Home ಇನ್ನಷ್ಟು ಕೋರ್ಟು - ಕಾನೂನು ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಅಪರಾಧಿ ಸಚಿನ್ ಅಂದುರೆಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್‌; ಜೀವಾವಧಿ...

ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಅಪರಾಧಿ ಸಚಿನ್ ಅಂದುರೆಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್‌; ಜೀವಾವಧಿ ಶಿಕ್ಷೆಗೂ ತಡೆ

0

ಮುಂಬೈ:ಖ್ಯಾತ ಸಾಮಾಜಿಕ ಕಾರ್ಯಕರ್ತ ಹಾಗೂ ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ಪ್ರಮುಖ ಅಪರಾಧಿ ಸಚಿನ್ ಅಂದುರೆಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜೊತೆಗೆ ಆತನಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿರಿಸಿದೆ (ತಡೆ ನೀಡಿದೆ).

ನ್ಯಾಯಮೂರ್ತಿಗಳಾದ ಸಾರಂಗ್ ಕೊತ್ವಾಲ್ ಮತ್ತು ರಂಜಿತ್‌ಸಿಂಗ್ ಭೋಂಸ್ಲೆ ಅವರಿದ್ದ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ. ಇದೇ ಪ್ರಕರಣದ ಮತ್ತೊಬ್ಬ ಅಪರಾಧಿ ಶರದ್ ಕಲಾಸ್ಕರ್‌ಗೆ ಈ ವರ್ಷದ ಏಪ್ರಿಲ್‌ನಲ್ಲಿ ನ್ಯಾಯಮೂರ್ತಿ ಅಜಯ್ ಗಡ್ಕರಿ ನೇತೃತ್ವದ ಪೀಠವು ಜಾಮೀನು ನೀಡಿತ್ತು.

ಶಿಕ್ಷೆ ರದ್ದುಪಡಿಸಲು ಅಪರಾಧಿಯ ಮನವಿ

ತಮ್ಮ ಪರ ವಕೀಲ ವೀರೇಂದ್ರ ಇಚಲಕರಂಜಿಕರ್ ಮೂಲಕ ಜಾಮೀನು ಮತ್ತು ಶಿಕ್ಷೆ ಅಮಾನತಿಗೆ ಕೋರಿ ಅಂದುರೆ ಅರ್ಜಿ ಸಲ್ಲಿಸಿದ್ದನು. ವಿಶೇಷ ಯುಎಪಿಎ (UAPA) ನ್ಯಾಯಾಲಯವು ಮೇ 10, 2024 ರಂದು ಶರದ್ ಕಲಾಸ್ಕರ್ ಜೊತೆಗೆ ತನಗೆ ಜೀವಾವಧಿ ಶಿಕ್ಷೆ ವಿಧಿಸಿ ನೀಡಿದ್ದ ತೀರ್ಪನ್ನು ಆತ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದನು.

ಸಿಬಿಐ ಯಾವುದೇ ಗುರುತಿಸುವಿಕೆ ಪರೇಡ್ (Test Identification Parade – TIP) ನಡೆಸಿಲ್ಲ ಮತ್ತು ಕೆಲ ಪ್ರತ್ಯಕ್ಷದರ್ಶಿಗಳು ನ್ಯಾಯಾಲಯದಲ್ಲೇ ನೇರವಾಗಿ ತನ್ನನ್ನು ಗುರುತಿಸಿದ್ದಾರೆ ಎಂದು ಅಂದುರೆ ವಾದಿಸಿದ್ದನು. ಜೊತೆಗೆ, ಕೆಲ ಸಾಕ್ಷಿಗಳು ತಾನು ದಾಭೋಲ್ಕರ್‌ಗೆ ಗುಂಡು ಹಾರಿಸುವುದನ್ನು ನೋಡಿದ್ದೇವೆ ಎಂದು ಹೇಳಿದರೆ, ಇನ್ನು ಕೆಲವರು ಘಟನಾ ಸ್ಥಳದಲ್ಲಿ ತಾನು ಇರಲೇ ಇಲ್ಲ ಎಂದು ಹೇಳಿರುವುದಾಗಿ ಸಾಕ್ಷಿಗಳ ಹೇಳಿಕೆಯಲ್ಲಿನ ಪರಸ್ಪರ ವೈರುಧ್ಯಗಳನ್ನು ಆತ ನ್ಯಾಯಾಲಯದ ಗಮನಕ್ಕೆ ತಂದಿದ್ದನು. ಇದರೊಂದಿಗೆ ದೀರ್ಘಕಾಲದಿಂದ ಜೈಲಿನಲ್ಲಿದ್ದು, ಮೇಲ್ಮನವಿಯ ವಿಚಾರಣೆ ಶೀಘ್ರದಲ್ಲಿ ಮುಗಿಯುವ ಸಾಧ್ಯತೆ ಇಲ್ಲ ಎಂಬ ಕಾರಣಗಳನ್ನೂ ಜಾಮೀನಿಗೆ ಮುಂದಿಟ್ಟಿದ್ದನು.

