Friday, November 7, 2025

ಸತ್ಯ | ನ್ಯಾಯ |ಧರ್ಮ

“ಮತಗಳ್ಳತನದಿಂದಲೇ ನರೇಂದ್ರ ಮೋದಿ ಪ್ರಧಾನಿಯಾದದ್ದು” : ರಾಹುಲ್ ಗಾಂಧಿ ನೇರ ವಾಗ್ದಾಳಿ, ಮೌನಕ್ಕೆ ಜಾರಿದ ಬಿಜೆಪಿ

ದೇಶದಲ್ಲಿ ಮತಗಳ್ಳತನದ ಮೂಲಕವೇ ನರೇಂದ್ರ ಮೋದಿ ಪ್ರಧಾನಿ ಗಾದಿಗೆ ಏರಿದ್ದಾರೆ. ದೇಶದ ಲೋಕಸಭೆ ಚುನಾವಣೆ ಮತ್ತು ರಾಜ್ಯ ಚುನಾವಣೆ ಎರಡರಲ್ಲೂ ಚುನಾವಣಾ ಅಕ್ರಮ ನಡೆದಿದೆ. ಇದು ನೇರವಾಗಿ ಬಿಜೆಪಿಗೆ ಲಾಭವಾಗಿದೆ ಎಂದು ರಾಹುಲ್ ಗಾಂಧಿ ಮತ್ತೆ ಪುನರುಚ್ಚರಿಸಿದ್ದಾರೆ.

ಈ ಕುರಿತು ದೆಹಲಿಯಲ್ಲಿ ಬಿಜೆಪಿ ಮತ್ತು ಚುನಾವಣೆ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿ ಮಾತನಾಡಿರುವ ರಾಹುಲ್ ಗಾಂಧಿ, ಚುನಾವಣಾ ಮತಗಳ್ಳತನದ ಮಾದರಿಯನ್ನು ಬಹಿರಂಗಪಡಿಸಲು ತಮ್ಮ ಪಕ್ಷವು ಈಗಾಗಲೇ ವ್ಯಾಪಕವಾದ ಪುರಾವೆಗಳನ್ನು ಸಂಗ್ರಹಿಸಿದೆ. ನಮ್ಮಲ್ಲಿ ಸಾಕಷ್ಟು ಸಾಮಗ್ರಿಗಳಿವೆ, ಈ ಪ್ರಕ್ರಿಯೆಯನ್ನು ಇನ್ನೂ ಮುಂದುವರಿಸುತ್ತೇವೆ. ಮತಗಳ್ಳತನದ ಮೂಲಕ ನರೇಂದ್ರ ಮೋದಿ ಪ್ರಧಾನಿಯಾಗಿದ್ದು, ಬಿಜೆಪಿ ಮತಗಳ್ಳತನದಲ್ಲಿ ತೊಡಗಿದೆ ಎಂಬುದನ್ನು ನಾವು ದೇಶದ ಝೆನ್ ಝಡ್ ಯುವ ಜನತೆಗೆ ತೋರಿಸುತ್ತೇವೆ ಎಂದು ಹೇಳಿದರು.

ಹರಿಯಾಣದಲ್ಲಿ ನಡೆದಿದ್ದು ಚುನಾವಣೆಯೇ ಅಲ್ಲ ಎಂಬುದನ್ನು ನಾನು ಪುರಾವೆ ಸಹಿತ ತೋರಿಸಿದ್ದೇನೆ. ಅಲ್ಲಿ ಇಡೀ ಚುನಾವಣಾ ವ್ಯವಸ್ಥೆಯನ್ನೇ ಕದಿಯಲಾಗಿದೆ. ನಾನು ಮಾಡಿದ ಆರೋಪಗಳಿಗೆ ಚುನಾವಣಾ ಆಯೋಗದಿಂದ ಯಾವುದೇ ಪ್ರತಿಕ್ರಿಯೆ ಈವರೆಗೆ ಬಂದಿಲ್ಲ ಎಂದು ರಾಹುಲ್ ಗಾಂಧಿ ತಿಳಿಸಿದರು.

ಬಿಜೆಪಿ ನಾನು ಮಾಡಿದ ಆರೋಪವನ್ನು ಸಮರ್ಥಿಸಿಕೊಳ್ಳುತ್ತಿದೆ, ಆದರೆ ನಿರಾಕರಿಸುತ್ತಿಲ್ಲ. ಬ್ರೆಜಿಲ್‌ನ ಮಹಿಳೆಯೊಬ್ಬರು ಮತ ಚಲಾಯಿಸಿದಂತೆ ಮಾಧ್ಯಮಗಳು ಸಣ್ಣ ಉದಾಹರಣೆಗಳನ್ನು ಎತ್ತಿಕೊಳ್ಳುತ್ತಿವೆ. ಬ್ರೆಜಿಲ್ ಪ್ರಜೆಯ ಫೋಟೋ ಮೇಲೆ ಮತದಾನ ಹೇಗೆ ಮಾಡಲಾಯಿತು? ಎಂದು ಅವರು ಪ್ರಶ್ನಿಸಿದ್ದಾರೆ.

ವಾಸ್ತವವೆಂದರೆ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಚುನಾವಣಾ ಆಯೋಗ ಒಟ್ಟಾಗಿ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ. ಸಂವಿಧಾನವು ‘ಒಬ್ಬ ವ್ಯಕ್ತಿ, ಒಂದು ಮತ’ ಎಂದು ಹೇಳುತ್ತದೆ. ಹರಿಯಾಣದಲ್ಲಿ ‘ಒಬ್ಬ ವ್ಯಕ್ತಿ, ಒಂದು ಮತ’ ಇರಲಿಲ್ಲ. ಅಲ್ಲಿ ಒಬ್ಬ ವ್ಯಕ್ತಿ, ಬಹು ಮತಗಳಿದ್ದವು. ಈಗ ಬಿಹಾರದಲ್ಲೂ ಅದೇ ರೀತಿ ಮಾಡುತ್ತಿದ್ದಾರೆ ಎಂದು ಇದೇ ವೇಳೆ ರಾಹುಲ್ ಆರೋಪಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page