Tuesday, October 29, 2024

ಸತ್ಯ | ನ್ಯಾಯ |ಧರ್ಮ

“ನರವಾನರ” : ಪ್ರದೀಪ್ ಕೆಂಜಿಗೆ ಅವರ ವೈಜ್ಞಾನಿಕ ಕೃತಿ.

ಸುಮ್ಮನೆ ನನಗಿರುವ ಒಂದು ಕುತೂಹಲವನ್ನು ಇಲ್ಲಿ ಹೇಳಬೇಕು. ಈ ಪುಸ್ತಕ ಇಂಗ್ಲಿಷಿಗೆ ಭಾಷಾಂತರವಾದರೆ ಹೇಗಿರಬಹುದು ? ಜೀವ ವಿಜ್ಞಾನಿ ಫ್ರಾನ್ಸ್ ಡಿ ವಾಲ್ ಈಗ ಇಲ್ಲ. ಜೇನ್ ಗುಡಾಲ್ ಈಗ ಇದ್ದಾರೋ ಇಲ್ಲವೋ ತಿಳಿಯದು. ( 90 ವರ್ಷದ ಜೇನ್ ಗುಡಾಲ್ ಇದ್ದಾರೆಂದು ಗೆಳೆಯರು ಈಗ ತಿಳಿದರು) ಅವರ ಜೊತೆ ಕೆಲಸ ಮಾಡಿದವರು ಇರಬಹುದು. ತಮ್ಮ ಸಂಶೋಧನೆಗಳು ಬೇರೊಂದು ಭಾಷೆಯಲ್ಲಿ ಸೃಜನಶೀಲ ಕೃತಿಯಾಗಿ ಹುಟ್ಟಿದ ಬಗ್ಗೆ ಅವರ ಪ್ರತಿಕ್ರಿಯೆ ಏನಿದ್ದೀತು. ಇವೆಲ್ಲ ಬರಿಯ ಊಹೆಗಳು ಮಾತ್ರ.
ಅದೇನೇ ಇರಲಿ. ಹೊಸ ತಲೆಮಾರಿನ ಭಾರತೀಯ, ಇಂಗ್ಲಿಷ್ ಓದುಗರಿಗೆ ಆಸಕ್ತಿದಾಯಕವಾಗಬಹುದು.

ಇದು ವೈಜ್ಞಾನಿಕ ಕೃತಿ, ಕಾದಂಬರಿಯಲ್ಲ. ಆದರೆ ಲೇಖಕರು ಜೀವ ವಿಜ್ಞಾನದ, ಸಂಶೋಧನೆಗಳನ್ನು, ಜೊತೆಯಲ್ಲಿ ಅದರ ಹಲವಾರು ವಿಸ್ಮಯಕಾರಿ ಸಂಗತಿಗಳನ್ನು ಒಂದು ಆಕರ್ಷಕ ಕಥಾ ಹಂದರದ ಚೌಕಟ್ಟಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಆದ್ದರಿಂದ ಈ ಪುಸ್ತಕವನ್ನು ಒಂದು ಕಾದಂಬರಿಯಂತೆಯೇ ಓದುತ್ತ ಹೋಗಬಹುದು.

ಡಚ್ -ಅಮೆರಿಕನ್ ಜೀವ ವಿಜ್ಞಾನಿಗಳಾದ ಫ್ರಾನ್ಸ್ ಡಿ ವಾಲ್ ರ “ಚಿಂಪಾಂಜಿ ಪಾಲಿಟಿಕ್ಸ್” ಎಂಬ ಸಂಶೋಧನಾ ಕೃತಿ ಮತ್ತು ಬ್ರಿಟಿಷ್ ಜೀವ ವಿಜ್ಞಾನಿ ಜೇನ್ ಗುಡಾಲ್ ರ ಸಂಶೋಧನೆಗಳನ್ನು ಲೇಖಕರು ಈ ಕೃತಿಗೆ ಆಧಾರವಾಗಿ ಇಟ್ಟುಕೊಂಡಿದ್ದಾರೆ. ಹಾಗೆಯೇ ಇನ್ನೂ ಕೆಲವರು ಲೇಖಕರ ಸಂಶೋಧನಾ ಬರಹಗಳನ್ನು ಬಳಸಿಕೊಂಡಿರುವುದಾಗಿಯೂ ಅವರು ಉಲ್ಲೇಖ ಮಾಡಿದ್ದಾರೆ.

