Friday, June 14, 2024

ಸತ್ಯ | ನ್ಯಾಯ |ಧರ್ಮ

ಬ್ರಹ್ಮಶ್ರೀ ನಾರಾಯಣಗುರು ಕೋಶ ಮೂಗಿಗೆ ತುಪ್ಪ ಸವರುವ ಹುನ್ನಾರ: ಬಿಲ್ಲವ ಮುಖಂಡರ ಅಸಮಧಾನ

ಮಂಗಳೂರು: ಇತ್ತೀಚಿಗೆ ರಾಜ್ಯ ಸರ್ಕಾರವು ಘೋಷಿಸಿರುವ ಬ್ರಹ್ಮಶ್ರೀ ನಾರಾಯಣಗುರು ಕೋಶದ ಕುರಿತು ಸಮುದಾಯದ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಹಾಗೂ ಹಿರಿಯ ವಕೀಲರಾದ ಪದ್ಮರಾಜ್ ಹೇಳಿಕೆ ನೀಡಿದ್ದಾರೆ. ಅವರು ನೀಡಿರುವ ಹೇಳಿಕೆ ಹೀಗಿದೆ:

ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ, ಕಡಿಮೆ ಜನಸಂಖ್ಯೆ ಇರುವ ಕಾಡುಗೊಲ್ಲ, ಆರ್ಯ ವೈಶ್ಯ, ಉಪ್ಪಾರ, ಸವಿತಾ ಹಾಗು ಅತ್ಯಂತ ಆರ್ಥಿಕವಾಗಿ ಬಲಿಷ್ಠವಾಗಿರುವ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ಮರಾಠ ಸಮುದಾಯಗಳಿಗೆ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ. ದೈರ್ಯವಂತರು ಹಾಗು ಐತಿಹಾಸಿಕವಾಗಿಯೂ ಕೊಡುಗೆ ನೀಡಿದ ಬಿಲ್ಲವ, ಈಡಿಗ ಸಮುದಾಯದ ಜನಸಂಖ್ಯೆ ಕರ್ನಾಟಕದಾದ್ಯಂತ ಸುಮಾರು 70 ಲಕ್ಷದಷ್ಟು ಇದೆ. ಆರ್ಥಿಕವಾಗಿ ತೀರ ಹಿಂದುಳಿದಿರುವ ಈ ಬಿಲ್ಲವ, ಈಡಿಗ ಸೇರಿದಂತೆ 26 ಪಂಗಡಗಳಿರುವ ಸಮುದಾಯಕ್ಕೆ ಬ್ರಹ್ಮಶ್ರೀ ನಾರಾಯಣಗುರು ನಿಗಮ ನೀಡಬೇಕೆಂಬ ಹಲವಾರು ವರ್ಷಗಳ ಬೇಡಿಕೆ ಇದ್ದರೂ ಸರ್ಕಾರ ತಾತ್ಸಾರ ಭಾವನೆ ತೋರಿಸುತ್ತಿರುವುದು ಖೇದಕರ.

ಇನ್ನು ಕೆಲವೇ ತಿಂಗಳಿನಲ್ಲಿ ಚುನಾವಣೆ ಘೋಷಣೆಯಾಗುವುದರಿಂದ ಸರ್ಕಾರ ‘ಬ್ರಹ್ಮಶ್ರೀ ನಾರಾಯಣಗುರು ಕೋಶ’ ಘೋಷಿಸಿರುವುದು ಈ ಪಂಗಡದವರ ದಿಕ್ಕುತಪ್ಪಿಸುವ ಹುನ್ನಾರವಷ್ಟೇ. ಇದೊಂದು ತೀರ ಹಿಂದುಳಿದ ಸಮಾಜದವರ ಮೂಗಿಗೆ ತುಪ್ಪ ಸವರುವಂತಹ ಆದೇಶ.

ಬ್ರಹ್ಮಶ್ರೀ ನಾರಾಯಣಗುರು ಕೋಶವನ್ನು ಘೋಷಣೆ ಮಾಡಿರುವ ಸರ್ಕಾರ, ಅಧೀನದ ಅಧಿಕಾರಿಗಳು, ಸಚಿವರಿಗೆ ನಿಗಮ ಮತ್ತು ಕೋಶಕ್ಕಿರುವ ವ್ಯತ್ಯಾಸಗಳ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲವೇ? ನಿಗಮ ಎನ್ನುವುದು ಒಂದು ಸ್ವಾಯತ್ತ ಸಂಸ್ಥೆ. ಇದರಲ್ಲಿ ಪ್ರತ್ಯೇಕ, ಅಧ್ಯಕ್ಷ, ನಿರ್ದೇಶಕರಿದ್ದು, ಸಮುದಾಯಯ ಅಭಿವೃದ್ಧಿಗೆ ಬೇಕಾದ ಯೋಜನೆ ರೂಪಿಸಲು ಇವರಿಗೆ ಸ್ವಾತಂತ್ರ್ಯ ಇದೆ. ಆದರೆ ‘ಕೋಶ’ ಎನ್ನುವುದು ಸರ್ಕಾರದ ನಿರ್ದೇಶನಾಲಯದ ಚಿಕ್ಕ ಅಂಗವಾಗಿದ್ದು, ಇದೊಂದು ಹಲ್ಲಿಲ್ಲದ ಹಾವಿನಂತೆ. ಇಲ್ಲಿ ಉನ್ನತ ಅಧಿಕಾರಿಯನ್ನು ನೇಮಿಸಿದರೂ ಸರ್ಕಾರದ ಕಾರ್ಯದರ್ಶಿಯ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ ಮತ್ತು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಇವರಿಗೆ ಅಧಿಕಾರ ಇರುವುದಿಲ್ಲ.