ದಾಭೋಲ್ಕರ್ ಕುಟುಂಬವು ಈ ಜಾಮೀನನ್ನು ತೀವ್ರವಾಗಿ ವಿರೋಧಿಸಿತು. ಕೇವಲ ದಾಭೋಲ್ಕರ್ ಮಾತ್ರವಲ್ಲದೆ ಕಾಮ್ರೆಡ್ ಗೋವಿಂದ್ ಪಾನ್ಸರೆ, ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಎಂ.ಎಂ. ಕಲ್ಬುರ್ಗಿ ಅವರಂತಹ ವಿಚಾರವಾದಿಗಳನ್ನು ಯೋಜನಾಬದ್ಧ ಪಿತೂರಿಯ ಮೂಲಕ ಹತ್ಯೆ ಮಾಡಲಾಗಿದ್ದು, ಅಪರಾಧಿಗಳಿಗೆ ಜಾಮೀನು ನೀಡುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂದು ಕುಟುಂಬದವರು ವಾದಿಸಿದರು.

ವಿಶೇಷ ನ್ಯಾಯಾಲಯದ ತೀರ್ಪು

ಪುಣೆಯ ವಿಶೇಷ ನ್ಯಾಯಾಲಯವು ಅಂದುರೆ ಮತ್ತು ಶರದ್ ಕಲಾಸ್ಕರ್ ಅವರನ್ನು ಭಾರತೀಯ ದಂಡ ಸಂಹಿತೆಯ ಕೊಲೆ (ಸೆಕ್ಷನ್ 302) ಮತ್ತು ಸಾಮಾನ್ಯ ಉದ್ದೇಶ (ಸೆಕ್ಷನ್ 34) ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಹತ್ಯೆಯ ಮಾಸ್ಟರ್ ಮೈಂಡ್ ಎನ್ನಲಾದ ಡಾ. ವೀರೇಂದ್ರ ತಾವಡೆ, ವಿಕ್ರಮ್ ಭಾವೆ ಮತ್ತು ವಕೀಲ ಸಂಜೀವ್ ಪುನಾಲೇಕರ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿತ್ತು. ಅಲ್ಲದೆ, ಯುಎಪಿಎ ಅಡಿಯಲ್ಲಿ ಯಾವುದೇ ಭಯೋತ್ಪಾದನಾ ಕೃತ್ಯದ ಆರೋಪಗಳು ಸಾಬೀತಾಗಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು.

ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಮೂಲಕ ಮೂಢನಂಬಿಕೆಗಳ ವಿರುದ್ಧ ಹೋರಾಡುತ್ತಿದ್ದ ನರೇಂದ್ರ ದಾಭೋಲ್ಕರ್ ಅವರನ್ನು 2013ರ ಆಗಸ್ಟ್ 20 ರಂದು ಪುಣೆಯಲ್ಲಿ ಮುಂಜಾನೆಯ ವಾಕಿಂಗ್ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಈ ಪ್ರಕರಣವನ್ನು 2014ರಲ್ಲಿ ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐಗೆ ವಹಿಸಲಾಗಿತ್ತು.

ವಿಶೇಷ ನ್ಯಾಯಾಲಯವು ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ದಾಭೋಲ್ಕರ್ ಪುತ್ರಿ ಮುಕ್ತಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರೆ, ಇತ್ತ ಶಿಕ್ಷೆಗೊಳಗಾದ ಕಲಾಸ್ಕರ್ ಮತ್ತು ಅಂದುರೆ ತಮ್ಮ ಶಿಕ್ಷೆಯನ್ನು ಪ್ರಶ್ನಿಸಿ ಕ್ರಾಸ್ ಮೇಲ್ಮನವಿ ಸಲ್ಲಿಸಿದ್ದಾರೆ.

You cannot copy content of this page

Exit mobile version