“ನರ ವಾನರ” ಇವೆಲ್ಲವನ್ನೂ ಭಟ್ಟಿ ಇಳಿಸಿ ಹದ ಮಾಡಿದ ಸ್ಕಾಚ್ ಪಾನೀಯವನ್ನು ಗುಟುಕರಿಸಿದಂತೆ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ.

ಹೆಸರೇ ಹೇಳುವಂತೆ ನರವಾನರ ಚಿಂಪಾಜಿಗಳ ಜೀವನವಿಧಾನದ ಅವಲೋಕನ ಮತ್ತು ಅಧ್ಯಯನದ ಅಪೂರ್ವ ಸಂಗತಿಗಳನ್ನು ತಿಳಿಸುವ ಕೃತಿ. ಜೀವ ವಿಕಾಸದಲ್ಲಿ ಚಿಂಪಾಂಜಿ ಮಾನವನಿಗೆ ಅತಿ ಹತ್ತಿರದ ಜೀವಿ ಎಂದು ನಾವೆಲ್ಲ ಓದಿದ್ದೇವೆ.

ಇಲ್ಲಿ ಚಿಂಪಾಜಿಗಳ ವರ್ತನೆ ಮತ್ತು ಜೀವನ ಪದ್ದತಿ ಮಾತ್ರವಲ್ಲ ಇದರ ಜೊತೆಯಲ್ಲಿ ಮಾನವ ಸ್ವಭಾವಗಳು ಮತ್ತು ವರ್ತನೆಯಲ್ಲಿ ನಾವು ಕಾಣುವ ಏಕರೂಪತೆಗಳು. ನಾವು, ಮನುಷ್ಯ ಎನ್ನುವ ಬುದ್ಧಿವಂತ ಪ್ರಾಣಿಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ನಂಬಿಕೊಂಡಿರುವ ಹಲವಾರು ಗುಣಗಳು ಚಿಂಪಾಜಿಯಂತಹ ವಾನರರಲ್ಲಿ ಅದರ ಮೂಲ ಸ್ವರೂಪದಲ್ಲಿ ಕಂಡುಬರುವುದು. ಅದರಲ್ಲೂ ಬಹಳ ಮುಖ್ಯವಾಗಿ ಮಾನವೇತಿಹಾಸದಲ್ಲೇ ಹಾಸು ಹೊಕ್ಕಾಗಿರುವ “ರಾಜಕಾರಣ” ಈ ವಾನರರ ಬದುಕಿನಲ್ಲೂ ವಿಸ್ಮಯಕಾರಿಯಾಗಿ ಹಾಗೂ ತುಂಬ ಪ್ರಭಾವಶಾಲಿಯಾಗಿ ಇರುವುದು. ಈ ಎಲ್ಲಾ ಕಾರಣಗಳಿಂದಲೇ ಈ ಅಧ್ಯಯನಗಳಿಗೆ ಬಹಳ ಮಹತ್ವವೂ ಬಂದಿರುವುದು.

ಇದರಿಂದಾಗಿಯೇ ಈ ಕೃತಿ ರಚನೆಗೆ ಕಾರಣವಾದ ಮೂಲ ಸಂಶೋಧನೆಗಳು ಹೇಗೋ, ಹಾಗೆಯೇ ಕೆಂಜಿಗೆಯವರ ಈ ಪುಸ್ತಕ ಕೂಡಾ ನಮಗೆ ಮುಖ್ಯವಾಗುತ್ತದೆ.

