Tuesday, July 29, 2025

ಸತ್ಯ | ನ್ಯಾಯ |ಧರ್ಮ

ನರೇಂದ್ರ ಮೋದಿಯದ್ದು ಸೋಲಿನ ಹತಾಶ ನುಡಿ : ಸಿಎಂ ಸಿದ್ದರಾಮಯ್ಯ

ಮಧ್ಯಪ್ರದೇಶದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಕರ್ನಾಟಕ ಕಾಂಗ್ರೆಸ್ ಬಗ್ಗೆ ಮಾತನಾಡಿದ ವಿಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಸೋಲಿನ ಹತಾಶೆಗೆ ಪ್ರಧಾನಿ ನರೇಂದ್ರ ಮೋದಿ ಈ ರೀತಿಯ ಮಾತನ್ನಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಚಾರ ಮಾಡಿದಲ್ಲೆಲ್ಲಾ ಬಿಜೆಪಿ ಸೋತಿದೆ. ಇದು ಮಧ್ಯಪ್ರದೇಶದಲ್ಲೂ ಮರುಕಳಿಸಲಿದೆ. ಮಧ್ಯಪ್ರದೇಶದಲ್ಲಿ ಕರ್ನಾಟಕದ ರಾಜಕಾರಣದ ಬಗ್ಗೆ ನರೇಂದ್ರ ಮೋದಿ ಮಾತನಾಡಿದ್ದಾರೆ ಎಂದರೆ ಇದು ಅವರ ಹತಾಶೆಯ ನುಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಭಾನುವಾರ ಮಧ್ಯಪ್ರದೇಶದಲ್ಲಿ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿ ಸ್ಥಗಿತಗೊಂಡಿರುವ ಕರ್ನಾಟಕವನ್ನು ಕಾಂಗ್ರೆಸ್ ಹಾನಿಗೊಳಿಸಿದೆ ಮತ್ತು ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿರುವ ಈ ಹಂತದಲ್ಲಿ ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಹಾಗೂ ಅವರು ಆ ಸ್ಥಾನದಲ್ಲಿ ಮುಂದುವರಿಯುವ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಹೇಳಿದ್ದರು.

ಸಿಎಂ ಮತ್ತು ಡಿಸಿಎಂ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂಬ ಪ್ರಧಾನಮಂತ್ರಿಗಳ ಭಾಷಣದಲ್ಲಿ ಮಾಡಿರುವ ಟೀಕೆಗೆ ಸಿದ್ದರಾಮಯ್ಯ ಪ್ರತ್ಯುತ್ತರ ನೀಡುತ್ತಾ ರಾಜ್ಯದಲ್ಲಿ ಇದುವರೆಗೆ ವಿರೋಧಪಕ್ಷದ ನಾಯಕರನ್ನು ಆಯ್ಕೆಮಾಡಿಲ್ಲ. ಇದು ಬಿಜೆಪಿಯ ದಿವಾಳಿಯಾಗಿರುವುದನ್ನು ಸೂಚಿಸುತ್ತದೆ ಎಂದಿದ್ದಾರೆ.

40 ಪರ್ಸೆಂಟ್ ಕಮೀಷನ್ ಸರ್ಕಾರ ಎಂಬ ಆರೋಪ ಬಿಜೆಪಿ ಸರ್ಕಾರದದ ಮೇಲಿತ್ತು. ಈ ಬಗ್ಗೆ ನಮ್ಮ ಸರ್ಕಾರ ತನಿಖೆ ಮಾಡಿಸುತ್ತಿದೆ. ದೇಶದ ಪ್ರಧಾನಿಯಾದವರು ಈ ವಿಷಯದ ಬಗ್ಗೆಯೂ ಮಾತನಾಡಬೇಕಲ್ಲವೇ? ಕೇಂದ್ರ ಸರ್ಕಾರದ ಅಧೀನದಲ್ಲಿ ಎಲ್ಲ ತನಿಖಾ ಸಂಸ್ಥೆಗಳಿವೆ , ಪುರಾವೆಗಳು, ದಾಖಲೆಗಳಿಲ್ಲದೇ ಆರೋಪ ಮಾಡಬಾರದು. ಇಂದು ಇಡೀ ದೇಶವೇ ದಿವಾಳಿಯಾಗಿದೆ. ರಾಜ್ಯದ ವಿರುದ್ಧ ಕೇಂದ್ರ ಮಲತಾಯಿ ಧೋರಣೆಯನ್ನು ತಳೆದಿದೆ. ಬರಗಾಲದ ಪರಿಹಾರವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದರು. ಆದರೆ ನಮ್ಮ ಸರ್ಕಾರ ಅವುಗಳನ್ನು ಸಾಧಿಸಿ ತೋರಿಸಿದೆ. ಇಂತಹ ಹೇಳಿಕೆಗಳನ್ನು ದೇಶದ ಪ್ರಧಾನ ಮಂತ್ರಿಗಳಿಂದ ಅಪೇಕ್ಷಿಸಿರಲಿಲ್ಲ.  ತಮ್ಮ ರಾಜಕೀಯ ಭಾಷಣದಲ್ಲಿ ರಾಜ್ಯದ ಬಗ್ಗೆ ಟೀಕೆಗಳನ್ನು ಮಾಡುವುದು ಪ್ರಧಾನಮಂತ್ರಿಯವರಿಗೆ ಶೋಭೆ ತರುವಂಥದ್ದಲ್ಲ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page