ಮುಂಬೈ: ಸೋಮವಾರ ಸುರಿದ ಭಾರೀ ಗಾಳಿ ಮತ್ತು ಮಳೆಯ ನಡುವೆ ಸಿಂಧುದುರ್ಗ ಜಿಲ್ಲೆಯ ಮರಾಠ ಯೋಧ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆ ಕುಸಿದು ಬಿದ್ದ ಕೆಲವೇ ಗಂಟೆಗಳ ಬಳಿಕ ಭಾರತೀಯ ನೌಕಾಪಡೆ ತನಿಖೆಗೆ ಆದೇಶಿಸಿದೆ.
ಕಳೆದ ವರ್ಷ ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು
ಡಿಸೆಂಬರ್ 4, 2023ರಂದು ನೌಕಾಪಡೆಯ ದಿನಾಚರಣೆಯ ಸಂದರ್ಭದಲ್ಲಿ, ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಾನ್‌ನಲ್ಲಿರುವ ರಾಜ್‌ಕೋಟ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 35 ಅಡಿ ಎತ್ತರದ ಪ್ರತಿಮೆಯನ್ನು ಮೋದಿ ಉದ್ಘಾಟಿಸಿದ್ದರು.
ಭಾರತೀಯ ನೌಕಾಪಡೆ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
“ಸಿಂಧುದುರ್ಗದ ನಾಗರಿಕರಿಗೆ ಸಮರ್ಪಣೆಯಾಗಿ ನೌಕಾಪಡೆಯ ದಿನದಂದು ಅನಾವರಣಗೊಳಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಇಂದು ಬೆಳಿಗ್ಗೆ ಉಂಟಾದ ಹಾನಿಯನ್ನು ಭಾರತೀಯ ನೌಕಾಪಡೆಯು ತೀವ್ರ ಕಳವಳದಿಂದ ಗಮನಿಸುತ್ತದೆ” ಎಂದು ಭಾರತೀಯ ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಮಹಾರಾಷ್ಟ್ರ ಸರ್ಕಾರ ಮತ್ತು ಸಂಬಂಧಪಟ್ಟ ತಜ್ಞರ ಜೊತೆಯಲ್ಲಿ, ನೌಕಾಪಡೆಯು ಈ ದುರದೃಷ್ಟಕರ ಅಪಘಾತಕ್ಕೆ ಕಾರಣವನ್ನು ತಕ್ಷಣವೇ ತನಿಖೆ ಮಾಡಲು ತಂಡವನ್ನು ನಿಯೋಜಿಸಿದೆ ಮತ್ತು ಪ್ರತಿಮೆಯನ್ನು ಶೀಘ್ರ ಸರಿಪಡಿಸಸಿ ಪುನಃಸ್ಥಾಪಿಸಲು ಕ್ರಮಗಳನ್ನು ಪ್ರಾರಂಭಿಸಿದೆ.