ಇಲ್ಲಿನ ವಿಚಾರಗಳು ಬಹಳ ಗಂಭೀರವಾದ ಸಂಗತಿಗಳ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತದೆ. ಅಮೆರಿಕಾದ ಅಧ್ಯಕ್ಷರಾಗಿದ್ದ ರಿಚರ್ಡ್ ನಿಕ್ಸನ್ ರ ಕಾಲದ ವಾಟರ್ ಗೇಟ್ ಹಗರಣದ ಪ್ರಸಂಗವಿದೆ. ಆಗ ಅಮೆರಿಕಾದಲ್ಲಿ ಪ್ರಕಟವಾದ “ಆಲ್ ದ ಪ್ರೆಸಿಡೆಂಟ್ಸ್ ಮನ್” ಪುಸ್ತಕ ಮತ್ತು ಮಾಡಿದ ರಾಜಕೀಯ ಕೋಲಾಹಲ. ನಂತರ ರಾಜೀನಾಮೆ ಕೊಡಬೇಕಾದ ಅನಿವಾರ್ಯತೆಯ ಸಂದರ್ಭದಲ್ಲಿ ನಿಕ್ಸನ್ ರ ವರ್ತನೆಯ ವಿವರಗಳಿವೆ.ಇದಕ್ಕೆ ಹೋಲಿಕೆಯಾಗುವಂತಹ ಘಟನೆ ಮತ್ತು ಅದೇ ರೀತಿಯ ವರ್ತನೆ ಚಿಂಪಾಜಿಗಳ ಬದುಕಿನಲ್ಲಿಯೂ ಇದೆ ಎನ್ನುವುದು ಸೋಜಿಗದ ಸಂಗತಿ ಇಲ್ಲಿದೆ.

1977 ರಲ್ಲಿ ಭಾರತದಲ್ಲಿಯೂ ಇಂದಿರಾಗಾಂಧಿಯವರು ಊಹಿಸದಿದ್ದ ರೀತಿಯಲ್ಲಿ ಚುನಾವಣೆಯಲ್ಲಿ ಸೋತು ರಾಜೀನಾಮೆ ನೀಡಿದರು. ನಂತರ ಇಲ್ಲಿಯೂ “ಆಲ್ ದ ಪ್ರೈಮ್ ಮಿನಿಸ್ಟರ್ಸ್ ಮೆನ್” ಎನ್ನುವ ಪುಸ್ತಕವೂ ಬಂತು. ಆದರೆ ರಾಜೀನಾಮೆ ನೀಡುವ ಮೊದಲು ಖಾಸಗಿಯಾಗಿ ಇಂದಿರಾಗಾಂಧಿ ಅವರ ವರ್ತನೆ ಹೇಗಿತ್ತು ತಿಳಿಯದು. ಅದು ಎಲ್ಲಿಯೂ ದಾಖಲಾದಂತಿಲ್ಲ.

ನಾಯಕತ್ವಕ್ಕಾಗಿ ಮಾಡುವ ಹುನ್ನಾರಗಳು, ಹೋರಾಟಗಳು, ಚಿಂಪಾಜಿಗಳ ಮಹಾಯುದ್ಧ, ಸಾಮಾನ್ಯವಾಗಿ ಸ್ನೇಹಜೀವಿಗಳೆಂದು ಪರಿಗಣಿಸಲಾಗುವ ಚಿಂಪಾಂಜಿಗಳ ಕ್ರೌರ್ಯ ಎಲ್ಲವೂ ನಮ್ಮತ್ತ ಬೆಟ್ಟು ಮಾಡಿ ತೋರಿಸುವಂತೆ ಭಾಸವಾಗುತ್ತದೆ.

ಇಲ್ಲಿ ಮತ್ತೊಂದು ಸಂಗತಿಯನ್ನು ಹೇಳಬೇಕು. ಜೇನ್ ಗುಡಾಲ್ ತಮ್ಮ ಅಧ್ಯಯನದಲ್ಲಿ ಒಂದು ಕುತೂಹಲಕಾರಿಯಾದ ವಿಚಾರವನ್ನು ಹೇಳುತ್ತಾರೆ. ಅದು ಚಿಂಪಾಚಿ ಒಂದು ಕಡ್ಡಿಯನ್ನು ಉಪಕರಣದಂತೆ ಬಳಸಿದ ಪ್ರಸಂಗ. ಅದರೆ ಅದನ್ನುಅವರಿಗೆ ಆಗ ಚಿತ್ರೀಕರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಉಪಕರಣಗಳನ್ನು ಬಳಸುವುದು ಮತ್ತು ಆ ಸಾಧ್ಯತೆಯಿಂದಲೇ ಮನುಷ್ಯ ಇಷ್ಟೊಂದು ವಿಕಾಸ ಹೊಂದಲು ಸಾಧ್ಯವಾಗಿರುವುದು ಎಂದು ನಾವೆಲ್ಲ ತಿಳಿದಿದ್ದೇವೆ. ಆ ಸಾಧ್ಯತೆಯ ಮೂಲ ಚಿಂಪಾಂಜಿಯಲ್ಲೂ ಇದೆ ಎನ್ನುವುದು ಗುಡಾಲ್ ರ ಸಂಶೋಧನೆ.