ಬಿಲ್ಲವ, ಈಡಿಗ ಸಮುದಾಯದ ಅಭಿವೃದ್ಧಿ ನಿಗಮವಾದರೆ ಅದೇ ಸಮುದಾಯದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ. ಇದಕ್ಕೆ ಸೇರಿದ 26 ಪಂಗಡಗಳ ಪ್ರತಿನಿಧಿಗಳು ನಿರ್ದೇಶಕ ಮಂಡಳಿಯಲ್ಲಿದ್ದು, ಒಳ್ಳೆಯ ತೀರ್ಮಾನಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ. ಈಗಾಗಲೇ ಸ್ಥಾಪನೆಯಾಗಿರುವ ಬೇರೆ ಬೇರೆ ಸಮುದಾಯದ ಅಭಿವೃದ್ಧಿ ನಿಗಮಗಳಿಗೆ ಅದೇ ಜಾತಿಯವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು, ತಮ್ಮ ಸಮುದಾಯಕ್ಕೆ ಸಂಬಧಿಸಿದ ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವುದನ್ನು ನಾವು ಈಗಾಗಲೇ ಗಮನಿಸಬಹುದು. ಆದರೆ ಕೋಶದಲ್ಲಿ ಆಡಳಿತಾತ್ಮಕ ವಿಳಂಬಗಳಿಗೆ ತುಂಬಾ ಅವಕಾಶಗಳಿವೆ. ಕೆಲವೊಂದು ಪ್ರಗತಿ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರದ ಆದೇಶವಾಗಲೇ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲಾವಕಾಶ ತೆಗೆದುಕೊಳ್ಳಲೂಬಹುದು. ಅಭಿವೃದ್ಧಿ ನಿಗಮ ಮಂಡಳಿ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಯಾವುದೇ ಪ್ರಗತಿ ಕಾರ್ಯವನ್ನು ತುರ್ತಾಗಿ ಜಾರಿಗೆ ತರುವ ಅವಕಾಶಗಳಿವೆ.

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶೇಂದಿ ಇಳಿಸುವವರಿಗಾಗಿ ವಿಶೇಷ ಪ್ಯಾಕೇಜ್ ನೀಡಿದ್ದು, ಅದಕ್ಕೆ 12 ಕೋಟಿ ರೂಪಾಯಿ ಮೀಸಲಿರಿಸಿತ್ತು. ಇದರಲ್ಲಿ 3 ಕೋಟಿ ರೂಪಾಯಿ ಮಾತ್ರ ವ್ಯಯವಾಗಿದ್ದು, ಉಳಿದ ಹಣ ಈಗಲೂ ಸರ್ಕಾರದ ಬೊಕ್ಕಸದಲ್ಲಿದೆ. ಇದೇ ರೀತಿ ಸರ್ಕಾರ ಘೋಷಿರುವ ಕೋಶಕ್ಕೆ 10-15 ಕೋಟಿ ರೂ. ಅನುದಾನ ಘೋಷಿಸಿ, ವಿವಿಧ ಕಾರಣ ಹೇಳಿ ಹಾಗೆಯೇ ಉಳಿಸುವ ತಂತ್ರಗಾರಿಕೆಯಾಗಿಯೇ ಹೊರತು ಬೇರೇನೂ ಇಲ್ಲ. ಒಟ್ಟಾರೆ ಹೇಳುವುದಾದರೆ ಒಂದು ನಿಗಮದ ಬದಲಿಗೆ ಕೋಶವನ್ನು ಘೋಷಿಸುವುದು ಕಣ್ಣೊರೆಸುವ ತಂತ್ರವಾಗಿದ್ದು, ನಿಗಮದಿಂದ ಆಗುವ ಅಭಿವೃದ್ಧಿಯ ಶೇ.2ರಷ್ಟೂ ಈ ಕೋಶದಿಂದ ಆಗುವುದಿಲ್ಲ ಎನ್ನುವುದು ತಿಳಿದುಕೊಳ್ಳಬೇಕಾದ ಸತ್ಯ.

Related Articles

ಇತ್ತೀಚಿನ ಸುದ್ದಿಗಳು