ ಆಗಾಗ ಇದು HINDIA ಅಲ್ಲ INDIA ಎನ್ನುವುದನ್ನು ನೆನಪಿಸುತ್ತಲೇ ಬರುತ್ತಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page