ಇದಕ್ಕೆ ಹೋಲಿಸಬಹುದಾದ ಒಂದು ಘಟನೆಯನ್ನು ನಾವು ಕೆಲವರು ನೋಡಿದ್ದೇವೆ. ಅದು ಆನೆಗಳಲ್ಲಿ.

ಮಲೆನಾಡಿನ ಕಾಫಿ ತೋಟಗಳಲ್ಲಿ ಆನೆಗಳ ಸಂಚಾರ ಹೆಚ್ಚಾದ ನಂತರ ಅನೇಕರು ವಿದ್ಯುತ್ ಬೇಲಿ ಮಾಡಿದರು. ಆನೆಗಳು ಸ್ವಲ್ಪ ಕಾಲ ಹೆದರಿ ಬೇಲಿಯಿಂದ ದೂರ ಉಳಿದವು. ಕೆಲಕಾಲದಲ್ಲೇ ಅವು ಒಂದು ಉಪಾಯವನ್ನು ಕಂಡುಕೊಂಡವು. ಅವು ಅಲ್ಲೇ ಹತ್ತಿರದಲ್ಲಿದ್ದ ಇರುತ್ತಿದ್ದ ಮರವನ್ನು ಬೇಲಿಯ ಮೇಲೆ ಬೀಳಿಸಿ ಬೇಲಿ ಮುರಿದು ಒಳಗೆ ಬರಲು ಕಲಿತವು. ಆಗ ಕೃಷಿಕರು ಬೇಲಿಯ ಹತ್ತಿರದ ಮರಗಳನ್ನು ಕಡಿದು ಅವುಗಳ ತಂತ್ರ ನಡೆಯದಂತೆ ಮಾಡಿದರು. ಆದರೆ ಆನೆಗಳು ಕೆಲವೇ ದಿನಗಳಲ್ಲಿ ಬೇರೆ ಕಡೆಯಿಂದ ಮರದ ದೊಡ್ಡ ಕೊಂಬೆಗಳನ್ನು ತಂದು ಬೇಲಿಯ ಮೇಲೆಸೆದು ಒಳಗೆ ಬಂದವು !.

ಇದಕ್ಕಿಂತ ವಿಸ್ಮಯಕಾರಿ ಸಂಗತಿ, ಆನೆ ನಿಜವಾಗಿ ಒಂದು ಉಪಕರಣವನ್ನು ಬಳಸಿದ್ದು ಅಂದರೆ ಮರದಲ್ಲಿ ಇದ್ದ ಹಲಸಿನ ಕಾಯಿಯನ್ನು ಕೀಳಲು ನೀರಾವರಿ ಪೈಪನ್ನು ಬಳಸಿದ್ದು. ಎರಡು ವರ್ಷದ ಹಿಂದೆ. ಅದು ಸಕಲೇಶಪುರ ತಾಲ್ಲೂಕಿನ ತೋಟವೊಂದರಲ್ಲಿ ಹೆಣ್ಣಾನೆಯೊಂದು ಮರಿಯೊಂದಿಗೆ ಬಂದು,ಇಪ್ಪತ್ತು ಅಡಿ ಉದ್ದದ ಅಲ್ಯುಮಿನಿಯಂ ನೀರಾವರಿ ಪೈಪನ್ನು ಸೊಂಡಿಲಿನಲ್ಲಿ ಸುತ್ತಿ ಹಿಡಿದುಕೊಂಡು ಪೈಪಿನ ಒಂದು ತುದಿಯನ್ನು ನೆಲದಕ್ಕೆ ತಾಗಿಸಿಟ್ಟು ಇನ್ನೊಂದು ತುದಿಯನ್ನು ಓರೆಯಾಗಿ ಮರದತ್ತ ತಳ್ಳಿ ಹಲಸಿನ ಕಾಯಿಗೆ ಚುಚ್ಚಿ ಬೀಳಿಸಿ ತಿಂದದ್ದನ್ನು ನೋಡಿದ್ದೆವು. ಆಗಲೂ ಅಷ್ಟೇ ನಮಗೆ ಫೋಟೋ ತೆಗೆಯಲು ಸಾಧ್ಯವಾಗಿರಲಿಲ್ಲ ಈ ವಿಚಾರವನ್ನು ಕೆಲವರು ಅರಣ್ಯ ಇಲಾಖೆಯವರಲ್ಲಿ ವಿಚಾರಿಸಿದೆವು. ಅವರೂ ಇಂತಹ ಘಟನೆಯನ್ನು ನಾವು ಇದುವರೆಗೆ ನೋಡಿಲ್ಲ ಎಂದರು.
ಈ ಕೃತಿಯನ್ನು ಓದುತ್ತ ಹೋದಂತೆ ಹಲವು ಪ್ರಶ್ನೆಗಳು ನಮ್ಮಲ್ಲೇ ಮೂಡುತ್ತ ಹೋಗುತ್ತವೆ.

