Friday, February 6, 2026

ಸತ್ಯ | ನ್ಯಾಯ |ಧರ್ಮ

ಮಾಲೂರು ಮರು ಮತ ಎಣಿಕೆ: ಕೆ.ವೈ. ನಂಜೇಗೌಡರಿಗೆ ಜಯ, ಹೈಕೋರ್ಟ್ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಬೆಂಗಳೂರು: ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಸಂಬಂಧ ತೀವ್ರ ಕುತೂಹಲ ಮೂಡಿಸಿದ್ದ ಪ್ರಕರಣದಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರೇ ಗೆಲುವು ಸಾಧಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ನಂಜೇಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಅಂಗೀಕರಿಸಿ, ಹೈಕೋರ್ಟ್ ತೀರ್ಪನ್ನು ರದ್ದುಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ, ಮರು ಮತ ಎಣಿಕೆಯಲ್ಲಿಯೂ ನಂಜೇಗೌಡ ಅವರೇ ಬಿಜೆಪಿ ಅಭ್ಯರ್ಥಿ ಕೆ.ಎಸ್. ಮಂಜುನಾಥ ಗೌಡ ಅವರಿಗಿಂತ 250 ಮತಗಳ ಮುನ್ನಡೆ ಸಾಧಿಸಿರುವುದಾಗಿ ಘೋಷಿಸಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ನಂಜೇಗೌಡ ಕೇವಲ 248 ಮತಗಳ ಅಲ್ಪ ಅಂತರದಲ್ಲಿ ಜಯ ಗಳಿಸಿದ್ದರು. ಅವರು 50,955 ಮತಗಳನ್ನು ಪಡೆದರೆ, ಮಂಜುನಾಥ ಗೌಡ 50,707 ಮತಗಳನ್ನು ಪಡೆದಿದ್ದರು. ಇದನ್ನು ಪ್ರಶ್ನಿಸಿ ಮಂಜುನಾಥ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದು, ಮರು ಮತ ಎಣಿಕೆ ಹಾಗೂ ಹೊಸದಾಗಿ ಫಲಿತಾಂಶ ಘೋಷಿಸಲು ಹೈಕೋರ್ಟ್ ಆದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ನಂಜೇಗೌಡ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್ ಮೇಲ್ಮನವಿಯನ್ನು ಸ್ವೀಕರಿಸಿ, ಸೀಲ್ ಮಾಡಿದ ಕವರ್‌ನಲ್ಲಿ ಮರು ಎಣಿಕೆ ಮಾಡಿ ಫಲಿತಾಂಶ ಸಲ್ಲಿಸುವಂತೆ ಚುನಾವಣಾಧಿಕಾರಿಗೆ ಸೂಚಿಸಿತ್ತು.

ಸುಪ್ರೀಂಕೋರ್ಟ್ ಆದೇಶದಂತೆ 2025ರ ನವೆಂಬರ್ 11ರಂದು ಮರು ಮತ ಎಣಿಕೆ ನಡೆದಿದ್ದು, ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಭದ್ರವಾಗಿ ಇಡಲಾಗಿತ್ತು. ಇಂದು ಕಕ್ಷಿದಾರರ ಸಮ್ಮುಖದಲ್ಲಿ ಲಕೋಟೆ ತೆರೆಯಲಾಗಿದ್ದು, ಮರು ಎಣಿಕೆಯಲ್ಲಿ ನಂಜೇಗೌಡ 50,957 ಮತಗಳನ್ನು ಪಡೆದರೆ, ಮಂಜುನಾಥ ಗೌಡ 50,707 ಮತಗಳನ್ನು ಪಡೆದಿದ್ದಾರೆ.

ಇದರಿಂದ ನಂಜೇಗೌಡ ಅವರೇ ಶಾಸಕರಾಗಿ ಮುಂದುವರೆಯಲಿದ್ದು, ಮಾಲೂರು ಕ್ಷೇತ್ರದಲ್ಲಿ ಅವರ ಗೆಲುವು ಅಂತಿಮಗೊಂಡಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page