ಎಲ್ಲಾ ಜೀವಿಗಳ ಬದುಕು, ವರ್ತನೆ, ಮುಂತಾದ ಸಂಗತಿಗಳನ್ನು ಪ್ರಕೃತಿ ಯಾವುದೋ ಒಂದು ರೀತಿಯಲ್ಲಿ ಸೂತ್ರೀಕರಿಸಿದಂತೆ ಇಟ್ಟಿದೆಯಲ್ಲ, ಆ ಶಕ್ತಿ ಯಾವುದು ? ಬರಿಯ ವಂಶವಾಹಿಗಳಲ್ಲಿ ಮಾತ್ರ ಇದೆಯೆ?. ಅಥವಾ ನಿಜವಾಗಿ ಇಡೀ ವಿಶ್ವವೇ ಒಂದು ಸೂಪರ್ ಕಂಪ್ಯೂಟರ್ ನಂತೆ ಎಲ್ಲವನ್ನೂ ಸೂತ್ರೀಕರಿಸಿಕೊಂಡಿದೆಯೆ?

ಸೂಕ್ತ ವಾತಾವರಣ ದೊರತಾಗ ವರ್ಷಗಳ ನಂತರ ಮೊಳಕೆಯೊಡೆಯುವ ಚೈನಾದ ಬಿದಿರಿನಂತೆ, ನಮ್ಮಲ್ಲಿಯೂ ಇರುವ ಕೆಲವು ಸಸ್ಯಗಳ ಬೀಜಗಳಂತೆ, ಆ ಜೀವ ಶಕ್ತಿ ಉಳಿದು ಬರುವುದು ಹೇಗೆ ?

ಅದು ಹೌದೆಂದಾದರೆ, ಸಾಂಪ್ರದಾಯಿಕವಾಗಿ ನಾವು ಪುರುಷ ಪ್ರಯತ್ನ ಎಂದು ಹೇಳುವ ಮಾನವ ಪ್ರಯತ್ನದ ಮಿತಿ ಏನು ?

ನಾವು ಓದಿಕೊಂಡ ಕ್ವಾಂಟಮ್ ಫಿಸಿಕ್ಸ್ ಮತ್ತು ಕಲೆಕ್ಟಿವ್ ಕಾನ್ಷಿಯಸ್ ನೆಸ್ ನ ಸಿದ್ಧಾಂತದ ಪರಿಣಾಮಗಳೇನು? ಹೀಗೆ ಪ್ರಶ್ನೆಗಳು ಮೆರವಣಿಗೆಯಾಗಿ ಬರುತ್ತವೆ.

ವೈಜ್ಞಾನಿಕ ಕಾದಂಬರಿಗಳನ್ನು ಹಲವರು ರಚಿಸಿದ್ದಾರೆ. ಒಂದು ಕಾಲದಲ್ಲಿ ಕನ್ನಡದಲ್ಲಿ ರಾಜಶೇಖರ ಭೂಸನೂರ ಮಠ ಅವರು ತುಂಬ ಜನಪ್ರಿಯರು. ಕಾದಂಬರಿಯ ಬರವಣಿಗೆಯಲ್ಲಿ ಲೇಖಕರಿಗೆ ಆ ಸ್ವಾತಂತ್ರ್ಯವಿದೆ, ಅಲ್ಲಿ ಕಲ್ಪನಾ ವಿಲಾಸಕ್ಕೆ ಅಡ್ಡಿಯಿಲ್ಲ. ಅದರೆ ವೈಜ್ಞಾನಿಕ ಕೃತಿ ಹಾಗಲ್ಲ ಇಲ್ಲಿ ಸಂಶೋಧನೆಗಳ ವಿಚಾರಗಳನ್ನು ಆಸಕ್ತಿದಾಯಕವಾಗಿ ಹೇಳಬೇಕು, ಆದರ ರೋಚಕತೆಯಲ್ಲಿ ಸತ್ಯ ತೆಳುವಾಗಬಾರದು. ಇದು ಸವಾಲು. ಈ ಸವಾಲನ್ನು ಪ್ರದೀಪ್ ಕೆಂಜಿಗೆ ತುಂಬ ಚೆನ್ನಾಗಿ ನಿಭಾಯಿಸಿದ್ದಾರೆ ಎನ್ನುವುದಕ್ಕೆ. ನಾನು ನಿನ್ನೆ ಸಂಜೆ ಈ ಪುಸ್ತಕವನ್ನು ಓದಲು ಪ್ರಾರಂಭಿಸಿದವನು ರಾತ್ರಿಯ ವೇಳೆಗೆ ಓದಿ ಮುಗಿಸಿ ಮಲಗಿದೆ. ಕೆಲವು ಕಡೆಗಳಲ್ಲಿ ಬರವಣಿಗೆ, ದಿನಚರಿಗಳನ್ನು ಓದಿದ ಅನುಭವವಾಗುತ್ತದೆ. ಆದರೆ ಅದು ಅನಿವಾರ್ಯ. ಅವು ವೈಜ್ಞಾನಿಕ ದಾಖಲೆಗಳು.

ಇನ್ನೂ ಪುಸ್ತಕದ ಬಗ್ಗೆ ಹೆಚ್ಚಿನ ವಿವರಗಳಿಗೆ ಹೋಗುವುದಿಲ್ಲ. ಅದನ್ನು ನೀವೆಲ್ಲ ಓದಿಯೇ ಅನುಭವಿಸಬೇಕು !
ಪುಸ್ತಕದ ಬಗ್ಗೆ ಇಷ್ಟು ಸಾಕು..


ಸುಮ್ಮನೆ ನನಗಿರುವ ಒಂದು ಕುತೂಹಲವನ್ನು ಇಲ್ಲಿ ಹೇಳಬೇಕು. ಈ ಪುಸ್ತಕ ಇಂಗ್ಲಿಷಿಗೆ ಭಾಷಾಂತರವಾದರೆ ಹೇಗಿರಬಹುದು ? ಜೀವ ವಿಜ್ಞಾನಿ ಫ್ರಾನ್ಸ್ ಡಿ ವಾಲ್ ಈಗ ಇಲ್ಲ. ಜೇನ್ ಗುಡಾಲ್ ಈಗ ಇದ್ದಾರೋ ಇಲ್ಲವೋ ತಿಳಿಯದು. ( 90 ವರ್ಷದ ಜೇನ್ ಗುಡಾಲ್ ಇದ್ದಾರೆಂದು ಗೆಳೆಯರು ಈಗ ತಿಳಿದರು) ಅವರ ಜೊತೆ ಕೆಲಸ ಮಾಡಿದವರು ಇರಬಹುದು. ತಮ್ಮ ಸಂಶೋಧನೆಗಳು ಬೇರೊಂದು ಭಾಷೆಯಲ್ಲಿ ಸೃಜನಶೀಲ ಕೃತಿಯಾಗಿ ಹುಟ್ಟಿದ ಬಗ್ಗೆ ಅವರ ಪ್ರತಿಕ್ರಿಯೆ ಏನಿದ್ದೀತು. ಇವೆಲ್ಲ ಬರಿಯ ಊಹೆಗಳು ಮಾತ್ರ.
ಅದೇನೇ ಇರಲಿ. ಹೊಸ ತಲೆಮಾರಿನ ಭಾರತೀಯ, ಇಂಗ್ಲಿಷ್ ಓದುಗರಿಗೆ ಆಸಕ್ತಿದಾಯಕವಾಗಬಹುದು.

-ಪ್ರಸಾದ್ ರಕ್ಷಿದಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page